ಶನಿವಾರ, ಆಗಸ್ಟ್ 13, 2022
22 °C

PV Web Exclusive | ಹಂಪಿ ರಹಸ್ಯದ ಖನಿಯಲ್ಲಿ ಅಚ್ಚರಿಯ ನೀರಿನ ಜಾಲ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ವಿಜಯನಗರ ಸಾಮ್ರಾಜ್ಯ ಎಂದರೆ ಥಟ್ಟನೆ ನೆನಪಿಗೆ ಬರುವುದು ಅದರ ಶ್ರೀಮಂತಿಕೆ. ಬೀದಿಗಳಲ್ಲಿ ಮುತ್ತು, ರತ್ನ, ವಜ್ರ ವೈಢೂರ್ಯಗಳ ಮಾರಾಟ, ಎಂತಹವರನ್ನೂ ಬೆರಗುಗೊಳಿಸುವ ಅದರ ಉತ್ಕೃಷ್ಟ ಶ್ರೀಮಂತ ವಾಸ್ತುಶಿಲ್ಪದ ಸ್ಮಾರಕಗಳು.

ವಿಜಯನಗರ ಅರಸರ ಕಾಲಕ್ಕೆ ಭೇಟಿ ನೀಡಿದ ಬಹುತೇಕ ಪ್ರವಾಸಿಗರು ಈ ವಿಷಯಕ್ಕೆ ಹೆಚ್ಚಿನ ಒತ್ತು ಕೊಟ್ಟು ದಾಖಲಿಸಿದ್ದಾರೆ. ಆದರೆ, ಅವರ ಕಾಲದ ನೀರಿನ ಸಂಪರ್ಕ ಜಾಲವನ್ನು ಹೆಚ್ಚಿನವರು ಸೂಕ್ಷ್ಮವಾಗಿ ಗಮನಿಸಿದಂತಿಲ್ಲ.

ವಿಜಯನಗರದ ಅರಸರು ವೈಭವೋಪೇತ ಜೀವನದ ಜತೆಗೆ ಕೃಷಿ, ಕುಡಿಯುವ ನೀರಿನ ವ್ಯವಸ್ಥೆಗೂ ಹೆಚ್ಚಿನ ಒತ್ತು ಕೊಟ್ಟಿದ್ದರು. ಒಮ್ಮೆ ಹಂಪಿಯ ಪರಿಸರದಲ್ಲಿ ಸುತ್ತಾಡುತ್ತ ಸೂಕ್ಷ್ಮವಾಗಿ ಗಮನಿಸಿದರೆ ಅದನ್ನು ನೋಡಬಹುದು. ಈಗಿನಂತೆ ಹಿಂದೆ ಕೂಡ ಬರಗಾಲ ಬಿದ್ದು ಜನ–ಜಾನುವಾರುಗಳಿಗೆ ಸಂಕಷ್ಟ ಎದುರಾಗುತ್ತಿತ್ತು. ಬರದ ಸಂದರ್ಭದಲ್ಲಿ ತೊಂದರೆ ಉಂಟಾಗದಿರಲಿ ಎಂಬ ಕಾರಣಕ್ಕಾಗಿಯೇ ಅವರು ತುಂಗಭದ್ರಾ ನದಿಯ ನೀರನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಿದ್ದರು.

ನದಿಯ ನೀರು ಒಂದೇ ಸಮನೆ ಹರಿದು ಹೋದರೆ ಬೇಸಿಗೆ ಸಂದರ್ಭದಲ್ಲಿ ಸಮಸ್ಯೆ ತಲೆದೋರದಿರಲಿ ಎಂಬ ಕಾರಣಕ್ಕಾಗಿ ಅಲ್ಲಲ್ಲಿ ಕೆರೆ, ಕಟ್ಟೆಗಳನ್ನು ನಿರ್ಮಿಸಿದ್ದರು. ಅಷ್ಟೇ ಅಲ್ಲ, ಕಾಲುವೆಗಳನ್ನು ನಿರ್ಮಿಸಿ, ಅವುಗಳ ಮುಖೇನ ಕೆರೆ, ಕಟ್ಟೆಗಳಲ್ಲಿ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳುತ್ತಿದ್ದರು. ಅದಕ್ಕೆ ಸಾಕ್ಷಿ ಈಗಿರುವ ಉಪಕಾಲುವೆಗಳು. ಅವುಗಳನ್ನು ಜನ ಈಗಲೂ ವಿಜಯನಗರ ಕಾಲದ ಕಾಲುವೆಗಳು ಎಂಬ ಹೆಸರಿನಿಂದ ಕರೆಯುತ್ತಾರೆ.

ಈಗಿನ ತುಂಗಭದ್ರಾ ಜಲಾಶಯದಿಂದ ಆರಂಭವಾಗುವ ಉಪ ಕಾಲುವೆಗಳು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯ ಸುತ್ತಮುತ್ತಲಿನ ಪ್ರದೇಶದ ವರೆಗೆ ಚಾಚಿಕೊಂಡಿವೆ. ಜಲಾಶಯದಲ್ಲಿ ನೀರಿನ ಸಂಗ್ರಹವಿದ್ದರೆ ಉಪಕಾಲುವೆಗಳಿಗೆ ವರ್ಷದ ಹನ್ನೊಂದು ತಿಂಗಳು ನೀರು ಹರಿಸಬೇಕೆಂಬ ಒಪ್ಪಂದ ಅಣೆಕಟ್ಟೆ ನಿರ್ಮಿಸುವ ಸಂದರ್ಭದಲ್ಲಿಯೇ ಮಾಡಿಕೊಳ್ಳಲಾಗಿತ್ತು. ಈಗಲೂ ಆ ಒಪ್ಪಂದದ ಪ್ರಕಾರವೇ ಕಾಲುವೆಗೆ ನೀರು ಹರಿಸಲಾಗುತ್ತದೆ.

ಈ ಕಾಲುವೆಗಳು, ಕಮಲಾಪುರದ ಐತಿಹಾಸಿಕ ಕೆರೆ ಮೂಲಕ ಇಡೀ ಹಂಪಿಗೆ ಅಂದಿನ ಕಾಲದಲ್ಲಿ ನೀರು ಕೊಂಡೊಯ್ಯುತ್ತಿದ್ದರು. ಈಗಲೂ ಆ ಸಂಪರ್ಕ ಜಾಲ ಇದೆ. ಆದರೆ, ಕೆಲವೆಡೆ ನೆಲದಲ್ಲಿ ಹೂತು ಹೋಗಿ ಅದು ಕಡಿತಗೊಂಡಿದೆ. ಅದನ್ನು ಸಾಕ್ಷೀಕರಿಸುವಂತೆ ಇತ್ತೀಚೆಗೆ ಹಂಪಿಯ ಅರವಟಿಕೆ ಬಳಿ ಸಿಕ್ಕಿರುವ ನೆಲದಡಿಯ ನೀರಿನ ಪೈಪ್‌ಲೈನ್‌ ಕುರುಹುಗಳು ಹಾಗೂ ಪುಷ್ಕರಣಿಗಳು.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎ.ಎಸ್‌.ಐ.) ಹಂಪಿ ಪರಿಸರದಲ್ಲಿ ಉತ್ಖನನ ಮುಂದುವರೆಸಿದಂತೆಲ್ಲ ಒಂದೊಂದೇ ಕೌತುಕ ಸಂಗತಿಗಳು ಹೊರಬೀಳುತ್ತಿವೆ. ಆ ಕಾಲದಲ್ಲಿ ಕಟ್ಟಿದ್ದ ಸ್ಮಾರಕಗಳು, ಅದರಲ್ಲೂ ಬಗೆಬಗೆಯ ಪುಷ್ಕರಣಿಗಳು, ಅವುಗಳಿಗೆ ಸಂಪರ್ಕ ಕಲ್ಪಿಸುವ ನೀರಿನ ಪೈಪ್‌ಲೈನ್‌ ವ್ಯವಸ್ಥೆ ಕೂಡ ಸೇರಿದೆ.

ಹಂಪಿಯಲ್ಲಿ ರಾಜರ ಖಾಸಾ ಜಾಗದ ಪರಿಸರದಲ್ಲಿ ಮಹಾನವಮಿ ದಿಬ್ಬಕ್ಕೆ ಹೊಂದಿಕೊಂಡಿರುವ ಸ್ಥಳದಲ್ಲಿ ಹಲವು ವರ್ಷಗಳ ಹಿಂದೆ ಸುಂದರವಾದ ಪುಷ್ಕರಣಿ ಪತ್ತೆಯಾಗಿತ್ತು. ಅದಾದ ಬಳಿಕ ವಿರೂಪಾಕ್ಷೇಶ್ವರ ದೇಗುಲದ ಮಗ್ಗುಲಲ್ಲಿ ಬೃಹತ್‌ ಪುಷ್ಕರಣಿಯನ್ನು ಪತ್ತೆ ಹಚ್ಚಿ, ಜೀರ್ಣೊದ್ಧಾರಗೊಳಿಸಲಾಯಿತು. ಅದನ್ನು ‘ಮನ್ಮಥ ಹೊಂಡ’ವೆಂದು ಕರೆಯಲಾಗುತ್ತದೆ. ಇಲ್ಲಿಯವರೆಗೆ ಹಂಪಿಯಲ್ಲಿ ಸಿಕ್ಕಿರುವ ಅತಿದೊಡ್ಡ ಪುಷ್ಕರಣಿ ಅದು. ಈ ಪುಷ್ಕರಣಿಯಲ್ಲಿಯೇ ಪ್ರತಿ ವರ್ಷ ಪಂಪಾ ಮತ್ತು ವಿರೂಪಾಕ್ಷೇಶ್ವರನ ತೆಪ್ಪೋತ್ಸವ ಮಾಡಲಾಗುತ್ತದೆ.

ಕೆಲವು ವರ್ಷಗಳ ಹಿಂದೆಯಷ್ಟೇ ವಿರೂಪಾಕ್ಷೇಶ್ವರ ದೇಗುಲದ ಪರಿಸರದಲ್ಲಿ ನಿರ್ಮಿಸಿದ್ದ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಾಗ ಕಿರಿದಾದ ಪುಷ್ಕರಣಿ ಪತ್ತೆಯಾಗಿದೆ. ಅದರಲ್ಲಿ ತುಂಬಿಕೊಂಡಿರುವ ಹೂಳು ತೆಗೆದು, ಅಭಿವೃದ್ಧಿ ಪಡಿಸಲಾಗಿದ್ದು, ದೇವಸ್ಥಾನದ ಪರಿಸರಕ್ಕೆ ಹೊಸ ಮೆರಗು ಬಂದಂತಾಗಿದೆ.

ಇನ್ನು ರಾಣಿಸ್ನಾನಗೃಹ ಬಳಿಯ ನೀರಿನ ಅರವಟಿಕೆ ಸಮೀಪ ಕುಡಿಯುವ ನೀರಿನ ಪೈಪ್‌ಲೈನ್‌ ಜಾಲದ ಕುರುಹುಗಳನ್ನು ಹುಡುಕಿಕೊಂಡು ಉತ್ಖನನ ಕೈಗೊಂಡಾಗ ಮತ್ತೊಂದು ಬೃಹತ್‌ ಪುಷ್ಕರಣಿಯ ಕುರುಹುಗಳು ಪತ್ತೆಯಾಗಿವೆ. ಈಗಷ್ಟೇ ಅದರಲ್ಲಿ ತುಂಬಿಕೊಂಡಿರುವ ಹೂಳು ತೆಗೆಯುವ ಕೆಲಸ ಪ್ರಗತಿಯಲ್ಲಿದೆ. ಹೀಗೆ ಒಂದಾದ ನಂತರ ಒಂದು ಅಚ್ಚರಿಯ ಸಂಗತಿಗಳು ಹೊರಬೀಳುತ್ತಿವೆ.

ಹಂಪಿಯ ಪರಿಸರದಲ್ಲಿ ಸಿಗುತ್ತಿರುವ ನೀರಿನ ಪೈಪ್‌ಲೈನ್‌ ಕುರುಹುಗಳು, ಪುಷ್ಕರಣಿಗಳು ವಿಜಯನಗರದ ಅರಸರು ನೀರಿನ ಬಳಕೆಯ ವಿಚಾರದಲ್ಲಿ ಎಷ್ಟೊಂದು ವ್ಯವಸ್ಥಿತವಾದ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತಂದಿದ್ದರು ಎನ್ನುವುದು ಇದರಿಂದ ಗೊತ್ತಾಗುತ್ತದೆ.

‘ಕೃಷಿ ಮತ್ತು ಕುಡಿಯುವ ನೀರಿನ ವಿಚಾರದಲ್ಲಿ ಅರಸರಿಗೆ ಬಹಳ ದೂರದೃಷ್ಟಿ ಇತ್ತು ಎಂಬುದು ಈಗ ಸಿಕ್ಕಿರುವ ಕುರುಹುಗಳೇ ಸಾಕ್ಷಿ. ದೊಡ್ಡ ಕೆರೆಗಳನ್ನು ನಿರ್ಮಿಸಿ, ಅಲ್ಲಿ ನದಿಯ ನೀರು ಸಂಗ್ರಹಿಸಿಕೊಳ್ಳುತ್ತಿದ್ದರು. ಬಳಿಕ ಆ ನೀರು ಕಾಲುವೆ, ಪೈಪ್‌ಲೈನ್‌ ಮೂಲಕ ಗದ್ದೆಗಳಿಗೆ ಹರಿಸುತ್ತಿದ್ದರು. ಅದೇ ಪೈಪ್‌ಲೈನ್‌ ಜಾಲ ಪುಷ್ಕರಣಿಗಳಿಗೂ ವಿಸ್ತರಿಸಿದ್ದರು’ ಎನ್ನುತ್ತಾರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪುರಾತತ್ವ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಸಿ.ಎಸ್. ವಾಸುದೇವನ್‌.

‘ಅರಮನೆಯಿದ್ದ ಪ್ರಾಂಗಣದಲ್ಲಿ ಸಿಕ್ಕಿರುವ ಪುಷ್ಕರಣಿ ಬಹಳ ಆಕರ್ಷಕವಾಗಿದೆ. ಅದನ್ನು ಅರಸರು ಪೂಜೆ, ಇತ್ಯಾದಿ ಕೆಲಸಗಳಿಗಾಗಿ ಮಾತ್ರ ಬಳಸುತ್ತಿದ್ದರು. ರಾಜರ ಖಾಸಾ ಜಾಗದ ಹೊರಗೆ ಸಿಕ್ಕಿರುವ ಪುಷ್ಕರಣಿಗಳು ಆಕಾರದಲ್ಲಿ ಬಹಳ ದೊಡ್ಡದಾಗಿವೆ. ಅವುಗಳನ್ನು ನೀರು ಹಿಡಿದಿಡಲು ಕಟ್ಟಿಸಿರಬಹುದು. ಅವುಗಳ ನೀರನ್ನು ಎಲ್ಲರೂ ಉಪಯೋಗಿಸುತ್ತಿದ್ದರು’ ಎಂದು ಮಾಹಿತಿ ಹಂಚಿಕೊಂಡರು.

ನೀರಿನ ಜಾಲ ಎಲ್ಲೆಲ್ಲಿ ಹರಡಿಕೊಂಡಿದೆಯೋ ಅದರ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲು ಪುರಾತತ್ವ ಸರ್ವೇಕ್ಷಣ ಇಲಾಖೆಯು ಜಿ.ಪಿ.ಎಸ್‌. ನೆರವಿನಿಂದ ಸರ್ವೇ ನಡೆಸಲು ಮುಂದಾಗಿದೆ. ಅದರಿಂದ ಇನ್ನಷ್ಟು ಹೊಸ ವಿಷಯಗಳು ಹೊರಜಗತ್ತಿಗೆ ಗೊತ್ತಾಗಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು