ಕ್ಯಾಬಿನೆಟ್ ಅನುಮೋದನೆ ಎಂದರೆ, ಪಂಚಾಯಿತಿ ಸದಸ್ಯರು ಸಭೆ ಸೇರಿ, ತಮಗೆ ಏನು ಬೇಕೋ ಹಾಗೆ ಬರೆದುಕೊಳ್ಳುವ ವ್ಯವಸ್ಥೆಗಿಂತ ಭಿನ್ನವಾದುದೇನೂ ಅಲ್ಲ. ರಾಜಕಾರಣಿಗಳೆಲ್ಲಾ ಒಂದೇ ಎಂಬುದು
ಸಾರ್ವಜನಿಕರಿಗೆ ಮೊದಲು ಅರ್ಥವಾಗಬೇಕು. ವಿರೋಧ ಪಕ್ಷದವರಾಗಿದ್ದಾಗ ಇದ್ದ ಎಲ್ಲ ಜನಪರ ಕಾಳಜಿಗಳೂ ಅಧಿಕಾರಕ್ಕೆ ಬಂದೊಡನೆ ಬದಲಾಗಿ ಜನವಿರೋಧಿ ಆಗುವುದು ವಿಚಿತ್ರವಾಗಿ ಕಾಣುತ್ತದೆ. ಒಂದು ವಾರದಿಂದ ರಾಜ್ಯದ ರಾಜಕೀಯ ದೂಳೆರಚಾಟವನ್ನು ನೋಡುತ್ತಿದ್ದೇವೆ. ಈ ದೂಳೆರಚಾಟ ಏಕೆಂದರೆ, ಅದು ಸಾರ್ವಜನಿಕರ ಕಣ್ಣಿಗೆ ಕಾಣದಿರಲಿ ಎಂಬುದೇ ಆಗಿದೆ.
ಜಿಂದಾಲ್ ಕಂಪನಿಗೆ 3,677 ಎಕರೆ ಭೂಮಿಯನ್ನು ಅತಿ ಕಡಿಮೆ ಬೆಲೆಗೆ ಕೊಡಲು ತೀರ್ಮಾನಿಸಿದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಮತ್ತೊಂದು ನಿರ್ಧಾರ ಆಶ್ಚರ್ಯಕರವಾಗಿಯೂ ಹಾಸ್ಯಾಸ್ಪದವಾಗಿಯೂ ಇದೆ. ಅದೆಂದರೆ, ಕಲಬುರಗಿ ಸರ್ಕಾರಿ ಮಹಾವಿದ್ಯಾಲಯಕ್ಕೆ ಸೇರಿದ 3.7 ಎಕರೆ ಜಮೀನನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ಕಲಬುರಗಿ ಶಾಖೆಗೆ ನೀಡುವ ವಿಷಯ. ಶೈಕ್ಷಣಿಕ ಹಿತದೃಷ್ಟಿಯ ಕಾರಣ ನೀಡಿ, ಎರಡು ಸಾಲಿನ ತೀರ್ಮಾನದೊಂದಿಗೆ ಸರ್ಕಾರಿ ಜಾಗವನ್ನು ಒಂದು ಜಾತಿಯ ಸಂಘಟನೆಗೆ ಸರ್ಕಾರ ನೀಡಿಬಿಟ್ಟಿದೆ. ‘ಶೈಕ್ಷಣಿಕ ಹಿತದೃಷ್ಟಿ’ ಎಂದರೆ ಏನು? ಹಾಗಾದರೆ ಆ ಸರ್ಕಾರಿ ಕಾಲೇಜಿಗೆ ಶೈಕ್ಷಣಿಕ ಹಿತದೃಷ್ಟಿ ಇರಲಿಲ್ಲವೇ? ಪ್ರತಿ ಸಂಪುಟ ಸಭೆಯಲ್ಲಿ ಹೀಗೆ ತಮಗೆ ಬೇಕಾದಂತಹ ತೀರ್ಮಾನಗಳನ್ನು ಕೈಗೊಂಡು ಸರ್ಕಾರವನ್ನು ದಿವಾಳಿ ಎಬ್ಬಿಸುವ ಕೆಲಸವನ್ನು ಎಲ್ಲ ಪಕ್ಷಗಳ ನೇತೃತ್ವದ ಸರ್ಕಾರಗಳೂ ಮಾಡುತ್ತಾ ಬಂದಿವೆ. ಇಲ್ಲಿ ಯಾವುದೇ ಪಕ್ಷವೂ ಭಿನ್ನವಲ್ಲ. ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಇದು.
- ಸಂತೋಷ ಕೌಲಗಿ, ಮೇಲುಕೋಟೆ
ಆಸ್ತಿ ಜಗಳದಲ್ಲಿ ಅಕ್ಕ ತಂಗಿಯರೇ ಸೋದರನನ್ನು ಕೊಂದಿರುವ ಸುದ್ದಿ (ಪ್ರ.ವಾ., ಆ. 23) ಓದಿ ದಿಗಿಲಾಯಿತು. ಆಸ್ತಿಗಾಗಿ ತಂದೆಯನ್ನೇ ಕೊಂದು ಜೈಲು ಸೇರಿ, ಜಾಮೀನಿನ ಮೇಲೆ ಹೊರಬಂದಿದ್ದ ಸಹೋದರನನ್ನು ಅಕ್ಕ ತಂಗಿಯರು ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಂದ ವಿಚಾರ ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಆಸ್ತಿ ವಿವಾದಗಳ ಕರಾಳ ಮುಖವನ್ನು ಹೊರಗೆಡವುತ್ತದೆ. ವಿಶೇಷವಾಗಿ ದಾಯಾದಿಗಳು, ನೆರೆಹೊರೆಯವರ ನಡುವೆ ಜಾಗಕ್ಕೆ ಸಂಬಂಧಿಸಿದ ವಿವಾದ ಇದ್ದೇ ಇರುತ್ತದೆ. ಅಷ್ಟೇ ಏಕೆ? ಅಕ್ಕಪಕ್ಕದ ಮನೆ, ನಿವೇಶನಗಳಲ್ಲಿ ಒಂದೊಂದು ಇಂಚಿಗಾಗಿ ಅಪರಾಧಗಳೇ ನಡೆದು ಹೋಗುತ್ತವೆ. ಹೊರಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ನಾವು ಪಕ್ಕದವರ ಜೊತೆ ಒಂದು ಚಿಕ್ಕ ವಿಷಯಕ್ಕೂ ಹೃದಯ ವೈಶಾಲ್ಯ ತೋರುವುದಿಲ್ಲವಲ್ಲ!
ತಾಯಿ, ತಂದೆಯ ಆಸ್ತಿ, ಹಣದ ವಿಚಾರವಾಗಿ ಇಂದು ನ್ಯಾಯಾಲಯಗಳಲ್ಲಿ ವ್ಯಾಜ್ಯಗಳ ರಾಶಿಯೇ ಇದೆ. ಬಹುತೇಕ ಜಮೀನುಗಳಲ್ಲಿ ದಾರಿಯ ವಿಷಯವಾಗಿ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳು ಪರಿಹಾರವಾಗದೇ ಉಳಿದುಕೊಂಡಿವೆ. ಆದರೆ ಆಸ್ತಿ ವಿವಾದವು ಕೊಲೆ, ಸುಲಿಗೆಯ ಹಂತ ತಲುಪಿದಾಗ, ನಾಗರಿಕ ಸಮಾಜ ಎತ್ತ ಸಾಗುತ್ತಿದೆ ಎನಿಸಿ ಬೇಸರವಾಗುತ್ತದೆ. ಹಿಂದೆ ಚಿಕ್ಕ ಪುಟ್ಟ ವಿವಾದಗಳು ಊರ ಪಂಚಾಯಿತಿ ಕಟ್ಟೆಯಲ್ಲೇ ತೀರ್ಮಾನವಾಗುತ್ತಿದ್ದವು. ಊರಿನ ಹಿರಿಯರು, ನೆರೆಹೊರೆಯವರ ಮಾತಿಗೆ ಮನ್ನಣೆ ಕೊಡದ ಅಹಂಕಾರಿಗಳಿಂದ ಮತ್ತಷ್ಟು ಪ್ರಪಾತದೆಡೆಗೆ ಹೋಗುತ್ತಿದ್ದೇವೆ.
- ತಿರುಪತಿ ನಾಯಕ್, ಕಲಬುರಗಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ‘ನಮ್ಮ ಕ್ಲಿನಿಕ್’ಗಳು ವೈದ್ಯರ ಕೊರತೆ ಎದುರಿಸುತ್ತಿರುವುದು ವಿಪರ್ಯಾಸ. ಈ ಕೊರತೆಯನ್ನು ಅದು ಆಯುರ್ವೇದ ವೈದ್ಯರಿಂದ ನೀಗಿಸಿಕೊಳ್ಳ
ಬಹುದು. ಜ್ವರದಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇಂತಹ ಸಾಮಾನ್ಯ ಚಿಕಿತ್ಸೆಯನ್ನು ಎಂಬಿಬಿಎಸ್ ವೈದ್ಯರಷ್ಟೇ ಅಲ್ಲದೆ ಆಯುರ್ವೇದ ವೈದ್ಯರು ಸಹ ನೀಡಬಲ್ಲರು. ಇದೇ ಬಿಬಿಎಂಪಿಯು ಕೋವಿಡ್‌ನಂತಹ ನಿರ್ಣಾಯಕ ಅವಧಿಯಲ್ಲಿ ತನ್ನ ವ್ಯಾಪ್ತಿಯಲ್ಲಿ ಕೋವಿಡ್ ವಾರಿಯರ್‌ಗಳನ್ನಾಗಿ ಆಯುರ್ವೇದ ವೈದ್ಯರನ್ನು ನೇಮಕ ಮಾಡಿಕೊಂಡಿತ್ತು. ಆಗ ಅವರು ತಮಗೆ ವಹಿಸಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದರು.
ತಿಂಗಳಿಗೆ ₹ 47,250ರಷ್ಟು ಕಡಿಮೆ ವೇತನ, ಒಂದು ವರ್ಷದ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದರಿಂದ ಎಂಬಿಬಿಎಸ್ ವೈದ್ಯರು ಬರುತ್ತಿಲ್ಲ ಎಂದು ಹೇಳುವ ಬಿಬಿಎಂಪಿಯ ಆರೋಗ್ಯ ವಿಭಾಗ, ಅದೇ ವೇತನಕ್ಕೆ ಅತ್ಯುತ್ಸಾಹದಿಂದ ಅಷ್ಟೇ ಗುಣಮಟ್ಟದ ಸೇವೆ ನೀಡಲು ಸಿದ್ಧರಿರುವ ಆಯುರ್ವೇದ ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕು. ಈ ಮೂಲಕ ಅವರಿಗೆ ಸಾಮಾಜಿಕ ಭದ್ರತೆ ಒದಗಿಸುವುದರ ಜೊತೆಗೆ ನಮ್ಮ ಕ್ಲಿನಿಕ್‌ಗಳಲ್ಲಿ ವೈದ್ಯರ ಕೊರತೆ ಕಾರಣಕ್ಕೆ ಜನಸಾಮಾನ್ಯರು ಚಿಕಿತ್ಸೆ ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು.
- ಚಂದ್ರಶೇಖರ ಪುಟ್ಟಪ್ಪ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.