ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ : ಮೇ 27 ಸೋಮವಾರ 2024

Published 3 ಜೂನ್ 2024, 14:09 IST
Last Updated 3 ಜೂನ್ 2024, 14:09 IST
ಅಕ್ಷರ ಗಾತ್ರ

ಕಠಿಣ ನಿರ್ಬಂಧವೊಂದೇ ಸಾಲದು

ಐವರು ಹೆಣ್ಣುಮಕ್ಕಳಿದ್ದರೂ ಗಂಡು ಮಗುವಿಗಾಗಿ ಹಂಬಲಿಸುತ್ತಿದ್ದ ಲಖನೌನ ವ್ಯಕ್ತಿಯೊಬ್ಬ, ಆರನೇ ಮಗುವಿನ ಲಿಂಗ ತಿಳಿಯುವ ಸಲುವಾಗಿ, ತನ್ನ ಎಂಟು ತಿಂಗಳ ಗರ್ಭಿಣಿ ಪತ್ನಿಯ ಹೊಟ್ಟೆಯನ್ನು ಹರಿತವಾದ ಆಯುಧದಿಂದ ಸೀಳಿ, ಆಕೆ ಸಾವು ಬದುಕಿನ ನಡುವೆ ಹೋರಾಡುವಂತೆ ಮಾಡಿರುವ ಭಯಂಕರ ಸುದ್ದಿ ಓದಿ ಮೈ ನಡುಗಿತು. ಈಗಲೂ ಕೆಲವರಿಗೆ ಗಂಡುಮಕ್ಕಳ ಬಗೆಗಿನ ವ್ಯಾಮೋಹ ಕಡಿಮೆಯಾಗದಿರುವುದು ದುರ್ದೈವ ಮತ್ತು ಆತಂಕಕಾರಿ. ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಗಂಡಿಗೆ ಸಮಾನವಾಗಿ ಹೆಣ್ಣುಮಕ್ಕಳು ಬೆಳೆಯುತ್ತಿದ್ದಾರೆ. ಬಹುತೇಕ ಕುಟುಂಬಗಳು ಯಾವ ಮಗುವಾದರೇನು ಎಂಬ ವಿಶಾಲ ಮನೋಭಾವ ಹೊಂದಿವೆ. ವಿಶೇಷವಾಗಿ, ಕುಟುಂಬ ನಿರ್ವಹಣೆಯಲ್ಲಿ ಹೆಣ್ಣು ಸಮರ್ಥಳಾಗಿದ್ದಾಳೆ.

ಅಷ್ಟಾದರೂ ಯಾವ ಪುರುಷಾರ್ಥಕ್ಕಾಗಿ ಇಂತಹ ಆಲೋಚನೆಗಳನ್ನು ಜನ ಹೊಂದಿದ್ದಾರೋ ತಿಳಿಯದು. ಗಂಡುಮಕ್ಕಳಾದರೆ ಮಾತ್ರ ಮೋಕ್ಷ ಎಂಬ ಮೌಢ್ಯವನ್ನು ತೊಲಗಿಸಿ, ಹೆಣ್ಣು ಸಂತಾನ ಬೆಳೆಯಲು ಅವಕಾಶ ಮಾಡಿಕೊಡಬೇಕು. ಸರ್ಕಾರ ಎಷ್ಟೇ ಕಠಿಣ ನಿರ್ಬಂಧಗಳನ್ನು ವಿಧಿಸಿದರೂ ವ್ಯಕ್ತಿ ತಾನಾಗಿಯೇ ಅರಿಯದ ವಿನಾ ಇಂತಹ ಹೀನ ಕೃತ್ಯಗಳು ನಡೆಯುತ್ತಲೇ ಇರುತ್ತವೆ.

–ಎಚ್.ತುಕಾರಾಂ, ಬೆಂಗಳೂರು

ಪ್ರಧಾನಿ ಹೇಳಿಕೆ: ಗೊಂದಲಕ್ಕೆ ಆಸ್ಪದ 

‘ನನ್ನ ತಾಯಿ ಸ್ವರ್ಗಸ್ಥರಾಗುವವರೆಗೂ ನಾನು ನನ್ನ ತಾಯಿಯ ಹೊಟ್ಟೆಯಲ್ಲಿ ಜನಿಸಿದ ನಂಬಿಕೆ ಇತ್ತು. ನಂತರ ಇತ್ತೀಚೆಗಿನ ದಿನಗಳಲ್ಲಿ ನನಗೆ ಅನ್ನಿಸುತ್ತಿದೆ, ಭಗವಂತ ನೇರವಾಗಿ ನನ್ನನ್ನು ಭೂಮಿಗೆ ಕಳಿಸಿದ್ದಾನೆ ಎಂದು’ ಎಂಬ ಹೇಳಿಕೆಯನ್ನು ನಮ್ಮ ದೇಶದಲ್ಲಿ ಜನಸಾಮಾನ್ಯರು ಕೊಟ್ಟರೆ ಅದಕ್ಕೆ ಬೆಲೆಯಿಲ್ಲ. ಆದರೆ ಪ್ರಪಂಚದ ಅತಿ ದೊಡ್ಡ ಪ್ರಜಾಸತ್ತೆಯಾದ ಭಾರತ ದೇಶದ ಚುಕ್ಕಾಣಿ ಹಿಡಿದಿರುವ, ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಧಾನಿ ಹೀಗೆ ಸಾರ್ವಜನಿಕವಾಗಿ ಹೇಳಿರುವುದು ಅತ್ಯಂತ ಅಪಾಯಕಾರಿ ಮತ್ತು ವಿಸ್ಮಯಕಾರಿ ಸಂಗತಿ.

ಇಪ್ಪತ್ತೊಂದನೇ ಶತಮಾನದ ಕಂಪ್ಯೂಟರ್ ಯುಗದಲ್ಲಿ, ಎ.ಐ. ತಂತ್ರಜ್ಞಾನದ ಕಾಲದಲ್ಲಿ ಪ್ರಧಾನಿಯವರ ಇಂತಹ ಹೇಳಿಕೆ ದೇಶದ ನಾಗರಿಕರಲ್ಲಿ ಗೊಂದಲ ಉಂಟುಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

–ಶಾಂತಕುಮಾರ್, ಸರ್ಜಾಪುರ

ಐದು ದಶಕದ ಸಂಗೀತ ಸೇವೆ

ಇತ್ತೀಚೆಗೆ ನಮ್ಮನ್ನು ಅಗಲಿದ ಹುಬ್ಬಳ್ಳಿ– ಧಾರವಾಡದ ಒಬ್ಬ ಅದ್ಭುತ ಸಂಗೀತಪ್ರೇಮಿ ಅನಂತ ಹರಿಹರ, 50 ವರ್ಷಗಳಿಂದಲೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಪೋಷಿಸಿ ಬೆಳೆಸಿದವರು. ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು, ಸಿತಾರ್‌ ರತ್ನ ರಹಮತ್ ಖಾನ್ ಅವರ ಪುಣ್ಯತಿಥಿಯನ್ನು ಆಚರಿಸುವ ಮೂಲಕ 1972ರಲ್ಲಿ ಧಾರವಾಡದಲ್ಲಿ ಸಂಗೀತ ಪರಂಪರೆಗೆ ನಾಂದಿ ಹಾಡಿದವರು. ಭೀಮಸೇನ್ ಜೋಶಿ, ಹರಿಪ್ರಸಾದ್ ಚೌರಾಸಿಯ ಅವರಂತಹ ಸಂಗೀತ ಕ್ಷೇತ್ರದ ಅನೇಕ ದಿಗ್ಗಜರನ್ನು ರಹಮತ್‌ ಖಾನ್ ಅವರ ಪುಣ್ಯತಿಥಿಗೆ ಆಹ್ವಾನಿಸಿ ಸಂಗೀತಕ್ಕೆ ಭದ್ರ ಬುನಾದಿ ಹಾಕಿದರು. ಉತ್ತರ ಕರ್ನಾಟಕದ ಸಾವಿರಾರು ಸಂಗೀತಪ್ರೇಮಿಗಳಿಗೆ ಸಂಗೀತದ ರಸದೌತಣ ಉಣಬಡಿಸಿದರು.

ಪ್ರತಿವರ್ಷ ಡಿಸೆಂಬರ್ ಮೊದಲ ವಾರ ನಮಗೆಲ್ಲ ಹಬ್ಬದ ಸಂಭ್ರಮ. ಮೂರು ದಿನಗಳ ಕಾಲ ಸಂಗೀತ ಸಂಜೆ. ಎರಡು ವರ್ಷಗಳ ಹಿಂದೆ ಭೀಮಸೇನ್ ಜೋಶಿ ಅವರ ಸ್ಮರಣಾರ್ಥ ‘ಭೀಮಪಲಾಸ್’ ಎಂಬ ಹೆಸರಿನಲ್ಲಿ ರಾಜ್ಯದಾದ್ಯಂತ ಇಡೀ ವರ್ಷ ಸಂಗೀತ ಕಛೇರಿಗಳನ್ನು ಆಯೋಜಿಸಿ ದೇಶದ ಎಲ್ಲ ಪ್ರಮುಖ ಸಂಗೀತಗಾರರನ್ನೂ ಆಹ್ವಾನಿಸಿದ್ದು ಒಂದು ಸಾರ್ವಕಾಲಿಕ ದಾಖಲೆಯೇ ಸರಿ! ಅಲ್ಲದೆ ಯುವ ಸಂಗೀತಗಾರರಿಗೂ ಪ್ರೋತ್ಸಾಹ ನೀಡಿ ಅವರನ್ನು ಬೆಳಕಿಗೆ ತಂದ ಸಹೃದಯಿ ಅವರು. ಹೀಗೆ ಐದು ದಶಕಗಳ ಕಾಲ ತಮ್ಮ ಇಡೀ ಜೀವನವನ್ನೇ ಸಂಗೀತಕ್ಕೆ ಮುಡಿಪಾಗಿಟ್ಟಿದ್ದ ಅನಂತ, ವಿರಳವಾದ ವ್ಯಕ್ತಿಯೇ ಹೌದು.

–ಮುರುಗೇಶ ಹನಗೋಡಿಮಠ, ಹುಬ್ಬಳ್ಳಿ 

ಜಾಣತಂತ್ರಕ್ಕೂ ಹೋರಾಟಕ್ಕೂ ವ್ಯತ್ಯಾಸವಿದೆ

‘ಗೌತಮ ಬುದ್ಧ: ಎಲ್ಲ ಕಾಲದ ವೈದ್ಯ’ ಎಂಬ ಎಸ್.ಸೂರ್ಯಪ್ರಕಾಶ ಪಂಡಿತ್ ಅವರ ಲೇಖನ (ಪ್ರ.ವಾ., ಮೇ 23) ಸಮುಚಿತವಾಗಿದೆ. ಆದರೆ, ‘ಎಲ್ಲ ಮಹಾತ್ಮರ ವಿಷಯದಲ್ಲಿ ಆಗುವಂತೆ ಬುದ್ಧ ಭಗವಂತನ ವಿಷಯದಲ್ಲೂ ನಮ್ಮ ಗ್ರಹಿಕೆ ಸಂಕುಚಿತವಾಗಿದೆ. ಇದು ನಮ್ಮ ಸಮಾಜದ ದುರಂತವೇ ಸರಿ. ‘ಬುದ್ಧ’ ಎಂಬ ಮಹಾತತ್ವವೂ ಇಂದು ನಮ್ಮ ದೇಶದಲ್ಲಿ ರಾಜಕೀಯಕ್ಕೆ ವಸ್ತುವಾಗಿದೆ; ನಮ್ಮ ರಾಗ- ದ್ವೇಷಗಳ ಸಮರ್ಥನೆಯ ದಾಳವಾಗಿದೆ’ ಎಂಬ ಅವರ ಮಾತುಗಳ ಇಂಗಿತವನ್ನು ಪೂರ್ತಿಯಾಗಿ ಒಪ್ಪುವುದು ಕಷ್ಟ. ಏಕೆಂದರೆ, ಇಂದು ನಮ್ಮ ದೇಶದಲ್ಲಿ ರಾಮ, ಕೃಷ್ಣ, ಹನುಮಾನ್ ಅಲ್ಲದೆ ‘ಭಾರತಮಾತೆ’ ಕೂಡ ಪ್ರಾಬಲ್ಯದ ರಾಜಕೀಯಕ್ಕೆ ಯಾಮಾರಿಸುವ ತಂತ್ರಗಳಾಗಿ ದುರ್ಬಳಕೆಗೆ ವಸ್ತುಗಳಾಗಿವೆ. ಆದರೆ, ಅದಕ್ಕೆ ಪ್ರತಿಕ್ರಿಯಾತ್ಮಕವಾಗಿ ಹಾಗೂ ತದ್ವಿರುದ್ಧವಾಗಿ ಬುದ್ಧ, ಅಂಬೇಡ್ಕರ್, ಬಸವಣ್ಣ, ನಾರಾಯಣ ಗುರು, ಕುವೆಂಪು ಅವರು ಬಹುಸಂಖ್ಯಾತರ ಮೇಲೆ ನಡೆಯುತ್ತಿರುವ ಸಣ್ಣಸಂಖ್ಯಾತರ ದೌರ್ಜನ್ಯದಿಂದ ಪಾರಾಗಲು ಮತ್ತು ಅದನ್ನು ಸಶಕ್ತವಾಗಿ ಎದುರಿಸಲು ಸದ್ಬಳಕೆಯಾಗುತ್ತಿರುವ ಅಸ್ತ್ರಗಳೆಂದು ಪರಿಗಣಿಸಬಹುದು ಎನಿಸುತ್ತದೆ.

ಶೋಷಕರ ಹಿಂಸಾತ್ಮಕ ಜಾಣತಂತ್ರಗಳಿಗೂ ಶೋಷಿತರ ಉಳಿವಿಗಾಗಿನ ಆಕ್ರೋಶಭರಿತ ಮಿಡುಕಾಟದ ಹೋರಾಟಗಳಿಗೂ ಅಗಾಧವಾದ ವ್ಯತ್ಯಾಸವಿದೆ. ಉದ್ದೇಶಗಳ ನಡುವಿನ ಸತ್ಯಾಸತ್ಯಗಳ ಸೂಕ್ಷ್ಮವನ್ನು ಮರೆಮಾಚುವುದು ತರವೆ?

–ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ಮಸಾಲೆ ಪದಾರ್ಥ: ಮಾನದಂಡ ಪಾಲನೆಯಾಗಲಿ

ಭಾರತದಿಂದ ರಫ್ತಾಗುವ ಕೆಲವು ಮಸಾಲೆ ಪದಾರ್ಥಗಳ ಮೇಲೆ ಆಸ್ಟ್ರೇಲಿಯಾ, ಹಾಂಗ್‌ಕಾಂಗ್‌ ಮತ್ತು ಸಿಂಗಪುರ ನಿಷೇಧ ಹೇರಿವೆ. ಅವುಗಳಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕದ ಪ್ರಮಾಣ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ವರದಿಯಾಗಿದೆ. ಜನರ ಆರೋಗ್ಯಕ್ಕೆ ಮಾರಕವಾಗುವ ಇಂತಹ ಮಸಾಲೆ ಪದಾರ್ಥಗಳ ಉತ್ಪಾದನೆ ಮತ್ತು ಬಳಕೆಯನ್ನು ನಮ್ಮ ದೇಶದಲ್ಲೂ ತಡೆಗಟ್ಟಬೇಕಾದ ಅವಶ್ಯಕತೆ ಇದೆ. ಅಂತರರಾಷ್ಟ್ರೀಯ ಮಟ್ಟದ ಮಾನದಂಡ ಗಳನ್ನು ಪಾಲಿಸಿದರೆ ವಿದೇಶಗಳಲ್ಲಿಯೂ ನಮ್ಮ ದೇಶದ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ದೇಶದ ಪ್ರತಿಷ್ಠೆ ಉತ್ತುಂಗಕ್ಕೆ ಏರುತ್ತದೆ.

–ಚನ್ನಕೇಶವ ಜಿ.ಕೆ., ತರೀಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT