ಬಾಣಂತಿಯರ ಸಾವು: ಸರ್ಕಾರ ಕಣ್ತೆರೆಯುವುದು ಎಂದು?

ಬಳ್ಳಾರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿರುವ ಬಾಣಂತಿಯರ ಸಾವಿನ ಪ್ರಕರಣವು ನಮ್ಮ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೇ ದೊಡ್ಡ ಕಳಂಕ ತರುವ ಸುದ್ದಿಯಾಗಿದೆ. ಈ ಬಗ್ಗೆ ತ್ವರಿತವಾಗಿ ಸಭೆ ಕರೆದು ಕ್ರಮ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಔಷಧ ನಿಯಂತ್ರಕರನ್ನು ಅಮಾನತುಗೊಳಿಸಿದ್ದಾರೆ. ಆದರೆ ನಿಜವಾದ ದೋಷ ಇರುವುದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ (ಕೆಎಸ್ಎಂಎಸ್ಸಿಎಲ್). ಈ ನಿಗಮವು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಎಲ್ಲಾ ರೀತಿಯ ವೈದ್ಯಕೀಯ ವಸ್ತುಗಳನ್ನು ಸರಬರಾಜು ಮಾಡಲೆಂದು 2013ರಲ್ಲಿ ನೋಂದಣಿಯಾಗಿರುವ ಸಂಸ್ಥೆಯಾಗಿದೆ. ತನ್ನಲ್ಲಿ ಬರುವಂಥ ಪ್ರತಿ ಔಷಧವನ್ನೂ ಪರೀಕ್ಷೆಗೊಳಪಡಿಸಿ, ಉತ್ತಮವಾಗಿದ್ದರೆ ಮಾತ್ರ ಸರಬರಾಜು ಮಾಡುವ ಹೊಣೆ ಈ ಸಂಸ್ಥೆಯದು. ತಮಿಳುನಾಡಿನ ವೈದ್ಯಕೀಯ ಸೇವಾ ಕೇಂದ್ರದ ಮಾದರಿಯಲ್ಲಿ ಕೆಲಸ ಮಾಡಲು ಈ ಸಂಸ್ಥೆಯನ್ನು ಹುಟ್ಟುಹಾಕಲಾಗಿತ್ತು. ತಮಿಳುನಾಡಿನಲ್ಲಿ ಸರಬರಾಜು ಆಗುವ ಪ್ರತಿ ಔಷಧವನ್ನೂ ಕ್ವಾರಂಟೈನ್ ಮಾಡಿಟ್ಟು, ಅದು ಬಳಸಲು ಯೋಗ್ಯವೆಂದು ನಿರ್ಧಾರವಾದ ಬಳಿಕವೇ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗುತ್ತದೆ. ಬಳ್ಳಾರಿ ಜಿಲ್ಲಾಸ್ಪತ್ರೆಗೆ ಸರಬರಾಜು ಮಾಡಿದ್ದ ರಿಂಗರ್ ಲ್ಯಾಕ್ಟೇಟ್ ದ್ರಾವಣವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತೇ? ಆ ಪರೀಕ್ಷೆಯ ವರದಿಗಳನ್ನು ಮುಖ್ಯಮಂತ್ರಿಯವರ ಮುಂದೆ ತಂದಿರಿಸಲಾಗಿತ್ತೇ? ನಿಜವಾದ ಹೊಣೆ ಈ ನಿಗಮದ್ದಾಗಬೇಕಲ್ಲವೇ?

ಇಂದು ಸರ್ಕಾರಿ ಆಸ್ಪತ್ರೆಗೆ ಹೋದರೆ, ರೋಗಿಗಳಿಗೆ ಹೊರಗಿನಿಂದ ಔಷಧ ತರಲು ಬರೆದುಕೊಡುತ್ತಾರೆ. ಬಳ್ಳಾರಿಯಲ್ಲಿ ನಿಧನರಾದ ಈ ಬಾಣಂತಿಯರಿಗೂ ಹೊರಗಿನಿಂದ ತರಿಸಿದ್ದ ಔಷಧವನ್ನೇ ಕೊಟ್ಟಿರಬಹುದು.
ಹೊರಗಿನಿಂದ ತರಿಸಿದ ಔಷಧವನ್ನು (ಸಲೈನ್) ಕೊಟ್ಟಿದ್ದರೆ ರಾಜ್ಯ ಔಷಧ ನಿಯಂತ್ರಣಾಧಿಕಾರಿ ಹೊಣೆ ಆಗುತ್ತಾರೆ. ನಿಗಮದಿಂದ ಸರಬರಾಜು ಆಗಿರುವ ಔಷಧವೆಂದಾದರೆ ನಿಗಮದ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿಸಬೇಕು ಅಲ್ಲವೇ? ಎಂದಿಗೆ ನಮ್ಮ ಸರ್ಕಾರ ಕಣ್ತೆರೆಯುವುದು? ಎಂದಿಗೆ ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳು ಲಭ್ಯವಾದಾವು?

-ಡಾ. ಗೋಪಾಲ ದಾಬಡೆ, ಧಾರವಾಡ

ಯುವಕರಿಗೆ ಅವಕಾಶ ನೀಡಲಿ

‘ನನ್ನ ಹೆಸರು ಕೇಳಿಬರಲಿ, ಬಾರದಿರಲಿ, ಪಕ್ಷದವರು ಹೇಳಿದರೆ ಸಚಿವ ಸ್ಥಾನ ಬಿಟ್ಟು, ಕೆಪಿಸಿಸಿ ಅಧ್ಯಕ್ಷನಾಗುತ್ತೇನೆ. ನಾನು ಯಾವತ್ತೂ ಅಧಿಕಾರಕ್ಕೆ ಅಂಟಿಕೊಳ್ಳುವವನಲ್ಲ’ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿರುವುದಾಗಿ ವರದಿಯಾಗಿದೆ. ಇದನ್ನು ಬಿಟ್ಟರೆ ಅದನ್ನು ಕೊಡಿ ಎಂದು ಹೇಳಿರುವುದು ಅಧಿಕಾರದ ಮೇಲಿನ ಆಸೆಯೇ ಅಲ್ಲವೆ? ಅಧಿಕಾರಕ್ಕೆ ಅಂಟಿಕೊಳ್ಳುವವನಲ್ಲ ಎಂದಮೇಲೆ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಯುವಕರಿಗೆ ಅವಕಾಶ ನೀಡಲಿ. ಪಕ್ಷದವರು ಹೇಳಿದರೆ ಎನ್ನುವ ರಾಜಣ್ಣನವರು ಹೇಳಿಸಿಕೊಳ್ಳದೆಯೇ ಸ್ಥಾನ ಬಿಡಲಿ.

‘ಆಡದೇ ಮಾಡುವವನು ರೂಢಿಯೊಳಗುತ್ತಮನು, ಆಡಿ ಮಾಡುವವನು ಮಧ್ಯಮನು, ಆಡಿಯೂ ಮಾಡದವನು ಅಧಮನು’ ಎಂಬ ಸರ್ವಜ್ಞನ ತ್ರಿಪದಿ ನೆನಪಾಗುತ್ತದೆ. ರಾಜಣ್ಣನವರು ಆಡಿದಂತೆ ಮಾಡುವುದರ ಮೂಲಕ ಮಾದರಿ (ಮಧ್ಯಮರಾದರೂ) ಆಗಲಿ. ಅಂತೆಯೇ ಹಲವು ವರ್ಷಗಳ ಕಾಲ ಸಚಿವರಾಗಿ ಕಾರ್ಯನಿರ್ವಹಿಸಿದ ಮತ್ತಿತರರೂ ಇದೇ ಮಾರ್ಗ ಅನುಸರಿಸಿ ಯುವಜನರಿಗೆ ಅವಕಾಶ ನೀಡಲಿ.

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ವಿರೋಧ ಪಕ್ಷಗಳ ಸದಸ್ಯರತ್ತ ಕ್ಯಾಮೆರಾ ದೃಷ್ಟಿಬೀರದೇಕೆ?

ವಿರೋಧ ಪಕ್ಷಗಳು ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದರಿಂದ ಬೊಕ್ಕಸಕ್ಕೆ ಹತ್ತಾರು ಕೋಟಿ ರೂಪಾಯಿ ನಷ್ಟವಾಗಿದೆಯೆಂದೂ ಸದನವು ಸಾರ್ವಜನಿಕ ರಸ್ತೆಯಲ್ಲವೆಂದೂ ಸಾಮಗ ದತ್ತಾತ್ರಿ ಆಕ್ಷೇಪಿಸಿದ್ದಾರೆ (ವಾ.ವಾ.,ನ. 30). ಸದನದ ಬಾವಿಗಿಳಿದು ಪ್ರತಿಭಟಿಸುವುದು ಇತ್ತೀಚೆಗೆ ರೂಢಿಗೆ ಬಂದ ಪರಿಪಾಟವಲ್ಲ. ಸದನದ ರೀತಿ–ನೀತಿಗಳಿಗೆ ಕಟ್ಟುಬಿದ್ದು ವರ್ತಿಸುವ ಸದಸ್ಯರ ಸಂಖ್ಯೆ ಇಡೀ ಸದನದಲ್ಲಿ ಬೆರಳೆಣಿಕೆಯಷ್ಟು ಇರಬಹುದೇನೊ. ಪ್ರತಿಭಟಿಸುವುದು ಸದಸ್ಯರ ಹಕ್ಕಲ್ಲವೇ? ವಿಷಯ ಅದಲ್ಲ. ಸಂಸದ್ ಟಿ.ವಿ.ಯಲ್ಲಿ ಪ್ರಸಾರವಾಗುವ ಈ ಕಾರ್ಯಕಲಾಪದಲ್ಲಿ, ವಿರೋಧ ಪಕ್ಷದ ಸದಸ್ಯರು ಮೌಲಿಕ ವಿಷಯವನ್ನು ಮುಂದಿಟ್ಟುಕೊಂಡು ಪ್ರತಿಭಟಿಸುವ ಕ್ರಿಯೆಯನ್ನೂ ನೋಡುಗರ ಕಣ್ಣಿಂದ ಮರೆಮಾಚಲಾಗುತ್ತಿದೆ. ಟಿ.ವಿ.ಯ ಕ್ಯಾಮೆರಾದ ಕಣ್ಣು ಸದನದ ಸ್ಪೀಕರ್– ಸಭಾಪತಿ, ಆಡಳಿತ ಪಕ್ಷದ ಸದಸ್ಯ, ಮಂತ್ರಿ ಇಲ್ಲವೇ ಆ ಬೆಂಚ್ಗಳ ಕಡೆ ಮಾತ್ರ ನಾಟಿರುತ್ತದೆ. ಹೀಗೆ ವಿರೋಧಪಕ್ಷದವರನ್ನು ಟಿ.ವಿ. ಪರದೆಯಿಂದ ಇಂಚಿಂಚೇ ದೂರ ಸರಿಸುತ್ತಾ ನೇಪಥ್ಯಕ್ಕೆ ದೂಡುತ್ತಾ ಸಾಮಾನ್ಯ ಜನರ ದೃಷ್ಟಿಪಟಲದಿಂದ ಮಾಯ ಮಾಡುತ್ತಾ ಅವರ ಮನದಲ್ಲಿ ಇವರ ಪ್ರಸ್ತುತತೆಯನ್ನೇ ಪ್ರಶ್ನೆ ಮಾಡುವ ಸ್ಥಿತಿ ತಂದೊಡ್ಡುವ ಕ್ರಿಯೆ ವ್ಯವಸ್ಥಿತವಾಗಿ, ಯೋಜನಾಬದ್ಧವಾಗಿ ನಡೆಯುತ್ತಿರುವುದು ಯಾರ ಒಳಿತಿಗಾಗಿ?

ಅದಿರಲಿ, ವಿರೋಧ ಪಕ್ಷಗಳ ಸದಸ್ಯರ ಬೇಡಿಕೆಯಾದರೂ ಏನು? ಅಮೆರಿಕದ ನ್ಯಾಯಾಲಯದಲ್ಲಿ ನಮ್ಮದೇ ದೇಶದ ಬಹುದೊಡ್ಡ ಉದ್ಯಮಿಯೊಬ್ಬರ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ, ಸಾವಿರಾರು ಕೋಟಿ ರೂಪಾಯಿ ಲಂಚದ ಆರೋಪ ಹೊರಿಸಿರುವುದರ ಸತ್ಯಾಸತ್ಯತೆಯ ಬಗ್ಗೆ ಚರ್ಚಿಸಬೇಕೆಂಬ ಆಗ್ರಹ. ಇದು ಸರ್ಕಾರದ ವಿರುದ್ಧದ ತಕರಾರೇನಲ್ಲ. ಸರ್ಕಾರವೇ ಮುಂದೆ ಬಂದು ಚರ್ಚೆಗೆ ಆಸ್ಪದ ಮಾಡಿಕೊಡಬೇಕಿತ್ತು. ಅಂಜುವುದು ಯಾರಿಗಾಗಿ, ಯಾತಕ್ಕಾಗಿ? ಇದು ನಮಗ್ಯಾರಿಗೂ ಅಷ್ಟೊಂದು ಮಹತ್ವದ, ಕಾಡುವ ವಿಷಯವಲ್ಲವೇನೊ. ವಿರೋಧ ಪಕ್ಷದವರ ಪ್ರತಿ ನಡೆಯೂ ನಮಗೇಕೆ ಅನುಮಾನ ಹುಟ್ಟಿಸಬೇಕು? ಇಷ್ಟೊಂದು ಸಿನಿಕರಾಗುವುದು ಎಷ್ಟು ಸರಿ?

-ಶ್ರೀಧರ ಗಾರೆಮನೆ, ಬೆಂಗಳೂರು

ಸರ್ಜರಿ– ಭರ್ಜರಿ!

‘ಸಚಿವ ಸಂಪುಟ ಸರ್ಜರಿ’ ಹಾಗೂ ‘ದರ್ಶನ್ ಬೆನ್ನಿನ ಸರ್ಜರಿ’ ಕುರಿತ ಸುದ್ದಿಗಳು ಈಗ ಸದ್ದು ಮಾಡುತ್ತಿವೆ. ಈ ಎರಡೂ ಸರ್ಜರಿಗಳು ಆಗುತ್ತವೆಯೋ ಇಲ್ಲವೋ ಎಂಬುದು ಯಕ್ಷಪ್ರಶ್ನೆ. ಒಟ್ಟಿನಲ್ಲಿ, ಈ ಸರ್ಜರಿಗಳು
ಸುದ್ದಿವಾಹಿನಿಗಳಲ್ಲಿ ಮಾತ್ರ ‘ಭರ್ಜರಿ’ ಪ್ರಚಾರ ಪಡೆಯುತ್ತಿವೆ!

- ಪಿ.ಜೆ.ರಾಘವೇಂದ್ರ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.