ಶನಿವಾರ, ಮಾರ್ಚ್ 25, 2023
26 °C

PV Web Exclusive: ಪ್ರಯಾಣಿಕರ ರಕ್ಷಣೆಗಾಗಿ ಪ್ರಾಣ ತೆತ್ತ ನೀರಜಾ

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

Prajavani

48 ಗಂಟೆಗಳು ಬಾಕಿಯಿದ್ದವು. ಜನ್ಮದಿನದ ಶುಭಾಶಯ ಹಾರೈಸಬೇಕಿತ್ತು. ತಂದೆ-ತಾಯಿ, ಆಪ್ತರು ಬಣ್ಣಬಣ್ಣ ದ ಕೇಕ್, ಕೊಡುಗೆಗಳನ್ನು ತಂದಿದ್ದರು. ಬಾಗಿಲಿನಿಂದ ಕಾಲಿಂಗ್ ಬೆಲ್ ಸದ್ದಿಗಾಗಿ ಕಾತರರಾಗಿದ್ದರು. ಆದರೆ, ಅದಕ್ಕೂ ಮುನ್ನ ರಿಂಗ್ ಆಗಿದ್ದು ಟೆಲಿಫೋನ್. ಆಕೆ ಇನ್ನಿಲ್ಲ ಎಂಬ ಸುದ್ದಿ ಬಂತು. ಎಲ್ಲರೂ ಆಘಾತಕ್ಕೆ ಒಳಗಾದರು. ಎಲ್ಲವೂ ಸ್ತಬ್ಧವಾಯಿತು. ಹೀಗೆ ಎಲ್ಲರಿಂದ ದೂರವಾದವರು ನೀರಜಾ ಬಾನೊತ್. ಫ್ಲೈಟ್ ಅಟೆಂಡೆಂಟ್ ಆಗಿದ್ದ ಅವರು ವಿಮಾನದಲ್ಲಿನ ಪ್ರಯಾಣಿಕರ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ನೀರಜಾ ಬಾನೊತ್ ಜನಿಸಿದ್ದು 7 ಸೆಪ್ಟೆಂಬರ್ 1963. ವೀರಮರಣವನ್ನಪ್ಪಿದ್ದು 5 ಸೆಪ್ಟೆಂಬರ್ 1986.

ನೀರಜಾ ಬಾನೊತ್ ಬರೀ ಫ್ಲೈಟ್ ಅಟೆಂಡೆಂಟ್ ಆಗಿರಲಿಲ್ಲ. ರೂಪದರ್ಶಿ, ಬುದ್ಧಿವಂತೆ ಮತ್ತು ದೇಶಪ್ರೇಮಿಯಾಗಿದ್ದರು. ಎಂಥದ್ದೇ ಸಂದರ್ಭ ತಲೆದೋರಿದರೂ ಶ್ರದ್ಧೆ, ಬದ್ಧತೆಯ ವಿಷಯದಲ್ಲಿ ರಾಜಿಯಾಗಬಾರದು ಎಂಬ ಮನಸ್ಥಿತಿ ಅವರದ್ದು. ಭಯೋತ್ಪಾದಕರು ವಿಮಾನ ಅಪಹರಿಸಿ, ಗುಂಡುಗಳನ್ನು ಹಾರಿಸಿ ಬೆದರಿಕೆ ಒಡ್ಡಿದಾಗಲೂ ನೀರಜಾ ಕೊಂಚವೂ ಅಳಕುಲಿಲ್ಲ. ಭೀತಿ ಅಥವಾ ಗಲಿಬಿಲಿಗೆ ಒಳಗಾಗಲಿಲ್ಲ. ಅವರಿಗೆ ಇದ್ದದ್ದು ಒಂದೇ ಗುರಿ: ಪ್ರಯಾಣಿಕರ ರಕ್ಷಣೆ. ಸುರಕ್ಷಾ ಕಾರ್ಯಾಚರಣೆ.

ಆ 17 ಗಂಟೆಗಳು: ಪ್ಯಾನ್ ಅಮೆರಿಕನ್ ವರ್ಲ್ಡ್ ಏರ್‌ವೇಸ್‌ ಸಂಸ್ಥೆಯ ಪ್ಯಾನ್ ಆ್ಯಮ್ 73 ವಿಮಾನವು 1986ರ ಸೆಪ್ಟೆಂಬರ್ 5ರಂದು ಮುಂಬೈಯಿಂದ ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸಿತು. ವೇಳಾಪಟ್ಟಿ ಪ್ರಕಾರ, ವಿಮಾನವು ಪಾಕಿಸ್ತಾನದ ಕರಾಚಿ ಮತ್ತು ಪಶ್ಚಿಮ ಜರ್ಮನಿಯ ಪ್ರಾಂಕ್‌ಫರ್ಟ್‌ನಲ್ಲಿ ನಿಲುಗಡೆ ಆಗಬೇಕಿತ್ತು. ಕರಾಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಿಕೊಳ್ಳಲು ವಿಮಾನ ನಿಲುಗಡೆ ಆಗಿರುವುದನ್ನು ಖಚಿತ ಪಡಿಸಿಕೊಂಡ ಪ್ಯಾಲಿಸ್ಟೀನ್‌ನ ಅಬು ನಿಡಲ್ ಸಂಘಟನೆಯ ಐವರು ಉಗ್ರಗಾಮಿಗಳು ವಿಮಾನದೊಳಗೆ ಹೊಕ್ಕರು. ‘ವಿಮಾನ ಅಪಹರಿಸಲಾಗಿದೆ’ ಎಂದು ಅವರು ಘೋಷಿಸಿದರು. ಸಿಪ್ರಸ್ ಮತ್ತು ಇಸ್ರೇಲ್‌ನಲ್ಲಿ ಬಂಧಿತರಾದ ಪ್ಯಾಲಿಸ್ಟೀನಿಗಳನ್ನು ಕರೆದೊಯ್ಯುವುದು ಅವರ ಉದ್ದೇಶವಾಗಿತ್ತು.

ಭಾರತ, ಅಮೆರಿಕಾ ಸೇರಿದಂತೆ ವಿವಿಧ ದೇಶಗಳ 360 ಪ್ರಯಾಣಿಕರು ಮತ್ತು ಸಂಸ್ಥೆಯ13 ಸಿಬ್ಬಂದಿ ವಿಮಾನದಲ್ಲಿ ಇದ್ದರು. ಶಸ್ತ್ರಾಸ್ತ್ರಗಳನ್ನು ತೋರಿಸಿ, ಗುಂಡಿಕ್ಕುವುದಾಗಿ ಉಗ್ರಗಾಮಿಗಳು ಬೆದರಿಸಿದಾಗ ಪ್ರಯಾಣಿಕರು ಆತಂಕಗೊಂಡರು. ಪರಿಸ್ಥಿತಿ ಅರಿತ ನೀರಜಾ ಬಾನೊತ್ ತಕ್ಷಣವೇ ಜಾಣ್ಮೆ ಪ್ರದರ್ಶಿಸಿ, ‘ವಿಮಾನ ಹೈಜಾಕ್‌ ಆಗಿದೆ’ ಎಂದು ಕಾಕ್‌ಪಿಟ್‌ನಲ್ಲಿದ್ದ ಇಬ್ಬರು ಪೈಲಟ್‌ ಮತ್ತು ಒಬ್ಬ ತಾಂತ್ರಿಕ ಸಿಬ್ಬಂದಿಗೆ ವಿಷಯ ಮುಟ್ಟಿಸಿದರು. ಮೂವರು ತಕ್ಷಣವೇ ಅಲ್ಲಿಂದ ಪರಾರಿಯಾದರು. ವಿಮಾನ ಮುಂದೆ ಪ್ರಯಾಣ ಬೆಳೆಸದಂತೆ ತಡೆದ ನೀರಜಾ ನಿರಂತರವಾಗಿ ಪ್ರಯಾಣಿಕರಲ್ಲಿ ಧೈರ್ಯ ತುಂಬುವ ಕಾರ್ಯ ಮಾಡಿದರು. ಉಗ್ರಗಾಮಿ ಪಿಸ್ತೂಲ್‌, ಗನ್‌ಗಳನ್ನು ಹಿಡಿದು ಬೆದರಿಸಿದರೂ ಪ್ರಯಾಣಿಕರಿಗೆ ನೀರು ಪೂರೈಸುವ, ಸ್ಥೈರ್ಯ ನೀಡುವ ಕಾಯಕದಲ್ಲಿ ನಿರತರಾದರು.

ವಿಮಾನ ಹಾರುವುದಿಲ್ಲ ಎಂದು ಗೊತ್ತಾದ ತಕ್ಷಣವೇ ಉಗ್ರಗಾಮಿಗಳು ಅಮೆರಿಕದ ಪ್ರಯಾಣಿಕನೊಬ್ಬನನ್ನು ಎಳೆದು ತಂದು ಗುಂಡಿಕ್ಕಿದರು. ‘ಪೈಲಟ್‌ಗಳ ಶೀಘ್ರವೇ ವ್ಯವಸ್ಥೆ ಮಾಡಬೇಕು. ವಿಮಾನವನ್ನು ಪ್ರಯಾಣಿಸಲು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ, ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ’ ಎಂದು ಬೆದರಿಕೆ ಒಡ್ಡಿದರು. ಆದರೆ, ಪ್ಯಾನ್‌ ಆ್ಯಮ್‌ ಸಂಸ್ಥೆ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು, ಸರ್ಕಾರದಿಂದ ಸಮರ್ಪಕ ಸ್ಪಂದನೆ ದೊರೆಯದಿದ್ದಾಗ, ಉಗ್ರಗಾಮಿಗಳು ತಾಳ್ಮೆ ಕಳೆದುಕೊಂಡರು. ಪ್ರಯಾಣಿಕರನ್ನು ಒಬ್ಬೊಬ್ಬರಾಗಿ ಕೊಲ್ಲುತ್ತಾ ಹೋದಾಗಲೇ, ಸರ್ಕಾರವು ತಮ್ಮ ಮಾತಿಗೆ ಶರಣಾಗುತ್ತದೆ ಎಂದು ನಿರ್ಧರಿಸಿದರು.

‘ಎಲ್ಲರ ಪಾಸ್‌ಪೋರ್ಟ್‌ಗಳನ್ನು ಸಂಗ್ರಹಿಸಿ. ಅಮೆರಿಕನ್ ಪಾಸ್‌ಪೋರ್ಟ್‌ಗಳನ್ನು ನಮಗೆ ನೀಡಿ’ ಎಂದು ಉಗ್ರಗಾಮಿಗಳು ನೀರಜಾ ಮತ್ತು ಸಿಬ್ಬಂದಿಗೆ ತಿಳಿಸಿದರು. ಅಮರಿಕನ್‌ ಪ್ರಯಾಣಿಕರನ್ನು ಕೊಲ್ಲುವ ಕುತಂತ್ರವನ್ನು ಅರಿತ ನೀರಜಾ ತಮ್ಮ ಸಿಬ್ಬಂದಿಗೆ ‘ಅಮೆರಿಕನ್‌ ಪಾಸ್‌ಪೋರ್ಟ್‌ಗಳನ್ನು ಸೀಟಿನಡಿ ಇಲ್ಲವೇ ಕಸದ ಡಬ್ಬಿಯಲ್ಲಿ ಹಾಕಿ’ ಎಂದು ಸಂಜ್ಞೆಯಲ್ಲೇ ಸೂಚಿಸಿದರು. ಸಂಗ್ರಹಗೊಂಡ ಪಾಸ್‌ಪೋರ್ಟ್‌ಗಳನ್ನು ತಡಕಾಡಿ, ಒಂದು ಕೂಡ ಅಮೆರಿಕನ್ ಪಾಸ್‌ಪೋರ್ಟ್‌ ಸಿಗದಿದ್ದಾಗ ಉಗ್ರಗಾಮಿಗಳಿಗೆ ಇನ್ನಷ್ಟು ಸಿಟ್ಟು ಬಂತು. ಏಕಕಾಲಕ್ಕೆ ಎಲ್ಲರನ್ನೂ ಕೊಂದು ಬಿಡಬೇಕೆಂದು ಪ್ರಯಾಣಿಕರನ್ನು ಒಂದೇ ಕಡೆ ಸೇರುವಂತೆ ಮಾಡಿದರು. ಸ್ಥಳದ ಕೊರತೆ ಮಧ್ಯೆಯೇ ಪ್ರಯಾಣಿಕರನ್ನು ಅಲ್ಲಲ್ಲಿ ಕೂರುವಂತೆ ಬಲವಂತ ಮಾಡಿದರು. ‌

ಈ ಎಲ್ಲಾ ಪ್ರಕ್ರಿಯೆ ನಡೆಯುವಾಗಲೇ ನೀರಜಾ ಒಬ್ಬ ಪ್ರಯಾಣಿಕನ ಮೂಲಕ ವಿಮಾನದ ತುರ್ತು ದ್ವಾರ ತೆಗೆಯುವಲ್ಲಿ ಯಶಸ್ವಿಯಾದರು. ತಕ್ಷಣವೇ ಒಬ್ಬೊಬ್ಬ ಪ್ರಯಾಣಿಕರನ್ನು ಅಲ್ಲಿಂದ ಸುರಕ್ಷಿತವಾಗಿ ಪಾರು ಮಾಡುವ ಕಾರ್ಯದಲ್ಲಿ ನೀರಜಾ ತೊಡಗಿದರು.ಇದೇ ವೇಳೆಗೆ ವಿಮಾನದ ಎಂಜಿನ್‌ ಸ್ತಬ್ಧಗೊಂಡಿತು. ದೀಪಗಳು ಬಂದ್ ಆದವು. ಕತ್ತಲಮಯಗೊಂಡಿತು. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಪಾಕಿಸ್ತಾನದ ಸರ್ಕಾರವು ಸೇನಾ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಪ್ಪಾಗಿ ಅರ್ಥೈಸಿಕೊಂಡ ಉಗ್ರಗಾಮಿಗಳು ಒಂದೇ ಸಮನೆ ಪ್ರಯಾಣಿಕರ ಮೇಲೆ ಗುಂಡಿನ ದಾಳಿ ನಡೆಸಿದರು. ಅಷ್ಟರಲ್ಲಿ ನೀರಜಾ ಕೆಲವಷ್ಟು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ್ದರು.

ವಿಮಾನದಲ್ಲಿ ಇನ್ನೂ ಪ್ರಯಾಣಿಕರು ಉಳಿದಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತ ಬಂದ ನೀರಜಾಗೆ ಮೂವರು ಅಮೆರಿಕನ್ ಮಕ್ಕಳು ಅಡಗಿ ಕೂತಿರುವುದು ಕಾಣಿಸಿತು. ಅವರನ್ನು ತುರ್ತು ದ್ವಾರಕ್ಕೆ ಕರೆ ತಂದು ಇಳಿಸುವಾಗ, ಉಗ್ರನೊಬ್ಬ ಗುಂಡಿನ ದಾಳಿ ನಡೆಸಿದ. ಮೂವರು ಮಕ್ಕಳಿಗೆ ಆಸರೆಯಾಗಿ ನಿಂತ ನೀರಜಾಗೆ ಗುಂಡು ತಗುಲಿತು. ಮಕ್ಕಳ ಪ್ರಾಣ ಉಳಿಯಿತು. ಆದರೆ, ನೀರಜಾಗೆ ಬದುಕುಳಿಯಲಿಲ್ಲ. ಅಂದಿನ ಗುಂಡಿನ ದಾಳಿಯಲ್ಲಿ 12 ಭಾರತೀಯರು, ಇಬ್ಬರು ಅಮೆರಿಕನ್ನರು ಪ್ರಾಣ ಕಳೆದುಕೊಂಡರು. 43ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಸತತ 17 ಗಂಟೆಯವರೆಗೆ ವಿಮಾನವು ಉಗ್ರಗಾಮಿಗಳ ವಶದಲ್ಲಿತ್ತು. ಈ ಅವಧಿಯಲ್ಲಿ ನೀರಜಾ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರಿಸ್ಥಿತಿ ನಿಭಾಯಿಸಿದರು.

ಶಿಕ್ಷೆ: ಬಂಧಿತರಾದ ಐವರು ಉಗ್ರಗಾಮಿಗಳನ್ನು ಮೊದಲಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಲಾಯಿತು. ನಂತರ ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಯಿತು. ಐವರಲ್ಲಿ ಒಬ್ಬನನ್ನು ಅಮೆರಿಕಗೆ ಕಳುಹಿಸಿ, 160 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ನಾಲ್ವರು ಉಗ್ರಗಾಮಿಗಳು ಪಾಕಿಸ್ತಾನ್‌ ಜೈಲುಗಳಿಂದ ಪರಾರಿಯಾದರು ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿದವು.

ಪ್ರಶಸ್ತಿ: ನೀರಜಾ ಬಾನೊತ್‌ ಸಾಹಸಕ್ಕೆ ಗೌರವವಾರ್ಥವಾಗಿ ಅಂದಿನ ಕೇಂದ್ರ ಸರ್ಕಾರವು ದೇಶದ ಅತ್ಯುನ್ನತ ‘ಅಶೋಕ ಚಕ್ರ’ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿತು. ಈ ಪ್ರಶಸ್ತಿಗೆ ಪಾತ್ರವಾದ ನೀರಜಾ (22 ವರ್ಷ) ಅತ್ಯಂತ ಕಿರಿಯ ಭಾರತೀಯರು. ಪಾಕಿಸ್ತಾನ ಸರ್ಕಾರವು ‘ತಮಘಾ–ಇ–ಇನ್ಸಾನಿಯತ್’ ಪ್ರಶಸ್ತಿ ನೀಡಿತು.‌ ಅಮೆರಿಕ ಕೂಡ ಗೌರವಿಸಿತು. ಮೂರು ದೇಶಗಳಿಂದ ಶಾಂತಿ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಅವರಾಗಿದ್ದಾರೆ.

ನೀರಜಾ ಕುಟುಂಬ ವಿವರ: ಪಂಜಾಬ್‌ನ ಚಂಡೀಘಡದಲ್ಲಿ ಇಂಗ್ಲಿಷ್ ಪತ್ರಿಕೆಯ ಪತ್ರಕರ್ತ ಹರೀಶ ಬಾನೊತ್ ಮತ್ತು ರಮಾ ಬಾನೊತ್‌ ಅವರ ಪುತ್ರಿಯಾಗಿ ಜನಿಸಿದ ನೀರಜಾಗೆ ಅಖಿಲ್ ಮತ್ತು ಅನೀಶ್ ಎಂಬ ಇಬ್ಬರು ಸಹೋದರರು ಇದ್ದರು. ಪಂಜಾಬ್‌ನ ಸೇಕ್ರೆಡ್ ಹಾರ್ಟ್‌ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಶಿಕ್ಷಣ ಪೂರೈಸಿದ ನೀರಜಾ ಕುಟುಂಬದೊಂದಿಗೆ ಮುಂಬೈಗೆ ಬಂದು ನೆಲೆಸಿದರು. ಅಲ್ಲಿ ಬಾಂಬೆ ಸ್ಕಾಟಿಶ್ ಶಾಲೆ ಮತ್ತು ಸೇಂಟ್‌ ಕ್ಸೇವಿಯರ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರೆಸಿದರು.

ನಟ ರಾಜೇಶ್ ಖನ್ನಾ ಅವರ ದೊಡ್ಡ ಅಭಿಮಾನಿಯಾಗಿದ್ದ ನೀರಜಾ ಕ್ರಮೇಣ ಜಾಹೀರಾತಿನಲ್ಲಿ ಅಭಿನಯಿಸಿತೊಡಗಿದರು. ಮಾಡೆಲಿಂಗ್‌ನಲ್ಲಿ ಖ್ಯಾತಿ ಗಳಿಸಿದರು. 19ನೇ ವಯಸ್ಸಿನಲ್ಲೇ ವಿವಾಹವಾಗಿದ್ದ ಅವರಿಗೆ ನೆಮ್ಮದಿ ದೊರೆಯಲಿಲ್ಲ.  ಹೀಗಾಗಿ ವೈವಾಹಿಕ ಸಂಬಂಧ ತೊರೆದು ತಮ್ಮ ಕರಿಯರ್‌ನತ್ತ ಆಸಕ್ತಿ ತೋರಿದರು. ಫ್ಲೈಟ್‌ ಅಟೆಂಡೆಂಟ್ ಆಗಿ ನೇಮಕಗೊಂಡರು.

ನೀರಜಾ ಬಾನೊತ್ ಜೀವನ ಆಧರಿಸಿದ ‘ನೀರಜಾ’ ಹಿಂದಿ ಚಲನಚಿತ್ರವು 2016ರಲ್ಲಿ ತೆಕಂಡಿತು. ರಾಮ ಮಾಧ್ವಾನಿ ನಿರ್ದೇಶನದ ಈ ಚಿತ್ರದಲ್ಲಿ ಸೋನಂ ಕಪೂರ್ ‘ನೀರಜಾ’ ಪಾತ್ರಧಾರಿಯಾಗಿ ಅಭಿನಯಿಸಿದರು. ನೀರಜಾ ಹೆಸರಿನಲ್ಲಿ ಫೇಸ್‌ಬುಕ್‌ ಪೇಜ್‌ ಇದ್ದು, ಕಷ್ಟದಲ್ಲಿದ್ದವರಿಗೆ ನೆರವು ನೀಡಲಾಗುತ್ತಿದೆ. ಅವರ ಹೆಸರಿನಲ್ಲಿ ಸಾಹಸ ವ್ಯಕ್ತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ವಿಮಾನಯಾನ ಕ್ಷೇತ್ರದಲ್ಲಿ ಕರಿಯರ್ ಮಾಡಲು ಇಚ್ಛಿಸುವ ಉತ್ಸಾಹಿಗಳಿಗೆ ನೀರಜಾ ಅವರ ಕಥನ ಹೇಳಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು