ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 21 ಆಗಸ್ಟ್ 2024, 23:25 IST
Last Updated 21 ಆಗಸ್ಟ್ 2024, 23:25 IST
ಅಕ್ಷರ ಗಾತ್ರ

ಎಚ್‌ಡಿಕೆ ವಿರುದ್ಧದ ಆರೋಪ: ತ್ವರಿತ ನ್ಯಾಯ ಸಿಗಲಿ

ನಿಯಮ ಉಲ್ಲಂಘಿಸಿ ಕಂಪನಿಯೊಂದಕ್ಕೆ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪದಲ್ಲಿ ಜೆಡಿಎಸ್‌ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಲೋಕಾಯುಕ್ತಕ್ಕೆ ಅನುಮತಿ ನೀಡದ ರಾಜ್ಯಪಾಲರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾತ್ರ ತನಿಖೆಗೆ ಅನುಮತಿ ನೀಡಿರುವುದು ವಿವಾದಕ್ಕೆ ಈಡಾಗಿ, ಕೆಲವರ ಅನುಮಾನಕ್ಕೆ ಕಾರಣವಾಗಿದೆ. ಜೊತೆಗೆ ಕುಮಾರಸ್ವಾಮಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಒಂದು ವರ್ಷದಿಂದ ಕೇಳುತ್ತಿದ್ದರೂ ರಾಜ್ಯಪಾಲರು ಅನುಮತಿ ನೀಡಿಲ್ಲ. ಅನುಮತಿ ನೀಡುವುದಕ್ಕೇ ವರ್ಷಗಳು ಕಳೆದರೆ ಪರಿಶೀಲನೆ, ತನಿಖೆ, ಸಾಕ್ಷ್ಯ, ವಾದ, ವಿವಾದದಂತಹ ಹಂತಗಳು ಮುಗಿದು ನ್ಯಾಯ ದೊರಕುವಷ್ಟರಲ್ಲಿ ಮತ್ತಷ್ಟು ವರ್ಷಗಳೇ ಉರುಳಿರುತ್ತವೆ. ಈ ರೀತಿ ನ್ಯಾಯ ವಿಳಂಬವಾದರೆ ಹೇಗೆ? ತನಿಖೆಗೆ ಸಮಯ ಬೇಕು ನಿಜ. ಆದರೆ ಅನುಮತಿ ಹಂತದಲ್ಲೇ ಅನವಶ್ಯಕ ವಿಳಂಬ ಕೂಡದು. ಇಂತಹ ವಿಳಂಬಗಳಿಂದಲೇ ‘ತಪ್ಪು ಮಾಡೋಣ, ಸಿಲುಕಿಕೊಂಡರೂ ಹತ್ತಾರು ವರ್ಷ ಎಳೆದಾಡಬಹುದು’ ಎಂಬ ಮನೋಭಾವಕ್ಕೆ ಅಧಿಕಾರಾರೂಢರು ಬರುವ ಸಾಧ್ಯತೆ ಇದೆ.

ತಪ್ಪಿತಸ್ಥರು ಸಾಮಾನ್ಯ ವ್ಯಕ್ತಿಯೇ ಆಗಲಿ ಅಥವಾ ಮಂತ್ರಿ ಮಹೋದಯರು, ಅಧಿಕಾರಿಗಳೇ ಆಗಲಿ ವಿನಾ ಕಾಲಹರಣ ಕೂಡದು. ನ್ಯಾಯ ತ್ವರಿತವಾಗಿ ದೊರೆಯುವಂತಾಗಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ತಪ್ಪಿಲ್ಲದಿದ್ದರೆ ದೋಷಮುಕ್ತರು ಎಂದು ತೀರ್ಪು ಬರಲಿ. ಯಾವುದೇ ಪ್ರಕರಣವಾದರೂ ಒಂದು ತಾರ್ಕಿಕ ಅಂತ್ಯ ಕಾಣಲಿ.

 – ಪತ್ತಂಗಿ ಎಸ್. ಮುರಳಿ, ಬೆಂಗಳೂರು

ವೇತನ ಪರಿಷ್ಕರಣೆ: ಹುಸಿಯಾದ ನಿರೀಕ್ಷೆ

ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಿಸಲಾಗಿದೆ. ರಾಜ್ಯ ಸರ್ಕಾರದ ಕೆಲವು ಜನಪ್ರಿಯ ಕಾರ್ಯಕ್ರಮಗಳ ವೆಚ್ಚಗಳ ಇಕ್ಕಟ್ಟಿನ ನಡುವೆಯೂ ಈ ಪ್ರಸ್ತಾವವನ್ನು ಒಪ್ಪಿಕೊಂಡಿರುವುದನ್ನು ಸರ್ಕಾರಿ ನೌಕರರು ಕೃತಜ್ಞತೆಯಿಂದ ಸ್ವಾಗತಿಸಲೇಬೇಕು. ಆದರೆ ಇಲ್ಲಿ ಒಂದು ಅಸಮಾಧಾನ ಎದ್ದು ಕಾಣುವಂತಿದೆ. ಈ ಹಿಂದಿನ ಸರ್ಕಾರವು ಶೇಕಡ 17ರಷ್ಟನ್ನು ಮಧ್ಯಂತರ ಪರಿಹಾರವಾಗಿ 1.4.2023ರಿಂದ ಅನ್ವಯವಾಗುವಂತೆ ಜಾರಿ ಮಾಡಿತ್ತು. ಹೀಗಾಗಿ ಅದೇ ದಿನಾಂಕದಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆಯ ಹಣಕಾಸು ಸೌಲಭ್ಯ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ಎಲ್ಲರೂ ಇದ್ದರು. ಸಾಮಾನ್ಯವಾಗಿ ಈ ಹಿಂದೆ ಇದೇ ಪರಿಪಾಟವನ್ನು ಅನುಸರಿಸಲಾಗುತ್ತಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಸರ್ಕಾರ 1.8.2024ರಿಂದ ಅನ್ವಯವಾಗುವಂತೆ ಹಣಕಾಸು ಸೌಲಭ್ಯವನ್ನು ಮಂಜೂರು ಮಾಡಿದೆ. 

ಸರ್ಕಾರದ ಈ ನಿರ್ಧಾರದಿಂದ ಸರ್ಕಾರಿ ನೌಕರರು ಪೂರ್ವಾನ್ವಯದಿಂದ ಲಭ್ಯವಾಗಬೇಕಾದ ಹಣಕಾಸು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇದರಲ್ಲಿ ಹೆಚ್ಚು ಬಾಧಿತರಾದವರು 1.4.2023ರಿಂದ 31.7.2024ರ ನಡುವೆ ಸೇವೆಯಿಂದ ನಿವೃತ್ತಿ ಹೊಂದಿರುವ ನೌಕರರು. ಗ್ರ್ಯಾಚುಟಿ, ಪರಿವರ್ತಿತ ಪಿಂಚಣಿ ಮತ್ತು ಗಳಿಕೆ ರಜೆ ನಗದೀಕರಣವನ್ನು ಒಳಗೊಂಡಂತಹ ಒಂದು ತೃಪ್ತಿಕರ ಮೊತ್ತದ ಸೌಲಭ್ಯ ದೊರೆಯುವುದು ನಿಶ್ಚಿತ ಎಂಬ ಭರವಸೆಯಲ್ಲಿದ್ದ ಇವರಿಗೆ ಅಪಾರ ನಿರಾಸೆಯಾಗಿದೆ. ಕೆಲವು ಲಕ್ಷಗಳಷ್ಟು ಮೊತ್ತದ ಹಣ ಇವರ ಕೈತಪ್ಪಿ ಹೋದಂತಾಗಿದೆ. ಇವರಿಗೆ ಸಾಮಾನ್ಯವಾಗಿ ನಿವೃತ್ತಿ ಸಂದರ್ಭದಲ್ಲಿ ಗೃಹ ನಿರ್ಮಾಣ, ಮಕ್ಕಳ ವಿವಾಹ, ಮುಂದಿನ ಕಷ್ಟಕರ ದಿನಗಳಿಗಾಗಿ ಉಳಿತಾಯದಂತಹ ಕನಸುಗಳಿರುವುದು ಸಹಜ. ಈಗ ಈ ನಿರೀಕ್ಷೆಗಳು ಹುಸಿಯಾಗಿವೆ. ಆದ್ದರಿಂದ ರಾಜ್ಯ ಸರ್ಕಾರ ಈ  ವಿಷಯವನ್ನು ಸಹಾನುಭೂತಿಯಿಂದ ಮರುಪರಿಶೀಲಿಸಿ ನಿವೃತ್ತ ನೌಕರರಿಗೆ ನ್ಯಾಯ ಒದಗಿಸಬೇಕು. ಈ ದಿಸೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಸಂಬಂಧಪಟ್ಟವರೆಲ್ಲ ಪ್ರಯತ್ನಿಸುವುದು ಅಗತ್ಯ.

– ಹರೀಶ್‌ ಕುಮಾರ್‌ ಕುಡ್ತಡ್ಕ, ಮಂಗಳೂರು

ಪುಸ್ತಕ ಮಾರಾಟಕ್ಕೂ ಇರಲಿ ಆಸಕ್ತಿ

ಪುಸ್ತಕಲೋಕ ಎಡವುತ್ತಿರುವುದರ ಬಗ್ಗೆ ವೀರಕಪುತ್ರ ಶ್ರೀನಿವಾಸ ಅವರು ಎತ್ತಿರುವ ಪ್ರಶ್ನೆಗಳು (ಚರ್ಚೆ, ಆ. 21) ಸಮಯೋಚಿತವಾಗಿವೆ. ಲೇಖಕರು ಪುಸ್ತಕಗಳ ಪ್ರಕಟಣೆಗೆ ತೋರಿಸುವ ಆಸಕ್ತಿಯನ್ನು ಮಾರಾಟಕ್ಕೂ ತೋರಿಸಬೇಕು. ಪುಸ್ತಕಗಳನ್ನು ಜನರಿಗೆ ತಲುಪಿಸುವುದು ಒಂದು ವ್ರತ ಎಂಬಂತೆ ಗಳಗನಾಥರು ಪುಸ್ತಕಗಳನ್ನು ತಲೆ ಮೇಲೆ ಹೊತ್ತು ಮನೆ ಮನೆಗೆ ಹೋಗಿ ಮಾರಿದರು. ಈ ತರಹದ ದೊಡ್ಡ ಪರಂಪರೆ ನಮ್ಮಲ್ಲಿದೆ. ಬೆಂಗಳೂರಿನಲ್ಲೂ ಲೇಖಕ ಜಯರಾಮಾಚಾರಿ ಅವರು ಗೆಳೆಯರೊಂದಿಗೆ ಸೇರಿಕೊಂಡು ‘ಬಾ ಗುರು ಬುಕ್ ತಗೋ’ ಅಭಿಯಾನ ಶುರು ಮಾಡಿದ್ದಾರೆ. ಬಳ್ಳಾರಿಯಲ್ಲಿ ಅರುಣ್ ಭೂಪಾಲ್ ‘ಸ್ಟ್ಯಾಂಡ್ ವಿಥ್ ಬುಕ್ಸ್’ ಆರಂಭಿಸಿದ್ದಾರೆ. ಇಂತಹ ಕಾರ್ಯಕ್ರಮಗಳು ಎಲ್ಲೆಡೆ ವಿಸ್ತರಿಸಬೇಕು. ಪುಸ್ತಕಗಳ ಪರಿಚಯಕ್ಕಾಗಿ ನವ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು. ಮದುವೆ, ಗೃಹಪ್ರವೇಶ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪುಸ್ತಕಗಳನ್ನು ಕಾಣಿಕೆಯಾಗಿ ಕೊಡಬೇಕು. ಹೊಸ ತಲೆಮಾರು ಓದಿನ ಕಡೆ ತೆರೆದುಕೊಳ್ಳಬೇಕು. ಬರೀ ಸರ್ಕಾರವನ್ನು ನೆಚ್ಚಿಕೊಳ್ಳದೆ ಸ್ವತಃ ಮುಂದಡಿ ಇಡಬೇಕು. ಆಗಮಾತ್ರ ಲೇಖಕರು, ಪ್ರಕಾಶಕರು ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯ. 

– ದಸ್ತಗೀರಸಾಬ್ ದಿನ್ನಿ, ಬಳ್ಳಾರಿ

ನೆರವಿಗೆ ಮನವಿ

ನನ್ನ ಪತ್ನಿ ಲಕ್ಷ್ಮಿ ಎನ್. ತೀವ್ರವಾದ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದು, ಆಕೆಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಚಿಕಿತ್ಸೆಗೆ ಸುಮಾರು 25 ಲಕ್ಷ ರೂಪಾಯಿ ವೆಚ್ಚ ತಗಲುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ನನಗೆ ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ನನ್ನ ಪತ್ನಿಯ ಚಿಕಿತ್ಸೆಗೆ ದಾನಿಗಳು ನೆರವಾಗಬೇಕೆಂದು ಕೋರುತ್ತೇನೆ. ಬ್ಯಾಂಕ್ ವಿವರ– ಪುಟ್ಟ ವಿಶ್ವನಾಥ ರೆಡ್ಡಿ, ಖಾತೆ ಸಂಖ್ಯೆ–  058301508408, ಐಸಿಐಸಿಐ ಬ್ಯಾಂಕ್, IFSC – ICIC0000583, ಮೊಬೈಲ್ ಸಂಖ್ಯೆ– 99864 47326.

– ಪುಟ್ಟ ವಿಶ್ವನಾಥ ರೆಡ್ಡಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT