ಎಲ್ಲರ ಗುರಿಯೂ ಅಧಿಕಾರ...
‘ಎಲ್ಲ ಮಾಡುವುದು ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ’ ಎಂದು ದಾಸರು ಹೇಳಿದ್ದರು. ಆದರೆ, ಈಗ ರಾಜಕೀಯದಲ್ಲಿ ಎಲ್ಲ ಮಾಡುವುದು ಅಧಿಕಾರಕ್ಕಾಗಿ ಅಲ್ಲವೇ? ಬಿಜೆಪಿ– ಜೆಡಿಎಸ್ ಮೈತ್ರಿ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲವೂ ಅಧಿಕಾರಕ್ಕಾಗಿ ಎಂದು ಹೇಳಿದ್ದಾರೆ (ಪ್ರ.ವಾ., ಸೆ.10). ಹಾಗಾದರೆ, ವಿರೋಧ ಪಕ್ಷಗಳು ‘ಇಂಡಿಯ’ ಹೆಸರಿನಲ್ಲಿ ಮೈತ್ರಿಕೂಟ ರಚಿಸಿಕೊಂಡಿರುವುದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುವ ಉದ್ದೇಶದಿಂದ ಅಲ್ಲವೇ? ಅದಿಲ್ಲದಿದ್ದರೆ ಅವುಗಳ ಮುಂದೆ ಮತ್ತ್ಯಾವ ಕಾರ್ಯಸೂಚಿ ಇದೆ?
-ಎಚ್.ವಿ.ಶ್ರೀಧರ್, ಬೆಂಗಳೂರು
***
ನಾಮನಿರ್ದೇಶನ: ಗಂಭೀರವಾಗಿ ಪರಿಗಣಿಸಿ
‘ಜಂಟಿ ಖಾತೆಗೇಕೆ ನಾಮನಿರ್ದೇಶನದ ಗೊಡವೆ?’ ಎಂದು ಪ್ರಶ್ನಿಸಿದ್ದಾರೆ ಬಿ.ಎನ್.ಭರತ್ (ವಾ.ವಾ., ಆ.28). ಆಲಮಟ್ಟಿಯಲ್ಲಿ ಎಂಜಿನಿಯರಾಗಿ ಕೆಲಸ ನಿರ್ವಹಿಸುತ್ತಿದ್ದ ಸ್ನೇಹಿತರೊಬ್ಬರು ಸುಮಾರು ಹತ್ತು ವರ್ಷಗಳ ಹಿಂದೆ ಕುಟುಂಬಸಮೇತ ಶಿರಡಿಗೆ ಹೋಗುವಾಗ ಮಾರ್ಗಮಧ್ಯೆ ಅಪಘಾತದಲ್ಲಿ ಪತ್ನಿಸಮೇತರಾಗಿ ಪ್ರಾಣ ಕಳೆದುಕೊಂಡರು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಜಯಪುರದಲ್ಲಿ ಮನೆ ಮಾಡಿದ್ದ ತುರುವೇಕೆರೆ ಮೂಲದ ಅವರು ಅಗಲಿದ್ದು ಒಬ್ಬ ಮಗಳು ಮತ್ತು ಒಬ್ಬ ಮಗನನ್ನು. ಮಗ ಇನ್ನೂ ಬಾಲಕನಾಗಿದ್ದ. ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿದ್ದ ಅವರ ಜಂಟಿ ಖಾತೆಗಳಿಗೆ ನಾಮನಿರ್ದೇಶನ ಇರಲಿಲ್ಲ. ಅಲ್ಲದೆ ಎಂಜಿನಿಯರರ ಜಂಟಿಯಲ್ಲದ ಠೇವಣಿಗಳಿಗೆ ಅವರ ಪತ್ನಿ ನಾಮಿನಿಯಾಗಿದ್ದರೆ, ಪತ್ನಿಯ ಹೆಸರಿನಲ್ಲಿದ್ದ ಠೇವಣಿಗಳಿಗೆ ಪತಿಯದೇ ನಾಮನಿರ್ದೇಶನ.
ಠೇವಣಿ ಹಾಗೂ ಬಡ್ಡಿ ಹಣವನ್ನು ಮರಳಿ ಪಡೆಯಲು ಬ್ಯಾಂಕಿನ ಜಟಿಲ ನಿಯಮಾವಳಿಗಳ ಮಧ್ಯೆ ನಾಲ್ಕೈದು ವರ್ಷಗಳ ಕಾಲ ಅವರ ಮಕ್ಕಳು ಪಟ್ಟಪಾಡು ಅಷ್ಟಿಷ್ಟಲ್ಲ. ದೂರದ ತುರುವೇಕೆರೆಯಿಂದ ನಿಕಟ ಸಂಬಂಧಿಗಳೊಂದಿಗೆ ವಿಜಯಪುರಕ್ಕೆ ಅವರು ಆ ಕಾರಣಕ್ಕಾಗಿ ಹತ್ತಾರು ಸಲ ಅಲೆದಾಡಿದ್ದನ್ನು ಕಣ್ಣಾರೆ ಕಂಡಾಗ, ಜಂಟಿ ಖಾತೆಗಳಿಗೂ ಇರಬೇಕಾದ ನಾಮನಿರ್ದೇಶನದ ಮಹತ್ವ ತಿಳಿಯಿತು. ಸಾಧ್ಯವಿದ್ದೆಡೆ ಒಬ್ಬ ವ್ಯಕ್ತಿಗಿಂತಲೂ ಇಬ್ಬರ ಹೆಸರಿನಲ್ಲಿ ನಾಮನಿರ್ದೇಶನ ಮಾಡಿದರೆ ಇನ್ನೂ ಉತ್ತಮ.
-ಆರ್.ಜಿ.ಬ್ಯಾಕೋಡ, ವಿಜಯಪುರ
***
ಗುಡಿಸಲುಮುಕ್ತ ರಾಜ್ಯವಾಗಲಿ
ಬೆಂಗಳೂರಿನ ಸರ್ವಜ್ಞ ನಗರದ ಚಟ್ಟಪ್ಪ ಗಾರ್ಡನ್ ಮತ್ತು ಹೆಬ್ಬಾಳದ ಕುಂತಿ ನಗರದ ಕೊಳೆಗೇರಿ ನಿವಾಸಿಗಳು ಸೂರು ಕಟ್ಟಿಕೊಡುವಂತೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ಮುಂದೆ ಅಲವತ್ತುಕೊಂಡ ಕಣ್ಣೀರಿನ ಕಥೆಯನ್ನು ಪತ್ರಿಕೆಯಲ್ಲಿ ಓದಿ ಬೇಸರವಾಯಿತು. ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ರೂಪಿಸಿರುವ ಪ್ರಧಾನಮಂತ್ರಿ ಆವಾಸ್ ವಸತಿ ಯೋಜನೆಯು ಎರಡು ವರ್ಷಗಳಾದರೂ ಇನ್ನೂ ಪೂರ್ಣಗೊಳ್ಳದೆ ಮನೆಗಳು ಅರ್ಧಕ್ಕೇ ನಿಂತಿರುವುದು ವಿಪರ್ಯಾಸವೇ ಸರಿ. ಕಾಂಗ್ರೆಸ್ ನೇತೃತ್ವದ ಸರ್ಕಾರ ಇತ್ತ ಗಮನಹರಿಸಿ, ರಾಜ್ಯವನ್ನು ಗುಡಿಸಲುಮುಕ್ತ, ಜೋಪಡಿಮುಕ್ತ ಮಾಡಲಿ.
-ಉದಂತ ಶಿವಕುಮಾರ್, ಬೆಂಗಳೂರು
***
ಜಾತ್ಯತೀತ ಮೌಲ್ಯ ಗೌಣವಾಯಿತೇ?
ತೀರಾ ಈಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯತೀತ ಮೌಲ್ಯದ ಕುರಿತು ಜೆಡಿಎಸ್ ಮತ್ತು ಬಿಜೆಪಿ ಪರಸ್ಪರ ಹಂಗಿಸಿಕೊಂಡಿದ್ದವು. ಆದರೆ ಇದೀಗ ಅದನ್ನು ಮರೆತು ಮೈತ್ರಿ ಮಾಡಿಕೊಳ್ಳುತ್ತಿರುವುದು ಈ ಎರಡೂ ಪಕ್ಷಗಳ ರಾಜಕೀಯ ಅಸಹಾಯಕತೆಯನ್ನೂ ಹಾಗೆಯೇ ಮೌಲ್ಯರಹಿತ ರಾಜಕೀಯದ ಹಪಹಪಿಯನ್ನೂ ತೋರಿಸುತ್ತದೆ. ದಶಕಗಳ ಹಿಂದೆ ಜನತಾ ಪಕ್ಷದಿಂದ ಹೊರಬಂದ ಗುಂಪು ಬಿಜೆಪಿಯನ್ನು ರಚಿಸಿಕೊಂಡಾಗಲೂ ಜಾತ್ಯತೀತ ರಾಜಕೀಯ ಚರ್ಚೆಗೆ ಒಳಗಾಗಿತ್ತು. ನಂತರ ಜನತಾ ಪಕ್ಷ ಮತ್ತೊಮ್ಮೆ ವಿಭಜನೆಯಾದಾಗಲೂ ಜಾತ್ಯತೀತ ಎಂಬ ಮೌಲ್ಯವೇ ಜನತಾದಳದ ಹೆಸರಿನೊಂದಿಗೆ ಲಗತ್ತಾದದ್ದೂ ಉಂಟು. ಈಗ ಇದೆಲ್ಲವನ್ನೂ ಕಡೆಗಣಿಸಿ ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳುತ್ತಿರುವುದು ಜಾತ್ಯತೀತ ಮೌಲ್ಯವನ್ನೇ ಅಪಹಾಸ್ಯಕ್ಕೆ ಗುರಿ ಮಾಡುತ್ತಿರುವುದರ ಸ್ಪಷ್ಟ ಲಕ್ಷಣವಾಗಿದೆ.
-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ
***
ತೃಣಧಾನ್ಯ ಬಡವರ ಕೈಗೆಟುಕಲಿ
ನವದೆಹಲಿಯಲ್ಲಿ ನಡೆದ ಜಿ20 ರಾಷ್ಟ್ರಗಳ ಶೃಂಗಸಭೆಗೆ ಆಗಮಿಸಿದ್ದ ಸಾಗರೋತ್ತರ ನಾಡುಗಳ ಅತಿಥಿಗಳ ಆತಿಥ್ಯಕ್ಕೆ ಉಣಬಡಿಸಿದ ದೇಶದ ಸಾಂಪ್ರದಾಯಿಕ ಸಿರಿಧಾನ್ಯದ ಖಾದ್ಯವು ಚಿನ್ನದ ತಟ್ಟೆಯಲ್ಲಿ ಕೂಡುವ ಭಾಗ್ಯ ಪಡೆದದ್ದು ಯೋಗಾನುಯೋಗವೇ ಸರಿ. ಈ ಹುಲು ಧಾನ್ಯಕ್ಕೆ ಇಷ್ಟೊಂದು ಮಹತ್ವ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲವೇನೊ.
ದಶಕಗಳ ಹಿಂದೆ ನವಣೆ, ಸಾಮೆ, ಬರಗು, ಕೊರಲೆ, ಹಾರಕದಂತಹ ಧಾನ್ಯಗಳನ್ನು ದೈನಂದಿನ ಬದುಕಿನಲ್ಲಿ ಯಾರಾದರೂ ಬಳಸುತ್ತಾರೆಂದರೆ ಅವರು ಖಂಡಿತವಾಗಿಯೂ ಬಡವರು, ಕೂಲಿಕಾರರಾಗಿರುತ್ತಾರೆ ಎಂಬ ಭಾವನೆಯಿತ್ತು. ಈಗ ನೋಡಿದರೆ ತನ್ನ ಕಿರೀಟಕ್ಕೆ ಚಿನ್ನದ ಗರಿಯನ್ನು ಸಿಕ್ಕಿಸಿಕೊಂಡಿರುವ ಈ ತೃಣಧಾನ್ಯದ ಬೆಲೆ ಬಡವರ ಕೈಗೆ ಎಟುಕದಷ್ಟು ಎತ್ತರಕ್ಕೆ ಹೋಗುತ್ತಿದೆ. ಹಣವು ತೂಕ ಕಳೆದುಕೊಳ್ಳುತ್ತಿದೆ, ತೃಣಧಾನ್ಯದ ಮೌಲ್ಯ ವರ್ಧನೆಗೊಳ್ಳುತ್ತಿದೆ. ಅದರ ಜೊತೆಗೆ, ಸಿರಿಧಾನ್ಯ ಬೆಳೆಯುವ ರೈತನ ಜೀವನಮಟ್ಟವೂ ಸುಧಾರಿಸಲಿ ಎಂದು ಆಶಿಸೋಣ.
-ನಾರಾಯಣರಾವ ಕುಲಕರ್ಣಿ, ಹಿರೇಅರಳಿಹಳ್ಳಿ, ಯಲಬುರ್ಗಾ
***
ಮಳೆ... ಹೊಳೆ...!
ಭಾರತ-ಪಾಕ್
ಕ್ರಿಕೆಟ್ ಪಂದ್ಯ
ಮೊನ್ನೆ ರದ್ದಾಗಿತ್ತು
ಕಾರಣ, ಮಳೆ!
ಕ್ರಿಕೆಟ್ ಅಭಿಮಾನಿಗಳು
ಸಂಭ್ರಮದಿ ಮಿಂದೆದ್ದರು
ರೋಹಿತ್- ಗಿಲ್ ಜೋಡಿ
ಹರಿಸಿತು ರವಿವಾರ
ರನ್ ಹೊಳೆ!
-ಮ.ಗು.ಬಸವಣ್ಣ, ನಂಜನಗೂಡು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.