ಭಾನುವಾರ, ಮಾರ್ಚ್ 26, 2023
31 °C

ಬುದ್ಧನ ನಾಡು ಭೂತಾನ್‌ನಲ್ಲಿ...

ಶ್ರೀರಂಜನಿ Updated:

ಅಕ್ಷರ ಗಾತ್ರ : | |

Prajavani

ಅನಂತ ದಿಗಂತದಲಿ, ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಹಸಿರನ್ನುಟ್ಟ ಗಿರಿಶಿಖರಗಳು. ಗಡಗಡ ನಡುಗಿಸುವ ಕುಳಿರ್ಗಾಳಿ. ಒಮ್ಮೊಮ್ಮೆ ಹತ್ತಿಯ ಹಿಂಜಿನಂತೆ, ಮಗದೊಮ್ಮೆ ಬಿಳಿಯ ಮದ್ದಾನೆಗಳಂತೆ ಮೋಡಗಳು. ಬೆಟ್ಟ ಬಿಟ್ಟಿಳಿಯುತ್ತಾ ಬಂದಂತೆ ಕಾಣುವ ಶುಭ್ರ ಸ್ಫಟಿಕ ‘ಚೂ’ಗಳು (ನದಿಗಳು).

ಇತ್ತ- ಬೆಟ್ಟದ ಕಣಿವೆಯಲ್ಲಿ ಬೆಂಕಿಪೆಟ್ಟಿಗೆಯನ್ನು ಜೋಡಿಸಿದಂತೆ ಕಾಣುವ ವಿಶಿಷ್ಟ ವಾಸ್ತುಶೈಲಿಯ ಮನೆಗಳು.ಹುಲ್ಲು ಮೇಯುವ ಸಾಮಾನ್ಯ ಗಾತ್ರಕ್ಕಿಂತಲೂ ದೊಡ್ಡದಾದ ದನಗಳು, ಕಣಿವೆಗಳನ್ನು ಬೈತಲೆಯಂತೆ ಸೀಳಿದ ಸಿಗ್ನಲ್‌ಗಳಿಲ್ಲದ ರಸ್ತೆಗಳಲ್ಲಿ ಪಾದಚಾರಿಗಳಿಗೆ ಮೊದಲ ಪ್ರಾಶಸ್ತ್ಯ ಕೊಟ್ಟು ಶಾಂತವಾಗಿ ಚಲಿಸುವ ಕಾರುಗಳು..!

ಹೀಗೆಲ್ಲ ಓದುವುದಕ್ಕೆ, ಕೇಳುವುದಕ್ಕೆ ಸ್ವಲ್ಪ ಉತ್ಪ್ರೇಕ್ಷೆ ಎನ್ನಿಸುತ್ತದೆ, ನಿಜ. ಆದರೆ, ಇದು ಉತ್ಪ್ರೇಕ್ಷೆಯಲ್ಲ. ನೆರೆಯ ರಾಜ್ಯ ಭೂತಾನ್‌ಗೆ ಹೋದಾಗ, ಅಲ್ಲಿ ಕಂಡ ದೃಶ್ಯಗಳಿವು. ಭಾರತ ಮತ್ತು ಒಂದು ಭಾಗ ಚೀನಾ ಆಕ್ರಮಿತ ಟಿಬೆಟ್ ಗಡಿಯನ್ನು ಹೊಂದಿರುವ, ಯಾವುದೇ ವಸಾಹತುಗಳಿಗೂ ಒಳಪಡದ ಈ ದೇಶದಲ್ಲಿ ಪ್ರಕೃತಿಯ ಸಿರಿವಂತಿಕೆ ಮಿನುಗುತ್ತಿದೆ. ಹೀಗಾಗಿ ಇದು ಪ್ರವಾಸಿಗರಿಗೆ ಸ್ವರ್ಗ ಸದೃಶ ತಾಣವಾಗಿದೆ.

ಬುದ್ಧನ ಆಪ್ತಶಿಷ್ಯ ಪದ್ಮಸಂಭವನಿಂದ (ಗುರು ರಿಂಪೋಚೆ) ಬೌದ್ಧ ಧರ್ಮ ಭೂತಾನ್‌ನಲ್ಲಿ ಪ್ರಚಾರಕ್ಕೆ ಬಂತು ಎನ್ನುತ್ತದೆ ಇತಿಹಾಸ. ಇದಕ್ಕೆ ಸಾಕ್ಷಿಯಾಗಿ ಅಲ್ಲಿ ಬೌದ್ಧಸ್ತೂಪಗಳು, ಝಾಂಗ್‍ಗಳು, ಲಖಾಂಗ್‍ಗಳು, ಮಾನೆಸ್ಟರಿಗಳು ಕಾಣುತ್ತವೆ. ರಾಜಧಾನಿ ಥಿಂಪುವಿನಲ್ಲಿರುವ ಬುದ್ಧ ದೋರ್ದೆನ್ಮಾಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.

ಇದು ಬುದ್ಧನ ನಾಡು

ಧ್ಯಾನಭಂಗಿಯಲ್ಲಿ ಕುಳಿತ ಶಾಂತಮೂರ್ತಿ ಬುದ್ಧನ ವಿಗ್ರಹ 52ಮೀಟರ್ ಉದ್ದವಿದೆ. ಈ ರೀತಿ ಕುಳಿತಿರುವ ಭಂಗಿಯ ಬುದ್ಧನ ಪ್ರತಿಮೆ ವಿಶ್ವದಲ್ಲೇ ಅತಿ ದೊಡ್ಡ ಪ್ರತಿಮೆ ಎಂಬ ಖ್ಯಾತಿಯೂ ಇದೆ. ವಾಂಗ್ ಚೂ ನದಿಯ ದಡದಲ್ಲಿರುವ ಈ ಜಾಗ ತಾಶಿಕ್‍ಝಾಂಗ್, ಥಿಂಪು ಝಾಂಗ್ ಎಂದೇ ಹೆಸರುವಾಸಿ. ಹಗಲೆಲ್ಲಾ ಸರ್ಕಾರಿ ಕಚೇರಿಯಾಗಿ ಕಾರ್ಯನಿರ್ವಹಿಸಿ, ಸಂಜೆ 5.30 ಗಂಟೆಯ ಮೇಲೆ ಸಾರ್ವಜನಿಕರಿಗೆ ಇಲ್ಲಿಗೆ ಭೇಟಿ ನೀಡಲು ಅವಕಾಶ ಕೊಡುತ್ತಾರೆ.

ಮೂಲ ಝಾಂಗ್ 1772ರಲ್ಲಿ ಅಗ್ನಿಗೆ ಆಹುತಿಯಾದ ಮೇಲೆ ಈಗಿರುವ ಕಟ್ಟಡ 1968ರಲ್ಲಿ ಮರು ನಿರ್ಮಾಣವಾಗಿದ್ದು ಎಂದು ಗೈಡ್‌ಗಳು ವಿವರಿಸುತ್ತಾರೆ. ವಿಶೇಷವಾದ ಬೌದ್ಧ ವಾಸ್ತುಶಿಲ್ಪ ಮತ್ತು ಕರಕುಶಲತೆಗೆ ಕೈಗನ್ನಡಿ ಇಲ್ಲಿನ ನ್ಯಾಷನಲ್ ಮೆಮೋರಿಯಲ್ ಚೋರ್ಟನ್. ದಂತ ಮತ್ತು ಚಿನ್ನದ ಬಣ್ಣದ ಸ್ತೂಪ ಪ್ರವಾಸಿಗರಿಗೆ ಮಾತ್ರವಲ್ಲ ಸ್ಥಳೀಯರಿಗೂ ಕೂಡ ವಿಶೇಷವಾದದ್ದು. ನ್ಯಾಷನಲ್ ಲೈಬ್ರರಿ, ಜಾನಪದ ವಸ್ತು ಸಂಗ್ರಹಾಲಯ, ಟೆಕ್ಸಟೈಲ್ ಮ್ಯೂಸಿಯಂ, ಕೆಲವೊಂದು ವ್ಯೂವ್ ಪಾಯಿಂಟ್‍ಗಳು ಥಿಂಪುವಿನ ಇತರ ವೀಕ್ಷಣೆಯ ಸ್ಥಳಗಳು.

ನಿಮಗೆ ಸುಯೋಗವಿದ್ದರೆ, ಭೂತಾನಿನ ರಾಷ್ಟ್ರೀಯ ಕ್ರೀಡೆ ‘ಆರ್ಚರಿ’ಯ(ಬಿಲ್ವಿದ್ಯೆ) ಪ್ರದರ್ಶನ ಅಥವಾ ಸ್ಪರ್ಧೆಯನ್ನು ನೋಡಬಹುದು. ರಾಷ್ರ್ಟೀಯ ಕ್ರೀಡೆಯ ಹೊರತಾಗಿ ಅವರಿಗೆ ಅದರಲ್ಲಿ ಭಾವನಾತ್ಮಕತೆಯ ಜೊತೆಗೆ ದೇಶದ ಸಂಸ್ಕೃತಿಯೂ ಬೆರೆತಿದೆ.

ಹಳ್ಳಿ–ನಗರದ ಮಿಶ್ರಣ

ಥಿಂಪುವಿಗೆ ಸ್ವಲ್ಪ ನಗರದ ಶೈಲಿಯ ಸ್ಪರ್ಶವಿದ್ದರೆ, 50ಕಿಮೀ ದೂರದಲ್ಲಿರುವ ಪಾರೊ ಪಟ್ಟಣ ಪಕ್ಕಾ ಹಳ್ಳಿ ಸೊಗಡಿನ ಊರು. ಬಯಲು ಪ್ರದೇಶದಂತಿರುವ ಇಲ್ಲಿ ಹೊಲ, ನದಿಗಳು ಯಥೇಚ್ಛ. ತಕ್ಷಂಗ್ ಅಥವಾ ಟೈಗರ್ ನೆಸ್ಟ್, ಪಾರೋ ಝಾಂಗ್ ಅಥವಾ ರಿನ್‍ಪುಂಗ್ ಝಾಂಗ್ ತಾಣಗಳು ಭೂತಾನ್‌ ರಾಷ್ಟ್ರದ ವಾಸ್ತುಶಿಲ್ಪಕ್ಕೆ ಹಿಡಿದ ಕನ್ನಡಿ.

ರಿನ್‍ಪುಂಗ್ ಝಾಂಗ್ ಗುರು ರಿಂಪೋಚೆಯಿಂದ ನಿರ್ಮಾಣಗೊಂಡಿದೆ. ಪಾರೊ ಶೆಚು ಎಂಬ ದೇಸಿಯ ಹಬ್ಬವನ್ನು ಆಚರಿಸುತ್ತಾರೆ ಇಲ್ಲಿ. ಇನ್ನು ‘ಟೈಗರ್ ನೆಸ್ಟ್‌’ಗೆ ಭೇಟಿ ನೀಡದಿದ್ದರೆ ಭೂತಾನಿನ ಪ್ರವಾಸ ಅಪೂರ್ಣ ಎನ್ನುತ್ತಾರೆ. ಗುರು ರಿಂಪೋಚೆ (ಪದ್ಮಸಂಭವ) ಇಲ್ಲಿಗೆ ಹುಲಿಯ ಮೇಲೆ ಸವಾರಿ ಮಾಡಿಕೊಂಡ ಬಂದ ಎಂಬ ದಂತಕತೆಯಿದೆ. ಇಲ್ಲಿಗೆ ತಲುಪಲು 4 ರಿಂದ 5ಗಂಟೆಗಳ ಏರುದಾರಿಯ ಕಾಲ್ನಡಿಗೆಯಾದರೂ, ಪ್ರಯಾಣದ ಅನುಭವ ಮಾತ್ರ ಅದ್ಭುತ.

ಕೆಂಪಕ್ಕಿ ಕಂಡಿತು...

ಕರಾವಳಿಗರ ಆಲ್ ಟೈಮ್ ಫೇವರಿಟ್ ಆದ ಕುಚ್ಚಲಕ್ಕಿ, ದೇಶ ಬಿಟ್ಟು ಹೊರ ನಡೆದಾಗ ಅಲ್ಲಿಯೂ ಅನಿರೀಕ್ಷಿತವಾಗಿ ಸಿಕ್ಕರೆ ಹೇಗಾಗಲಿಕ್ಕಿಲ್ಲ? ಸಖೇದಾಶ್ಚರ್ಯದ ಜೊತೆಗೆ ಖುಷಿಯೂ ಮೇಳೈಸುವುದು ಅಲ್ಲವೇ? ದಿನನಿತ್ಯದ ಆಹಾರದ ಭಾಗವಾದ ಅದನ್ನು ದಶಿಗಳ (Datshi) ಜೊತೆ ಸೇವಿಸುತ್ತಾರೆ. ‘ದಶಿ’ ಅಲ್ಲಿನ ದೇಸಿ ಆಹಾರ. ಯಾಕ್ ಚೀಸ್, ಆಲೂಗಡ್ಡೆ, ತರಕಾರಿಯಂತೆ ಹಸಿಮೆಣಸಿನಕಾಯಿಗಳನ್ನು ಬಳಸಿ ಮಾಡುವ ಖಾದ್ಯ. ವಿಶೇಷ ವಾದ ರುಚಿಯನ್ನು ನಾಲಿಗೆಗೆ ನೀಡುವಂಥದ್ದು. ಅಂತೆಯೇ ಅವರ ಸಿಹಿತಿಂಡಿಗಳ ಸೇವನೆ ಅಷ್ಟಕ್ಕಷ್ಟೇ. ಕರ್ನಾಟಕದ ವಿಶೇಷ ಮೈಸೂರು ಪಾಕ್ ಅನ್ನು ಆತ್ಮೀಯತೆಯ ದ್ಯೋತಕವಾಗಿ ಕೊಟ್ಟಾಗ ಡ್ರೈವರ್ ತನ್ನ ಹಲ್ಲು ಹಾಳಾಗುವುದೆಂದು ವ್ಯಥೆಪಟ್ಟ!

ಉಡುಗೆ–ತೊಡುಗೆ ವೈಶಿಷ್ಟ್ಯ

ನಮ್ಮಲ್ಲಿ ಒಂದೊಂದು ಪ್ರಾಂತ್ಯಕ್ಕೆ ಒಂದೊಂದು ವಿಶೇಷ ತೊಡುಗೆ ಇದ್ದಂತೆ ಅಲ್ಲಿಯೂ ಉಂಟು. ಪುರುಷರ ದಿರಿಸಿಗೆ ‘ಘೋ’ ಎಂದೂ ಮಹಿಳೆಯರ ದಿರಿಸಿಗೆ ‘ಕಿರಾ’ ಎಂದು ಕರೆಯುತ್ತಾರೆ. ಎಲ್ಲಾ ಸರ್ಕಾರಿ ನೌಕರರು, ಶಾಲಾ ಮಕ್ಕಳು ಇದನ್ನು ಧರಿಸುವುದು ಕಡ್ಡಾಯ. ಪ್ರವಾಸಿಗರಿಗೂ ಇದನ್ನು ಬಾಡಿಗೆಯ ಲೆಕ್ಕದಲ್ಲಿ ಕೊಡುವ ಅಂಗಡಿಗಳು ಇವೆ. ಆಸಕ್ತರು ಇದನ್ನು ಧರಿಸಿ, ಸ್ವಲ್ಪ ಹೊತ್ತಿನ ಮಟ್ಟಿಗೆ ಭೂತಾನಿಗರಾಗಬಹುದು.

ಸಂಪೂರ್ಣ ಗಿರಿಗಳಿಂದ ಆವರಿಸಿರುವುದರಿಂದ ಭೂತಾನ್‌ಗೆ ಭಾರತ, ರಕ್ಷಣಾ ಕ್ಷೇತ್ರ, ಅಣೆಕಟ್ಟುಗಳ ನಿರ್ಮಾಣ, ಹಣಕಾಸಿನ ವಿಚಾರದಲ್ಲಿ, ಆಹಾರ ಪೂರೈಕೆಯಲ್ಲಿ ಸಹಕಾರ ನೀಡುತ್ತಿದೆ. ಹೀಗಾಗಿ ಭಾರತೀಯರೆಂದರೆ ಅಲ್ಲಿನವರಿಗೆ ಗೌರವ.

ಭಾರತದಲ್ಲಿ ಲೋಕಸಭೆ ಚುನಾವಣೆ ನಡೆದು ಫಲಿತಾಂಶ ಪ್ರಕಟಗೊಳ್ಳುತ್ತಿದ್ದ ಸಮಯದಲ್ಲಿ ನಾವು ಅಲ್ಲಿದ್ದೆವು. ಅಲ್ಲಿನ ಜನ ಚುನಾವಣಾ ಫಲಿತಾಂಶವನ್ನು ಅತ್ಯಂತ ಆಸಕ್ತಿದಾಯಕವಾಗಿ ನೋಡುತ್ತಿದ್ದರು. ಮೋದಿ ಮತ್ತು ರಾಹುಲ್ ಗಾಂಧಿಯ ಹೆಸರುಗಳು ಅವರ ನಾಲಿಗೆಯಲ್ಲಿ ಸುಲಲಿತವಾಗಿ ಹರಿದಾಡುತ್ತಿತ್ತು.

ಹೋಗುವುದು ಹೇಗೆ ?

ರಸ್ತೆ ಅಥವಾ ವಿಮಾನದ ಮೂಲಕ ಭೂತಾನ್‌ ತಲುಪಬಹುದು. ಪಶ್ಚಿಮ ಬಂಗಾಳದ ಬಾಗ್ಡೋಗ್ರದಿಂದ ಭೂತಾನ್‌ನ ಪಾರೋಗೆ ವಾರಕ್ಕೆರಡು ಬಾರಿ ವಿಮಾನ ಹಾರಾಟ ನಡೆಸುತ್ತದೆ.

ವಿಮಾನ ಪ್ರಯಾಣ ಜೇಬಿಗೆ ಭಾರವೆನಿಸುವುದಾದರೆ ರಸ್ತೆಯ ಮೂಲಕ ತಲುಪಬಹುದು. ಭಾರತದ ಗಡಿ ಜಯಗಾಂವ್‍ರೆಗೆ ಒಂದು ವಾಹನ ಹೋಗುತ್ತದೆ(ಇಲ್ಲಿ ಭಾರತೀಯ ಕಚೇರಿ ದಾಖಲೆಗಳನ್ನು ಪರಿಶೀಲಿಸುತ್ತದೆ). ಒಂದು ವಾಹನ ಮತ್ತೆ ಭೂತಾನಿನ ಗಡಿ ಫುನ್‍ಶೋಲಿಂಗ್‌ನಿಂದ (ಇಲ್ಲಿ ಪ್ರವಾಸಿಗರ ಬಯೋಮೆಟ್ರಿಕ್ ಮತ್ತು ಫೋಟೊ ತೆಗೆದು ಅನುಮತಿ ಪತ್ರ ನೀಡುತ್ತಾರೆ) ಮತ್ತೊಂದು ವಾಹನದ ಮೂಲಕ ಪಯಣ ಮುಂದುವರಿಸಬೇಕು.

ಸುಮಾರು 170ಕಿಮೀ ದೂರದ ಘಾಟಿಯ ಪಯಣ ರಮಣೀಯ ದೃಶ್ಯದ ಜೊತೆ ಮಳೆ, ಮಂಜು, ಚಳಿಯ ಪ್ಯಾಕೇಜು ಅನುಭವ ನೀಡುತ್ತದೆ.

ಪಾಸ್‍ಪೋರ್ಟ್ ವಿಚಾರದಲ್ಲಿ ಭಾರತೀಯರಿಗೆ ಸಡಿಲಿಕೆ ಇದೆ. ಪಾಸ್‍ಪೋರ್ಟ್ ಇಲ್ಲದಿದ್ದರೆ ಮತದಾನದ ಗುರುತಿನ ಚೀಟಿಯನ್ನು ಸ್ವೀಕರಿಸುತ್ತಾರೆ. ಹಾಗೆಯೇ ಭಾರತದ ನೋಟುಗಳೂ ಅದೇ ಮುಖಬೆಲೆಯಲ್ಲಿ ಚಲಾವಣೆಗೊಳ್ಳುತ್ತವೆ.

ಸುಮಾರು 170ಕಿಮೀ ದೂರದ ಘಾಟಿಯ ಪಯಣ ರಮಣೀಯ ದೃಶ್ಯದ ಜೊತೆ ಮಳೆ, ಮಂಜು, ಚಳಿಯ ಪ್ಯಾಕೇಜು ಅನುಭವ ನೀಡುತ್ತದೆ. ಘಾಟಿ ರಸ್ತೆಗಳಾಗಿರುವುದರಿಂದ ದೀರ್ಘಪಯಣ ಬಳಲಿಕೆ ಮತ್ತು ವಾಂತಿಯ ಅನುಭವವೂ ಆಗುತ್ತದೆ. ಆ ಬಗ್ಗೆ ಎಚ್ಚರಿಕೆವಹಿಸಿದರೆ ಒಳ್ಳೆಯದು.

ಚಿತ್ರಗಳು: ಲೇಖಕರವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು