ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published : 10 ಸೆಪ್ಟೆಂಬರ್ 2024, 23:13 IST
Last Updated : 10 ಸೆಪ್ಟೆಂಬರ್ 2024, 23:13 IST
ಫಾಲೋ ಮಾಡಿ
Comments

ಮಕ್ಕಳ ಸಾಹಿತ್ಯ ಕೃತಿ ಖರೀದಿಸಲಿ

ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ‘ಮಕ್ಕಳಸ್ನೇಹಿ ಗ್ರಂಥಾಲಯ’ವನ್ನು ಸ್ಥಾಪಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ರಾಜ್ಯದ ಅನೇಕ ಪ್ರಕಾಶಕರು ಅತ್ಯುತ್ತಮ ಮಕ್ಕಳ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. ಇಂಥ ಪುಸ್ತಕಗಳನ್ನು ಆಯ್ಕೆ ಮಾಡಿ ಖರೀದಿಸಬೇಕು. ಅದಕ್ಕಾಗಿ ಪುಸ್ತಕ ಆಯ್ಕೆ ಸಮಿತಿಯನ್ನು ರಚಿಸಬೇಕು. ಸಮಿತಿ ಆಯ್ಕೆ ಮಾಡಿದ ಪುಸ್ತಕಗಳನ್ನು ಮಾತ್ರ ಖರೀದಿಸಬೇಕು. ಇದರಿಂದ ಮಕ್ಕಳಿಗೆ ಉತ್ತಮ ಕೃತಿಗಳನ್ನು ಕೊಟ್ಟಂತೆ ಆಗುತ್ತದೆ, ಪ್ರಕಾಶಕರಿಗೂ ಪ್ರೋತ್ಸಾಹ ದೊರೆಯುತ್ತದೆ. ಶಿಕ್ಷಣ ಇಲಾಖೆ ಇತ್ತ ಗಮನಹರಿಸಲಿ.

–ಎಸ್‌.ಚನ್ನಪ್ಪ, ಮೈಸೂರು

***

ಹೋಮ್‌ವರ್ಕ್‌ಗೆ ಮೊಬೈಲ್‌ ಫೋನ್ ಬಳಕೆ ಸಲ್ಲದು

ಶಿಕ್ಷಕರು ಮಕ್ಕಳಿಗೆ ಹೋಮ್‌ವರ್ಕ್ ಕೊಡುವುದರಿಂದ, ಶಾಲೆಯಲ್ಲಿ ಕೇಳಿದ ಪಾಠವನ್ನು ಅವರು ಮತ್ತೊಮ್ಮೆ ಮನನ ಮಾಡಿಕೊಳ್ಳಲು ನೆರವಾಗುತ್ತದೆ. ಆದರೆ ಮಕ್ಕಳು ಹೋಮ್‌ವರ್ಕ್‌ನ ಪ್ರಶ್ನೆಗಳಿಗೆ ಪುಸ್ತಕದಲ್ಲಿ ಉತ್ತರವನ್ನು ಹುಡುಕದೆ ನೇರವಾಗಿ ಮೊಬೈಲ್‌ ಫೋನ್‌ ಮೂಲಕ ಉತ್ತರವನ್ನು ಹುಡುಕುತ್ತಾರೆ. ಅಲ್ಲಿ ಅವರಿಗೆ ಶ್ರಮವಿಲ್ಲದೆ ಬೇಗನೆ ಸಿದ್ಧ ಉತ್ತರಗಳು ಸಿಕ್ಕಿಬಿಡುತ್ತವೆ! ಹೀಗಾದರೆ ಅವರು ಯಾವ ರೀತಿ ಹೋಮ್‌ವರ್ಕ್‌ ಮಾಡಿದಂತೆ ಆಗುತ್ತದೆ? ಹಿಂದೆ ನಾವೆಲ್ಲ ಪುಸ್ತಕದಲ್ಲಿನ ಪಾಠವನ್ನು ಎರಡು– ಮೂರು ಬಾರಿ ಓದಿ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುತ್ತಿದ್ದೆವು. ಅಲ್ಲಿಗೆ ಶಿಕ್ಷಕರ ಶ್ರಮದ ಜೊತೆಗೆ ವಿದ್ಯಾರ್ಥಿಗಳ ಶ್ರಮವೂ ಸೇರಿ ಉತ್ತಮ ಕಲಿಕೆ ಸಾಧ್ಯವಾಗುತ್ತಿತ್ತು. ಆದರೆ ಈಗಿನ ಮೊಬೈಲ್ ಯುಗದಲ್ಲಿ ಹೋಮ್‌ವರ್ಕ್‌ ಎನ್ನುವುದು ನೆಪಮಾತ್ರಕ್ಕೆ ಮಾಡುವ ಒಂದು ಕಾರ್ಯವಾಗಿದೆ.

ಮನೆಯಲ್ಲಿ ಪಾಲಕರು ಮಕ್ಕಳಿಗೆ ಹೋಮ್‌ವರ್ಕ್ ಮಾಡಲು ಮೊಬೈಲ್ ಫೋನ್‌ ನೀಡಬಾರದು. ಮಕ್ಕಳ ಜೊತೆ ಕುಳಿತು ಅವರ ಪ್ರಶ್ನೆಗಳಿಗೆ ಹೇಗೆ ಪಾಠದಲ್ಲಿ ಉತ್ತರವನ್ನು ಹುಡುಕಬೇಕು ಎಂಬುದನ್ನು ತಿಳಿಸಿಕೊಡಬೇಕು. ಆಗ ಮಕ್ಕಳಿಗೆ ಮೊಬೈಲ್ ಮೇಲಿನ ಆಕರ್ಷಣೆ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾದೀತೇನೊ. ಆದರೆ ಸಮಯದ ಅಭಾವದ ನೆಪ ಒಡ್ಡಿಯೋ ಯಾವುದೋ ಕೆಲಸದ ನೆಪವನ್ನೋ ಹೇಳಿ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅವರನ್ನು ತಾವೇ ಹಾಳು ಮಾಡುತ್ತಿರುವ ಪೋಷಕರು ಇದರ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕು. ಈ ಬಗ್ಗೆ ಶಿಕ್ಷಕರು ಕೂಡ ಮಕ್ಕಳಿಗೆ ತಿಳಿ ಹೇಳಬೇಕು. ಹೋಮ್‌ವರ್ಕ್‌ಗೆ ಮೊಬೈಲ್‌ ಫೋನ್‌ ಬಳಕೆಯ ಗೀಳಿನಿಂದ ಮಕ್ಕಳನ್ನು ಹೊರ ತರಬೇಕು.

–ರಾಜು ಬಿ. ಲಕ್ಕಂಪುರ, ಜಗಳೂರು

***

ಕೋಣೆ ಮಕ್ಕಳು ಕೊಳೆತೊ...

ವಿದ್ಯಾರ್ಥಿಗಳ ಆತ್ಮಹತ್ಯೆ ಬಗೆಗಿನ ಸಂಪಾದಕೀಯ (ಪ್ರ.ವಾ., ಸೆ. 7) ತುಂಬಾ ಸಕಾಲಿಕವಾಗಿತ್ತು ಹಾಗೂ ಮೌಲಿಕವಾಗಿತ್ತು. ವಿದ್ಯಾರ್ಥಿಗಳು ಸಣ್ಣಪುಟ್ಟ ತೊಂದರೆಗಳಿಗೂ ಆತ್ಮಹತ್ಯೆಯ ಹಾದಿ ಹಿಡಿಯುವುದಕ್ಕೆ ಪೋಷಕರ ಶೈಕ್ಷಣಿಕ ಒತ್ತಡ ಒಂದೆಡೆ ಕಾರಣವಾದರೆ, ಚಿಕ್ಕ ವಯಸ್ಸಿನಿಂದ ಅವರನ್ನು ಬೆಳೆಸುವ ರೀತಿ ಕೂಡ ಒಂದು ಕಾರಣವಾಗಿದೆ. ಹಿಂದೆ ಶಾಲೆಗಳಲ್ಲಿ ಮಕ್ಕಳು ಓದುವುದರ ಜೊತೆಗೆ ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದೆ ಇರುತ್ತಿದ್ದರು. ಇದರಿಂದ ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿ ಬೆಳೆಯುತ್ತಿದ್ದರು. ಮರ ಹತ್ತುವಾಗ, ಆಟ ಆಡುವಾಗ ಬಿದ್ದು ಎದ್ದು ಸೋಲನ್ನು ಅರಗಿಸಿಕೊಂಡು ಮತ್ತೆ ಗೆಲ್ಲುವ ಮನೋಭಾವ ಅವರಲ್ಲಿ ಅಂತರ್ಗತವಾಗಿಬಿಡುತ್ತಿತ್ತು.

ಅದೇ ರೀತಿ ಮನೆಯಲ್ಲೂ ಮನೆ, ಜಮೀನು ಕೆಲಸಗಳನ್ನು ಅವರ ಶಕ್ತಿಗನುಗುಣವಾಗಿ ಮಾಡಬೇಕಾಗಿತ್ತು. ಪೋಷಕರ ಕಷ್ಟ– ಸುಖಗಳಲ್ಲಿ ಅವರ ಸಹಭಾಗಿತ್ವ ಇರುತ್ತಿತ್ತು. ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನೂ ಮಕ್ಕಳು ಚಿಕ್ಕಂದಿನಿಂದ ಅರಗಿಸಿಕೊಂಡೇ ಬೆಳೆಯುತ್ತಿದ್ದರು. ಈಗ ಮಕ್ಕಳನ್ನು ‘ಫಾರಂ ಕೋಳಿ’ಗಳ ಹಾಗೆ ಬೆಳೆಸಲಾಗುತ್ತಿದೆ. ‘ನೂರಕ್ಕೆ ನೂರು ಅಂಕ ಗಳಿಸಿ ಓದಿದರೆ ಮಾತ್ರ ಜೀವನ, ಇಲ್ಲದಿದ್ದರೆ ಜೀವನವೇ ಮುಗಿಯಿತು’ ಎಂಬ ನಕಾರಾತ್ಮಕ ಸಂದೇಶವನ್ನು ಪೋಷಕರು ಹಾಗೂ ಶಿಕ್ಷಕರು ಮಕ್ಕಳ ತಲೆಯಲ್ಲಿ ತುಂಬುತ್ತಾರೆ. ಇದು ಅಸಾಧ್ಯ ಎನಿಸಿದಾಗ, ಅತಿ ಸೂಕ್ಷ್ಮವಾಗಿ ಬೆಳೆದ ಮಕ್ಕಳು ಸೋಲಿನ ಭಯದಿಂದ ಆತ್ಮಹತ್ಯೆಯ ಹಾದಿ ಹಿಡಿಯುತ್ತಾರೆ. ತಾವು ಕಷ್ಟಪಟ್ಟಂತೆ ತಮ್ಮ ಮಕ್ಕಳು ಕಷ್ಟಪಡಬಾರದು ಎಂಬ ಕಾರಣದಿಂದ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಮುಚ್ಚಿಟ್ಟು, ಅವರು ಕೇಳಿದ್ದನ್ನೆಲ್ಲಾ ಸಾಲ ಮಾಡಿಯಾದರೂ ಕೊಡಿಸಿ ಕಷ್ಟಕಾರ್ಪಣ್ಯಗಳ ಪರಿವೆಯೇ ಇಲ್ಲದೆ ಮಕ್ಕಳನ್ನು ಬೆಳೆಸುತ್ತಾರೆ. ಇದು ಕೂಡ ಅವರ ದುರ್ಬಲ ಮನಃಸ್ಥಿತಿಗೆ ಕಾರಣವಾಗುತ್ತದೆ. ‘ಕೋಣೆ ಮಕ್ಕಳು ಕೊಳೆತೊ, ಬೀದಿ ಮಕ್ಕಳು ಬೆಳೆದೊ’ ಎಂಬ ಹಿರಿಯರ ನಾಣ್ಣುಡಿಯನ್ನು ಪೋಷಕರು ನೆನಪಿಡಬೇಕು.

–ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮುತ್ತೂರು, ಕೊಪ್ಪ

***

ಮಕ್ಕಳಿಂದ ಸ್ವಚ್ಛತಾ ಕಾರ್ಯ: ತಾರತಮ್ಯ ಬೇಡ

‘ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯ ತೊಳೆಸಿದರೆ ತಪ್ಪೇನು?’ ಎಂಬ ಪ್ರಶ್ನೆಗೆ ಎಲ್ಲರೂ ‘ತಪ್ಪು ಮತ್ತು ಅಪರಾಧ’ ಎಂಬ ಉತ್ತರ ನೀಡಿ ಕೈತೊಳೆದುಕೊಂಡಿರುವ ವಿಷಯವನ್ನು ಸಂಸದ ಗೋವಿಂದ ಕಾರಜೋಳ ಅವರು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಎತ್ತಿರುವುದು ವರದಿಯಾಗಿದೆ (ಪ್ರ.ವಾ., ಸೆ. 6). ಶಾಲೆಗಳಲ್ಲಿ ಸ್ವಚ್ಛತೆಯ ಕೆಲಸಕ್ಕೆ ಮಕ್ಕಳಿಂದ ಕಿಂಚಿತ್‌ ನೆರವು ಪಡೆದರೆ ಅದು ಅಕ್ಷಮ್ಯ ಅಪರಾಧವೇನೂ ಅಲ್ಲ. ಆದರೆ ಇಂತಹ ವಿಚಾರಗಳಲ್ಲಿ ಜಾತಿ–ಧರ್ಮದಂತಹ ಅಂಶಗಳು ಪರಿಗಣನೆಗೆ ಒಳಗಾಗಬಾರದು. ತಾರತಮ್ಯ ಇರಬಾರದು. ತಾರತಮ್ಯ ನೀತಿಯನ್ನು ಖಂಡಿಸುವುದರ ಭಾಗವಾಗಿ ಮಕ್ಕಳನ್ನು ಶಾಲೆಯ ಸ್ವಚ್ಛತೆಯ ಕೆಲಸಗಳಿಗೆ ಬಳಸಿಕೊಳ್ಳುವುದರ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ.

ಖಾಸಗಿ ಶಾಲೆಗಳಲ್ಲಿ ಅಗತ್ಯ ಸ್ವಚ್ಛತಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದರಿಂದ ಅಲ್ಲಿ ಸಮಸ್ಯೆ ಇಲ್ಲ. ಆದರೆ ಸರ್ಕಾರಿ ಶಾಲೆಗಳಿಗೆ ಸರ್ಕಾರವು ಸ್ವಚ್ಛತಾ ಸಿಬ್ಬಂದಿಯನ್ನು ನೇಮಕ ಮಾಡುವುದಿಲ್ಲ. ಆಗ ಶಾಲೆಗಳ ಕೊಠಡಿಗಳನ್ನು ಸ್ವಚ್ಛ ಮಾಡುವವರು ಯಾರು? ನಾನು ಒಂದು ಸರ್ಕಾರಿ ಪ್ರೌಢಶಾಲೆಯಲ್ಲಿ ಕೆಲವು ವರ್ಷ ಗೌರವ ಶಿಕ್ಷಕನಾಗಿ ಕೆಲಸ ಮಾಡಿದೆ. ಆ ಶಾಲೆಯಲ್ಲಿ ಮಕ್ಕಳು ಪಾಳಿಯ ಮೇಲೆ ಕಸ ಗುಡಿಸುವುದಕ್ಕೆ ವೇಳಾಪಟ್ಟಿಯನ್ನೇ ಹಾಕಿದ್ದರು. ನಮ್ಮೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಹೋದಾಗ ಕೊಠಡಿಗಳಲ್ಲಿ ಕಸ ಕಡ್ಡಿ, ದೂಳು ತುಂಬಿತ್ತು. ಕಾರಣ ಅಲ್ಲಿ ಸರ್ಕಾರವು ಸ್ವಚ್ಛತಾ ಸಿಬ್ಬಂದಿಯನ್ನು ಕೊಟ್ಟಿರಲಿಲ್ಲ, ಮಕ್ಕಳನ್ನೂ ಆ ಕೆಲಸ ಮಾಡುವಂತೆ ತಾಕೀತು ಮಾಡುವಂತಿಲ್ಲ. ಹಾಗಾಗಿ, ತಾವು ಕಲಿಯುತ್ತಿರುವ ಶಾಲಾ ಕಾಲೇಜುಗಳ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ತಮ್ಮ ಜವಾಬ್ದಾರಿ ಎಂಬ ಅರಿವು ಮಕ್ಕಳಿಗೆ ಬಂದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ.

–ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT