ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಬಗೆದಷ್ಟೂ ಹೊರಬರಲಿದೆ ಸತ್ಯ

Published 12 ಮೇ 2024, 20:00 IST
Last Updated 12 ಮೇ 2024, 20:00 IST
ಅಕ್ಷರ ಗಾತ್ರ

ಬಗೆದಷ್ಟೂ ಹೊರಬರಲಿದೆ ಸತ್ಯ

ಪ್ರಜ್ವಲ್‌ ರೇವಣ್ಣ ಅವರ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣ ದಿನದಿಂದ ದಿನಕ್ಕೆ ಭಿನ್ನ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ವಾಬ್ದಾರಿಯುತ ಸ್ಥಾನದಲ್ಲಿ ಇರುವ ಸಂಸದರು ಆರೋಪ
ಕೇಳಿಬರುತ್ತಿದ್ದಂತೆಯೇ ತಲೆಮರೆಸಿಕೊಂಡು ವಿದೇಶಕ್ಕೆ ತೆರಳಿರುವುದು ಸರಿಯಲ್ಲ. ಜಗತ್ತಿನ ಎಲ್ಲ ಆಗುಹೋಗುಗಳನ್ನೂ ಕುಳಿತಲ್ಲೇ ತಿಳಿದುಕೊಳ್ಳಲು ಸಾಧ್ಯವಿರುವ ಈ ಕಾಲಘಟ್ಟದಲ್ಲಿ, ಸಂಸದರ ಈ ನಡೆಯನ್ನು ಜನಸಾಮಾನ್ಯರು ಯಾವ ರೀತಿಯಲ್ಲಿ ಅರ್ಥೈಸಬೇಕು? ಹೀಗೆ ತಲೆಮರೆಸಿಕೊಳ್ಳುವುದು ಸಂಸದ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಅವರು ಕಾಣೆಯಾಗಿರುವುದರ ಹಿಂದೆ ಹಲವರ ಕೈವಾಡ ಇರುವಂತೆ ತೋರುತ್ತಿದೆ. ಈ ಪ್ರಕರಣದಲ್ಲಿ ಅಗೆದಷ್ಟೂ ಬಗೆದಷ್ಟೂ ಸತ್ಯ ಹೊರಬರುವ ಎಲ್ಲಾ ಲಕ್ಷಣಗಳು ಇವೆ. ಪ್ರಜ್ವಲ್‌ ಅವರನ್ನು ಆದಷ್ಟು ಬೇಗ ರಾಜ್ಯಕ್ಕೆ ಕರೆತರಲು ಸರ್ಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಿ.

⇒ನಮ್ರತಾ ಪ್ರಕಾಶ್, ಮೈಸೂರು

ಮರಗಳಿಗೆ ಸಿಗಲಿ ರಕ್ಷಣೆ

ಸಾಂಸ್ಕೃತಿಕ ನಗರವಾದ ಮೈಸೂರು, ನಿಸರ್ಗ ಸೌಂದರ್ಯವನ್ನೂ ಮೈದುಂಬಿಕೊಂಡಿದೆ. ಮುಖ್ಯ ರಸ್ತೆಗಳ ಇಕ್ಕೆಲ ಗಳಲ್ಲಿ ಇರುವ ಸಾಲು ಸಾಲು ಮರಗಳು, ಉದ್ಯಾನಗಳು ಹಾಗೂ ಬಡಾವಣೆಗಳಲ್ಲಿ ಬೆಳೆಸಿರುವ ವಿವಿಧ ಬಗೆಯ ಮರಗಳು ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಆದರೆ, ಈ ಮರಗಳು ಬೆಳೆದಂತೆ ಇವುಗಳಿಗೆ ಗೆದ್ದಲು
ಹುಳುಗಳ ಕಾಟವೂ ವಿಪರೀತವಾಗುತ್ತಿರುವುದು ಕಂಡುಬರುತ್ತಿದೆ. ಮರಗಳನ್ನು ಬೆಳೆಸುವುದರಲ್ಲಿ ತೋರುವ ಆಸಕ್ತಿಯನ್ನು ಗೆದ್ದಲುಹುಳುಗಳಿಂದ ಅವುಗಳನ್ನು ರಕ್ಷಿಸುವುದಕ್ಕೂ ತೋರಬೇಕಾಗಿದೆ.

ಸಾಮಾನ್ಯವಾಗಿ ಬೇವು, ಬಾಗೆ, ನೀಲಗಿರಿ, ತೇಗ, ಶ್ರೀಗಂಧ, ತೆಂಗಿನಂತಹ ಮರಗಳಲ್ಲಿ ಗೆದ್ದಲುಹುಳುಗಳ ಕಾಟವಿರುತ್ತದೆ. ಆದರೆ, ಹಿಪ್ಪೆ, ಹುಣಸೆ, ಹಲಸು, ನೇರಳೆ, ಆಲ, ಅರಳಿ, ರಬ್ಬರ್ ಮತ್ತು ಹೊಂಗೆ ಮರಗಳು
ಸ್ವಾಭಾವಿಕವಾಗಿಯೇ ಗೆದ್ದಲು ನಿರೋಧಕ ಆಗಿರುತ್ತವೆ. ವಿವಿಧ ರೀತಿಯ ಮರಗಳು ನಗರದ ಸೌಂದರ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲ ವಾತಾವರಣವನ್ನೂ ತಂಪಾಗಿಸುತ್ತವೆ. ರಾಜ್ಯದ ಇತರ ನಗರಗಳಲ್ಲಿಯೂ ಮರಗಳಿಗೆ ಗೆದ್ದಲು ಹುಳುಗಳ ಕಾಟ ಇರಬಹುದು. ಸ್ಥಳೀಯ ಆಡಳಿತಗಳು ಕೀಟತಜ್ಞರ ಸಲಹೆ ಪಡೆದು, ಮರಗಳಲ್ಲಿ ಕಂಡುಬರುವ ಗೆದ್ದಲನ್ನು ನಿಯಂತ್ರಿಸುವ ಕಡೆ ಕಾರ್ಯಪ್ರವೃತ್ತವಾಗಲಿ. 

⇒ಡಿ.ರಾಜಗೋಪಾಲ್, ಬೆಂಗಳೂರು

ಉಚಿತವಲ್ಲದ ಆದೇಶ 

ಬೆಂಗಳೂರಿನ ಜೆ.ಬಿ. ನಗರದಲ್ಲಿ ವೀರಭದ್ರಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆದ ಪ್ರಯುಕ್ತ, ದುಷ್ಕೃತ್ಯಗಳಿಗೆ ಅವಕಾಶ
ಆಗದಂತೆ ಅಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲ ಮದ್ಯದ ಅಂಗಡಿ, ಬಾರ್ ಮತ್ತು ರೆಸ್ಟೊರೆಂಟ್‌ಗಳನ್ನು ಶನಿವಾರ ಮುಂಜಾನೆಯಿಂದ ಭಾನುವಾರ ಮಧ್ಯಾಹ್ನದವರೆಗೆ ಬಂದ್ ಮಾಡಲು ಆದೇಶಿಸಿದ್ದಾಗಿ ವರದಿಯಾಗಿತ್ತು. ಒಂದು ಬೀದಿಯ ಎಡಭಾಗ ಒಂದು ಠಾಣೆಯ ವ್ಯಾಪ್ತಿಗೂ ಬಲಭಾಗ ಮತ್ತೊಂದು ಠಾಣೆಯ ವ್ಯಾಪ್ತಿಗೂ ಸೇರುವ ಸಂಭವ ಇದ್ದೇ ಇರುತ್ತದೆ. ಅಂತಹ ಸಂದರ್ಭದಲ್ಲಿ, ಮತ್ತೊಂದು ಠಾಣೆ ವ್ಯಾಪ್ತಿಯ ಅಂಗಡಿಗೆ ಹೋಗಿ ಮದ್ಯಪಾನ ಮಾಡಿಬರುವ ಸಾಧ್ಯತೆ ಇರುವುದಿಲ್ಲವೇ? ಅಷ್ಟಕ್ಕೂ ಮದ್ಯಪಾನ ಮಾಡಲೇಬೇಕೆಂದರೆ ನಾನಾ ಮಾರ್ಗಗಳು ಇದ್ದೇ ಇರುತ್ತವೆ. ಹಾಗೆಂದು ಠಾಣೆ ವ್ಯಾಪ್ತಿಯ ಬಾರ್‌ಗಳನ್ನು ಮುಚ್ಚಿಸುವುದು ಹಾಸ್ಯಾಸ್ಪದ ಆದೇಶವಾಗುತ್ತದೆ.

ಮದ್ಯಪಾನ ಮಾಡಿದರೆ ಮಾತ್ರ ದುಷ್ಕೃತ್ಯ ಎಸಗಲು ಸಾಧ್ಯ ಎಂಬ ತೀರ್ಮಾನ ಸರಿಯಲ್ಲ. ಮದ್ಯಪಾನ ಮಾಡದೆಯೂ ದುಷ್ಕೃತ್ಯ ಎಸಗಬಹುದಲ್ಲವೇ? ಉತ್ಸವಕ್ಕೆ ಬಿಗಿಯಾದ ಪೊಲೀಸ್ ಬಂದೋಬಸ್ತ್ ಮಾಡಿ, ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕಾದದ್ದು ಪೊಲೀಸರ ಕರ್ತವ್ಯ. ಇಂತಹ ಆದೇಶಗಳನ್ನು ಹೊರಡಿಸುವ ಮುನ್ನ ಪೊಲೀಸ್‌ ಇಲಾಖೆ ಚಿಂತಿಸಲಿ.

⇒ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಚುನಾವಣೆ: ಎಲ್ಲರಿಗೂ ಇದೆ ಹೊಣೆ

ಈ ಬಾರಿಯ ಲೋಕಸಭಾ ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ತಮಗೆ ಉತ್ತಮ ವ್ಯವಸ್ಥೆ ಕಲ್ಪಿಸಿದ್ದುದು, ಹಿಂದಿನ ಚುನಾವಣೆಗಳ ಸಂದರ್ಭದಲ್ಲಿ ಆದ ಕಹಿ ಅನುಭವವನ್ನು ಮರೆಸುವಂತಿತ್ತು ಎಂದು ಎಂ.ಜೆ.ಅಲ್ಫೋನ್ಸ್‌ ಪಿಂಟೊ ಎಂಬುವರು ಖುಷಿಯಿಂದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ (ವಾ.ವಾ., ಮೇ 10). ಆದರೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಎಲ್ಲರಿಗೂ ಇದೇ ರೀತಿಯ ಉತ್ತಮವಾದ ವ್ಯವಸ್ಥೆ ಇರುತ್ತದೆ ಎಂದು ಭಾವಿಸಲಾಗದು. ವ್ಯವಸ್ಥೆಯನ್ನು ಕಲ್ಪಿಸುವ ಜವಾಬ್ದಾರಿ ವಹಿಸಿಕೊಂಡವರ ಬದ್ಧತೆಯನ್ನು ಅದು ಅವಲಂಬಿಸಿರುತ್ತದೆ. ಚುನಾವಣಾ ಸಿಬ್ಬಂದಿಗೆ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಅನಾದರ ತೋರಿ ಬೇಸರ ಉಂಟುಮಾಡುವುದು, ಅದರಲ್ಲೂ ಮಹಿಳಾ ಸಿಬ್ಬಂದಿ ಹೆಚ್ಚಿನ ತೊಂದರೆ ಅನುಭವಿಸುವುದು ಸಾಮಾನ್ಯ ಸಂಗತಿ ಎನ್ನುವಂತಾಗಿದೆ.

ಮತದಾನ ಸುಸೂತ್ರವಾಗಿ ನಡೆಯಲು ಚುನಾವಣಾ ಸಿಬ್ಬಂದಿಯ ಜವಾಬ್ದಾರಿಯೂ ಮಹತ್ವದ ಪಾತ್ರ ವಹಿಸುತ್ತದೆ. ಕೆಲವರಿಗೆ ಮತದಾನದ ಪರಿಕರಗಳನ್ನು ತೆಗೆದುಕೊಳ್ಳುವಾಗ ಇರುವ ವ್ಯವಧಾನ ಅವುಗಳನ್ನು ಹಿಂದಿರುಗಿಸುವಾಗ ಇರುವುದಿಲ್ಲ. ಅಲ್ಲಿ ನಾಮುಂದು ತಾಮುಂದು ಎಂದು ಗದ್ದಲ, ನೂಕುನುಗ್ಗಲು ಸೃಷ್ಟಿಯಾಗಿರುತ್ತದೆ. ಚುನಾವಣೆಯ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಇಂತಹ ಕೆಲವು ಸಮಸ್ಯೆಗಳು ಸರಿ ಹೋಗಬೇಕು. ಮತದಾನವು ಹಬ್ಬದ ರೀತಿಯಲ್ಲಿ ಆಗಬೇಕು ಎಂಬ ಚುನಾವಣಾ ಆಯೋಗದ ಆಶಯಕ್ಕೆ ಸಂಬಂಧಪಟ್ಟ ಎಲ್ಲರೂ ಸ್ಪಂದಿಸಬೇಕು. ಹೀಗಾದಾಗ ಇಡೀ ಮತದಾನ ಪ್ರಕ್ರಿಯೆ ಸಂಭ್ರಮದಿಂದ ನಡೆಯುತ್ತದೆ

.⇒ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ 

ಹೋಮ್ ಸ್ಟೇ: ದಾರಿತಪ್ಪಿದ ಉದ್ದೇಶ

ಅನಧಿಕೃತ ಹೋಮ್ ಸ್ಟೇಗಳ ಸಂಖ್ಯೆ ಹೆಚ್ಚಾಗಿರುವ ಕುರಿತ ವಿಶೇಷ ವರದಿಯನ್ನು (ಪ್ರ.ವಾ., ಮೇ 12) ಓದಿದಾಗ, ಅದರಲ್ಲಿ ಹೋಮ್‌ ಸ್ಟೇಗಳ ಒಂದು ಮುಖವನ್ನು ಮಾತ್ರ ಹೇಳಲಾಗಿದೆ ಎನಿಸಿತು. ಕೆಲವೆಡೆ ಹೋಮ್‌ ಸ್ಟೇಗಳ ಹೆಸರಿನಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಆಗಬೇಕಿತ್ತು. ಕೆಲವು ಪೊಲೀಸರಿಗೆ ಇವು ವಸೂಲಿ ಕೇಂದ್ರಗಳಾಗಿವೆ ಎನ್ನುವ ಮಾತಿದೆ. 

ಪ್ರವಾಸೋದ್ಯಮವನ್ನು ಉತ್ತೇಜಿಸುವ ದಿಸೆಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಹೋಮ್‌ ಸ್ಟೇಯ ಉದ್ದೇಶ ಇಂದು ಬೇರೆಯದೇ ದಾರಿಯಲ್ಲಿ ಸಾಗುತ್ತಿರುವುದು ವಿಷಾದದ ಸಂಗತಿ.

⇒ಬೂಕನಕೆರೆ ವಿಜೇಂದ್ರ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT