ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ದೇಹ ಮತ್ತು ಸಂತರ ನಿರ್ಮೋಹ

Last Updated 10 ಜನವರಿ 2023, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಲಿಂಗೈಕ್ಯರಾದ ಸಿದ್ಧೇಶ್ವರ ಶ್ರೀಗಳ ಇಚ್ಫೆಯಂತೆ ಅವರ ದೇಹವನ್ನು ಅಗ್ನಿಗೆ ಅರ್ಪಿಸಿ ಚಿತಾಭಸ್ಮವನ್ನು ನದಿ ಮತ್ತು ಸಮುದ್ರದಲ್ಲಿ ವಿಸರ್ಜಿಸಲಾಗಿದೆ. 18ನೇ ಶತಮಾನದಲ್ಲಿ ಆಂಧ್ರಪ್ರದೇಶ ಮೂಲದ ಘನಮಠ ಶಿವಯೋಗಿಗಳು ಎಂಬ ಬಸವಣ್ಣನವರ ಅನುಯಾಯಿಯೊಬ್ಬರು ಕರ್ನಾಟಕದಲ್ಲಿ ಆಗಿಹೋದರು.

‘ಕೃಷಿಜ್ಞಾನ ಪ್ರದೀಪಿಕೆ’ ಎಂಬ ಕೃತಿಯ ಕರ್ತೃವಾದ ಅವರನ್ನು ‘ಕೃಷಿ ಋಷಿ’ ಎಂದೇ ಕರೆಯಲಾಗುತ್ತದೆ. ಅವರು ಲಿಂಗೈಕ್ಯರಾಗುವ ಮುನ್ನ ತಮ್ಮ ಶಿಷ್ಯರಿಗೆ: ‘ನಾನು ದೇಹ ಬಿಟ್ಟ ಮೇಲೆ ನನ್ನ ಶರೀರವನ್ನು ಹೂಳಿ ಅದರ ಮೇಲೆ ಗದ್ದುಗೆಯನ್ನಾಗಲೀ ದೇವಾಲಯವನ್ನಾಗಲೀ ಕಟ್ಟಿಸಬಾರದು. ಒಂದು ವೇಳೆ ಹಾಗೆ ಮಾಡಿದರೆ, ಮಾಡಿದವರ ವಂಶ ನಿರ್ವಂಶವಾಗಲಿ. ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಊರ ಆಚೆ ಎಸೆಯಿರಿ. ಹದ್ದು, ಕಾಗೆಗಳು ತಿನ್ನಲಿ. ಹೀಗೆ ಮಾಡಲು ಧೈರ್ಯ ಸಾಲದಿದ್ದರೆ ದೇಹವನ್ನು ಸಮುದ್ರಕ್ಕೆ ಎಸೆಯಿರಿ. ಮೀನು ಮೊಸಳೆಗಳು ತಿನ್ನಲಿ’ ಎಂದು ಹೇಳಿದ್ದರಂತೆ. ಆದರೆ ಅವರ ಭಕ್ತರೊಬ್ಬರು ಶಿವಯೋಗಿಗಳು ದೇಹ ಬಿಟ್ಟ ಮೇಲೆ ರಾಯಚೂರು ಜಿಲ್ಲೆಯ ಸಂತೆಕೆಲ್ಲೂರು ಎಂಬ ಗ್ರಾಮದಲ್ಲಿ ಗದ್ದುಗೆ ಕಟ್ಟಿಸಿ ದೇವಾಲಯ ನಿರ್ಮಿಸಿದ್ದು, ಅದನ್ನು ಈಗಲೂ ಕಾಣಬಹುದು. ಹಾಗೆ ಮಾಡಿದ ಶಿಷ್ಯರ ವಂಶ ನಿರ್ವಂಶವಾಯಿತೆಂದು ಶಿವಯೋಗಿಗಳ ಜೀವನಚರಿತ್ರೆಯಲ್ಲಿ ಬರುತ್ತದೆ.

ಇಲ್ಲಿನ ಪವಾಡವನ್ನು ನಾವು ನಂಬದಿರಬಹುದು. ಆದರೆ ದೇಹದ ಬಗ್ಗೆ ಈ ಸಂತರ ನಿರ್ಮೋಹವನ್ನು ಗಮನಿಸಬೇಕು. ಶರಣ ಸಂತಾನಿಗಳು ನಿಧನ ಹೊಂದಿದಾಗ ಯಾವುದೇ ಗದ್ದುಗೆ ಕಟ್ಟಿಸಬಾರದೆಂದು ವಚನ ಸಾಹಿತ್ಯದಲ್ಲೇ ಉಲ್ಲೇಖವಿದ್ದರೂ ಅದನ್ನು ಯಾರು ಪಾಲಿಸುತ್ತಿದ್ದಾರೆ? ಹೀಗೆ ನಿರ್ಮಾಣಗೊಂಡ ಗದ್ದುಗೆಗಳು ದೇವಾಲಯದ ರೂಪ ತಾಳಿ ಬಸವಣ್ಣನವರ ‘ದೇಹವೇ ದೇಗುಲ’ ಎಂಬ ತತ್ವಕ್ಕೆ ವಿರುದ್ಧವಾಗಿ ಬಸವ ಸಂಪ್ರದಾಯಕ್ಕೆ ಹಿನ್ನಡೆಯಾಗುತ್ತಿದೆ. ಕೆಲವರಂತೂ ಸಾಯುವ ಮೊದಲೇ ಕೋಟ್ಯಂತರ ಹಣ ಖರ್ಚು ಮಾಡಿ ಗದ್ದುಗೆ ಕಟ್ಟಿಸಿಕೊಂಡಿರುವುದನ್ನು ಕಾಣುತ್ತೇವೆ. ಅಂಥವರ ಮಧ್ಯೆ ಸಿದ್ಧೇಶ್ವರ ಶ್ರೀಗಳು, ಘನಮಠ ಶಿವಯೋಗಿಗಳು ಅಪರೂಪದ ಮಹಾನುಭಾವರು. ಇವರು ಈಗಿನ ಸ್ವಾಮಿಗಳಿಗೆ ಮಾದರಿಯಾಗಲಿ. ಪತ್ರಿಕೆಯಲ್ಲಿನ ಲೇಖನದಂತೆ (ಸಂಗತ, ಜ. 6) ಮರಣಾನಂತರ ದೇಹವು ‘ಗೊಬ್ಬರ’ವಾಗುವುದು ಒಳ್ಳೆಯದೇ.

–ಶಿವಕುಮಾರ ಬಂಡೋಳಿ, ಹುಣಸಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT