ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಕಾಡು ಕಾಯುವವರು ಕಚೇರಿ ಸೇರಿದರೆ...

Published 22 ನವೆಂಬರ್ 2023, 0:00 IST
Last Updated 22 ನವೆಂಬರ್ 2023, 0:00 IST
ಅಕ್ಷರ ಗಾತ್ರ

ಪಾಳೆಗಾರಿಕೆ ಗುಣದ ಬಲಾಢ್ಯರು

‘ಒತ್ತುವರಿ ಮಾಡಿಕೊಂಡ ಜಾಗದಲ್ಲಿ ಮಾಲ್ ನಿರ್ಮಿಸಲಾಗಿದೆ, ಅನ್ಯರ ಜಾಗ ಕಬಳಿಸಿ ತೋಟ ಮಾಡಲಾಗಿದೆ’ ಎಂಬ ರಾಜಕಾರಣಿಗಳ ಪರಸ್ಪರ ಮೂದಲಿಕೆ ಆಟದ ಕುರಿತಾಗಿ ‘ಎಲ್ಲರ ಬಣ್ಣ ಬಯಲಾಗಲಿ’ ಎಂಬ ಶೀರ್ಷಿಕೆಯಡಿ ರೋಹಿತ್‌ ಸಿಂಹ ಅವರ ಟ್ವೀಟ್‌ ಪ್ರಕಟವಾಗಿರುವುದು (ಪ್ರ.ವಾ., ನ. 21) ಸರಿಯಷ್ಟೆ. ಆದರೆ ಇಂತಹ ಸಾಮಾಜಿಕ ಕಳಕಳಿ ವೃಥಾ ವ್ಯರ್ಥಾಲಾಪವಷ್ಟೆ! ಈ ಬಗೆಯ ಆರೋಪ, ಪ್ರತ್ಯಾರೋಪಗಳು ರಾಜಕಾರಣಿಗಳಿಗೆ ಹೊಸವಲ್ಲ. ಸಂವಿಧಾನದ ಪರಿಧಿಯಲ್ಲಿ ಇಂತಹವುಗಳಿಗೆ ಕಡಿವಾಣ ಹಾಕುವ ಅಂಶಗಳು ವಿಪುಲವಾಗಿ ಇವೆಯಾದರೂ ಅವು ಯಾವುವೂ ಅಷ್ಟು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಏಕೆಂದರೆ, ಕಾನೂನುರೀತ್ಯಾ ಆ ವಿಷಯವಾಗಿ ನಿಷ್ಕರ್ಷೆ ಮಾಡಲು ಹಾಸುಗಂಬಳಿ ಬಲು ಸುದೀರ್ಘವಾಗಿರುವುದೇ ಕಾರಣ! ಏತನ್ಮಧ್ಯೆ ಒತ್ತುವರಿ, ಕಬಳಿಕೆಯು ಅವ್ಯಾಹತವಾಗಿ ನಡೆಯುತ್ತಲೇ ಇರುತ್ತದೆ.

ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂದುದೇ ಸರ್ವಾಧಿಕಾರದ ಧೋರಣೆಯಿದ್ದ ರಾಜಪ್ರಭುತ್ವ ಮತ್ತು ಪಾಳೆಗಾರಿಕೆಯ ಹಿನ್ನೆಲೆಯಿಂದ. ಹಾಗಾಗಿ, ಇಂದಿನ ರಾಜಕಾರಣಿಗಳು ಆ ಗುಣಗಳನ್ನು ಅರಿತೋ ಅರಿವಿಲ್ಲದೆಯೋ ಮೈಗೂಡಿಸಿಕೊಂಡಿರುವುದರಿಂದ, ಇಂತಹ ಒತ್ತುವರಿಗಳು ನಡೆಯುತ್ತಿರುತ್ತವೆ. ಈ ಗುಣ ಬರೀ ರಾಜಕಾರಣಿಗಳಿಗೆ ಸೀಮಿತವಲ್ಲ, ಇತರ ಬಲಾಢ್ಯ ವ್ಯಕ್ತಿಗಳು, ಸಂಘ ಸಂಸ್ಥೆಗಳಿಗೂ ಹಬ್ಬಿರಬಹುದು. ಇದು ಎಲ್ಲರಿಗೂ ತಿಳಿದಿದೆಯಾದರೂ ಬೆಕ್ಕಿಗೆ ಗಂಟೆ ಕಟ್ಟುವವರಾರು?! ಸಂವಿಧಾನವೇ, ಸಂವಿಧಾನಾತ್ಮಕ ಸಂಸ್ಥೆಗಳೇ, ಚುನಾವಣಾ ಆಯೋಗವೇ ಅಥವಾ ನ್ಯಾಯಾಲಯಗಳೇ?       ರಮೇಶ್, ಬೆಂಗಳೂರು

ಕಾಡು ಕಾಯುವವರು ಕಚೇರಿ ಸೇರಿದರೆ...

ಅರಣ್ಯ ಕಾಪಾಡಲು ಮನಸ್ಸಿಲ್ಲದ ಐಎಫ್ಎಸ್ ಅಧಿಕಾರಿಗಳು ಮೂಲ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಬದಲಾಗಿ, ರಾಜಧಾನಿ ಬೆಂಗಳೂರಿನಲ್ಲಿ ಬೇರೂರಿ, ನಿಗಮ, ಮಂಡಳಿಗಳ ಆಡಳಿತಾತ್ಮಕ ಹುದ್ದೆಗಳಿಗೇ ಮುಗಿಬಿದ್ದಿರುವುದು ವರದಿಯಾಗಿದೆ (ಪ್ರ.ವಾ., ನ. 21). ಇಲಾಖೆಯ ಹುದ್ದೆಗಳಲ್ಲಿ ಇದ್ದು ಎಲ್ಲ ವರ್ಗದ ಸಿಬ್ಬಂದಿಗೆ ಉತ್ತೇಜನ ನೀಡಬೇಕಾದ ಹಿರಿಯ ಅಧಿಕಾರಿಗಳೇ ಈ ರೀತಿ ಕರ್ತವ್ಯ ವಂಚನೆ ಎಸಗುವುದು ಅನ್ಯಾಯವಲ್ಲವೇ? ಕಾಡು ಕಾಯುವ ಅಧಿಕಾರಿಗಳು ಕಚೇರಿ ಸೇರಿದರೆ ಹೇಗೆ ಎಂಬ ಪ್ರಶ್ನೆ ಪರಿಸರಪ್ರೇಮಿಗಳು ಹಾಗೂ ಸಾರ್ವಜನಿಕರದು.

ಆಯಕಟ್ಟಿನ ಜಾಗಗಳಲ್ಲಿ ಕುಳಿತುಕೊಂಡು ಲಾಬಿ ನಡೆಸುತ್ತಿರುವ ಈ ಅಧಿಕಾರಿಗಳನ್ನು ಅರಣ್ಯ ಇಲಾಖೆಗೇ ವಾಪಸು ಕಳಿಸಬೇಕು. ಅರಣ್ಯ ರಕ್ಷಣೆಗೆ, ಅಭಿವೃದ್ಧಿಗೆ ಅವರ ಸೇವೆ ಬಳಕೆಯಾಗುವಂತೆ ಮಾಡಬೇಕು.

-ಆರ್.ಶಿವರಾಮ್, ಸಂಡೂರು

ಪೂಜಾರಿಗಳ ಬದುಕಿಗಿದೆ ಹಲವು ಮಾರ್ಗ

ಕಾಣಿಕೆ ಹುಂಡಿಗಳು ಇಲ್ಲದಿದ್ದರೆ ದೇಗುಲದಲ್ಲಿ ಪೂಜಾರಿಗಳು ಇರುವುದಿಲ್ಲ ಎಂಬ ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್‌ ವಡೆಟ್ಟಿವಾರ್‌ ಅವರ ಹೇಳಿಕೆ (ಪ್ರ.ವಾ., ನ. 21) ಸರಿಯಲ್ಲ. ಸರಿಯಾಗಿ ಸಂಬಳ ಕೊಟ್ಟರೆ ಪೂಜಾರಿಗಳು ಅರ್ಚಕತ್ವಕ್ಕೆ ಬಂದೇಬರುತ್ತಾರೆ. ಅಲ್ಲದೆ ಕಾಣಿಕೆ ಹುಂಡಿಗಳಿರುವುದು ದೇವಸ್ಥಾನದ ಉದ್ಧಾರಕ್ಕೆ. ಅಂದರೆ, ಕಟ್ಟಡಕ್ಕೆ ಬಣ್ಣ ಬಳಿಯುವ ಹಾಗೂ ಸಣ್ಣಪುಟ್ಟ ಕೆಲಸಗಳಿಗೆ ಬಳಸಿಕೊಳ್ಳಲು ಮಾತ್ರ.

ರಾಜಕೀಯ ವ್ಯಕ್ತಿಗಳಿಗೆ ರಾಜಕೀಯ ಮಾಡುವುದಷ್ಟೇ ಗೊತ್ತು. ಪೂಜಾರಿಗಳು ಮಂತ್ರವಿದ್ಯೆಯಲ್ಲಿ ಪಾರಂಗತ
ರಾಗಿರುವುದರಿಂದ ಶಾಸ್ತ್ರ ಹೇಳುವುದು, ಪೌರೋಹಿತ್ಯ, ಪೂಜಾ ವಿಧಿಗಳನ್ನು ಮಾಡುವಂತಹ ಹಲವು ಮಾರ್ಗಗಳು ಅವರಿಗೆ ಇರುತ್ತವೆ ಎಂಬುದನ್ನು ಅರಿಯಬೇಕು.    

-ಬಾಲಕೃಷ್ಣ ಎಂ.ಆರ್., ಬೆಂಗಳೂರು

ಗ್ರಂಥಾಲಯ ಕರ ಸದ್ಬಳಕೆಯಾಗಲಿ

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ (ನ. 14–20) ಸಂದರ್ಭದಲ್ಲಿ ಪು.ಸೂ.ಲಕ್ಷ್ಮೀನಾರಾಯಣ ರಾವ್ (ಚರ್ಚೆ, ನ. 20) ಮತ್ತು ಬಿ.ಆರ್.ಸತ್ಯನಾರಾಯಣ (ಚರ್ಚೆ, ನ. 21) ಅವರು ಗ್ರಂಥಾಲಯ ಕಾಳಜಿಯಿಂದ ಬರೆದ ಲೇಖನಗಳು ಸರಿಯಾಗಿವೆ. ನಾನು ಸಹ ನಮ್ಮೂರಿನಲ್ಲಿ ಒಂದು ಖಾಸಗಿ, ವಿಶಿಷ್ಟ, ಉಚಿತ ಗ್ರಂಥಾಲಯ ನಡೆಸುತ್ತಿದ್ದೇನೆ. ಈ ನನ್ನ ಅನುಭವದಲ್ಲಿ ಹೇಳಬಯಸುವುದೇನೆಂದರೆ, ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರಿಂದ ಗ್ರಂಥಾಲಯ ಕರವನ್ನು ಸ್ವೀಕರಿಸುತ್ತವೆ. ಈ ಹಣವೇ ಕೋಟ್ಯಂತರ ರೂಪಾಯಿ ಆಗುತ್ತದೆ. ಆದರೆ ಗ್ರಾಮೀಣ ಪ್ರದೇಶದ ಗ್ರಂಥಾಲಯಗಳಿಗೆ ಸರಬರಾಜು ಮಾಡುವ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ತಿಂಗಳ ಮೊತ್ತವನ್ನು ಮಾತ್ರ ಸಕಾಲದಲ್ಲಿ ನೀಡುವುದಿಲ್ಲ! ಪತ್ರಿಕಾ ಸರಬರಾಜಿನ ತಿಂಗಳ ಮೊತ್ತವನ್ನು ಆರು ತಿಂಗಳಿಗೊಮ್ಮೆ ನೀಡುತ್ತವೆ, ಅದೂ ಬಹಳಷ್ಟು ಸತಾಯಿಸಿದ ಬಳಿಕ. ಹೀಗಾದಾಗ ಪತ್ರಿಕೆ ಸರಬರಾಜು ಮಾಡುವ ಪತ್ರಿಕಾ ಮಾರಾಟ ಪ್ರತಿನಿಧಿಗಳಿಗೆ ತುಂಬಾ ತೊಂದರೆ ಆಗುತ್ತದೆ. ಒಮ್ಮೊಮ್ಮೆ ಪತ್ರಿಕೆಗಳ ಸರಬರಾಜು ನಿಂತುಹೋಗಿ, ಸಾರ್ವಜನಿಕ ಗ್ರಂಥಾಲಯಗಳ ನಿತ್ಯ ಓದುಗರಿಗೆ ತೊಂದರೆಯಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿರುವ ಯುವ ಉದ್ಯೋಗಾಕಾಂಕ್ಷಿ
ಗಳಿಗೂ ಹೇಳತೀರದ ತೊಂದರೆ ಆಗುತ್ತದೆ.

ಸಾರ್ವಜನಿಕರಿಂದ ಕರದ ರೂಪದಲ್ಲಿ ಸ್ವೀಕರಿಸಿದ ಗ್ರಂಥಾಲಯ ತೆರಿಗೆಯ ಹಣ ಕೋಟ್ಯಂತರ ರೂಪಾಯಿ ಇದ್ದರೂ ಈ ಸಮಸ್ಯೆ ಏಕೆ ಉದ್ಭವಿಸುತ್ತದೆಯೋ ಅರ್ಥವಾಗುತ್ತಿಲ್ಲ. ಗ್ರಂಥಾಲಯ ಇಲಾಖೆ ಈ ಕುರಿತು ಗಮನಹರಿಸದಿರುವುದು ಸರಿಯಲ್ಲ.   

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಆಟಗಾರರಿಗೆ ನೀಡಬೇಕಿದೆ ನೈತಿಕ ಬೆಂಬಲ

ವಿಶ್ವಕಪ್ ನಮ್ಮ ಕೈತಪ್ಪಿದರೆ ಏನಾಯಿತು? ನಮ್ಮ ಆಟಗಾರರು ಬರೋಬ್ಬರಿ ಹತ್ತೂ ಪಂದ್ಯಗಳಲ್ಲಿ ಎದುರಾಳಿ ತಂಡಗಳನ್ನು ಸೋಲಿಸಿರುವುದನ್ನು ಮರೆಯಬಾರದು. ಒಂದೊಂದು ಪಂದ್ಯವನ್ನು ಗೆದ್ದಾಗಲೂ ನಾವು ಭಾರತೀಯರು ಸಂಭ್ರಮಿಸಿದ್ದೇವೆ, ಕುಣಿದು ಕುಪ್ಪಳಿಸಿದ್ದೇವೆ, ಆನಂದಿಸಿದ್ದೇವೆ. ಆಗ ನಮಗೆ ಅವರು ದೇವರಾಗಿಯೋ ಹೀರೊಗಳಾಗಿಯೋ ಕಂಡದ್ದು ಸುಳ್ಳಲ್ಲ. ಒಂದೇ ಒಂದು ಪಂದ್ಯವನ್ನು ಅವರು ಸೋತ ಮಾತ್ರಕ್ಕೆ ಅವರನ್ನು ಖಳನಾಯಕರನ್ನಾಗಿ ಮಾಡಿ ನಮ್ಮ ಸಣ್ಣತನವನ್ನು ತೋರಿಸುವುದು ಬೇಡ.
ಗೆದ್ದಾಗ ಆಟಗಾರರನ್ನು ಹೊಗಳುವುದರಲ್ಲಿ ಏನೇನೂ ಹೆಚ್ಚುಗಾರಿಕೆಯಿಲ್ಲ. ಬದಲಿಗೆ, ಸೋತಾಗ ಅವರಿಗೆ ನೈತಿಕ ಬೆಂಬಲವನ್ನು ನೀಡುವ ದೊಡ್ಡತನವನ್ನು ನಾವು ಮೆರೆಯಬೇಕಿದೆ. ಎಷ್ಟೇ ಆದರೂ ಅವರು ನಮ್ಮ ಹೆಮ್ಮೆಯ ಆಟಗಾರರು.      

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT