ಸಮಸ್ಯೆಗೆ ಸ್ಥಳಾಂತರ ಪರಿಹಾರವಲ್ಲ
ನಟ ದರ್ಶನ್ ಹಾಗೂ ಇತರ ಕೈದಿಗಳನ್ನು ಒಂದು ಜೈಲಿನಿಂದ ಮತ್ತೊಂದು ಜೈಲಿಗೆ ಸ್ಥಳಾಂತರ ಮಾಡುವುದು ಸೂಕ್ತ ಕ್ರಮವಲ್ಲ. ಇದರಿಂದ ಪೊಲೀಸರ ಮೇಲೆ ಅತಿಯಾದ ಒತ್ತಡ ಬೀಳುತ್ತದೆ.
ಸ್ಥಳಾಂತರಿಸುವಾಗಿನ ಪ್ರಯಾಣದ ಒತ್ತಡ, ಖರ್ಚುವೆಚ್ಚದ ಜೊತೆಗೆ ಪೊಲೀಸರು ಅನವಶ್ಯಕವಾಗಿ ಮಾನಸಿಕ, ದೈಹಿಕ ಶ್ರಮ ಅನುಭವಿಸಬೇಕಾಗುತ್ತದೆ. ಆರೋಪಿಗಳನ್ನು ತನಿಖೆಗೆ ಒಳಪಡಿಸುವ ತನಿಖಾ
ಧಿಕಾರಿಗಳಿಗೂ ಇದು ಸಮಸ್ಯೆ ತಂದೊಡ್ಡುತ್ತದೆ. ಹೀಗಾಗಿ, ಯಾವುದೇ ಆರೋಪಿ ಅಥವಾ ಅಪರಾಧಿಯನ್ನು ಸ್ಥಳಾಂತರಿಸುವ ಬದಲು ಎಲ್ಲ ಕಾರಾಗೃಹಗಳಿಗೂ ದಕ್ಷ, ಪ್ರಾಮಾಣಿಕ, ಖಡಕ್ ಅಧಿಕಾರಿಗಳನ್ನು ನೇಮಿಸಿ ಜೈಲುಗಳ ವ್ಯವಸ್ಥೆಯನ್ನು ಸೂಕ್ತವಾಗಿ ನಿರ್ವಹಣೆ ಮಾಡುವುದು ಒಳ್ಳೆಯದು.
ಜೈಲಿನಿಂದ ಜೈಲಿಗೆ ಸ್ಥಳಾಂತರಿಸಿದ ಮಾತ್ರಕ್ಕೆ ಆರೋಪಿಗಳು ಅಥವಾ ಅಪರಾಧಿಗಳ ಕ್ರೌರ್ಯ, ಕುಕೃತ್ಯಗಳಿಗೆ ಕಡಿವಾಣ ಬೀಳುವುದೇ? ಅಕ್ರಮ ಚಟುವಟಿಕೆಗಳಿಗೆ ಆಸ್ಪದ ಇಲ್ಲದಂತೆ ಭದ್ರತೆಯನ್ನು ಬಿಗಿಗೊಳಿಸಬೇಕು.
-ಎಂ.ಮಂಚಶೆಟ್ಟಿ, ಕಡಿಲುವಾಗಿಲು, ಮದ್ದೂರು
ಪ್ರಶ್ನೆಪತ್ರಿಕೆ ರೂಪಿಸಲು ಬಾರದವರು...
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಮಂಗಳವಾರ ನಡೆಸಿದ ಪೂರ್ವಭಾವಿ ಪರೀಕ್ಷೆಯ ಎರಡನೇ ಪತ್ರಿಕೆಯ ಕನ್ನಡ ಅನುವಾದ ತೀರಾ ಕಳಪೆಯಾಗಿತ್ತು. ಕ್ಲಿಷ್ಟಕರ ಪ್ರಶ್ನೆಗಳನ್ನು ಸಿದ್ಧಪಡಿಸುವಲ್ಲಿ ತೋರಿರುವ ಉತ್ಸಾಹ ಭಾಷಾಂತರದಲ್ಲಿ ಕಾಣೆಯಾಗಿದ್ದುದು ದುರದೃಷ್ಟಕರ. ಕೆಪಿಎಸ್‌ಸಿ ಲಾಗಾಯ್ತಿನಿಂದಲೂ ಈ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಇದರ ನೇರ ಪರಿಣಾಮ ಉಂಟಾಗುವುದು ಕನ್ನಡ ಮಾಧ್ಯಮದ ಗ್ರಾಮೀಣ ವಿದ್ಯಾರ್ಥಿಗಳ ಮೇಲೆ ಎಂಬುದನ್ನು ಅದು ಮರೆತಂತಿದೆ. ಎರಡು ಲಕ್ಷಕ್ಕೂ ಹೆಚ್ಚು ಜನ ಬರೆಯುವ ಪರೀಕ್ಷೆಗೆ ಪ್ರಶ್ನೆಪತ್ರಿಕೆ ಸಿದ್ಧಪಡಿಸುವಲ್ಲೂ ಆಯೋಗ ಬೇಜವಾಬ್ದಾರಿ ತೋರುವುದು ಅಕ್ಷಮ್ಯ. ಈ ಹಿಂದೆ ಪ್ರಥಮ ದರ್ಜೆ ಸಹಾಯಕ ಪರೀಕ್ಷೆಯ ಕನ್ನಡ ಪ್ರಶ್ನೆಪತ್ರಿಕೆಯಲ್ಲೂ 15ಕ್ಕೂ ಹೆಚ್ಚು ಪ್ರಶ್ನೆಗಳಿಗೆ ತಪ್ಪು ಉತ್ತರ ನೀಡಿ ನಂತರ ಗ್ರೇಸ್ ಅಂಕಗಳನ್ನು ಘೋಷಿಸಲಾಗಿತ್ತು. ನೆಟ್ಟಗೆ ಪ್ರಶ್ನೆಪತ್ರಿಕೆ ರೂಪಿಸಲು ಬಾರದ ಆಯೋಗವು ಅಭ್ಯರ್ಥಿಗಳ ಜಾಣ್ಮೆಯನ್ನು ಒರೆಗೆ ಹಚ್ಚುವ ಕೆಲಸ ನಿರ್ವಹಿಸುತ್ತಿರುವುದು ಹಾಸ್ಯಾಸ್ಪದ.
ಸರ್ಕಾರ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂದು ಕಾರ್ಯಕ್ರಮ ಆಯೋಜಿಸಿ
ಕೈ ತೊಳೆದುಕೊಂಡರೆ ಸಾಲದು. ಕನ್ನಡದ ಸಮರ್ಪಕ ಅನುಷ್ಠಾನ ಅದರ ಆದ್ಯತೆಯಾಗಬೇಕು.
-ಶಿಶಿರ, ಶಿರಸಿ
ಸಹಾಯಕ್ಕೆ ಪ್ರಚಾರ: ತಪ್ಪೇನು?
ಯಾರಿಗಾದರೂ ನೆರವು ನೀಡುವಾಗ ಸಹಾನುಭೂತಿ ಇರಬೇಕೆ ವಿನಾ ಕನಿಕರವಲ್ಲ ಎಂಬ ಎಚ್.ಕೆ.ಶರತ್ ಅವರ ಅಭಿಪ್ರಾಯ (ಸಂಗತ, ಆ. 28) ಸರಿಯಾಗಿದೆ. ಆದರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ್ದನ್ನು ಜಗಜ್ಜಾಹೀರುಗೊಳಿಸುವುದು ತಪ್ಪು ಎಂಬಂತೆ ಬಿಂಬಿಸಿರುವುದು ಸರಿಯಲ್ಲ. ಬೀದಿನಾಯಿಗಳಿಗೆ ದಿನವೂ ತಪ್ಪದೇ ಆಹಾರ ಒದಗಿಸುವ ವ್ಯಕ್ತಿಯೊಬ್ಬರ ವಿಡಿಯೊದಿಂದ ಪ್ರಭಾವಿತಳಾಗಿ ನಮ್ಮೂರಿನ ಬೀದಿನಾಯಿಗಳಿಗೆ ಆಹಾರ ನೀಡುವುದನ್ನು ನಾನು ರೂಢಿಸಿಕೊಂಡೆ. ಎಷ್ಟೋ ಸಾರಿ ಪರಿಸರ, ಪ್ರಾಣಿ-ಪಕ್ಷಿ, ಮನುಷ್ಯರಿಗೆ ಮಾಡಿದ ಉಪಕಾರದ ಬಗ್ಗೆ ಲೇಖನ, ವಿಡಿಯೊಗಳನ್ನು ಹಂಚಿಕೊಂಡಾಗ, ಅದರಿಂದ ಪ್ರೇರಿತರಾಗಿ ಅನೇಕರು ಅಂತಹ ಸಂದರ್ಭಗಳಲ್ಲಿ ಸಹಾಯ ಮಾಡುವ ಮನಸ್ಸು ಮಾಡುತ್ತಾರೆ. ಓದಲು ಧನಸಹಾಯ, ಚಿಕಿತ್ಸೆಗೆ ಧನಸಹಾಯ, ರಕ್ತದಾನ, ದೇಹದಾನ, ಹಸಿದವರಿಗೆ ಆಹಾರ ನೀಡಿಕೆಯಂತಹ ಸತ್ಕಾರ್ಯಗಳ ಬಗ್ಗೆ ಹೇಳಿಕೊಳ್ಳುವುದರಿಂದ ಜನರಿಗೆ ಪ್ರೇರಣೆ ಸಿಗುವುದರಲ್ಲಿ ಎರಡು ಮಾತಿಲ್ಲ.
ಇಂತಹ ಅದೆಷ್ಟೋ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಓದಿ, ನೋಡಿ ಅದರಿಂದ ಪ್ರೇರಣೆ ಪಡೆದು ಸಹಾಯ ಮಾಡಲು ಮುಂದಾಗುವುದು ಒಳ್ಳೆಯದೇ ಅಲ್ಲವೆ? ರಾಜ್‌ಕುಮಾರ್ ಅವರಂತಹ ಖ್ಯಾತನಾಮರು ತೀರಿಕೊಂಡಾಗ ಅವರ ಕಣ್ಣುಗಳನ್ನು ದಾನ ಮಾಡಿದ ವಿಷಯ ತಿಳಿದು ಅದೆಷ್ಟೋ ಮಂದಿ ನೇತ್ರದಾನ ಮಾಡಲು ಮುಂದಾದರಲ್ಲವೇ? ‘ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು’ ಎಂಬ ಮಾತೆಲ್ಲಾ ಈಗಿನ ಪರಿಸ್ಥಿತಿಗೆ ಒಗ್ಗಲಾರದು. ಈಗೇನಿದ್ದರೂ ಕಷ್ಟದಲ್ಲಿರುವ ವ್ಯಕ್ತಿಗೆ ಈ ರೀತಿಯಾಗಿಯೂ ಸಹಾಯ ಮಾಡಬಹುದು ಎಂದು ತಿಳಿವಳಿಕೆ ನೀಡಬೇಕಾದ ಪರಿಸ್ಥಿತಿಯಿದೆ.
- ಸ್ನೇಹಾ ಕೃಷ್ಣನ್, ಚಿಕ್ಕಬಳ್ಳಾಪುರ
ಎಲೆಕ್ಟ್ರಾನಿಕ್ ಸಿಟಿ: ಮೂಲಕರ್ತನ ಹೆಸರಿರಲಿ
ಎಲೆಕ್ಟ್ರಾನಿಕ್ ಸಿಟಿ ರೂವಾರಿ ಎಸ್.ಎಂ.ಕೃಷ್ಣ ಅವರಾದ್ದರಿಂದ ಸರ್ಕಾರ ಈಗ ಎಣಿಸಿರುವಂತೆ ಈ ಬಡಾವಣೆಗೆ ದೇವರಾಜ ಅರಸು ಅವರ ಹೆಸರಿನ ಬದಲಿಗೆ ಕೃಷ್ಣ ಅವರ ಹೆಸರನ್ನೇ ಇಡಬೇಕು ಎಂದು ಬೂಕನಕೆರೆ ವಿಜೇಂದ್ರ ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ಆ. 28). ಯಾರದೇ ಹೆಸರನ್ನು ನಾಮಕರಣ ಮಾಡುವಾಗ ಹಿನ್ನೆಲೆ ಬಹು ಮುಖ್ಯ. ಒಂದು ಬಡಾವಣೆಗೆ ಅಥವಾ ಊರಿಗೆ ಹೆಸರಿಡುವಾಗ ಆ ವ್ಯಕ್ತಿಯ ಕೊಡುಗೆಯನ್ನು ಪರಿಗಣಿಸಬೇಕು. ‘ಎಲೆಕ್ಟ್ರಾನಿಕ್ ಸಿಟಿ’ ಎಂಬ ಹೆಸರು ಬರಲು ಮೂಲ ಕಾರಣಕರ್ತರು ರಾಮಕೃಷ್ಣ ಬಾಳಿಗಾ (ಆರ್.ಕೆ.ಬಾಳಿಗಾ) ಎಂಬುದನ್ನು ಮರೆಯಬಾರದು. ಅವರು ಎಂಬತ್ತರ ದಶಕದಲ್ಲಿ ಬೆಂಗಳೂರು ನಗರವನ್ನು ದೇಶದಲ್ಲೇ ‘ಸಿಲಿಕಾನ್ ವ್ಯಾಲಿ’ ಮಾಡಬೇಕೆಂಬ ಕನಸು ಕಂಡು ‘ಎಲೆಕ್ಟ್ರಾನಿಕ್ ಸಿಟಿ’ಯನ್ನು ಸ್ಥಾಪಿಸಿದರು. ಕಿಯೊನಿಕ್ಸ್ ಸ್ಥಾಪನೆಗೆ ಕಾರಣರಾದ ಬಾಳಿಗಾ ಅವರ ಕನಸು ನನಸಾಗಿದೆ. ಆಗ ಮುಖ್ಯಮಂತ್ರಿ ಆಗಿದ್ದವರು ಡಿ. ದೇವರಾಜ ಅರಸು. ಬೆಂಗಳೂರು ಐ.ಟಿ., ಬಿ.ಟಿ. ಕ್ಷೇತ್ರದ ಅಭಿವೃದ್ಧಿಯಲ್ಲಿ ಕೃಷ್ಣ ಅವರ ಪಾತ್ರ ಇದೆ. ಅಂದಮಾತ್ರಕ್ಕೆ ಎಲೆಕ್ಟ್ರಾನಿಕ್ ಸಿಟಿಗೆ ಕೃಷ್ಣ ಅವರ ಹೆಸರು ಸೂಕ್ತವಲ್ಲ.
ಐ.ಟಿ., ಬಿ.ಟಿ. ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಇಂದಿನ ಯುವಕರಿಗೆ ಬಾಳಿಗಾ ಅವರ ಬಗ್ಗೆ ಬಹುತೇಕ ಅರಿವಿರಲಾರದು. ಆದ್ದರಿಂದ ಎಲೆಕ್ಟ್ರಾನಿಕ್ ಸಿಟಿಗೆ ಮರುನಾಮಕರಣ ಮಾಡುವುದಾದರೆ ಅದರ ಮೂಲಕರ್ತರಾದ ಬಾಳಿಗಾ ಅವರ ಹೆಸರನ್ನೇ ಇಡುವುದು ಸೂಕ್ತ.
- ಸಿ.ಸಿದ್ದರಾಜು ಆಲಕೆರೆ, ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.