ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ತಾಬ್‌ ಅಮೀನ್‌ ಯಾರು? ಇದೊಂದು ಲವ್‌ ಜಿಹಾದ್‌ ಪ್ರಕರಣವೇ?

ದೆಹಲಿ ಶ್ರದ್ಧಾ ವಾಲ್ಕರ್‌ ಹತ್ಯೆ ಪ್ರಕರಣ...
Last Updated 26 ನವೆಂಬರ್ 2022, 11:30 IST
ಅಕ್ಷರ ಗಾತ್ರ

ದೇಶವನ್ನೇ ಬೆಚ್ಚಿಬೀಳಿಸಿದ ಶ್ರದ್ಧಾ ವಾಲ್ಕರ್‌ ಕೊಲೆ ಪ್ರಕರಣ ಸದ್ಯ ಎಲ್ಲೆಡೆ ಚರ್ಚೆಯಾಗುತ್ತಿದೆ. ಲಿವ್‌ ಇನ್‌ ಸಂಬಂಧದಲ್ಲಿದ್ದ ತನ್ನ ಪ್ರೇಯಸಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದಷ್ಟು ಕ್ರೂರವಾಗಿ ಕೊಲೆಗೈದು, ದೇಹವನ್ನು 35 ತುಂಡಾಗಿ ಕತ್ತರಿಸಿದ ಅಫ್ತಾಬ್‌ ಅಮೀನ್‌ ಕರಾಳ ಮುಖವೀಗ ಬಹಿರಂಗಗೊಳ್ಳುತ್ತಿದೆ.

ಅಫ್ತಾಬ್‌ ಅಮೀನ್‌ ಮೂಲತಃ ಮುಂಬೈನ ವಸೈನವನು. ಫುಡ್‌ ಬ್ಲಾಗರ್‌ ಎನಿಸಿಕೊಂಡಿರುವ ಈತ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ. ಇನ್‌ಸ್ಟಾಗ್ರಾಂನಲ್ಲಿ 28,000 ಅನುಯಾಯಿಗಳನ್ನು ಹೊಂದಿದ್ದಾನೆ.

ವಸೈನ ಸೆಂಟ್‌ ಫ್ರಾನ್ಸಿಸ್‌ ಹೈಸ್ಕೂಲ್‌ನಲ್ಲಿ ಪ್ರೌಢಶಿಕ್ಷಣ ಮುಗಿಸಿ, ಎಲ್‌ಎಸ್‌ ರಹೇಜ ಕಾಲೇಜಿನಿಂದ ಪದವಿ ಪಡೆದಿದ್ದಾನೆ. ಬಳಿಕ ಮುಂಬೈನಲ್ಲಿ ಕಾಲ್‌ಸೆಂಟರ್‌ನಲ್ಲಿ ಕೆಲಸ ಪ್ರಾರಂಭಿಸಿದ್ದ.

ಹುಡುಗಿಯರನ್ನು ಆಕರ್ಷಿಸುತ್ತಿದ್ದ:
ಆತನ ಇನ್‌ಸ್ಟಾಗ್ರಾಂ ಖಾತೆ ಆಹಾರ ಮತ್ತು ಆಹಾರದ ಪೋಟೊಗಳಿಗೆ ಮೀಸಲಾಗಿದೆ. ರೆಸ್ಟೊರೆಂಟ್‌ಗಳನ್ನು ವಿಮರ್ಶೆ ಮಾಡುತ್ತ ಸಾಮಾಜಿಕ ಜಾಲತಾಣದಲ್ಲಿ ತುಸು ಜನಪ್ರಿಯನಾಗಿದ್ದ. ಇದರ ಜೊತೆಗೆ ಇವತ್ತಿನ ತಲೆಮಾರಿನ ಹುಡುಗಿಯರನ್ನು ಆಕರ್ಷಿಸಲು ಬೇಕಾದ ಜೀವನಶೈಲಿಯನ್ನು ರೂಪಿಸಿಕೊಂಡಿದ್ದ. ಆತನ ಇನ್‌ಸ್ಟಾದಲ್ಲಿ ಬಾಡಿಬಿಲ್ಡಿಂಗ್‌ ಚಿತ್ರಗಳನ್ನು ಕಾಣಬಹುದು. ಮನುಷ್ಯರನ್ನೇ ವಿಕೃತವಾಗಿ ಹತ್ಯೆ ಮಾಡುವ ಕ್ರೂರಿ, ತನ್ನನ್ನು ತಾನು ಪ್ರಾಣಿಪ್ರಿಯನೆಂದು ಬಿಂಬಿಸಿಕೊಂಡಿದ್ದ. ಫುಟ್ಬಾಲ್‌ ಅಭಿಮಾನಿ ಅವತಾರದಲ್ಲಿಯೂ ಕಾಣಿಸಿಕೊಂಡಿದ್ದ.

ತನಗೆ ತುಂಬ ಸಾಮಾಜಿಕ ಕಾಳಜಿ ಇದೆ ಎಂಬ ರೀತಿಯ ಪೋಸ್ಟ್‌ಗಳನ್ನು ಹಾಕುತ್ತಿದ್ದ. ಎಲ್‌ಜಿಬಿಟಿಯನ್ನು ಬೆಂಬಲಿಸಿ ಪೋಸ್ಟ್‌ ಮಾಡಿದ್ದ. ಹುಡುಗಿಯರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಚಿತ್ರಗಳನ್ನು, ಬರಹಗಳನ್ನು ಹಂಚಿಕೊಳ್ಳುತ್ತಿದ್ದ. ಇದೆಲ್ಲ ಕಾರಣದಿಂದ ಆತ ಬಹುಬೇಗ ಹುಡುಗಿಯರ ಸ್ನೇಹ ಬಳಸಿ, ಸಲುಗೆ ಹೊಂದುತ್ತಿದ್ದ.

ಡೇಟಿಂಗ್‌ ಆ್ಯಪ್‌ನಲ್ಲಿ ಗಾಳ:
ಶ್ರದ್ಧಾ ಕೊಲೆಯ ಬಳಿಕ ಅಫ್ತಾಬ್‌ ಕರಾಳ ಮುಖ ಹೊರಜಗತ್ತಿಗೆ ಗೊತ್ತಾಗಿದೆ. ಆದರೆ ಅಫ್ತಾಬ್‌ಗೆ ಸಾಕಷ್ಟು ಹುಡುಗಿಯರ ಸಹವಾಸವಿತ್ತು ಎಂಬುದು ತನಿಖೆಯ ವೇಳೆ ಗೊತ್ತಾಗಿದೆ. ಆತ ಡೇಟಿಂಗ್‌ ಆಪ್‌ಗಳಲ್ಲಿ ಹೊಸ, ಹೊಸ ಹುಡುಗಿಯರಿಗೆ ಗಾಳ ಹಾಕುತ್ತಿದ್ದ. ವರದಿ ಪ್ರಕಾರ ಶ್ರದ್ಧಾ ಕೊಲೆಯ ಬಳಿಕ ಅಫ್ತಾಬ್‌ ‘ಬಂಬ್ಲ್‌’ ಎಂಬ ಡೇಟಿಂಗ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಮತ್ತಷ್ಟು ಹುಡುಗಿಯರ ಸಂಪರ್ಕ ಸಾಧಿಸಿದ್ದ. ಶ್ರದ್ಧಾ ದೇಹ ಕತ್ತರಿಸಿ ತುಂಡಾಗಿಸಿ, ಅದನ್ನು ದಕ್ಷಿಣ ದೆಹಲಿಯ ಮೆಹ್ರೌಲಿಯ ಅಪಾರ್ಟ್‌ಮೆಂಟ್‌ನ ಫ್ರಿಡ್ಜ್‌ನಲ್ಲಿ ಇಟ್ಟಿರುವಾಗಲೇ ಹೊಸ ಗೆಳತಿಯರನ್ನು ಮನೆಗೆ ಕರೆತಂದು ಲೈಂಗಿಕ ಕ್ರಿಯೆ ನಡೆಸಿದ್ದ. ಶ್ರದ್ಧಾಳನ್ನು ಕೂಡ ಈತ 2019ರಲ್ಲಿ ಇದೇ ಆ್ಯಪ್‌ನಲ್ಲಿ ಭೇಟಿಯಾಗಿದ್ದ.

ಡೇಟಿಂಗ್‌ ಆ್ಯಪ್‌ನಲ್ಲಿ ಹುಡುಗಿಯರನ್ನು ಪರಿಚಯ ಮಾಡಿಕೊಂಡು ಸ್ನೇಹ ಸಂಪಾದಿಸುತ್ತಿದ್ದ. ಆಗಾಗ ಭೇಟಿಯಾಗುವ ಮೂಲಕ ಅವರ ನಂಬಿಕೆ ಗಳಿಸುತ್ತಿದ್ದ. ಬಳಿಕ ಪ್ರೀತಿಯ ಹೆಸರಿನಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಬಳಿಕ ಅವರ ಜೊತೆಗಿನ ಸಂಬಂಧ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದ. ಆದರೆ ಶ್ರದ್ಧಾ ಮದುವೆಯಾಗುವಂತೆ ಹಠ ಹಿಡಿದಿದ್ದಳು. ಅವನ ಜೊತೆಗೆ ವಾಸಿಸಲು ಪ್ರಾರಂಭಿಸಿ ದೆಹಲಿಗೆ ಸ್ಥಳಾಂತರಗೊಂಡಿದ್ದಳು.

ದೆಹಲಿಯಲ್ಲಿಯೂ ಆತನ ಖಯಾಲಿ ಮುಂದುವರಿದಿತ್ತು. ಅವನ ಮೇಲೆ ಅನುಮಾನಗೊಂಡ ಆಕೆ ಆತನನ್ನುಟ್ರೇಸ್‌ ಮಾಡಲು ಪ್ರಾರಂಭಿಸಿದ್ದಳು. ಹೀಗಾಗಿಯೇ ಅವರಿಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಕೊನೆಗೆ ಅದು ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ. ಅಫ್ತಾಬ್‌ ಈ ರೀತಿ ಬೇರೆಯವರನ್ನೂ ಕೊಲೆಗೈದಿರಬಹುದೆಂಬ ಅನುಮಾನದಲ್ಲಿ ಪೊಲೀಸರು ಮೆಹ್ರೌಲಿ ಸುತ್ತಲಿನ ಹುಡುಗಿಯರು ಕಾಣೆಯಾದ ಪ್ರಕರಣಗಳ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇದೊಂದು ಲವ್‌ ಜಿಹಾದ್‌ ಪ್ರಕರಣವೆ?
ಶ್ರದ್ಧಾ ಮತ್ತು ಅಫ್ತಾಬ್‌ ಎಂಬ ಹೆಸರು ಕೇಳುತ್ತಿದ್ದಂತೆ ಪ್ರಕರಣಕ್ಕೆ ಲವ್‌ ಜಿಹಾದ್‌ ಬಣ್ಣ ಬಳಿಯಲಾಗಿದೆ. ಆದರೆ ಆ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಪೊಲೀಸರು ನೀಡಿಲ್ಲ. ಯಾವುದೇ ಪ್ರಮುಖಮಾಧ್ಯಮಗಳು ಆ ರೀತಿ ವರದಿ ಮಾಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಇದನ್ನು ಲವ್‌ ಜಿಹಾದ್‌ ಎಂಬ ಬಣ್ಣ ಲೇಪಿಸಿ ಹಂಚಲಾಗುತ್ತಿದೆ.

ಅಫ್ತಾಬ್‌ ಮುಸ್ಲಿಂ ಅಲ್ಲ, ಪಾರ್ಸಿ ಧರ್ಮಕ್ಕೆ ಸೇರಿದವನು ಎಂಬ ಕುರಿತು ಒಂದಷ್ಟು ಪೋಸ್ಟ್‌ಗಳು ಹರಿದಾಡಿವೆ. ಆದರೆ ಆತನ ಸಾಮಾಜಿಕ ಜಾಲತಾಣದ ಕೆಲ ಪೋಸ್ಟ್‌ಗಳ ಆಧಾರದಲ್ಲಿ ಆತ ಮುಸ್ಲಿಂ ಎಂಬ ವಾದವೇ ಜೋರಾಗಿದೆ. ಕೆಲ ಮಾಧ್ಯಮಗಳು ಎಫ್‌ಐಆರ್‌ ಪ್ರತಿಯನ್ನು ಪ್ರಕಟಿಸಿದ್ದು, ಆತ ಹಾಗೂ ಆತನ ಹೆತ್ತವರು ಮುಸ್ಲಿಂ ಎಂಬುದು ಅದರಲ್ಲಿ ಉಲ್ಲೇಖವಾಗಿದೆ.

ಅಫ್ತಾಬ್‌ ದೆಹಲಿಗೆ ಸ್ಥಳಾಂತರಗೊಂಡು 5–6 ತಿಂಗಳಷ್ಟೆ ಕಳೆದಿದೆ. ಅದಕ್ಕೂ ಮೊದಲಿನ ಆತನ ಪೂರ್ತಿ ಇತಿಹಾಸ ಮುಂಬೈನಲ್ಲಿದೆ. ದೆಹಲಿ ಪೊಲೀಸರು ಪ್ರಕರಣದ ಬೆನ್ನತ್ತಿ ಮುಂಬೈಗೂ ಭೇಟಿ ನೀಡುವ ಸಾಧ್ಯತೆಯಿದೆ. ಅಲ್ಲಿನ ತನಿಖೆ ಬಳಿಕವೇ ‘ಲವ್‌ ಜಿಹಾದ್‌’ಆರೋಪಕ್ಕೆ ಸ್ಪಷ್ಟನೆ ಸಿಗಲಿದೆ.

ಆತನ ವೃತ್ತಿ ಜೀವನದ ಹಿನ್ನೆಲೆ ನೋಡಿದರೆ ಗಟ್ಟಿಯಾದ ಕೆಲಸವಿಲ್ಲ. ಕಾಲ್‌ ಸೆಂಟರ್‌ನಲ್ಲಿ ಕೆಲಸ. ಅದನ್ನೂ ಯಾವ ಕಂಪನಿಯಲ್ಲೂ ಸುದೀರ್ಘವಾಗಿ ಮಾಡಿಲ್ಲ. ಈತನ ಜೊತೆ ಸಂಬಂಧ ಹೊಂದಿದ್ದ ಇತರ ಹುಡುಗಿಯರ ಕುರಿತು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಹಿಂದೂ ಹುಡುಗಿಯರ ಜೊತೆ ಮಾತ್ರವೇ ಈತನ ಸಂಬಂಧಗಳಿತ್ತಾ ಅಥವಾ ಧರ್ಮಾತೀತವಾಗಿತ್ತ ಎಂಬುದು ತನಿಖೆ ಬಳಿಕ ತಿಳಿಯಬೇಕು.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈತನಿಂದ ಮೋಸ ಹೋದ 4 ಹಿಂದು ಹುಡುಗಿಯರ ಹೆಸರು, ಆತನ ಜೊತೆಗಿದ್ದ ಅವರ ಚಿತ್ರದ ಸಮೇತ ಪೋಸ್ಟ್‌ಗಳು ಹರಿದಾಡುತ್ತಿದೆ. ಅವರೆಲ್ಲ ಬದುಕಿದ್ದಾರೆಯೇ ಎಂದು ತನಿಖೆ ನಡೆಸಿ ಎಂಬ ಆಗ್ರಹ ಕೇಳಿಬಂದಿದೆ.
ಈತನೊಬ್ಬ ವಿಕೃತ. ಕೊಲೆಯ ಬಳಿಕವೂ ಶ್ರದ್ಧಾ ಮುಖವನ್ನು ನೋಡಲು ಬಯಸುತ್ತಿದ್ದ. ಕೊಲೆ ಮಾಡಿದ್ದ ಕೋಣೆಯಲ್ಲೇ ಮಲಗುತ್ತಿದ್ದ. ವಿಕೃತ ಕೊಲೆಗೆ ಅಗತ್ಯ ಮಾಹಿತಿಗಳನ್ನು ಗೂಗಲ್‌ನಲ್ಲಿ ಹುಡುಕಾಡಿದ್ದ ಎಂಬುದನ್ನು ಪೊಲೀಸರು ಪ್ರಾಥಮಿಕ ತನಿಖೆಯಿಂದ ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT