ಶುಕ್ರವಾರ, ಮಾರ್ಚ್ 31, 2023
23 °C

ಕನ್ನಡ ಪತ್ರಿಕೋದ್ಯಮದ ‘ಕ್ರೀಡಾಜ್ಯೋತಿ’

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

‘ಜಟ್ಟಿ ಕಾಳಗದಿ ಗೆಲ್ಲದೊಡೆ

ಸಾಮು, ಪಟ್ಟು ವರಸೆಗಳೆಲ್ಲ ವಿಫಲವೆನ್ನುವೆಯೇಂ

ಮುಟ್ಟಿ ನೋಡವನ ಮೈಕಟ್ಟು ಕಬ್ಬಿಣದ ಗಟ್ಟಿ

ಗಟ್ಟಿತನ ಗರಡಿಫಲ ಮುಂಕುತಿಮ್ಮ..’

ಡಿ.ವಿ. ಗುಂಡಪ್ಪನವರು ಅಂಗಸಾಧನೆಯ ಮಹತ್ವದ ಕುರಿತು ಬರೆದಿರುವ ಕಗ್ಗದ ಸಾಲುಗಳು ಕ್ರೀಡಾಪಟುಗಳಿಗೂ ಅನ್ವಯಿಸುತ್ತವೆ. ಸ್ಪರ್ಧೆಗಳಲ್ಲಿ ಗೆಲುವು ಮತ್ತು ಸೋಲು ಸಹಜ. ಆದರೆ ಫಲಿತಾಂಶ ಏನೇ  ಇರಲಿ. ಆಟೋಟಗಳಲ್ಲಿ ತೊಡಗಿಕೊಂಡವರಿಗೆ  ವ್ಯಕ್ತಿತ್ವ ನಿರ್ಮಾಣ ಮತ್ತು ಆರೋಗ್ಯ ನಿರ್ವಹಣೆ ಸಾಧ್ಯ. ಆರೋಗ್ಯವಂತ ವ್ಯಕ್ತಿಗಳಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದಲೇ ಸಮಾಜ ಮತ್ತು ಜೀವನದಲ್ಲಿ ಕ್ರೀಡಾ ಚಟುವಟಿಕೆಗಳು ಮುಖ್ಯವಾದ ಸಂಗತಿಗಳು.


ಕೆ.ಎ. ನೆಟ್ಟಕಲ್ಲಪ್ಪ

ಆದ್ದರಿಂದಲೇ ಪ್ರಜಾವಾಣಿಯಲ್ಲಿ 50ರ ದಶಕದಿಂದಲೇ ಕ್ರೀಡಾ ಚಟುವಟಿಕೆಗಳ ಸುದ್ದಿಗಳ ಪ್ರಕಟಣೆಗೆ ಆದ್ಯತೆ ನೀಡಲಾಗಿದೆ. 60ರ ದಶಕದಲ್ಲಿ ಕ್ರೀಡೆಗಾಗಿಯೇ ಒಂದು ಪುಟ ಆರಂಭಿಸಿದ ಹೆಗ್ಗಳಿಕೆ ಪ್ರಜಾವಾಣಿಗೇ ಸಲ್ಲುತ್ತದೆ. ಕನ್ನಡ ಕ್ರೀಡಾ ಪತ್ರಿಕೋದ್ಯಮಕ್ಕೆ ಪ್ರಜಾವಾಣಿಯೇ ಜನನಿ.

ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ ಪತ್ರಿಕಾ ಬಳಗದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೆ.ಎ. ನೆಟ್ಟಕಲ್ಲಪ್ಪನವರು ಕ್ರೀಡಾ ಆಡಳಿತಗಾರರಾಗಿ ಜನಪ್ರಿಯರಾಗಿದ್ದರು. ಅಷ್ಟೇ ಅಲ್ಲ, ಕನ್ನಡ ಪತ್ರಿಕೋದ್ಯಮದಲ್ಲಿ ಕ್ರೀಡಾ ವರದಿಗಾರಿಕೆಗೆ ಸಂಬಂಧಿಸಿದಂತೆ ಹೊಸ ಆಯಾಮ ನೀಡಿದರು. ರಾಜ್ಯದಲ್ಲಿ ನಡೆಯುವ ಪ್ರತಿ ಕ್ರೀಡಾಕೂಟವೂ ಮಹತ್ವದ್ದಾಗಿದ್ದು, ಜನರಿಗೆ ಅವುಗಳ ಸಂಪೂರ್ಣ ಮಾಹಿತಿ ನೀಡಬೇಕೆಂಬ ಬಗ್ಗೆ ಐವತ್ತರ ದಶಕದಲ್ಲಿಯೇ ಯೋಚಿಸಿದ್ದರು. ಅವರ ಕ್ರೀಡಾಪ್ರೀತಿ ಮತ್ತು ಬದ್ಧತೆಯ ಫಲವಾಗಿ ಕನ್ನಡ ಪತ್ರಿಕೋದ್ಯಮದಲ್ಲಿ ಕ್ರೀಡಾ ವರದಿಗಾರಿಕೆಗೆ ಗೌರವಯುತ ಸ್ಥಾನ ದೊರೆಯಿತು..

ಕ್ರೀಡಾ ರಂಗಕ್ಕೆ ಪ್ರಜಾವಾಣಿಯ ಕೊಡುಗೆಗಳನ್ನು 1) ಕ್ರೀಡಾ ಪುಟಗಳ ಆರಂಭ ಹಾಗೂ ಸಾಕ್ಷಾತ್ ವರದಿಗಾರಿಕೆ 2) ಒಲಿಂಪಿಕ್ ಆಂದೋಲನಕ್ಕೆ ಕೊಡುಗೆ 3) ಕ್ರೀಡೆಯ ಏಳ್ಗೆಗೆ ನೀಡಿದ ಕಾಣಿಕೆಗಳು ಎಂಬ ಮೂರು ಆಯಾಮಗಳಲ್ಲಿ ನೋಡಬಹುದು.

ಕ್ರೀಡಾಪುಟಗಳ ಆರಂಭ ಹಾಗೂ ಸಾಕ್ಷಾತ್ ವರದಿಗಾರಿಕೆ

ಭಾರತದ ಸ್ವಾತಂತ್ರ್ಯದ ನಂತರ ಕ್ರೀಡಾರಂಗದಲ್ಲಿಯೂ ಹಲವು ಸಾಧನೆಗಳು, ಬದಲಾವಣೆಗಳು ಮತ್ತು ಬೆಳವಣಿಗೆಗಳು ಆಗಿವೆ. ಈ ಎಲ್ಲವನ್ನೂ ಅಕ್ಷರ ರೂಪದಲ್ಲಿ ದಾಖಲಿಸುತ್ತ ಬಂದಿರುವ ಹೆಗ್ಗಳಿಕೆ ಪ್ರಜಾವಾಣಿಯದ್ದು. ಆದ್ದರಿಂದಾಗಿ ಪತ್ರಿಕೆಯು ನಾಡಿನ ಕ್ರೀಡಾರಂಗದ ಸಾಕ್ಷಿಪ್ರಜ್ಞೆಯಾಗಿದೆ.


ಮುಖಪುಟದಲ್ಲಿ ಟೆಸ್ಟ್‌ ಕ್ರಿಕೆಟ್‌ ವರದಿ 

1966–67ರ ಸಾಲಿನಿಂದ ಕ್ರೀಡೆಗಾಗಿಯೇ ಒಂದು ಪುಟ ಮೀಸಲಿಡಲಾಯಿತು. ಅದರೆ ಅದಕ್ಕೂ ಮುನ್ನವೇ ಕ್ರೀಡಾಸುದ್ದಿಗಳನ್ನು ಬೇರೆ ಎಲ್ಲ ಸುದ್ದಿಗಳೊಂದಿಗೆ ಪ್ರಮುಖವಾಗಿ ಪ್ರಕಟಿಸಲಾಗುತ್ತಿತ್ತು.

ಅದರಲ್ಲೂ 1950ರ ನಂತರದಲ್ಲಿ ದೇಶ–ವಿದೇಶಗಳಲ್ಲಿ ನಡೆದ ಪ್ರಮುಖ ಕ್ರೀಡಾ ಚಟುವಟಿಕೆಗಳನ್ನು ದಾಖಲಿಸಿದೆ. ಸ್ವಾತಂತ್ರ್ಯದ ಬಳಿಕ, ಕೇಂದ್ರದಲ್ಲಿ ಸರ್ಕಾರ ರಚನೆಯ ನಂತರ ಅಭಿವೃದ್ಧಿ ಯೋಜನೆಗಳು ಎಲ್ಲ ರಂಗಗಳಲ್ಲಿಯೂ ಆಗತೊಡಗಿದವು. ವಿದೇಶಗಳೊಂದಿಗೆ ಸೌಹಾರ್ದ, ವಾಣಿಜ್ಯಕ ಸಂಬಂಧಗಳನ್ನು ಬೆಸೆಯುವ ಕೆಲಸಗಳು ಆಗ ಆರಂಭವಾಗಿದ್ದವು. ಕ್ರೀಡಾ ಕ್ಷೇತ್ರವೂ ಹೊಸತನಗಳ ನಿರೀಕ್ಷೆಯಲ್ಲಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡಗಳ ಸಾಧನೆಯು ಮನೆಮಾತಾಗಿತ್ತು. ಅದರಂತೆ ಬೇರೆ ಕ್ರೀಡೆಗಳಲ್ಲಿಯೂ ಭಾರತ ಬೆಳೆಯಬೇಕು ಎಂಬ ಆಶಯವೂ ಜನಮಾನಸದಲ್ಲಿ ಗರಿಗೆದರಿತ್ತು.


ಪೂರ್ಣ ಪ್ರಮಾಣದ ಕ್ರೀಡಾ ಪುಟ 

ಅದೇ ಸಂದರ್ಭದಲ್ಲಿ 1951ರಲ್ಲಿ ದೆಹಲಿಯಲ್ಲಿ ಮೊದಲ ಏಷ್ಯನ್ ಕ್ರೀಡಾಕೂಟ ಆಯೋಜನೆಗೊಂಡಿತು. ಆ ಕೂಟದಲ್ಲಿ ಕ್ರೀಡಾಜ್ಯೋತಿಯನ್ನು ತಂದ ಅಥ್ಲೀಟ್‌ ದಲೀಪ್ ಸಿಂಗ್ ಅವರ ಚಿತ್ರವು ಪ್ರಜಾವಾಣಿಯ ಮುಖಪುಟದಲ್ಲಿ ಪ್ರಕಟವಾಗಿತ್ತು.

ಕೆಲವು ಕಾಲದ ನಂತರ ಎಲ್ಲ ಸುದ್ದಿಗಳ ನಡುವೆ ಕ್ರೀಡಾಸುದ್ದಿಗಳನ್ನು ಗುರುತಿಸುವಂತಾಗಲು ಕ್ರೀಡಾರಂಗ ಎಂಬ ಟ್ಯಾಗ್‌ ಬಳಸಲಾಗುತ್ತಿತ್ತು.

ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ನಡೆಯುತ್ತಿದ್ದ ಕ್ರಿಕೆಟ್, ಕ್ರೀಡಾ ಸ್ಪರ್ಧೆಗಳ ಫಲಿತಾಂಶಗಳನ್ನು ವಿವರವಾಗಿ ನೀಡಲು ಆರಂಭಿಸಲಾಯಿತು. ದೇಶ ಮತ್ತು ರಾಜ್ಯದೊಳಗೆ ನಡೆಯುತ್ತಿದ್ದ ಕ್ರೀಡಾಕೂಟಗಳಿಗೂ  ಆದ್ಯತೆ ಕೊಡಲಾಯಿತು. ಅದರಲ್ಲೂ ರಣಜಿ ಕ್ರಿಕೆಟ್ ಟೂರ್ನಿ, ಅಥ್ಲೆಟಿಕ್ಸ್, ಈಜು ಮತ್ತಿತರ ಕ್ರೀಡೆಗಳಿಗೆ ಮೊದಲ ಪ್ರಾಶಸ್ತ್ಯವಿರುತ್ತಿತ್ತು. ಟಿ.ವಿ ಮತ್ತಿತರ ಮಾಧ್ಯಮಗಳು ಇರದ  ಆ ಕಾಲದಲ್ಲಿ ಫಲಿತಾಂಶದ ಜೊತೆಗೆ ಆಯಾ ಪಂದ್ಯ ಅಥವಾ ಸ್ಪರ್ಧೆಗಳ ಸ್ವಾರಸ್ಯ ಮತ್ತು ಪ್ರಮುಖ ಅಂಶಗಳಿಗೆ ಒತ್ತು ನೀಡಿದ ಬರವಣಿಗೆ ಶೈಲಿಯೂ ಗಮನ ಸೆಳೆಯುತ್ತಿತ್ತು.


ಜಕಾರ್ತ ಏಷ್ಯನ್‌ ಗೆಮ್ಸ್‌ನ ಸಾಕ್ಷಾತ್‌ ವರದಿ 

1951ರಲ್ಲಿ ಪ್ರಕಟವಾಗಿದ್ದ ವಾರ್ಸಿಟಿ ಕಪ್ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್ ಟೂರ್ನಿಯ ವರದಿ ಇದಕ್ಕೊಂದು ಉತ್ತಮ ನಿದರ್ಶನ. ಆಗಿನ ಮೈಸೂರು ಮತ್ತು ದೆಹಲಿ ತಂಡಗಳ ನಡುವಣ ಆ ಪಂದ್ಯವು ಹೈದರಾಬಾದಿನಲ್ಲಿ ನಡೆದಿತ್ತು. ಮೈಸೂರಿನ ಅನಂತಸ್ವಾಮಿರಾವ್ ಅವರು ಅಜೇಯ 95 ರನ್‌ ಗಳಿಸಿದ್ದರು. ತಂಡವು ಉತ್ತಮ ಮೊತ್ತ ಗಳಿಸಲು ಅವರು ಕಾರಣರಾಗಿದ್ದರು. ಆದರೆ, ಅಂದು ಉಳಿದ ಬ್ಯಾಟರ್‌ಗಳು ಬೇಗನೇ ಔಟಾಗಿದ್ದರಿಂದ ಅವರಿಗೆ ಅಂದು ಶತಕ ಗಳಿಸಲು ಸಾಧ್ಯವಾಗಿರಲಿಲ್ಲವೆಂಬ ವರದಿ ಗಮನ ಸೆಳೆದಿತ್ತು. ಟಿ.ವಿ. ಇರದ ಆ ಕಾಲದಲ್ಲಿ ಓದುಗರಿಗೆ ಆಟದ ಚಿತ್ರಣವನ್ನು ಆ ವರದಿಯಲ್ಲಿ ಕಟ್ಟಿಕೊಡಲಾಗಿತ್ತು.

1958ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಅವರು ದಾಖಲೆ ನಿರ್ಮಿಸಿದ ಸುದ್ದಿಯನ್ನು ಮುಖಪುಟದಲ್ಲಿ ಚಿತ್ರಸಹಿತ ಪ್ರಮುಖವಾಗಿ ಪ್ರಕಟಿಸಲಾಗಿತ್ತು. ಅದರೊಂದಿಗೆ ಜಪಾನಿ ಈಜುಗಾರರ ದಾಖಲೆಯ ಪುಟ್ಟ ಬಾಕ್ಸ್‌ ಕೂಡ ಗಮನ ಸೆಳೆಯುವಂತಿತ್ತು.

ತಂತ್ರಜ್ಞಾನ ಬೆಳೆದಂತೆ ಕ್ರೀಡೆ ಮತ್ತು ಪತ್ರಿಕಾರಂಗಗಳಲ್ಲಿಯೂ ಬದಲಾವಣೆಗಳಾದವು. ಸಾರಿಗೆ, ಸಂವಹನದಲ್ಲಿಯೂ ಆಮೂಲಾಗ್ರ ಸುಧಾರಣೆಗಳಾಗತೊಡಗಿದವು. ಅದರಿಂದಾಗಿ ಭಾರತದಲ್ಲಿಯೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳು ಹೆಚ್ಚು ಆಯೋಜನೆಗೊಳ್ಳಲಾರಂಭಿಸಿದವು. ಈ ಬದಲಾವಣೆಗಳಿಗೆ ಪ್ರಜಾವಾಣಿಯೂ ತ್ವರಿತವಾಗಿ ಹೊಂದಿಕೊಂಡಿತು.


2012ರ ಒಲಿಂಪಿಕ್‌ ಪುಟ 

ಕನ್ನಡ ಪತ್ರಿಕೋದ್ಯಮದಲ್ಲಿ ಕ್ರೀಡೆಗಳ ಸಾಕ್ಷಾತ್ ವರದಿಗಾರಿಕೆಗಾಗಿ ಮೊದಲ ಬಾರಿಗೆ ವರದಿಗಾರರನ್ನು ನಿಯೋಜಿಸಿದ ಶ್ರೇಯವೂ ಪ್ರಜಾವಾಣಿಗೇ ಸಲ್ಲುತ್ತದೆ. ಇದಕ್ಕೆ ಶ್ರೀಕಾರ ಹಾಕಿದವರೂ ನೆಟ್ಟಕಲ್ಲಪ್ಪನವರು. ಅವರು ವಿದೇಶಕ್ಕೆ ತೆರಳಿ ಕ್ರೀಡಾವರದಿಗಳನ್ನು ಬರೆದ ಕನ್ನಡದ ಮೊದಲ ವರದಿಗಾರರೂ ಹೌದು. 1960ರ ರೋಮ್‌ ಒಲಿಂಪಿಕ್ಸ್‌, 1964ರ ಟೋಕಿಯೊ ಒಲಿಂಪಿಕ್ಸ್‌, 1968ರ ಮೆಕ್ಸಿಕೊ ಒಲಿಂಪಿಕ್ಸ್‌ ಮತ್ತು 1972ರ ಮ್ಯೂನಿಕ್‌ ಒಲಿಂಪಿಕ್ಸ್‌ಗಳಿಗೆ ತೆರಳಿ ಪ್ರತಿನಿತ್ಯವೂ ವರದಿಗಳನ್ನು ಕಳುಹಿಸಿದ್ದರು.  

‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾನು ಪಾಲ್ಗೊಂಡಿದ್ದ ಪ್ರತಿಯೊಂದು ಸ್ವರ್ಧೆಯ ಸಂದರ್ಭದಲ್ಲಿಯೂ ನೆಟ್ಟಕಲ್ಲಪ್ಪ ಅವರು ಹಾಜರಿದ್ದರು. ಸ್ಪರ್ಧೆಗಳನ್ನು ತದೇಕಚಿತ್ತದಿಂದ ವೀಕ್ಷಿಸುತ್ತಿದ್ದರು’ ಎಂದು ಒಲಿಂಪಿಯನ್ ಅಥ್ಲೀಟ್ ಕೆನೆತ್‌ ಪೊವೆಲ್‌ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಪೊವೆಲ್ ಅವರು ಭಾರತ ಕಂಡ ಶ್ರೇಷ್ಠ ವೇಗದ ಓಟಗಾರರಲ್ಲಿ ಪ್ರಮುಖರಾಗಿದ್ದರು. ಇತ್ತೀಚೆಗಷ್ಟೇ ಅವರು ನಿಧನರಾದರು.

ಸಾಕ್ಷಾತ್ ವರದಿಗಾರಿಕೆಗೆ ಪ್ರವಾಸ ತೆರಳುವುದು ಒಲಿಂಪಿಕ್ಸ್‌ಗೆ ಮಾತ್ರ ಸೀಮಿತವಾಗಲಿಲ್ಲ. ಕ್ರೀಡಾ ವರದಿಗಾರರನ್ನೂ ದೇಶದ ಪ್ರಮುಖ ನಗರಗಳಲ್ಲಿ ನಡೆಯುತ್ತಿದ್ದ ರಣಜಿ, ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಿಗೆ ಕಳುಹಿಸುವ ಪದ್ಧತಿ ಆರಂಭವಾಯಿತು. ಇದರಿಂದಾಗಿ ಹಲವಾರು ದಾಖಲೆಗಳನ್ನು ವಿವರವಾಗಿ ವರದಿ ಮಾಡಲು ಸಾಧ್ಯವಾಯಿತು. ಆಟಗಾರರು, ಕೋಚ್‌ಗಳೊಂದಿಗೆ ನೇರ ಸಂಪರ್ಕ ಸಾಧ್ಯವಾಯಿತು. ಇದರಿಂದ ಪ್ರಥಮ ಮಾಹಿತಿಯ ಅಂಕಿ, ಅಂಶ ವರದಿಗಳನ್ನು ನೀಡುವಲ್ಲಿ ಪತ್ರಿಕೆ ಮೇಲುಗೈ ಸಾಧಿಸಿತು. ಆಗ ಬಾನುಲಿಯ ಕಾಮೆಂಟ್ರಿ ಬಿಟ್ಟರೆ, ‍ಪ್ರಜಾವಾಣಿಯನ್ನೇ ಕ್ರೀಡಾ ಸುದ್ದಿಗಳಿಗಾಗಿ ಕ್ರೀಡಾಪ್ರಿಯರು ಅವಲಂಬಿಸಿದ್ದರು.


ಕ್ರೀಡೆಯ ಕುರಿತು ಓದುಗರೊಬ್ಬರು 1962ರಲ್ಲಿ ವಾಚಕರ ವಾಣಿಗೆ ಬರೆದ ಪತ್ರ 

1973ರಲ್ಲಿ  ಚೆನ್ನೈನಲ್ಲಿ (ಆಗಿನ ಮದರಾಸು) ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್ ವರದಿಯನ್ನು ಪ್ರಜಾವಾಣಿಯ ಮೊದಲ ಕ್ರೀಡಾ ಸಂಪಾದಕರಾದ ಎಚ್‌.ಎಸ್. ಸೂರ್ಯನಾರಾಯಣ (ಸೂರಿ) ಅವರು ಮಾಡಿದ್ದರು. ಆ ಪಂದ್ಯದಲ್ಲಿ ಮಿಂಚಿದ್ದ ಸ್ಪಿನ್ ದಿಗ್ಗಜ ಬಿ.ಎಸ್. ಚಂದ್ರಶೇಖರ್ ಮತ್ತು ಬ್ಯಾಟಿಂಗ್ ದಂತಕಥೆ ಜಿ.ಆರ್. ವಿಶ್ವನಾಥ್ ಅವರ ಚಿತ್ರಗಳ ಸಹಿತ ವರದಿಯು ಮುಖಪುಟದಲ್ಲಿ ಪ್ರಕಟವಾಗಿತ್ತು.

1986ರಲ್ಲಿ ಮದರಾಸಿನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಣ ಟೆಸ್ಟ್ ಪಂದ್ಯವು ಟೈ ಆಗಿತ್ತು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಮತ್ತು ಭಾರತದ ಏಕೈಕ ಟೈ ಟೆಸ್ಟ್ ಅದಾಗಿತ್ತು. ಆ ಪಂದ್ಯವನ್ನು ಸಾಕ್ಷಾತ್ ವರದಿ ಮಾಡಿದ್ದು ಪ್ರಜಾವಾಣಿಯ ಹೆಗ್ಗಳಿಕೆ. ಭಾರತದಲ್ಲಿ ನಡೆದಿದ್ದ 1996ರ ಏಕದಿನ ಕ್ರಿಕೆಟ್ ವಿಶ್ವಕಪ್, 2010ರಲ್ಲಿ ಸಚಿನ್ ತೆಂಡೂಲ್ಕರ್ ಗ್ವಾಲಿಯರ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಪಂದ್ಯದಲ್ಲಿ ಸಿಡಿಸಿದ್ದ ಮೊದಲ ದ್ವಿಶತಕದ ವಿಶ್ವದಾಖಲೆ,    2011ರ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ಪತ್ರಿಕೆಯ ವರದಿಗಾರರು ವರದಿ ಮಾಡಿದ್ದರು. ಇದಲ್ಲದೇ ದ್ವಿಪಕ್ಷೀಯ ಕ್ರಿಕೆಟ್‌ ಸರಣಿ, ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಗಳ ನೇರ ವರದಿಗಾರಿಕೆಯನ್ನು ಪತ್ರಿಕೆಯು ಮಾಡುತ್ತಿದೆ.  

ಕ್ರಿಕೆಟ್ ಅಷ್ಟೇ ಅಲ್ಲ. ಬೇರೆ ಬೇರೆ ಕ್ರೀಡೆಗಳಿಗೂ ಆದ್ಯತೆ ಕೊಡಲಾಗಿದೆ. ವಿದೇಶಗಳಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್, ಸ್ಯಾಫ್‌ ಗೇಮ್ಸ್, ಏಷ್ಯಾ ಚಾಂಪಿಯನ್‌ಷಿಪ್, ಭಾರತದಲ್ಲಿಯೇ ಆಯೋಜನೆಗೊಂಡಿದ್ದ ಆಫ್ರೋ ಏಷ್ಯನ್ ಗೇಮ್ಸ್, ವಿಶ್ವ ಡಿಫೆನ್ಸ್‌ ಗೇಮ್ಸ್‌,  ವಿಶ್ವ ಹಾಕಿ, ಏಷ್ಯನ್ ಹಾಕಿ ಸೇರಿದಂತೆ ಹಲವಾರು ಟೂರ್ನಿಗಳನ್ನು ನೇರ ವರದಿ ಮಾಡಿರುವುದು ಗಮನಾರ್ಹ.

90ರ ದಶಕದ ನಂತರ ಕರ್ನಾಟಕದ ಗ್ರಾಮಾಂತರ ವಿಭಾಗಗಳಲ್ಲಿಯೂ ಕ್ರೀಡಾ ಚಟುವಟಿಕೆಗಳು ಹೆಚ್ಚಿದವು. ಇದರಿಂದಾಗಿ ಪ್ರಾದೇಶಿಕ ಸುದ್ದಿಗಳ ಪ್ರವಾಹವೂ ಹೆಚ್ಚಾಯಿತು. ಹೀಗಾಗಿ  ಎರಡು ಕ್ರೀಡಾಪುಟಗಳು ಪ್ರಕಟಗೊಳ್ಳತೊಡಗಿದವು. ಒಂದೇ ಪುಟ ಇದ್ದಾಗಲೂ ಜಾಹೀರಾತು ಮತ್ತು ಸುದ್ದಿಗಳು ಹೆಚ್ಚು ಇದ್ದಾಗ ಬೇರೆ ಪುಟದಲ್ಲಿ ಅಗತ್ಯಕ್ಕನುಗುಣವಾಗಿ ಸುದ್ದಿಗಳನ್ನು ಪ್ರಕಟಿಸಲಾಗುತ್ತಿತ್ತು. ತಂತ್ರಜ್ಞಾನ ಮುಂದುವರಿದಂತೆ ಎರಡು ಪುಟಗಳ ಮುದ್ರಣ ನಿರಂತರವಾಯಿತು. ಪ್ರಜಾವಾಣಿಯ ಸುವರ್ಣಮಹೋತ್ಸವದ ಹೊತ್ತಿಗೆ ಕ್ರೀಡಾ ಪುರವಣಿಯೂ ಆರಂಭವಾಯಿತು. ಮೊದಲಿಗೆ ಕ್ರೀಡೆ ಮತ್ತು ಸಿನಿಮಾ ಸೇರಿ ನಾಲ್ಕು ಪುಟಗಳ ಪುರವಣಿ ಪ್ರಕಟವಾಯಿತು.

ಜಿಲ್ಲಾ ಆವೃತ್ತಿಗಳು ಆರಂಭವಾದ ನಂತರ ಕ್ರೀಡಾ ಸುದ್ದಿಗಳಿಗೆ ಉತ್ತೇಜನ ನೀಡುವಲ್ಲಿಯೂ ಪತ್ರಿಕೆಯು ಮೇಲುಗೈ ಸಾಧಿಸಿದೆ. ಅದರಲ್ಲೂ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಕ್ರೀಡಾ ಸುದ್ದಿಗಳಿಗೆ ಆದ್ಯತೆ ಲಭಿಸಿದೆ. ಗ್ರಾಮೀಣ ಮಟ್ಟದಿಂದ ರಾಜ್ಯಮಟ್ಟದವರೆಗಿನ ಕ್ರೀಡಾ ಸ್ಪರ್ಧೆಗಳ ಫಲಿತಾಂಶಗಳನ್ನು ನೀಡುತ್ತಿದೆ. ಸ್ಥಳೀಯ ಆವೃತ್ತಿಯ ಪುಟಗಳಲ್ಲಿಯೂ ಕ್ರೀಡಾ ಸುದ್ದಿಗಳು ಪ್ರಕಟಗೊಳ್ಳುತ್ತಿವೆ. ಇದರಿಂದಾಗಿ ಅಲ್ಲಿಯ ಪ್ರತಿಭೆಗಳು ರಾಜ್ಯಮಟ್ಟದಲ್ಲಿ ಗಮನ ಸೆಳೆದ ಉದಾಹರಣೆಗಳು ಹಲವಾರಿವೆ.

–––


ಎಂ.ಪಿ. ಗಣೇಶ್

ನೆಟ್ಟಕಲ್ಲಪ್ಪ ಅವರದ್ದು ತುಂಬಾ ಅಪರೂಪದ ಮತ್ತು ಅನುಕರಣೀಯ ವ್ಯಕ್ತಿತ್ವ. ಅವರು ಬಹಳ ದೊಡ್ಡ ಕ್ರೀಡಾಪ್ರೇಮಿ ಹಾಗೂ ಪ್ರೋತ್ಸಾಹಕರಾಗಿದ್ದರು. ನೇರ ನಡೆ, ನುಡಿಯ ವ್ಯಕ್ತಿ. ಮ್ಯೂನಿಕ್ ಒಲಿಂಪಿಕ್ಸ್‌ನಲ್ಲಿ ಅವರನ್ನು ಭೇಟಿಯಾಗಿದ್ದೆ. ಆ ಟೂರ್ನಿಯಲ್ಲಿ ನಮ್ಮ ತಂಡವು ಚೆನ್ನಾಗಿ ಆಡಿ ಪಂದ್ಯಗಳನ್ನು ಗೆದ್ದಿತ್ತು. ಕೆ.ಡಿ. ಸಿಂಗ್ ಬಾಬು ಕೋಚ್  ಆಗಿದ್ದರು. ಅದೊಂದು ಪಂದ್ಯ ಮುಗಿದ ಸಂದರ್ಭದಲ್ಲಿ ನೆಟ್ಟಕಲ್ಲಪ್ಪನವರು ಬಂದು ನನ್ನನ್ನು ಪರಿಚಯ ಮಾಡಿಕೊಂಡಿದ್ದರು. ಕನ್ನಡದಲ್ಲಿಯೇ ಮಾತನಾಡಿದ್ದೆವು. ನಮ್ಮ ತಂಡದವರನ್ನೂ ಪರಿಚಯ ಮಾಡಿಸಿದ್ದೆ. ಪಂದ್ಯದ ಬಗ್ಗೆ ಆಟಗಾರರ ಬಗ್ಗೆ ಬಹಳ ಹೊತ್ತು ಮಾತನಾಡಿದ್ದೆವು. ಆನಂತರ ಅವರು ಒಲಿಂಪಿಕ್ ಗ್ರಾಮಕ್ಕೂ ಒಂದು ಸಲ ಆಗಮಿಸಿದ್ದರು. ಆಗಲೂ ನಮ್ಮನ್ನು ಮಾತನಾಡಿಸಿದ್ದರು. ಅವರಿಗೆ ಆಟದ ಕುರಿತು ಇದ್ದ ಆಸಕ್ತಿ ಮತ್ತು ಉತ್ಸಾಹ ಅಪರಿಮಿತವಾದದ್ದು.

ಎಂ.ಪಿ. ಗಣೇಶ್, ಭಾರತ ಹಾಕಿ ತಂಡದ ಮಾಜಿ ನಾಯಕ, ಕೋಚ್

––––

ಡಿಜಿಟಲ್ ಕ್ರಾಂತಿ

ಕಳೆದ ಎರಡು ದಶಕಗಳಲ್ಲಿ ಆಗಿರುವ ಡಿಜಿಟಲ್ ಕ್ರಾಂತಿಯಿಂದಾಗಿ ಪತ್ರಿಕೋದ್ಯಮದಲ್ಲಿ ಹಲವಾರು ಬದಲಾವಣೆಗಳಾಗಿವೆ. ಬೇರೆ ತಾಣಗಳಿಗೆ ಹೋಗಿ ವರದಿ ಮಾಡಿ ಸಂಪರ್ಕ ಸಾಧಿಸುವುದು ಸುಲಭವಾಗಿದೆ. ಇಮೇಲ್, ವಾಟ್ಸ್‌ಆ್ಯಪ್‌ ಮತ್ತಿತರ ತಾಂತ್ರಿಕ ಅನುಕೂಲಗಳಾಗಿವೆ. ಪಂದ್ಯಗಳು, ಆಟಗಾರರ ಬಗ್ಗೆ ಮಾಹಿತಿ ಪಡೆಯುವುದು ಸರಳವಾಗುತ್ತಿದೆ.


2011ರ ವಿಶ್ವಕಪ್‌ ಫೈನಲ್‌ ವರದಿ 

ಈ ಹಂತದಲ್ಲಿ ಪ್ರಜಾವಾಣಿಯು ಕ್ರೀಡಾ ಸುದ್ದಿಗಳು, ಲೇಖನಗಳು ಮತ್ತು ವಿಡಿಯೊಗಳು ಪ್ರಕಟವಾಗುತ್ತಿವೆ. ಮಾಹಿತಿ ಮಹಾಪೂರದೊಳಗಿನಿಂದ ನಿಖರವಾದ ಸುದ್ದಿಗಳನ್ನು ಹೆಕ್ಕಿ ವೆಬ್‌ಸೈಟ್ ಮತ್ತು ಪತ್ರಿಕೆಗಳ ಮೂಲಕ ಓದುಗರಿಗೆ ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಜೊತೆಗೆ ಕಾಲಕ್ಕೆ ತಕ್ಕಂತೆ ಬದಲಾವಣೆಯ ಶೈಲಿ ಮತ್ತು ವಿಶ್ಲೇಷಣೆಗಳೂ ಪ್ರಕಟವಾಗುತ್ತಿವೆ.

ಚಿತ್ರಗಳು : ಪ್ರಜಾವಾಣಿ ಸಂಗ್ರಹ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು