ಸೋಮವಾರ, ಡಿಸೆಂಬರ್ 16, 2019
17 °C

ಸಂಚಾರ ನಿಯಮ: ಸುರಕ್ಷತೆ ಆದ್ಯತೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಚಾರ ನಿಯಮ ಉಲ್ಲಂಘನೆಗೆ ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ದಂಡ ನೀತಿಯನ್ನು ಟೀಕಿಸುತ್ತಿರುವವರು ಇದನ್ನು ಹಣದ ದೃಷ್ಟಿಯಿಂದ ನೋಡದೆ ಸುರಕ್ಷತೆಯ ದೃಷ್ಟಿಯಿಂದ ನೋಡಬೇಕು. ಏಕೆಂದರೆ ಕಾನೂನುಗಳು ಹಿಂದೆಯೂ ಇದ್ದವು, ಈಗಲೂ ಇವೆ. ಆದರೆ ಅವುಗಳ ಪಾಲನೆ ಅಷ್ಟಕ್ಕಷ್ಟೆ ಎನ್ನುವಂತಿತ್ತು. ಕಾನೂನು ಉಲ್ಲಂಘನೆಗೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣ ಕಡಿಮೆ ಇದ್ದದ್ದರಿಂದ ಹಲವರು ಅದನ್ನು ಉಲ್ಲಂಘಿಸಿ, ಬಿಡಿಗಾಸು ದಂಡ ಕಟ್ಟಿ ಅಥವಾ ಲಂಚ ನೀಡಿ ಪಾರಾಗುತ್ತಿದ್ದರು. ಇದು ಬಹಳಷ್ಟು ಅನಾಹುತಗಳಿಗೆ ಕಾರಣವಾಗಿದ್ದೂ ಇದೆ. ನಮ್ಮ ಪರಿಚಯದವರೊಬ್ಬರು ಆಗರ್ಭ ಶ್ರೀಮಂತರು. ಅವರಿಗಿದ್ದ ಒಬ್ಬನೇ ಮಗ ಹತ್ತನೇ ತರಗತಿ ಓದುತ್ತಿದ್ದಾಗಲೇ ಬೈಕ್ ಓಡಿಸುವುದನ್ನು ಕಲಿತ. ಅವನ ಹಟಕ್ಕೆ ಮಣಿದ ಪಾಲಕರು ಸ್ಪೋರ್ಟ್ಸ್‌ ಬೈಕ್ ಕೊಡಿಸಿದರು. ಚಾಲನಾ ಪರವಾನಗಿ ಇಲ್ಲದಿದ್ದರೂ ಎರ್‍ರಾಬಿರ್‍ರಿ ಗಾಡಿ ಓಡಿಸುತ್ತಿದ್ದ ಹುಡುಗ, ಲಾರಿಯ ಚಕ್ರಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡ. ಒಬ್ಬನೇ ಮಗನನ್ನು ಕಳೆದುಕೊಂಡ ಪಾಲಕರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಕುಡಿದು ವಾಹನ ಚಲಾಯಿಸಿ ಅಪಘಾತಕ್ಕೊಳಗಾದ, ಗುಜರಿ ಸೇರಬೇಕಾದ ಬಸ್‌ಗಳಲ್ಲಿ ಹಿಂಡುಗಟ್ಟಲೆ ಜನರನ್ನು ತುಂಬಿಕೊಂಡು ಕೆರೆ, ಕಾಲುವೆಗಳಿಗೆ ಬಿದ್ದ ಉದಾಹರಣೆಗಳು ಕಣ್ಣಮುಂದಿವೆ.

ದಂಡ ಹೆಚ್ಚಿಸಿದ ಮಾತ್ರಕ್ಕೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ ಎನ್ನಲಾಗದು. ಆದರೆ ದಂಡದ ಭಯಕ್ಕಾದರೂ ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಕೈಗೆ ವಾಹನಗಳನ್ನು ಕೊಡುವುದು ನಿಲ್ಲುತ್ತದೆ. ಅವಧಿ ಮೀರಿದ ಬಸ್‌ಗಳು ಗುಜರಿ ಸೇರುತ್ತವೆ. ಪೊಲೀಸರು ಕಟ್ಟುನಿಟ್ಟಾಗಿ ದಂಡ ವಸೂಲಿ ಮಾಡಿದರೆ ಕಾಯ್ದೆಯ ಉದ್ದೇಶ ಈಡೇರುತ್ತದೆ. ಸರ್ಕಾರವು ರಸ್ತೆಯ ಗುಣಮಟ್ಟದ ಕಡೆಗೂ ಗಮನ ಹರಿಸಬೇಕು. ಅಪಘಾತಗಳಿಗೆ ಕೆಟ್ಟ ರಸ್ತೆಗಳೂ ಕಾರಣವಾಗಿರುವುದನ್ನು ಗಮನಿಸಬೇಕು.

-ಅಶೋಕ ಓಜಿನಹಳ್ಳಿ, ಕೊಪ್ಪಳ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು