ನೀರಿನ ವಿಷಯ ಬೆರೆಸುವುದು ಬೇಡ

‘ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುತ್ತಿದ್ದೇವೆ’ ಎಂದು ಭಾರತ ಸರ್ಕಾರ ಘೋಷಿಸಿ, ಪಾಕಿಸ್ತಾನ ಸರ್ಕಾರಕ್ಕೆ ತಿಳಿಸಿದೆ. ಇದರ ಪರಿಣಾಮಗಳೇನು ಎಂಬುದರ ಬಗೆಗೆ ಪತ್ರಿಕೆಗಳು ವಿವರಗಳನ್ನು ಪ್ರಕಟಿಸುತ್ತಿವೆ. ಪ್ರವಾಸಿಗರನ್ನು ಹತ್ಯೆ ಮಾಡಿದ್ದು ‘ನಾಗರಿಕ’ರಲ್ಲ, ಭಯೋತ್ಪಾದಕರು. ಆದರೆ ಭಾರತ ಸರ್ಕಾರ ಆ ಕೃತ್ಯಕ್ಕೆ ಪ್ರತಿಕ್ರಿಯಿಸುವಾಗ ನಾಗರಿಕವಾಗೇ ನಡೆದುಕೊಳ್ಳಬೇಕಾಗುತ್ತದೆ. ಗಡಿಗಳನ್ನು ಮುಚ್ಚುವುದು, ರಾಜತಾಂತ್ರಿಕರ ಸಂಖ್ಯೆ ಕಡಿತಗೊಳಿಸುವುದು ಇವೆಲ್ಲ ಸರಿ. ಆದರೆ ನದಿ ನೀರಿನ ಮಾತು ಬೇರೆ.

ಸಿಂಧೂ ಕಣಿವೆ ನಾಗರಿಕತೆ ಎಂದು ಓದಿದ್ದೇವೆ. ನದಿಗಳಿಗೆ ದೇಶಗಳ, ಗಡಿಗಳ ಹಂಗಿಲ್ಲ. ನೀರು ಮಾನವನ ಮೂಲಭೂತ ಆವಶ್ಯಕತೆಗಳಲ್ಲಿ ಒಂದು. ಭಾರತ ಇಬ್ಭಾಗವಾದಾಗ ಪಂಜಾಬ್ (ಐದು ನದಿಗಳ ಪ್ರದೇಶ) ಎರಡಾಯಿತು. ಸಿಂಧೂ ಮತ್ತು ಅದರ ಐದು ಉಪನದಿಗಳ ನೀರು ಹಂಚಿಕೆಯಾಗಬೇಕಾಯಿತು. ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ
ಒಪ್ಪಂದ ಏರ್ಪಟ್ಟಿತು. ಈಗ ಯಾವುದೇ ಒಂದು ಪಕ್ಷ ಏಕಪಕ್ಷೀಯವಾಗಿ ಅದನ್ನು ರದ್ದು ಮಾಡಲಾಗದು. ಅರವತ್ತೈದು ವರ್ಷಗಳ ನಂತರ ಅದರಲ್ಲಿ ತಿದ್ದುಪಡಿ ಮಾಡಬೇಕಾಗುತ್ತದೆ, ನಿಜ. ಆದರೆ ಈ ವಿಷಯವನ್ನು ಬೇರೆ ಬೆಳವಣಿಗೆ ಗಳೊಂದಿಗೆ ಬೆರೆಸುವುದು ಸೂಕ್ತ ನಿಲುವಲ್ಲ. ಪಾಕಿಸ್ತಾನ ಅನೇಕ ತಪ್ಪುಗಳನ್ನು ಮಾಡುತ್ತಾ ಬಂದಿದೆ. ಆದರೆ ಈಗ ಭಾರತದ ಈ ಕ್ರಮದಿಂದ ಅದು ವಿಶ್ವದ ಕನಿಕರ ಗಳಿಸುತ್ತದೆ. ನೀರು ತಿರುಗಿಸುವ ಕ್ರಮ ಯುದ್ಧಕ್ಕೆ ಸಮ ಎಂದು ಭಾರತದ ಕ್ರಮಕ್ಕೆ ಪಾಕಿಸ್ತಾನ ಪ್ರತಿಕ್ರಿಯಿಸಿದೆ. ಪಹಲ್ಗಾಮ್ ಪ್ರಕರಣದಲ್ಲಿ ಭಾಗಿಯಾದವರು ಹಾಗೂ ಅವರಿಗೆ ನೆರವು ನೀಡಿದವರು ಪಾಕಿಸ್ತಾನ ಅಥವಾ ಬೇರೆ ಯಾವುದೇ ದೇಶದಲ್ಲಿರಲಿ ಅವರನ್ನು ಪತ್ತೆ ಮಾಡುವಲ್ಲಿ ಸರ್ಕಾರ ವಿವಿಧ ದೇಶಗಳ ಸಹಾಯ ಪಡೆಯಬೇಕು. ಆಂತರಿಕವಾಗಿ ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಿ ಅಲ್ಲಿನವರ ಸದ್ಭಾವನೆ ಗಳಿಸಿಕೊಳ್ಳ
ಬೇಕು. ಒಟ್ಟಿನಲ್ಲಿ, ಒಂದು ಪ್ರದೇಶ ಯಥಾಸ್ಥಿತಿಗೆ ಮರಳಿದೆಯೇ ಎಂಬುದನ್ನು ಬರೀ ಪ್ರವಾಸಿಗರ ಸಂಖ್ಯೆಯ ಹೆಚ್ಚಳದಿಂದ ಹೇಳಲಾಗದು.

–ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಪಶುವೈದ್ಯರ ದಿನದ ಆಶಯ ಸಾಕಾರವಾಗಲಿ

ಪ್ರತಿವರ್ಷ ಏಪ್ರಿಲ್ ತಿಂಗಳಿನ ಕೊನೆಯ ಶನಿವಾರದಂದು ವಿಶ್ವ ಪಶುವೈದ್ಯರ ದಿನವನ್ನು ಆಚರಿಸಲಾಗುತ್ತದೆ.‘ಪ್ರಾಣಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸಲು ತಂಡದ ವಿಧಾನ ಅಗತ್ಯ’ ಎಂಬುದು ಈ ಬಾರಿಯ ದಿನಾಚರಣೆಯ
ಧ್ಯೇಯವಾಕ್ಯವಾಗಿದೆ. ಪಶುಗಳ ಚಿಕಿತ್ಸೆಯಲ್ಲಿ ತೊಡಗಿರುವ ವ್ಯೆದ್ಯರು, ಸಹಾಯಕರು ಒಂದು ತಂಡವಾಗಿ ಸಮನ್ವಯದಿಂದ ಕೆಲಸ ಮಾಡಿದಾಗ ಮಾತ್ರ ಪೂರ್ಣ ಯಶಸ್ಸು ಲಭಿಸಲು ಸಾಧ್ಯ. ಏಕೆಂದರೆ ಪ್ರಾಣಿಗಳಿಗೆ ಚಿಕಿತ್ಸೆ ನೀಡುವಾಗ ಅವುಗಳ ನಿಯಂತ್ರಣ ಮಾಡುವುದು ಬಹಳ ಮುಖ್ಯ ಸಂಗತಿ. ಇದಕ್ಕೆ ಪಶುವೈದ್ಯ ಸಹಾಯಕರು, ಗ್ರೂಪ್ ಡಿ ನೌಕರರು ಇರಲೇಬೇಕು. ಆದರೆ ಈ ಧ್ಯೇಯವಾಕ್ಯಕ್ಕೆ ತದ್ವಿರುದ್ಧವಾದ ಪರಿಸ್ಥಿತಿ ನಮ್ಮ ರಾಜ್ಯದ ಪಶು ಚಿಕಿತ್ಸಾಲಯ ಗಳಲ್ಲಿ ಇದೆ. ಪಶುವೈದ್ಯ ಇಲಾಖೆಯಲ್ಲಿ ಪಶು ಪರೀಕ್ಷಕರು, ಪಶುವೈದ್ಯ ಸಹಾಯಕರು ಹಾಗೂ ಗ್ರೂಪ್ ಡಿ ನೌಕರರ ನೇಮಕಾತಿ ನಡೆದು ಕೆಲವು ದಶಕಗಳೇ ಕಳೆದಿವೆ.

ಹೊಸದಾಗಿ ಪಶುವೈದ್ಯ ಸಂಸ್ಥೆಗಳನ್ನು ಪ್ರಾರಂಭಿಸಿ ಗುತ್ತಿಗೆ ಆಧಾರದಲ್ಲಿ ಪಶುವೈದ್ಯರನ್ನು ಮಾತ್ರ ನೇಮಕ ಮಾಡಲಾಗಿದೆ. ಅನೇಕ ಸಂಸ್ಥೆಗಳಲ್ಲಿ ಒಬ್ಬ ಪಶುವೈದ್ಯರು ಮಾತ್ರ ಇದ್ದಾರೆ. ಚಿಕಿತ್ಸಾಲಯದ ಬಾಗಿಲು ತೆಗೆಯುವುದರಿಂದ ಹಿಡಿದು ಎಲ್ಲ ಕೆಲಸವನ್ನು ಅವರೇ ಮಾಡಬೇಕಾಗಿದೆ. ಕೆಲವು ಕಡೆ ಹೊರಗುತ್ತಿಗೆ ಮುಖಾಂತರ ಗ್ರೂಪ್ ಡಿ ನೌಕರರನ್ನು ನೇಮಿಸಲಾಗಿದೆ. ಆದರೆ ಇವರಿಗೆ ಪ್ರಾಣಿಗಳನ್ನು ನಿಯಂತ್ರಿಸುವ ಕೌಶಲ ಇರದ ಕಾರಣ ಇವರಿಂದ ಯಾವ ಪ್ರಯೋಜನವೂ ಆಗುತ್ತಿಲ್ಲ. ಆದ್ದರಿಂದ ವಿಶ್ವ ಪಶುವೈದ್ಯರ ದಿನದ ಆಶಯ ಸಾಕಾರಗೊಳ್ಳಬೇಕಾದರೆ ಸರ್ಕಾರ ಕೂಡಲೇ ಪಶು ಚಿಕಿತ್ಸಾಲಯಗಳಲ್ಲಿ ಖಾಲಿ ಇರುವ ಸಹಾಯಕ ಸಿಬ್ಬಂದಿ ಹಾಗೂ ಗ್ರೂಪ್ ಡಿ ನೌಕರರ ಹುದ್ದೆಗಳಿಗೆ ನೇಮಕಾತಿ ಮಾಡಬೇಕು.

–ಟಿ.ಜಯರಾಂ, ಕೋಲಾರ

ದ್ವಿಭಾಷಾ ನೀತಿಯಲ್ಲ, ಪರೋಕ್ಷ ಹಿಂದಿ ಹೇರಿಕೆ

ಮಹಾರಾಷ್ಟ್ರವು ಶಿಕ್ಷಣದಲ್ಲಿ ದ್ವಿಭಾಷಾ ನೀತಿಗೆ ಮರಳಿದೆ ಎಂದು ರಮಾನಂದ್ ಎಸ್. ಅಭಿಪ್ರಾಯಪಟ್ಟಿದ್ದಾರೆ. (ವಾ.ವಾ., ಏ. 24). ಆದರೆ ವಾಸ್ತವವೆಂದರೆ, ಈವರೆಗೂ ಮಹಾರಾಷ್ಟ್ರದ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ದ್ವಿಭಾಷಾ ನೀತಿಯೇ ಇತ್ತು. ಆದರೆ ಹೊಸ ಶಿಕ್ಷಣ ನೀತಿಯ ಪ್ರಕಾರ, ಒಂದನೇ ತರಗತಿಯಿಂದಲೇ ಮೂರನೇ ಭಾಷೆಯಾಗಿ ಹಿಂದಿಯನ್ನೇ ಕಲಿಯಬೇಕೆಂದು ಕಡ್ಡಾಯಗೊಳಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಬದಲಾಗಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇರುವಂತೆ ಯಾವುದಾದರೂ ಭಾರತೀಯ ಭಾಷೆಯನ್ನು ಮೂರನೇ ಭಾಷೆಯಾಗಿ ಕಲಿಯಬಹುದು ಎಂದಿದೆ. ಇದು ಕೂಡ ಪರೋಕ್ಷವಾಗಿ ಹಿಂದಿ ಹೇರಿಕೆಯ ಉದ್ದೇಶವನ್ನೇ ಹೊಂದಿದೆ. ಹೇಗೆಂದರೆ, ಮೂರನೇ ಭಾಷೆ ಕಡ್ಡಾಯಗೊಳಿಸಿದರೆ ಬಹುತೇಕ ಎಲ್ಲ ಶಾಲೆಗಳೂ ಹಿಂದಿಯನ್ನು ಮಾತ್ರ ಮೂರನೇ ಭಾಷೆಯ ಆಯ್ಕೆಯಾಗಿ ಒದಗಿಸುತ್ತವೆ. ಇಂತಹ ಸಂದರ್ಭದಲ್ಲಿ ಮಕ್ಕಳು ಅನಿವಾರ್ಯವಾಗಿ ಹಿಂದಿಯನ್ನೇ ಕಲಿಯಬೇಕಾಗುತ್ತದೆ. ಕೆಲವು ಶಾಲೆಗಳಲ್ಲಿ ಸಂಸ್ಕೃತದ ಆಯ್ಕೆ ಇರಬಹುದಷ್ಟೆ. ಹಾಗಾಗಿ ಈ ಮೂರನೇ ಭಾಷೆ ಎಂಬುದೇ ಹಿಂದಿಯನ್ನು ತರುವ ಯೋಜನೆಯ ಭಾಗವಾಗಿದೆ. ಇದುವರೆಗೂ ಐದನೇ ತರಗತಿಯಿಂದ ಇದ್ದ ಈ ಮೂರನೇ ಭಾಷೆಯನ್ನು ಈಗ ಒಂದನೇ ತರಗತಿಯಿಂದಲೇ ಕಲಿಯಬೇಕಾಗಿರುವುದು ಮಕ್ಕಳಿಗೆ ಹೊರೆಯಾಗುವುದು ಖಂಡಿತ. ಜೊತೆಗೆ ಇದು ಬಾಲ್ಯದಿಂದಲೇ ಎಲ್ಲರೂ ಹಿಂದಿಯನ್ನು ಒಪ್ಪಿಕೊಳ್ಳಬೇಕೆಂಬ ದೊಡ್ಡ ಯೋಜನೆಯಾಗಿರುವುದು ಸ್ಪಷ್ಟವಾಗಿದೆ.

ಕರ್ನಾಟಕದ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಪ್ರೌಢಶಾಲೆಯಲ್ಲಿ ತ್ರಿಭಾಷಾ ಸೂತ್ರ ಇದ್ದು, ಬಹುತೇಕ ಶಾಲೆಗಳಲ್ಲಿ ಇದೇ ತರಹ ಅನಿವಾರ್ಯ ಹಿಂದಿ ಆಯ್ಕೆ ಇರುವುದನ್ನು ಕಾಣಬಹುದು. ಇದನ್ನು ಅರಿತೇ ತಮಿಳುನಾಡು ಮೊದಲಿಂದಲೂ ದ್ವಿಭಾಷಾ ನೀತಿಯನ್ನು ಪಾಲಿಸುತ್ತಿದೆ. ಯಾವುದೇ ಹಿಂದಿ ಭಾಷಿಕ ರಾಜ್ಯ ಅಥವಾ ಉತ್ತರಭಾರತದ ಯಾವುದೇ ರಾಜ್ಯವು ದಕ್ಷಿಣದ ಭಾಷೆಗಳನ್ನು ತನ್ನ ಪ್ರಾಥಮಿಕ ಶಿಕ್ಷಣದಲ್ಲಿ ಪರಿಚಯಿಸಲು ಇದುವರೆಗೆ ಮುಂದಡಿ ಇಟ್ಟಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ಹೀಗೆ ಅತಿ ಉತ್ಸಾಹದಿಂದ ಹಿಂದಿಯನ್ನು ಕಡ್ಡಾಯ ಮಾಡಹೊರಟು ಪ್ರತಿರೋಧ ಬಂದಾಗ ಕೊಂಚ ಹಿಂದೆ ಸರಿದಂತೆ ಮಾಡಿ, ಪರೋಕ್ಷವಾಗಿ ಹಿಂದಿಯನ್ನು ಪ್ರಾಥಮಿಕ ಹಂತದಲ್ಲೇ ಹೇರುವ ಪ್ರಯತ್ನವನ್ನು ಪ್ರಾರಂಭಿಸಿರುವುದು ಎಚ್ಚರಿಕೆಯ ಗಂಟೆಯಂತಿದೆ. ಇದರಿಂದ ಎನ್ಇಪಿಯ ಉದ್ದೇಶ ಪ್ರಶ್ನಾರ್ಹವಾಗಿದೆ, ಅದನ್ನು ಹಿಂದಿ ಹೇರಿಕೆಯ ಹುನ್ನಾರವನ್ನಾಗಿ ಕಾಣುವಂತಾಗಿದೆ.

–ವಿಕಾಸ್ ಹೆಗಡೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.