ಭಾಷಾ ವೈವಿಧ್ಯ ಆಸ್ವಾದಿಸೋಣ

ಕನ್ನಡ ಭಾಷೆ ಕುರಿತು ಅನೇಕ ಬಗೆಯಲ್ಲಿ ಚರ್ಚೆಗಳು ನಡೆಯುತ್ತಿವೆ. ಭಾಷೆ ಅನ್ನುವುದು ಮೂಲತಃ ಒಂದು ಸಂವಹನ ಸಾಧನ. ನಾವು ಆಡಿದ ಮಾತು ಜನರಿಗೆ ಅರ್ಥ ಆಗಬೇಕು ಅನ್ನುವ ಉದ್ದೇಶದ ಜೊತೆಗೆ ಅದರಲ್ಲಿ ವೈವಿಧ್ಯವೂ ಸೇರಿರುತ್ತದೆ ಎಂಬುದನ್ನು ಒಪ್ಪಬೇಕಾಗುತ್ತದೆ. ಅಲ್ಲದೆ ಈ ವೈವಿಧ್ಯವು ಕನ್ನಡದ ನೆಲಕ್ಕಷ್ಟೇ ಸೀಮಿತವಲ್ಲ!

ಭಾಷೆಯ ಸ್ಪಷ್ಟತೆ ಕೆಲವರಿಗೆ ಆನುವಂಶೀಯವಾಗಿ, ಇನ್ನು ಕೆಲವರಿಗೆ ರೂಢಿಯಿಂದ ಬಂದಿರುತ್ತದೆ. ಪಂಡಿತರು ಆಡುವ ಭಾಷೆ, ಜನರು ಬಳಸುವ ಭಾಷೆಯಲ್ಲಿ ಶ್ರೇಷ್ಠ, ನಿಕೃಷ್ಟ ಎಂದೆಲ್ಲ ಇಲ್ಲ. ಪರಸ್ಪರ ಕಲಿಕೆ ಸ್ವಾಗತಾರ್ಹ. ವರನಟ ರಾಜ್ಕುಮಾರ್ ಅವರು ಆಡುತ್ತಿದ್ದ ಮಾತುಗಳನ್ನು ಸಾಹಿತಿ ಯು.ಆರ್.ಅನಂತಮೂರ್ತಿ ಅವರು ಪ್ರಶಂಸಿಸಿ, ರಾಜ್ಕುಮಾರ್ ಅವರ ಕನ್ನಡ ಭಾಷೆಯ ಬಳಕೆ ಕರ್ನಾಟಕವೇ ಒಪ್ಪಬಹುದಾದ ಮಾದರಿ ಅಂದರು. ಭಾಷೆಯು ಆಹಾರ ಇದ್ದಂತೆ. ಬೆಂಗಳೂರಿನ ವಿದ್ಯಾರ್ಥಿ ಭವನದ ಮಸಾಲೆ ದೋಸೆಯ ನುಣುಪೇ ಬೇರೆ, ಎಂಟಿಆರ್ ದೋಸೆಯ ಸ್ವಾದವೇ ಬೇರೆ. ಗ್ರಾಹಕರು ಎರಡನ್ನೂ ಸಂತೋಷದಿಂದ ಮೆಲ್ಲುತ್ತಾರೆ ಅಲ್ಲವೇ? ಹಾಗೆಯೇ ಭಾಷೆ. ಅದೇ ಭಾಷೆಯ ವೈವಿಧ್ಯ ಹಾಗೂ ಭಾಷಾ ಸೊಗಡನ್ನು ನಾವು ನೋಡಬೇಕಾದ ಅರ್ಥಪೂರ್ಣ ವಿಧಾನ.

–ಆರ್.ವೆಂಕಟರಾಜು, ಬೆಂಗಳೂರು

ಕ್ರಿಕೆಟ್ ಜನಪ್ರಿಯತೆ: ದೂಷಣೆ ಸಲ್ಲ

ಕ್ರಿಕೆಟ್ ಮಾತ್ರವಲ್ಲದೆ ಎಲ್ಲ ಕ್ರೀಡೆಗಳಿಗೂ ನಮ್ಮ ದೇಶದಲ್ಲಿ ಸೂಕ್ತ ಉತ್ತೇಜನ ಸಿಗಬೇಕು ಎಂಬ ಯೋಗಾನಂದ ಅವರ ಆಶಯ (ಸಂಗತ, ಜುಲೈ 17) ಸಮರ್ಪಕವಾಗಿದೆ. ಆದರೆ ಈ ಆಶಯದ ನೆಪದಲ್ಲಿ, ಕ್ರಿಕೆಟ್ ಆಟದ ಕಾರಣದಿಂದ ಅನರ್ಥಗಳು ಆಗುತ್ತಿವೆ ಎಂಬಂತೆ ಬಣ್ಣಿಸುವುದು ಸರಿಯಲ್ಲ. ದೇಶದ ಎಲ್ಲ ವಯೋಮಾನದವರು, ಎಲ್ಲ ಸಾಮಾಜಿಕ ಹಿನ್ನೆಲೆಯವರು ಒಂದಾಗಿ ಸಂಭ್ರಮಿಸುವಂತೆ ಮಾಡುವಲ್ಲಿ, ದೇಶದ ಪ್ರಜೆಗಳಲ್ಲಿ ದೇಶಾಭಿಮಾನ, ಒಗ್ಗಟ್ಟನ್ನು ಜಾಗೃತ
ಗೊಳಿಸುವಲ್ಲಿ ಕ್ರಿಕೆಟ್ ಸಫಲವಾಗಿದೆ. ಚುನಾವಣಾ ಫಲಿತಾಂಶಗಳ ವಿಷಯದಲ್ಲೂ ಬೆಟ್ಟಿಂಗ್ ನಡೆಯುತ್ತದೆ. ಹಾಗೆಂದು, ಈ ಕಾರಣಕ್ಕೆ ಚುನಾವಣೆಗಳನ್ನು ದೂಷಿಸಲು ಸಾಧ್ಯವೇ?

ಜಗತ್ತಿನ ಒಂದೊಂದು ದೇಶದಲ್ಲಿ ಒಂದೊಂದು ಕ್ರೀಡೆ ಜನಪ್ರಿಯವಾಗಿರುತ್ತದೆ. ಅರ್ಜೆಂಟೀನ, ಬ್ರೆಜಿಲ್ನಂತಹ ದೇಶಗಳಲ್ಲಿ ಫುಟ್ಬಾಲ್ ಬಗ್ಗೆ ಎಂತಹ ಉತ್ಕಟ ಅಭಿಮಾನವಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಫುಟ್ಬಾಲ್ ಆಟದ ವೀಕ್ಷಕರ ದಾಂದಲೆಯಂತೂ ಗೊತ್ತೇ ಇದೆ. ಹೀಗಿರುವಾಗ, ಕ್ರಿಕೆಟ್ ಆಟದ ಅಭಿಮಾನದ ಬಗ್ಗೆ ಮಾತ್ರ ದೂಷಿಸುವುದು ಸೂಕ್ತವಲ್ಲ. ಅಮೆರಿಕದ ರಾಷ್ಟ್ರೀಯ ಕ್ರೀಡೆ ಬೇಸ್ಬಾಲ್ ಎಂದು ಪರಿಗಣಿಸಲಾಗಿದೆಯಾದರೂ ಅಲ್ಲಿನ ಜನಪ್ರಿಯ ಕ್ರೀಡೆ ಫುಟ್ಬಾಲ್. ಅದೇ ರೀತಿ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆ ಹಾಕಿ ಆದರೂ ಜನಪ್ರಿಯ ಕ್ರೀಡೆ ಕ್ರಿಕೆಟ್ ಎಂಬ ವಾಸ್ತವವನ್ನು ಒಪ್ಪೋಣ. ನಮ್ಮ ದೇಶದ ಜನ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವಂತೆ ಕ್ರಿಕೆಟ್ ಆಟಗಾರರೂ ತಮ್ಮ ಸಾಧನೆಯಿಂದ
ಜಗತ್ಪ್ರಸಿದ್ಧರಾಗಿ ದೇಶದ ಜನರ ಹೆಮ್ಮೆಗೆ ಕಾರಣರಾಗಿದ್ದಾರೆ. ಹೀಗಾಗಿ, ಕ್ರಿಕೆಟ್ ಪಂದ್ಯಗಳ ಬಗ್ಗೆ ದೇಶದ ಜನಸಾಮಾನ್ಯರ ಸಂಭ್ರಮ, ಸಡಗರವನ್ನು ನೋಡಿ ಸಂತೋಷಪಡೋಣ.

–ಟಿ.ಜಯರಾಂ, ಕೋಲಾರ

ನೈತಿಕತೆ ಬೋಧನೆಗಷ್ಟೇ ಅಲ್ಲ

‘ಜ್ಞಾನವೆಂಬ ದೀಪದ ಕೆಳಗಿನ ಕತ್ತಲೆ’ ಎಂಬ ಗೀತಾ ವಸಂತ ಅವರ ಲೇಖನವನ್ನು (ಪ್ರ.ವಾ., ಜುಲೈ 15) ಓದಿದಾಗ ನನಗೆ ನನ್ನ ವೃತ್ತಿಜೀವನದ ಎರಡು ಪ್ರಕರಣಗಳು ನೆನಪಾದವು. ಸುಮಾರು ವರ್ಷಗಳಿಂದ ರಾಗಿ ಮುದ್ದೆಯ ಮಹತ್ವವನ್ನು ಪಿಯುಸಿ ತರಗತಿಯಲ್ಲಿ ಬೋಧಿಸುತ್ತಿದ್ದರೂ ಇದುವರೆಗೂ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಊಟದ ಬಾಕ್ಸ್ನಲ್ಲಿ ಮುದ್ದೆ ತಂದಿದ್ದನ್ನು ನಾನು ನೋಡಿಲ್ಲ. ಏಕಿರಬಹುದು ಎಂದು ತರಗತಿಯಲ್ಲಿ ಒಮ್ಮೆ ವಿದ್ಯಾರ್ಥಿ
ಗಳನ್ನು ಪ್ರಶ್ನಿಸಿದ್ದೆ. ‘ಬೋಧನೆ ಮಾಡಿದ್ದೆಲ್ಲವನ್ನೂ ಅಳವಡಿಸಿಕೊಳ್ಳಲು ಸಾಧ್ಯವೇ?’ ಎಂದು ಒಬ್ಬ ವಿದ್ಯಾರ್ಥಿ ಕೇಳಿದರೆ, ‘ರಾಗಿ ಮುದ್ದೆಯ ಮಹತ್ವ ಅರಿವಾದ ಮೇಲೆ ಎಷ್ಟೋ ದಿನಗಳಿಂದ ಮಧ್ಯಾಹ್ನ ತರಬೇಕೆಂದುಕೊಂಡಿದ್ದೆ. ಆದರೆ ಯಾರಾದರೂ ನೋಡಿ ನಗುತ್ತಾರೇನೊ ಎಂಬ ಭಯದಿಂದ ತಂದಿಲ್ಲ ಸರ್’ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಹೇಳಿದ್ದಳು. ಇನ್ನೊಮ್ಮೆ ತರಗತಿಯೊಂದರಲ್ಲಿ ಪ್ರಾಮಾಣಿಕತೆಯ ಬಗ್ಗೆ ಮಾತನಾಡುವಾಗ, ‘ನಿಮ್ಮ ತರಗತಿ ಕೋಣೆಯಲ್ಲಿ ಐವತ್ತು ಸಾವಿರ ರೂಪಾಯಿಯ ದುಡ್ಡಿನ ಕಟ್ಟೊಂದು ನಿಮಗೆ ಸಿಕ್ಕಿದರೆ ಖಂಡಿತವಾಗಿಯೂ ಯಾವ ವಿದ್ಯಾರ್ಥಿಯೂ ಸಂಬಂಧಪಟ್ಟವರಿಗೆ ತಲುಪಿಸುವುದಿಲ್ಲ’ ಎಂದು ನಾನು ಹೇಳಿದಾಗ, ‘ಉಪನ್ಯಾಸಕರ ಕೊಠಡಿಯಲ್ಲಿ ಸಿಕ್ಕಿದರೆ ಉಪನ್ಯಾಸಕರು ಸಂಬಂಧಪಟ್ಟವರಿಗೆ ತಲುಪಿಸುತ್ತಾರೆಯೇ?’ ಎಂದು ವಿದ್ಯಾರ್ಥಿಯೊಬ್ಬ ನನಗೆ ಮರುಪ್ರಶ್ನೆ ಹಾಕಿದ್ದ.

ಆದರ್ಶಗಳು ಬೋಧನೆಗಷ್ಟೇ ಸೀಮಿತ ವಿನಾ ಅನುಷ್ಠಾನಕ್ಕಲ್ಲ ಎಂಬ ಮನಃಸ್ಥಿತಿ ಸಮಾಜದಲ್ಲಿ ಬೇರೂರುತ್ತಿರುವುದನ್ನು, ನೈತಿಕತೆಯು ಮಾತಿಗಷ್ಟೇ ಸೀಮಿತವಾಗದೆ ಅನ್ವಯಿಸಿಕೊಳ್ಳಬೇಕಾದ ಅನಿವಾರ್ಯವನ್ನು, ಶಿಕ್ಷಕ ಮತ್ತು ಪೋಷಕ ತಾವು ಬತ್ತಿಗಳಾಗಿ ಉರಿಯದೆ ಸಮಾಜದಲ್ಲಿ ಹಣತೆಯನ್ನು ಹಚ್ಚಲು ಸಾಧ್ಯವಿಲ್ಲ ಎಂಬುದನ್ನು ಈ ಎರಡೂ ಪ್ರಕರಣಗಳು ಸೂಚಿಸುತ್ತವೆ. ಹಾಗಾಗಿ, ಖಲೀಲ್ ಗಿಬ್ರಾನ್ ಹೇಳುವಂತೆ, ಪೋಷಕ ಅಥವಾ ಶಿಕ್ಷಕರೆಂಬ ಬಿಲ್ಲುಗಳು ಬಾಗಿ ಮಕ್ಕಳೆಂಬ ಬಾಣ ಸರಿಯಾದ ಗುರಿ ಮುಟ್ಟುವಂತೆ ಮಾಡಬೇಕಾದುದು ಇಂದಿನ ತುರ್ತು.

–ರೇವಣ್ಣ ಎಂ.ಜಿ., ಕೃಷ್ಣರಾಜಪೇಟೆ, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.