ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು

Published 14 ಸೆಪ್ಟೆಂಬರ್ 2023, 23:30 IST
Last Updated 14 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಬರ ಘೋಷಣೆ: ಸಕಾಲದಲ್ಲಿ ತಲುಪಲಿ ಪರಿಹಾರ
ರಾಜ್ಯ ಸರ್ಕಾರವು 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿರುವುದರಿಂದ ರೈತರು ಕೊಂಚ ನಿಟ್ಟಿಸಿರುಬಿಡುವಂತಾಗಿದೆ. ಈ ಮೂಲಕ ಸರ್ಕಾರದಿಂದ ಸಹಾಯಧನ ದೊರೆಯಲಿದೆ ಎನ್ನುವ ಭರವಸೆ ರೈತರಲ್ಲಿ ಮೂಡಿದೆ. ಆದರೆ ಸರ್ಕಾರದ ಘೋಷಣೆ ಬರೀ ಘೋಷಣೆಯಾಗದೆ ರೈತರ ಪಾಲಿಗೆ ವರವಾಗಬೇಕಿದೆ. ಕೇಂದ್ರಕ್ಕೆ ಬೇಗ ವರದಿ ಸಲ್ಲಿಸಿ, ಮಾರ್ಗಸೂಚಿ ಅನುಸಾರ ರಾಜ್ಯ ಮತ್ತು ಕೇಂದ್ರದಿಂದ ಬರಪೀಡಿತ ತಾಲ್ಲೂಕುಗಳಿಗೆ ಬರಬೇಕಾದ ಪರಿಹಾರವು ಸಕಾಲದಲ್ಲಿ ಮುಟ್ಟುವಂತೆ ನೋಡಿಕೊಳ್ಳುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕಾಗಿದೆ. ಆಗ ಸರ್ಕಾರದ ಮೇಲಿನ ರೈತರ ವಿಶ್ವಾಸ, ನಂಬಿಕೆ ದ್ವಿಗುಣಗೊಳ್ಳುತ್ತದೆ.

-ಜಗದೀಶ ಎಸ್. ಗಿರಡ್ಡಿ, ಗೊರಬಾಳ, ಇಳಕಲ್‌

**

ಯಾಕೀ ಹಣ ಗಳಿಸುವ ಹಪಹಪಿ?
ಪ್ರತಿಭಾವಂತ ವಿದ್ಯಾರ್ಥಿಗಳು, ಯುವಕರು ದೇಶದ ಆಸ್ತಿ ಎನ್ನಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರ ಪ್ರತಿಭೆಯು ಆತಂಕಕಾರಿ ವಿಷಯಗಳಿಗೆ ಬಳಕೆಯಾಗುತ್ತಿರುವುದು ವಿಪರ್ಯಾಸ. ಭವಿಷ್ಯದ ಯುವಪೀಳಿಗೆಯ ಚಿತ್ತ ಎತ್ತ ಸಾಗುತ್ತಿದೆ ಎಂಬುದರ ಬಗ್ಗೆ ಪ್ರಜ್ಞಾವಂತ ಸಮಾಜ ಯೋಚಿಸಬೇಕಾದ ಅಗತ್ಯವಿದೆ. ಉನ್ನತ ತಂತ್ರಜ್ಞಾನ (ಐಐಐಟಿ) ಪದವೀಧರನೊಬ್ಬ ಸಣ್ಣ ವಯಸ್ಸಿನಲ್ಲಿಯೇ ಸುಲಭವಾಗಿ ಹಣ ಗಳಿಸುವ ದುರುದ್ದೇಶದಿಂದ ಬ್ಯಾಂಕ್ ಮತ್ತಿತರ ಸಂಸ್ಥೆಗಳ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿ ಕೋಟ್ಯಂತರ ರೂಪಾಯಿ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿರುವುದು (ಪ್ರ.ವಾ., ಸೆ.13) ಸಣ್ಣ ಸಂಗತಿಯಲ್ಲ.

ಒಬ್ಬ ಉತ್ತಮ ವೈದ್ಯ, ಎಂಜಿನಿಯರ್, ಶಿಕ್ಷಕರಂತಹ ವೃತ್ತಿಪರರನ್ನು ಸಿದ್ಧಗೊಳಿಸಲು ಸರ್ಕಾರ ಏನೆಲ್ಲ ಪ್ರಯತ್ನ ಮಾಡುತ್ತಿದೆ. ಇದಕ್ಕಾಗಿ ಎಷ್ಟೊಂದು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಹೀಗಿರುವಾಗ, ಪದವಿ ಪಡೆದು ಹೊರಬಂದ ನಂತರ ಇವರು ಸದೃಢ ರಾಷ್ಟ್ರನಿರ್ಮಾಣಕ್ಕೆ ಉತ್ತಮ ಬುನಾದಿ ಹಾಕುವಂತೆ ಆಗಬೇಕಿದೆ.

-ನಾರಾಯಣರಾವ ಕುಲಕರ್ಣಿ, ಹಿರೇಅರಳಿಹಳ್ಳಿ, ಯಲಬುರ್ಗಾ

**

ಶಾಶ್ವತ ವಿವಾದ: ದಿನಗೂಲಿಯಂಥ ಪರಿಹಾರ!

ಮತ್ತೆ ಕಾವೇರಿ ನದಿ ನೀರಿನ ಸಂಕಷ್ಟ ಎದುರಾಗಿರುವ ಕುರಿತ ವರದಿ (ಪ್ರ.ವಾ., ಸೆ.13) ಓದಿ ಮನಸ್ಸಿಗೆ ಖೇದವುಂಟಾಯಿತು. ಸ್ವಾತಂತ್ರ್ಯ ಬಂದು ಏಳೂವರೆ ದಶಕಗಳೇ ಕಳೆದರೂ ರಾಷ್ಟ್ರದಲ್ಲಿ ಅಂತರರಾಜ್ಯ ಜಲವಿವಾದ, ಗಡಿವಿವಾದ, ಭಾಷಾವಿವಾದ, ವಲಸಿಗರ ವಿವಾದ, ಒತ್ತುವರಿಯಂತಹ ಹಲವಾರು ವಿವಾದಗಳು ಎಂದೆಂದಿಗೂ ಪರಿಹಾರ ಕಾಣದೆ ಶಾಶ್ವತವಾಗಿ ಉಳಿದು, ಜನರಿಗೆ ವ್ಯವಸ್ಥೆಯ ಬಗ್ಗೆ ಭ್ರಮನಿರಸನ ಉಂಟಾಗುವಂತೆ ಮಾಡಿವೆ. ಈ ಬೇಗುದಿಗೆ ಮೂಲಕಾರಣ– ಇಚ್ಛಾಶಕ್ತಿರಹಿತ ಹೊಂದಾಣಿಕೆ ರಾಜಕಾರಣ ಎಂದೇ ಹೇಳಬಹುದು.

ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರವನ್ನಷ್ಟೇ ಒದಗಿಸುತ್ತಿರುವುದು, ಆ ಹೊತ್ತಿನ ಊಟಕ್ಕೆ ಸಂಪಾದಿಸಿದ ದಿನಗೂಲಿಯಂತಾಗಿದೆ. ಹೀಗಾಗಿ ಇಂದಿಗೂ ಜಲವಿವಾದಗಳು ಜೀವಂತವಾಗಿವೆ. ಇಂತಹ ವಿವಾದಗಳಿಂದಾಗಿ ದೇಶದಲ್ಲಿನ ಸಾಮಾಜಿಕ ವ್ಯವಸ್ಥೆ ತನ್ನ ದಿವಾಳಿತನವನ್ನು ಆಗಾಗ ಪ್ರದರ್ಶಿಸುತ್ತಲೇ ಇದೆ. ರಾಜಕೀಯ ಪಕ್ಷಗಳು ಇಂತಹ ವಿವಾದಗಳನ್ನು ಅಧಿಕಾರದ ಏಣಿಯಾಗಿ ಬಳಸಿಕೊಳ್ಳುತ್ತಿವೆ. 
-ರಮೇಶ್, ಬೆಂಗಳೂರು

**

ಬಡತನ ಇರಬಹುದು, ಆದರೆ...

ರಾಷ್ಟ್ರಪತಿಯಾಗಿದ್ದ ಡಾ. ರಾಜೇಂದ್ರ ಪ್ರಸಾದ್‌ ಅವರು ಬೆಳಗಾವಿ ಜಿಲ್ಲೆಯ ಘಟಪ್ರಭಾ ಗ್ರಾಮದ ಕರ್ನಾಟಕ ಆರೋಗ್ಯಧಾಮಕ್ಕೆ ಭೇಟಿ ನೀಡಿದ್ದರು. ಭಾರತ ಸೇವಾದಳದ ಸಂಸ್ಥಾಪಕ, ರಾಜ್ಯಸಭೆಯ ಸದಸ್ಯರಾಗಿದ್ದ ನಾ.ಸು.ಹರಡೇಕರ್ ಅಲ್ಲಿಯೇ ವಾಸವಾಗಿದ್ದರು. ರಾಷ್ಟ್ರಪತಿ ಊಟಕ್ಕೆ ಗೋವಿನ ಜೋಳದ ರೊಟ್ಟಿ, ನುಚ್ಚು, ಮಜ್ಜಿಗೆ ವ್ಯವಸ್ಥೆ ಮಾಡಿದ್ದರು. ಯಾವ ವಿಶೇಷ ಖಾದ್ಯಗಳನ್ನೂ ಅವರು ಮಾಡಿಸಿರಲಿಲ್ಲ. ಯಾರು ಎಷ್ಟೇ ಆಗ್ರಹಪಡಿಸಿದರೂ ಅವರು ವಿಶೇಷ ಖಾದ್ಯ ಸಿದ್ಧಪಡಿಸಲು ಒಪ್ಪಲಿಲ್ಲ. ಸ್ಥಳೀಯರು ಊಟ ಮಾಡುವ ಸಾದಾ ಆಹಾರವನ್ನೇ ರಾಷ್ಟ್ರಪತಿ ಊಟ ಮಾಡಲಿ, ಅವರ ತೊಂದರೆಗಳನ್ನು ನೋಡಲಿ ಎಂಬುದು ಹರಡೇಕರ್ ಅವರ ಉದ್ದೇಶವಾಗಿತ್ತು. ರಾಷ್ಟ್ರಪತಿ ಹಾಗೂ ಅವರೊಂದಿಗೆ ಆಗಮಿಸಿದ್ದ ರಾಜ್ಯದ ಗಣ್ಯರು ಊಟ ಮಾಡಿದರು. ನಂತರ ಹರಡೇಕರ್ ‘ನಮ್ಮದು ಬಡವರ ಊಟ. ನಾವು ಇಲ್ಲಿ ಗೋವಿನ ಜೋಳ ಮಾತ್ರ ಬೆಳೆಯುತ್ತೇವೆ. ಅದೇ ನಮ್ಮ ಊಟ. ತಮಗೂ ಅದನ್ನೇ ಬಡಿಸಿದ್ದೇವೆ’ ಎಂದು ಹೇಳಿದರು. ‘ಊಟ ತುಂಬ ರುಚಿಯಾಗಿತ್ತು, ಅದರೊಂದಿಗೆ ಪ್ರೀತಿಯೂ ತುಂಬಿತ್ತು’ ಎಂದು ರಾಜೇಂದ್ರಪ್ರಸಾದ್ ಪ್ರತಿಕ್ರಿಯೆ ನೀಡಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡು ‘ಇದು ಒಣ ಬೇಸಾಯದ ಪ್ರದೇಶ. ಇಲ್ಲಿಯ ಜನರಿಗೆ ನೆರವಾಗುವುದಕ್ಕೆ ಘಟಪ್ರಭಾ ನದಿಗೆ ಹಿಡಕಲ್ ಬಳಿ ಜಲಾಶಯ ನಿರ್ಮಿಸಿ ನೀರಾವರಿ ಸೌಲಭ್ಯ ಒದಗಿಸಬೇಕು’ ಎಂದು ಹರಡೇಕರ್ ಮನವಿ ಮಾಡಿದರು. ರಾಷ್ಟ್ರಪತಿ ಹಾಗೂ ಅಲ್ಲಿ ಉಪಸ್ಥಿತರಿದ್ದ ರಾಜ್ಯದ ಪ್ರಮುಖರು ಹಿಡಕಲ್ ಜಲಾಶಯ ನಿರ್ಮಾಣದ ಬೇಡಿಕೆ ಸೂಕ್ತವಾಗಿದೆ ಎಂದು ಹೇಳಿದರು. ಕೆಲವೇ ವರ್ಷಗಳಲ್ಲಿ ಡ್ಯಾಮ್ ನಿರ್ಮಾಣವಾಯಿತು. ನೀರಾವರಿ ಸೌಲಭ್ಯ ದೊರೆತು ಜನರ ಆರ್ಥಿಕ ಅಭಿವೃದ್ಧಿಗೆ ನೆರವಾಯಿತು.

ಈಚೆಗೆ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ರಾಜಧಾನಿಯ ಸೌಂದರ್ಯೀಕರಣದ ನೆಪದಲ್ಲಿ ಸುತ್ತಮುತ್ತಲಿನ ಕೊಳೆಗೇರಿಗಳನ್ನು ತೆರವು ಮಾಡಲಾಗಿತ್ತು ಮತ್ತು ಕೆಲವು ಕೊಳೆಗೇರಿಗಳಿಗೆ 20 ಅಡಿ ಎತ್ತರದ ಪರದೆ ಹೊದಿಸಲಾಗಿತ್ತು ಎಂಬ ವರದಿಗಳನ್ನು ಓದಿದಾಗ, ಹರಡೇಕರ್ ಅವರ ಮಾದರಿ ನಡೆ ನೆನಪಾಯಿತು. ಕೊಳೆಗೇರಿ ಜನರನ್ನು ಏಕಾಏಕಿ ಸ್ಥಳಾಂತರಿಸಿದ್ದರಿಂದ ಅವರು ಅನುಭವಿಸಿದ ನೋವು, ಸಂಕಟ ಅಷ್ಟಿಷ್ಟಲ್ಲ. ಕೆಲವು ಕೊಳೆಗೇರಿಗಳು ಕಾಣದಂತೆ ಪರದೆ ಹೊದಿಸಿ ಮುಚ್ಚಿಡುವ ಪ್ರಯತ್ನ ಮಾಡಿದ್ದು ಕೂಡ ಸರಿಯಲ್ಲ. ಬಡತನವನ್ನು ಮುಚ್ಚಿಡುವುದು, ಬಡತನ ಅಪಮಾನವೆಂದು ಭಾವಿಸುವುದು ಸರಿಯಲ್ಲ. ಪರಿಹಾರಕ್ಕೆ ಸೂಕ್ತ ಮಾರ್ಗದಲ್ಲಿ ಪ್ರಯತ್ನಿಸುವುದು, ಅವರ ಬದುಕು ಉನ್ನತೀಕರಿಸುವುದು ಸರಿಯಾದ ನಡೆಯಾಗಿದೆ. ಬಡತನ ಇರಬಹುದು, ಆದರೆ ಅದನ್ನು ಉಳಿಸಿಕೊಂಡು ಹೋಗುವ ವ್ಯವಸ್ಥೆ ಕೆಟ್ಟದ್ದು ಎಂದು ಸಮಾಜ ಚಿಂತಕರು ಹೇಳುವ ಮಾತನ್ನು ನಮ್ಮ ನಾಯಕರು ಅರಿಯಬೇಕು.
-ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ

**

ಎಂಥಾ ಕಾಲ ಬಂತಯ್ಯ?!
ನಕಲಿ ದಾಖಲೆಗಳನ್ನು
ಸೃಷ್ಟಿಸಿದವರ ಕಂಡಿದ್ದೇವೆ
ನಕಲಿ ನೋಟುಗಳ
ಠಂಕಿಸಿದವರ ನೋಡಿದ್ದೇವೆ
ಆದರೆ...
ನಕಲಿ ನಾಯಕರನ್ನೇ ಸೃಷ್ಟಿಸುವ
ಕಲೆಗಾರರು ಪ್ರತ್ಯಕ್ಷರಾಗಿದ್ದಾರಂತೆ!
-ಎಚ್.ಕೆ.ಕೊಟ್ರಪ್ಪ, ಹರಿಹರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT