ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಸುತ್ತುವಏಕಾಂಗಿ ಬೈಕ್‌ ರೈಡರ್‌ ಬಜಾಜ್‌

Last Updated 26 ಜನವರಿ 2020, 19:45 IST
ಅಕ್ಷರ ಗಾತ್ರ

ನೋಡಲು ಹೂಭಾರದ ಹೆಣ್ಣು! ಆದರೆ, ಮಣಭಾರದ ಬೈಕ್‌ ಓಡಿಸುವಲ್ಲಿ ಇವರು ನಿಸ್ಸೀಮರು. ಒಂದೊಮ್ಮೆ ಬೈಕ್‌ ಪ್ರಿಯರ ಗುಂಪು ಸೇರಿಹರಿಯಾಣದ ಸ್ಪಿತಿ ವ್ಯಾಲಿಯಲ್ಲಿ ನಡೆಸಿದ ರೈಡಿಂಗ್‌ ಸಾಹಸದ ಸಂದರ್ಭದಲ್ಲಿ ಕುತ್ತಿಗೆಯ ನರ ತುಂಡಾದರೂ ಬೈಕ್‌ ಮೋಹ ಮಾತ್ರ ಬಿಡಲಿಲ್ಲ. ಇಂಥ ಸಾಹಸಗಾಥೆಯನ್ನು ‘ಮೆಟ್ರೊ’ ಜೊತೆ ಹಂಚಿಕೊಂಡ ಈ ಬೈಕ್‌ ರೈಡಿಂಗ್‌ ಗಟ್ಟಿಗಿತ್ತಿ ಹೆಸರು ಪೂಜಾ ಬಜಾಜ್‌.

‘ಬೈಕ್ ಅಥವಾ ಕಾರ್‌ ರೈಡಿಂಗ್‌ ನನ್ನ ಮಟ್ಟಿಗೆ ಸ್ವಾತಂತ್ರ್ಯ ಹಾಗೂ ಸಬಲೀಕರಣದ ಮಾರ್ಗ’ ಎಂದೇ ಮಾತಿಗಿಳಿದ ಪೂಜಾ, ದೇಶ ಸುತ್ತಬೇಕು ಎನ್ನುವ ಹಂಬಲದಿಂದ ರೈಡಿಂಗ್‌ ಆರಂಭಿಸಿದ್ದಂತೆ. ‘ಪಲ್ಸರ್‌ ಬೈಕ್‌ನಿಂದ ರೈಡಿಂಗ್‌ ಆರಂಭಿಸಿ ಈಗ ಕವಾಸಾಕಿ, ರಾಯಲ್‌ ಎನ್‌ಫೀಲ್ಡ್‌, ಹರ್ಲೆ ಡೇವಿಡ್‌ಸನ್‌ನಂತಹ ಬೈಕ್‌ಗಳಲ್ಲಿ ರೈಡ್‌ ಮಾಡುತ್ತೇನೆ’ ಎಂದು ಭುಜ ಕುಣಿಸುತ್ತಾರೆ. ಪೂಜಾ ನಗರದಲ್ಲಿ ‘ಸೋಲ್‌ಬ್ಲೇಜ್‌’ ಎಂಬ ಸ್ಪೋರ್ಟ್ಸ್‌, ಫಿಟ್‌ನೆಸ್‌ ಮ್ಯಾನೇಜ್‌ಮೆಂಟ್‌ ಸ್ಟಾರ್ಟ್‌ಅಪ್‌ ನಡೆಸುತ್ತಿದ್ದಾರೆ.

ಅದೇನು ರೈಡಿಂಗ್‌ ಹುಚ್ಚು..

ಅಪ್ಪನಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಇದ್ದಿದ್ದರಿಂದ ದೇಶದ ಬೇರೆ ಬೇರೆ ಭಾಗಗಳಿಗೆ ವರ್ಗಾವಣೆಯಗುತ್ತಿತ್ತು. ನಾನು 8ನೇ ತರಗತಿಯಲ್ಲಿದ್ದಾಗ ಲಖನೌದ ಹಳ್ಳಿಯಲ್ಲಿದ್ದೆವು. ಅಲ್ಲಿ ಸರಿಯಾದ ಸಾರಿಗೆ ಸೌಕರ್ಯಗಳಿರಲಿಲ್ಲ. ಅಮ್ಮ ಹುಷಾರು ತಪ್ಪಿದಾಗ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಕೈನೆಟಿಕ್‌ ಓಡಿಸುವುದನ್ನು ಕಲಿತೆ. ನಾನು ಮೊದಲು ಓಡಿಸಿದ ಬೈಕ್‌ ಬಜಾಜ್‌ ಚೇತಕ್‌. ಅಲ್ಲಿಂದ ನನಗೆ ಬೈಕ್‌ ಕ್ರೇಜ್‌ ಶುರುವಾಯಿತು.

ಬೇರೆ ಬೇರೆ ಪ್ರದೇಶಗಳಲ್ಲಿ ವಾಸವಾಗಿದ್ದರಿಂದ ಪ್ರಮುಖ ಸ್ಥಳಗಳಿಗೆ ಏಕಾಂಗಿಯಾಗಿ ರೈಡ್‌ ಹೋಗಿದ್ದೇನೆ. ಮೊದ ಮೊದಲು ಸಮೀಪದ ಸ್ಥಳಗಳಿಗೆ ಹೋಗುತ್ತಿದ್ದೆ. ನಂತರ 200, 400 ಕಿ. ಮೀ ದೂರದ ಸ್ಥಳಗಳಿಗೆ ರೈಡಿಂಗ್‌ ಹೋಗಲು ಆರಂಭಿಸಿದೆ. ಇದುವರೆಗೂ 500ಕ್ಕೂ ಹೆಚ್ಚು ಸ್ಥಳಗಳಿಗೆ ರೈಡಿಂಗ್‌ ಹೋಗಿದ್ದೇನೆ.

ಏಕಾಂಗಿ ಸಂಚಾರಿ..

ಒಂಥರ ಹಾಗೇ.. ಏಕಾಂಗಿಯಾಗಿ ದೂರದ ಸ್ಥಳಗಳಿಗೆ ಬೈಕ್‌ನಲ್ಲಿ ಹೋಗುವುದೆಂದರೆನನಗೆ ತುಂಬ ಇಷ್ಟ. ಮನೆಯಲ್ಲಿ ನನ್ನ ಇಂಥ ಆಸೆ, ಕನಸಿಗೆ ಮುಂಚೆ ಒಪ್ಪಿಗೆ ಇರಲಿಲ್ಲ. ‘ನೀವು ನನ್ನನ್ನು ಪ್ರೋತ್ಸಾಹಿಸಿದರೆ ಬೇರೆ ಹೆಣ್ಣುಮಕ್ಕಳಿಗೂ ಧೈರ್ಯ ಬರುತ್ತದೆ’ ಎಂದು ಪುಸಲಾಯಿಸಿ ಅವರ ಮನವೊಲಿಸಿದೆ. ಲಡಾಖ್‌, ಚಂಡೀಗಡ, ಹಿಮಾಲಯ ಸಮೀಪದ ಸ್ಥಳಗಳು, ಉತ್ತರ ಭಾರತ, ಶಿಮ್ಲಾ, ದಕ್ಷಿಣ ಭಾರತದ ಬೇರೆ ಬೇರೆ ಸ್ಥಳಗಳಿಗೆ ಒಬ್ಬಳೇ ರೈಡ್‌ ಹೋಗಿದ್ದೇನೆ. ಇಂಥ ರೈಡಿಂಗ್‌ನಲ್ಲಿ ಪ್ರಕೃತಿ ಸೌಂದರ್ಯದ ಜೊತೆಗೆ ದಾರಿಯುದ್ದಕ್ಕೂ ಎದುರುಗೊಳ್ಳುವ ಪ್ರದೇಶಗಳ ಜನಸಂಸ್ಕೃತಿ ವಿನೂತನ ಅನುಭವ ನೀಡುತ್ತದೆ.

ರೈಡಿಂಗ್‌ ಸಾಹಸದ ಜೊತೆ ಇನ್ನೇನು..

ಲಡಾಖ್‌, ಚಂಡೀಗಡಕ್ಕೆ ಹೋಗಿದ್ದು ನನ್ನ ಜೀವನದ ಅತ್ಯಂತ ಸಾಹಸಮಯ ರೈಡಿಂಗ್‌. ನಾನು ಹೋದಾಗ ಅಲ್ಲಿ ಹಿಮಪಾತ ಆಗುತ್ತಿತ್ತು. ನನಗೆ ಘಾಟ್‌ಗಳಲ್ಲಿ ಬೈಕ್‌ ಓಡಿಸುವುದು ಅಂದರೆ ತುಂಬ ಪ್ರಾಣ. ಹೇರ್‌ಪಿನ್‌ ತಿರುವುಗಳಲ್ಲಿ ಬೈಕ್‌ ಓಡಿಸುವುದಕ್ಕೆ ಜಾಗ್ರತೆ, ಎಚ್ಚರಿಕೆ ಅಗತ್ಯ. ಇಲ್ಲಿ ಚಾಲಕನ ನೈಪುಣ್ಯ ಕೆಲಸ ಮಾಡುತ್ತದೆ. ಮಹಿಳಾ ಸಬಲೀಕರಣ, ಹೆಣ್ಣುಮಕ್ಕಳಿಗೆ ಶಿಕ್ಷಣದ ಅಗತ್ಯ ಇತ್ಯಾದಿ ಸಾಮಾಜಿಕ ಕಳಕಳಿಯ ಸಂದೇಶ ಹೊತ್ತು ದೇಶದಾದ್ಯಂತ ಸಂಚರಿಸಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದೇನೆ. ಮುಂಬೈ, ಹರಿಯಾಣದಲ್ಲಿ ಡ್ರಗ್‌ ವಿರೋಧಿ ಅಭಿಯಾನ ಕೈಗೊಂಡಿದ್ದೆ. ಭವಿಷ್ಯದಲ್ಲಿ ಬೈಕ್‌ ರೈಡಿಂಗ್‌ಗೆ ಮಹಿಳೆಯರನ್ನು ಪ್ರೋತ್ಸಾಹಿಸುವ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸುವ ಹಂಬಲವಿದೆ.

ನಾನು ಫಿಟ್‌ನೆಸ್‌ ಪ್ರಿಯೆ. ರೈಡಿಂಗ್‌ ಸಮಯದಲ್ಲಿ ಲೈಟ್‌ ಫುಡ್‌ ತೆಗೆದುಕೊಳ್ಳುತ್ತೇನೆ. ಹಣ್ಣುಗಳು, ಎಳನೀರು, ಕಬ್ಬಿನ ರಸ, ಕಿತ್ತಳೆ ಜ್ಯೂಸ್‌ ಇದೇ ನನಗೆ ಆಧಾರ. ಇದು ದೇಹದಲ್ಲಿ ನೀರಿನಾಂಶವನ್ನು ಕಾಯ್ದುಕೊಳ್ಳಲು ಸಹಾಯ.

ಹರಿಯಾಣದ ಅನುಭವ ಹೇಗಿತ್ತು..

ಅದು 2019ರ ಜೂನ್‌ ತಿಂಗಳು. ಹರಿಯಾಣದ ಸ್ಪಿತಿ ವ್ಯಾಲಿಗೆ ಬೈಕ್‌ನಲ್ಲಿ ಹೋಗಿದ್ದೆ. ಬೆಂಗಳೂರಿನಿಂದ ಒಬ್ಬಳೇ ಹೋಗಿ ಅಲ್ಲಿನ ಬೈಕ್‌ಪ್ರಿಯರ ಗುಂಪು ಸೇರಿಕೊಂಡಿದ್ದೆ. ನಾವು ತಲುಪಬೇಕಾದ ಗುರಿಗೆ ಐದಾರು ಕಿ. ಮೀಗಳಿತ್ತಷ್ಟೇ. ಅಲ್ಲೊಂದು ತಿರುವಿನಲ್ಲಿ ನನ್ನ ಮುಂದಿದ್ದ ಬೈಕ್‌ ಇಂಡಿಕೇಟರ್‌ ಹಾಕದೇ ತಿರುವು ಪಡೆದುಕೊಂಡಿತು. ನನ್ನ ಬೈಕ್‌ ಆ ಬೈಕ್‌ಗೆ ಗುದ್ದಿ ಕೆಳಕ್ಕೆ ಬಿದ್ದೆ. ಆ ರಭಸಕ್ಕೆ ಬಲಭಾಗದಲ್ಲಿ ಕುತ್ತಿಗೆ ನರ(ಕಾಲರ್‌ ಮೂಳೆ) ತುಂಡಾಯಿತು. ಸಮೀಪದಲ್ಲಿ ಆಸ್ಪತ್ರೆ ಇರಲಿಲ್ಲ. ಅಲ್ಲಿಂದ ಚಂಡೀಗಡ ತಲುಪಲು ಮೂರು ದಿನ ಬೇಕು. ನೋವು ನಿವಾರಕ ಮಾತ್ರೆ ತಿನ್ನುತ್ತಾ ಚಂಡೀಗಡ ತಲುಪಿದೆ.

ಆಸ್ಪತ್ರೆ ತಲುಪಿದಾಗ ವೈದ್ಯರು ಇದು ಕಾಂಪ್ಲಿಕೇಟೆಡ್‌ ಕೇಸ್‌ ಎಂದರು. ಬೆಂಗಳೂರು ವೈದ್ಯರ ಜೊತೆ ಮಾತನಾಡಿ, ಮಣಿಪಾಲ್‌ ಆಸ್ಪತ್ರೆಗೆ ದಾಖಲಾದೆ. ಕುತ್ತಿಗೆ ಭಾಗ ಆಪರೇಷನ್‌ ಮಾಡೋದಕ್ಕೆ ಆಗದಷ್ಟು ಬಾತುಕೊಂಡಿತ್ತು. ಆರು ದಿನದ ನಂತರ ವೈದ್ಯರು ಸರ್ಜರಿ ಮಾಡಿ ಟೈಟೇನಿಯಂ ರಾಡ್‌ ಆಳವಡಿಸಿದರು. ಆ ದಿನಗಳನ್ನು ನೆನಪಿಸಿಕೊಂಡರೆ ಮೈ ಜುಮ್‌ ಎನಿಸುತ್ತದೆ.

ಮನೆಯವರು ರೈಡಿಂಗ್‌ ಹೋಗದಂತೆ ಗದರಿಸಿದರು. ರೈಡಿಂಗ್‌ಗೆ ಫಿಟ್‌ನೆಸ್‌ ತುಂಬ ಮುಖ್ಯ. ಜಿಮ್‌ ಶುರು ಮಾಡಿದೆ. ದೇಹದ ಮೇಲ್ಭಾಗ ನೋವಿದ್ದರಿಂದ ಬರೀ ಕಾಲುಗಳಿಗೆ ವ್ಯಾಯಾಮ ಮಾಡಿದೆ. ಗಾಯ ಒಣಗುತ್ತಿದ್ದಂತೆ ನಗರದಲ್ಲೇ ಬೈಕ್‌ ಓಡಿಸಲು ಆರಂಭಿಸಿದೆ. ಸರ್ಜರಿ ಬಳಿಕ ಗೋವಾ ಹಾಗೂ ಅನಂತಪುರಕ್ಕೆ 500– 600 ಕಿ.ಮೀ ಸೋಲೋ ರೈಡಿಂಗ್‌ ಹೋಗಿದ್ದೇನೆ.

ಏಕಾಂಗಿ ಸವಾರಿಯಲ್ಲಿ ಭಯ, ಆತಂಕ..

ನನಗೆ ಮಾರ್ಷಲ್‌ ಆರ್ಟ್‌ ಚೆನ್ನಾಗಿ ಗೊತ್ತು. ಉತ್ತರ ಭಾರತದ ಕೆಲ ಪ್ರದೇಶಗಳಲ್ಲಿ ಸಂಜೆಯಾಗುತ್ತಿದ್ದಂತೆ ರಸ್ತೆಗಳು ನಿರ್ಜನವಾಗುತ್ತವೆ. ಒಬ್ಬಳೇ ಬೈಕ್‌ನಲ್ಲಿ ಹೋಗಿದ್ದಿದೆ. ಆ ಸಮಯದಲ್ಲಿ ಇಂಥ ವಿದ್ಯೆ ಧೈರ್ಯ ತುಂಬಬಲ್ಲುದು. ನಿರ್ಜನ ಪ್ರದೇಶದಲ್ಲಿ ಬೈಕ್‌ ಕೈ ಕೊಟ್ಟಾಗ ಅದನ್ನು ಸರಿ ಮಾಡಿ, ಮುಂದಕ್ಕೆ ಹೋಗಿದ್ದೂ ಇದೆ. ಚೂರಿ, ಪೆಪ್ಪರ್‌ ಸ್ಪ್ರೇ ಬ್ಯಾಗ್‌ನಲ್ಲಿ ಇಟ್ಟುಕೊಂಡಿರುತ್ತೇನೆ. ಮೋಟಾರ್‌ ಬೈಕ್‌ ರೇಸ್‌ಗಳಲ್ಲೂ ಪಾಲ್ಗೊಳ್ಳುತ್ತೇನೆ. ಮೈಸೂರು, ಕೊಯಮತ್ತೂರು, ಮುಂಬೈನಲ್ಲಿ ನಡೆದ ರೇಸ್‌ಗಳಲ್ಲಿ ಭಾಗವಹಿಸಿದ್ದೇನೆ. ಬೈಕ್‌ನಲ್ಲಿ ಅಂತರರಾಷ್ಟ್ರೀಯ ಪ್ರವಾಸ ಮಾಡಬೇಕೆಂಬ ಗುರಿಯಿದೆ. 2021ರಲ್ಲಿ ಈ ಆಸೆಯನ್ನು ಈಡೇರಿಸಿಕೊಳ್ಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT