ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆಯಿಂದ ಬೆಳೆದ, ಗಾಂಭೀರ್ಯ ಬಿಡದ ಮುತ್ಸದ್ದಿ ಪ್ರಣವ್ ಮುಖರ್ಜಿ

Last Updated 31 ಆಗಸ್ಟ್ 2020, 14:45 IST
ಅಕ್ಷರ ಗಾತ್ರ

ಪ್ರಣವ್ ಮುಖರ್ಜಿ ತಮ್ಮ ಸಾರ್ವಜನಿಕ ಬದುಕಿನ ಅನುಭವವನ್ನು ಮೂರು ಭಾಗಗಳಾಗಿ ವಿಂಗಡಿಸಿ ಕೃತಿಯ ರೂಪದಲ್ಲಿ ಪ್ರಕಟಿಸಿದ್ದರು. ಮೊದಲ ಭಾಗ ‘ಡ್ರಮಾಟಿಕ್ ಡೆಕೆಡ್’ ಮುನ್ನುಡಿಯಲ್ಲಿ, ಇದು ಪಶ್ಚಿಮ ಬಂಗಾಳದ ದೂರದ ಹಳ್ಳಿಯ ಮಿನುಗುವ ದೀಪದ ಬೆಳಕಿನಿಂದ ಭಾರತದ ರಾಜಧಾನಿಯ ವೈಭವದ ತೂಗು ದೀಪಗಳ ಬೆಳಕಿನತ್ತ ನಡೆದ ಹುಡುಗನ ಕಥೆ ಎಂದಿದ್ದರು. ಪ್ರಣವ್ ಮುಖರ್ಜಿಯವರ ಬದುಕನ್ನು ಅವಲೋಕಿಸಿದರೆ ಭಾರತದ ಐದು ದಶಕಗಳ ರಾಜಕೀಯ ಚಿತ್ರಣ ಸಿಗುತ್ತದೆ. ಪ್ರಣವ್ ಜನಸಮೂಹದ ನಾಯಕರಾಗಿರಲಿಲ್ಲ, ಮತಗಳನ್ನು ಧೃವೀಕರಿಸಬಲ್ಲ ಶಕ್ತಿ ಅವರಿಗಿರಲಿಲ್ಲ. ಆದರೆ ಅನುಭವ ಮತ್ತು ಚಾಣಾಕ್ಷತನದ ಕಾರಣದಿಂದ ಅವರು ಭಾರತದ ಆಡಳಿತ ಶಕ್ತಿ ಕೇಂದ್ರಕ್ಕೆ ಬೇಕಾದವರಾಗಿದ್ದರು.

1969ರಲ್ಲಿ ಮೊದಲ ಬಾರಿ ರಾಜ್ಯಸಭೆಗೆ ಆಯ್ಕೆಯಾದಾಗ ಪ್ರಣವ್ ಮುಖರ್ಜಿ ಅವರ ವಯಸ್ಸು ಕೇವಲ 34. ಮುಖರ್ಜಿ ಅವರ ವಾಕ್ಚಾತುರ್ಯ ಕಾಂಗ್ರೆಸ್ ಅಧಿನಾಯಕಿ ಇಂದಿರಾರ ಗಮನ ಸೆಳೆದಿತ್ತು. ಪ್ರಣವ್ ಇಂದಿರಾರ ಆಪ್ತವಲಯದಲ್ಲಿ ಜಾಗ ಪಡೆದರು. ಪ್ರಣವ್ ಸತತವಾಗಿ ರಾಜ್ಯಸಭೆಗೆ ಆಯ್ಕೆಯಾಗುವಂತೆ ಇಂದಿರಾ ನೋಡಿಕೊಂಡರು. ಬಾಂಗ್ಲಾ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಪ್ರಣವ್ ಅವರನ್ನು ಇಂಗ್ಲೆಂಡ್ ಮತ್ತು ಜರ್ಮನಿಗೆ ಭಾರತದ ಪರ ಅಭಿಪ್ರಾಯ ರೂಪಿಸಲು ಇಂದಿರಾ ಕಳುಹಿಸಿದ್ದರು. ನಂತರ 1973ರಲ್ಲಿ ಕೈಗಾರಿಕಾ ಅಭಿವೃದ್ಧಿ ಖಾತೆಯ ಸಹಾಯಕ ಸಚಿವ ಸ್ಥಾನ, ನಂತರ ನೌಕಾಯಾನ ಮತ್ತು ಸಾರಿಗೆ, ಹಣಕಾಸು ಖಾತೆ ಸಹಾಯಕ ಸಚಿವ ಪದವಿ, ಕಂದಾಯ ಮತ್ತು ಬ್ಯಾಂಕಿಂಗ್ ಖಾತೆ ಹೀಗೆ ಪ್ರಣವ್ ಮುಖರ್ಜಿ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಒಂದೊಂದೇ ಮೆಟ್ಟಿಲೇರುತ್ತಾ ಬಂದರು.

1984ರ ಹೊತ್ತಿಗೆ ಇಂದಿರಾ ಸಂಪುಟದಲ್ಲಿ ಇಂದಿರಾರ ನಂತರದ ಸ್ಥಾನದಲ್ಲಿ ಪ್ರಣವ್ ಮುಖರ್ಜಿ ಇದ್ದರು. ನೆಹರು ನಂತರ ಯಾರು? ಎಂಬ ಪ್ರಶ್ನೆಯಂತೆಯೇ ಇಂದಿರಾ ನಂತರ ಯಾರು? ಎಂಬ ಪ್ರಶ್ನೆ ಎದ್ದಿತ್ತು. ಪ್ರಣವ್ ಮುಖರ್ಜಿ ಕೊಂಚ ಉತ್ಸಾಹ ತೋರಿ, ಪತ್ರಕರ್ತರು ಈ ಪ್ರಶ್ನೆ ಮುಂದಿಟ್ಟಾಗ ‘ನಾನಿದ್ದೇನಲ್ಲ’ ಎಂಬ ಧಾಟಿಯಲ್ಲಿ ಉತ್ತರಿಸಿದ್ದರು. ಅಲ್ಲಿಂದ ಪ್ರಣವ್ ಒಂದು ವರ್ಗದ ರಾಜಕಾರಣಿಗಳ ವಿರೋಧ ಎದುರಿಸಬೇಕಾಯಿತು. ರಾಜೀವ್ ಗಾಂಧಿ ಪರ ಹಿರಿಯ ಕಾಂಗ್ರೆಸ್ಸಿಗರ ಅಭಿಪ್ರಾಯ ರೂಪಿಸುವ ಕೆಲಸವನ್ನು ಅರುಣ್ ನೆಹರು ಮಾಡಿದರು. ಇಂದಿರಾ ಮರಣಾ ನಂತರ ತಕ್ಷಣವೇ ಸರ್ಕಾರಕ್ಕೊಬ್ಬ ಸಾರಥಿಯನ್ನು ನೇಮಿಸುವ ಪ್ರಸ್ತಾಪಕ್ಕೆ ಅಭಿಪ್ರಾಯ ಪಡೆಯಲು ಪಿ.ಸಿ ಅಲೆಕ್ಸಾಂಡರ್ ಮುಂದಾದಾಗ ಎಲ್ಲರೂ ಒಕ್ಕೊರಲಿನಿಂದ ರಾಜೀವ್ ಎಂದರು. ಪ್ರಣವ್ ಪ್ರಧಾನಿ ಪಟ್ಟದಿಂದ ದೂರ ಉಳಿಯಬೇಕಾಯಿತು.

ರಾಜೀವ್ ಗಾಂಧಿ ಪ್ರಧಾನಿಯಾದಾಗ ಅವರ ಜೊತೆಯಲ್ಲೇ ಪ್ರಣವ್ ಮುಖರ್ಜಿ, ಪಿ.ವಿ ನರಸಿಂಹರಾವ್ ಮತ್ತು ಬೂಟಾ ಸಿಂಗ್ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ಆಡಳಿತದಲ್ಲಿ ಅನನುಭವಿಯಾಗಿದ್ದ ರಾಜೀವ್ ಗಾಂಧಿ ಅವರಿಗೆ ಪ್ರಣವ್ ಮತ್ತು ಪಿವಿಎನ್ ಅವರ ರಾಜಕೀಯ ಅನುಭವ ಅಗತ್ಯವಾಗಿತ್ತು. ಸಿಖ್ಖರ ಮೇಲಿನ ದಾಳಿಗೆ ಮುಲಾಮು ಹಚ್ಚಲು ಬೂಟಾ ಸಿಂಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಪ್ರಣವ್ ಮುಖರ್ಜಿ ಪತ್ರಕರ್ತರ ಮುಂದೆ ’ನಾನಿದ್ದೇನೆ’ ಎಂದಿದ್ದನ್ನು ರಾಜೀವ್ ಗಾಂಧಿ ಮರೆಯುವುದು ಸಾಧ್ಯವಾಗಲಿಲ್ಲ. ತಮ್ಮ ಪ್ರತಿಸ್ಪರ್ಧಿಯಂತೆಯೇ ಪ್ರಣವ್ ಅವರನ್ನು ನೋಡಿದರು. 84ರ ಚುನಾವಣೆ ಬಳಿಕ ಪ್ರಣವ್ ಅವರನ್ನು ಸಂಪುಟದಿಂದ ಹೊರಗಿಟ್ಟರು. ಒಂದು ಹಂತದಲ್ಲಿ ಕೇಂದ್ರ ಸಂಪುಟದ ಎರಡನೆಯ ಸ್ಥಾನದಲ್ಲಿದ್ದ ನಾಯಕನನ್ನು, ಪಶ್ಚಿಮ ಬಂಗಾಳದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳಲು ಕಳುಹಿಸಲಾಯಿತು. ನಂತರ ಪಕ್ಷದಿಂದ ಉಚ್ಛಾಟಿಸಲಾಯಿತು. ಆದರೆ ಪಕ್ಷದ ವಿರುದ್ಧವಾಗಲಿ, ರಾಜೀವ್ ಗಾಂಧಿ ವಿರುದ್ಧವಾಗಲೀ ಹಗುರವಾಗಿ ಪ್ರಣವ್ ಮಾತನಾಡಲಿಲ್ಲ. ತಮ್ಮದೇ ಪಕ್ಷ ಕಟ್ಟುವ ಪ್ರಯತ್ನ ಮಾಡಿ ಸೋತರು.

ಅಲ್ಲಿಗೆ ಪ್ರಣವ್ ಮುಖರ್ಜಿ ರಾಜಕೀಯ ಅಧ್ಯಾಯ ಮುಗಿಯಬೇಕಿತ್ತು. ಆದರೆ ನಂತರ ಆದ ರಾಜಕೀಯ ಬೆಳವಣಿಗೆಗಳು ಹೊಸ ಸರ್ಕಾರದ ರಚನೆಗೆ, ನಾಯಕರ ಉದಯಕ್ಕೆ ಕಾರಣವಾಯಿತು. ಮುಖರ್ಜಿ ಅವರನ್ನು ಸ್ವತಃ ರಾಜೀವ್ ಗಾಂಧಿ ಕಾಂಗ್ರೆಸ್ಸಿಗೆ ಆಹ್ವಾನಿಸಿದರು. ರಾಜೀವ್ ಗಾಂಧಿ ತರುವಾಯ ಪ್ರಧಾನಿ ಗಾದಿಯಲ್ಲಿ ಕುಳಿತ ಪಿ.ವಿ ನರಸಿಂಹರಾವ್ ಅವರಿಗೆ ಮುಖರ್ಜಿ ಅವರ ಸಾಮರ್ಥ್ಯದ ಅರಿವಿತ್ತು. 1993ರಲ್ಲಿ ಪ್ರಣವ್ ರಾಜ್ಯಸಭೆಗೆ ಆಯ್ಕೆಯಾಗುವಂತೆ ನೋಡಿಕೊಂಡರು. ವಿದೇಶಾಂಗ ಖಾತೆಯ ಜವಾಬ್ದಾರಿ ಇತ್ತರು. 1998ರಲ್ಲಿ ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮನವೊಲಿಸಿದವರಲ್ಲಿ ಪ್ರಣವ್ ಮುಖರ್ಜಿ ಪ್ರಮುಖರು. 2004ರಲ್ಲಿ ಕಾಂಗ್ರೆಸ್ ಮಿತ್ರ ಪಕ್ಷಗಳೊಡಗೂಡಿ ಸರ್ಕಾರ ರಚಿಸುವ ಸಂದರ್ಭ ಬಂದಾಗ ಬಹುಪಾಲು ಕಾಂಗ್ರೆಸ್ ನಾಯಕರು ಸೋನಿಯಾ ಹೆಸರನ್ನು ಪ್ರಧಾನಿ ಹುದ್ದೆಗೆ ಸೂಚಿಸಿದರಾದರೂ, ಅದರ ಜೊತೆಗೆ ಪ್ರಣವ್ ಮುಖರ್ಜಿ ಅವರ ಹೆಸರೂ ಕೇಳಿಬಂದಿತ್ತು. ಕೊನೆಗೆ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿಸಿದರು. ತಾವು ರಿಸರ್ವ್ ಬ್ಯಾಂಕ್ ಗೌರ್ನರ್ ಆಗಿ ಆಯ್ಕೆ ಮಾಡಿದ್ದ ವ್ಯಕ್ತಿಯ ಸಂಪುಟದಲ್ಲಿ ಪ್ರಣವ್ ಮುಖರ್ಜಿ ಸಚಿವರಾದರು! ವಿದೇಶಾಂಗ, ರಕ್ಷಣಾ ಖಾತೆ, ವಿತ್ತ ಖಾತೆಯ ಜವಾಬ್ದಾರಿಗಳನ್ನು ನಿರ್ವಹಿಸಿದರು. ನಂತರ ಮತ್ತೊಮ್ಮೆ ಪ್ರಣವ್ ಹೆಸರು ಪ್ರಧಾನಿ ಹುದ್ದೆಗೆ ಬರುವ ನಿರೀಕ್ಷೇ ಇತ್ತು. ಆಗ ಅವರನ್ನು ರಾಷ್ಟ್ರಪತಿ ಭವನದತ್ತ ಕಳುಹಿಸಲಾಯಿತು.

ಹೀಗೆ ಅಪಾರ ರಾಜಕೀಯ ಅನುಭವ ಮತ್ತು ಅರ್ಹತೆಯಿದ್ದಾಗಿಯೂ ಪ್ರಧಾನಿ ಪಟ್ಟ ಪ್ರಣವ್ ಅವರಿಗೆ ಏಕೆ ಎಟುಕಲಿಲ್ಲ ಎಂಬುದಕ್ಕೆ, ಅವರು ಜನಸಮೂಹದ ನಾಯಕರಾಗಿರಲಿಲ್ಲ. ಕೈಗೊಂಬೆಯಾಗಬಲ್ಲ ವ್ಯಕ್ತಿತ್ವ ಪ್ರಣವ್ ಅವರದ್ದಾಗಿರಲಿಲ್ಲ. ಒಂದು ಕುಟುಂಬವನ್ನೇ ನೆಚ್ಚಿಕೊಂಡ ಪಕ್ಷದಲ್ಲಿ ಅವರು ರಾಜಕೀಯ ಆಯುಷ್ಯ ಸವೆಸಿದರು ಎಂದು ಕಾರಣಗಳನ್ನು ಪಟ್ಟಿ ಮಾಡಬಹುದು. ಪ್ರಣವ್ ರಾಷ್ಟ್ರಪತಿಯಾದ ಅವಧಿಯಲ್ಲಿ ಹೆಚ್ಚು ಸುದ್ದಿಯಾಗಲಿಲ್ಲ. 2018ರಲ್ಲಿ ನಾಗಪುರಕ್ಕೆ ಭೇಟಿಕೊಟ್ಟು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಚರ್ಚೆಯ ವಿಷಯವಾದರು. ಬಹುಶಃ ಹಿಂದೆಂದೂ ಮಾಜಿ ರಾಷ್ಟ್ರಪತಿಯೊಬ್ಬರು ಭಾಗವಹಿಸಿದ್ದ ಕಾರ್ಯಕ್ರಮದ ಕುರಿತು ಈ ಬಗೆಯ ಚರ್ಚೆ ಆಗಿರಲಿಕ್ಕಿಲ್ಲ. ಡಾ.ರಾಜೇಂದ್ರ ಪ್ರಸಾದ್, ಡಾ.ಜಾಕೀರ್ ಹುಸೇನ್, ನೀಲಂ ಸಂಜೀವರೆಡ್ಡಿ, ಅಬ್ದುಲ್ ಕಲಾಂ ಹೀಗೆ ಎಲ್ಲರೂ ಒಂದಿಲ್ಲೊಂದು ಸಂದರ್ಭದಲ್ಲಿ ಆರ್.ಎಸ್.ಎಸ್ ವೇದಿಕೆಯಲ್ಲಿ ಕಾಣಿಸಿಕೊಂಡವರೇ. ಆದರೆ ಮುಖರ್ಜಿಯವರ ನಾಗಪುರ ಭೇಟಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಯಿತು.

ಒಂದು ದಿನ ಮುಂಚಿತವಾಗಿ ನಾಗಪುರಕ್ಕೆ ತೆರಳಿ, ಹೆಡಗೇವಾರ್ ಪುತ್ಥಳಿಗೆ, ಗೋಳ್ವಲ್ಕರ್ ಸಮಾಧಿಗೆ ನಮನ ಸಲ್ಲಿಸಿ ಭಾಷಣದಲ್ಲಿ ತಮ್ಮತನ ತೋರಿದ್ದ ಪ್ರಣವ್, ಸೈದ್ಧಾಂತಿಕ ಭಿನ್ನಾಭಿಪ್ರಾಯವಿರಲಿ, ವೈಯಕ್ತಿಕ ವಿರೋಧವೇ ಇರಲಿ ಅದನ್ನು ಆ ಅಂಗಳದಲ್ಲೇ ಮಂಡಿಸಬೇಕು ಎಂಬುದನ್ನು ತೋರಿಸಿದ್ದರು. ಪ್ರಣವ್ ಮುಖರ್ಜಿ ಆತ್ಮಕತೆಯ ಮೂರನೆಯ ಭಾಗ ’The Coalition Years' ಬಿಡುಗಡೆಯಾದಾಗ, ಪತ್ರಕರ್ತ ರಾಜದೀಪ ಸರದೇಸಾಯಿ ’ಯುಪಿಎ ಅವಧಿಯಲ್ಲಿ ನೀವು ಪ್ರಧಾನಿಯಾಗಬಹುದಿತ್ತು, ತಪ್ಪಿತು. ಹಿರಿಯ ಸಚಿವರಾಗಿದ್ದ ನಿಮಗೆ ಗೃಹ ಖಾತೆಯ ಬದಲು ರಕ್ಷಣಾ ಖಾತೆಯನ್ನು ನೀಡಲಾಯಿತು. ಆಗ ನಿಮ್ಮನ್ನು ಪಕ್ಷ ಉಪೇಕ್ಷಿಸಿತು ಎನಿಸಲಿಲ್ಲವೇ?’ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದರು. ಆಗ ಮುಖರ್ಜಿ ‘ಖಾತೆ ಹಂಚುವ ನಿರ್ಧಾರ ಮತ್ತು ಜವಾಬ್ದಾರಿ ಪ್ರಧಾನಿಯದ್ದಾಗಿರುತ್ತದೆ. ಈ ಖಾತೆ ಬೇಕು, ಆ ಹುದ್ದೆ ಬೇಕು ಎಂದು ಕೇಳುವ ಜಾಯಮಾನ ನನ್ನದಲ್ಲ. ನಾನೊಬ್ಬ ಅನುಭವಿ, ಮಾಗಿದ ರಾಜಕಾರಣಿ’ ಎಂದಿದ್ದರು. ನಿಜ, ತಮಗೆ ಒದಗಿದ ಪದವಿ, ಸ್ಥಾನಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಪ್ರಣವ್ ಮಾಡಿದ್ದರು. ರಾಷ್ಟ್ರಪತಿಯಾಗಿ ಆ ಸ್ಥಾನದ ಘನತೆ ಮುಕ್ಕಾಗದಂತೆ ನೋಡಿಕೊಂಡಿದ್ದರು. ವರ್ಷದ ಹಿಂದೆ ’ಭಾರತ ರತ್ನ’ ಎನಿಸಿಕೊಂಡಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT