ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕ್ಕಿಂನ ‘ಚಾರ್‌ಧಾಮ್’

Last Updated 21 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಸಿಕ್ಕಿಂ ಪ್ರವಾಸಕ್ಕೆ ಹೋಗಿದ್ದೆವು. ಅಲ್ಲಿ ನಮ್ಮ ಗೈಡ್ ‘ಇಂದಿನ ಪ್ರವಾಸ ಚಾರ್‌ಧಾಮ್’ ಕಡೆಗೆ ಎಂದು ಹೇಳಿದ. ನಮಗೆಲ್ಲ ಆಶ್ಚರ್ಯ. ಚಾರ್‌ಧಾಮ್‌ನಲ್ಲಿರುವ ಯಾವ ದೇವಾಲಯಗಳು ಹತ್ತಿರದಲ್ಲಿ ಎಲ್ಲೂ ಇಲ್ಲ. ಇನ್ನೆಲ್ಲಿಯ ಚಾರ್‌ಧಾಮ್ ಯಾತ್ರೆಗೆ ಹೋಗೋದು? ಓಹೋ.. ಆ ದೇವಾಲಯಗಳ ಮಾದರಿ ಇಲ್ಲಿರಬಹುದೇನೋ… ಹೀಗೆ ಒಂದಷ್ಟು ಪ್ರಶ್ನೆಗಳನ್ನು ಹಾಕಿಕೊಂಡು, ಮನಸ್ಸಿನಲ್ಲಿ ಕುತೂಹಲ ಮೂಡಿಸಿಕೊಂಡೆವು. ಗೈಡ್ ಬಳಿ ಕೇಳಿದೆವು.

‘ಸ್ವಲ್ಪ ತಡೆಯಿರಿ. ಆ ಜಾಗದ ಸಮೀಪ ಹೋಗುವವರೆಗೂ ನಿಮ್ಮ ಕುತೂಹಲವನ್ನು ಹಾಗೆ ಇಟ್ಟುಕೊಳ್ಳಿ’ ಎಂದು ಹೇಳಿದರು. ಆಗ ನಮಗೆ ಇನ್ನೂ ಕುತೂಹಲ ಹೆಚ್ಚಾಯಿತು. ತಲೆಯಲ್ಲಿ ಚಾರ್‌ಧಾಮ್ ಕಲ್ಪನೆಗಳು ವೈವಿಧ್ಯಮಯವಾಗಿ ಓಡಾಡತೊಡಗಿದವು.

ಸಿಲಿಗುರಿಯಿಂದ ನಮ್ಮನ್ನ ಹೊತ್ತ ವಾಹನ ಪಶ್ಚಿಮ ಬಂಗಾಳದಿಂದ ಸಿಕ್ಕಿಂ ಕಡೆಗೆ ಪ್ರಯಾಣ ಬೆಳೆಸಿದಾಗ ವಾತಾವರಣದಲ್ಲೂ ಬದಲಾವಣೆಯಾಗಿದ್ದು ಅರಿವಿಗೆ ಬಂತು. ತೀಸ್ತಾ ನದಿಯ ಸುತ್ತಲೂ ಸಾಗುತ್ತ ಸಿಕ್ಕಿಂ ರಾಜ್ಯ ಪ್ರವೇಶಿಸುತ್ತಿದ್ದಂತೆ ಏಪ್ರಿಲ್ ಬೇಸಿಗೆಯಲ್ಲೂ ಹಿಮಾಲಯದ ತಪ್ಪಲಿನ ಅರಣ್ಯ ತಂಪಿನ ಅನುಭವ ನೀಡಿತು. ಇಲ್ಲಿಂದ ನಾವು ತಲುಪಿದ್ದು ನಾಮಚಿಯೆಂಬ ಚಿಕ್ಕ ಪಟ್ಟಣವನ್ನು. ಇಲ್ಲಿನ ಸುಂದರ ಸ್ವಚ್ಛ ಪರಿಸರವನ್ನು ಆನಂದಿಸುತ್ತಾ ಸಾಗಿದಾಗ ಸುಮಾರು 5 ಕಿ ಮೀ ದೂರದಲ್ಲಿ ಸೊಲೊಫಾಕ್ ಎಂಬ ಬೆಟ್ಟ ಕಂಡಿತು. ಹಿಂದಿನ ಮುಖ್ಯಮಂತ್ರಿ ಇಲ್ಲಿನವರೇ ಆದ್ದರಿಂದ ಈ ಜಾಗವನ್ನು ಸಾಕಷ್ಟು ಅಭಿವೃದ್ಧಿಪಡಿಸಿದ್ದರು. ಹೀಗಾಗಿ ನಾಮಚಿ ಬಜಾರ್ ಭಾರತದ ಉಳಿದ ಬಜಾರ್ ನೋಡಿದ್ದ ನಮಗೆ ಹೊಸ ಸುಂದರ ಬಜಾರ್ ದರ್ಶನವಾಯಿತು. ಇಲ್ಲಿಂದ ನಮ್ಮ ಕುತೂಹಲದ ಚಾರ್‌ಧಾಮ್‌ನತ್ತ.

ಸುಮಾರು 6ಸಾವಿರ ಅಡಿ ಎತ್ತರದ ಈ ಬೆಟ್ಟವನ್ನು ಏರಿದಾಗ ಹೊಸ ಲೋಕವೊಂದು ಕಂಡಂತಾಯಿತು. ನಮ್ಮನ್ನ ಕಾಡಿದ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿತೇ ಎಂಬಂತೆ ನಮ್ಮ ಗೈಡ್ ನಮ್ಮನ್ನು ನೋಡಿದರು. ಸಿದ್ದೇಶ್ವರ ಧಾಮ್ ಎಂದು ಕರೆಯಲಾಗುವ ಇಲ್ಲಿ ಇದ್ದ ಚಾರ್‌ಧಾಮ್‌ ದೇವಾಲಯಗಳೇ ಬೇರೆಯದು.

ಇಲ್ಲಿ, ಭಾರತದ ಬೇರೆ ಭಾಗಗಳಿಂದ ಆಯ್ದ ದೇವಾಲಯಗಳ ಪ್ರತಿಕೃತಿಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರವಾಸಿಗರ ಆಕರ್ಷಣೆಗೆ ಸಿಕ್ಕಿಂ ಸರ್ಕಾರವೇ ನಿರ್ಮಾಣ ಮಾಡಿರುವ ಪ್ರತಿಕೃತಿಗಳಿವು. ಇಲ್ಲಿ ಬದರಿಯ ಬದರಿನಾಥ, ಪುರಿಯ ಜಗನ್ನಾಥ, ದ್ವಾರಕ ಮತ್ತು ರಾಮೇಶ್ವರಂ ದೇವಾಲಯಗಳ ಪ್ರತಿಕೃತಿಗಳಿವೆ. ಆ ಇಡೀ ಪ್ರತಿಕೃತಿಗಳ ಸಮೂಹ ನಿಜಕ್ಕೂ ‘ಚಾರ್‌ಧಾಮ್’ ಯಾತ್ರೆ ಮಾಡಿಸಿದಂತ್ತಿತ್ತು. ‘ಈಗ ಹೇಳಿ, ನಿಮ್ಮ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತೇ’ ಎಂದು ಗೈಡ್ ಕೇಳಿದಾಗ, ‘ಖಂಡಿತ ಸಿಕ್ಕಿತು’ ಎಂದು ತಲೆಯಲ್ಲಾಡಿಸಿದೆವು.

ಈ ದೇವಾಲಯಗಳ ನೋಡಿ ಮೇಲೆ ಬಂದರೆ ನಮಗೆ ಕಾಣಸಿಗುವುದೇ ಬೃಹತ್ ನಂದಿ ಹಾಗೂ ಎದುರಲ್ಲಿ ಬೃಹತ್ ಶಿವನ ಮೂರ್ತಿ ಜತೆಗೆ ಸುತ್ತಲೂ ಭಾರತದಲ್ಲಿನ 12 ಜ್ಯೋತಿರ್ಲಿಂಗ ದೇವಾಲಯಗಳು. ಶಿವನ ದೇವಾಲಯದಲ್ಲಿನ ಶಿವನ ಕಥೆಗಳು, ಶಿವ ಪಾರ್ವತಿ ವಿವಾಹ, ಶಿವನ ಅವತಾರದ ಹಲವು ಕಥೆಗಳ ಉಬ್ಬು ಶಿಲ್ಪಗಳ ಕೆತ್ತನೆ ನಮ್ಮನ್ನು ಮೂಕ ವಿಸ್ಮಿತ ಮಾಡಿತು. ಇಲ್ಲಿ 17 ಅಡಿ ಎತ್ತರದ ಸುಂದರ ಕಿರಾತೇಶ್ವರನ ಪ್ರತಿಮೆ ಇದೆ.

ಈ ದೇವಾಲಯದ ಪ್ರಾಂಗಣವೇ ಸುಂದರವಾಗಿತ್ತು. ಪ್ರಾಂಗಣದಲ್ಲಿ ಧಾರ್ಮಿಕ ಹಾಗೂ ಸುಂದರ ಪ್ರಶಾಂತ ವಾತಾವರಣವಿತ್ತು. ವಾತಾವರಣ ಪೂರಕವಾಗಿದಲ್ಲಿ ಕಾಂಚನಗಂಗಾ ಪರ್ವತದ ಸುಂದರ ದೃಶ್ಯವನ್ನೂ ನೋಡಬಹುದು.

ಚಾರ್‌ಧಾಮ್ ನೋಡಿಕೊಂಡು ಹೊರಟು ಸುಮಾರು 7500 ಅಡಿ ಎತ್ತರದ ಸಮದುಪ್ಚೆ ತಲುಪಿದಾಗ ಸುಮಾರು 135 ಅಡಿ ಎತ್ತರದ ಸುಂದರದ ಗುರುಪದ್ಮಸಂಭವ ಮೂರ್ತಿ ದರ್ಶನವಾಯಿತು. ಇಲ್ಲಿನ ರಾಕ್ ಗಾರ್ಡನ್ ಸುಂದರವಾಗಿದ್ದು ರೋಪ್ ವೇನಲ್ಲಿ ಹೋಗುವುದೇ ಒಂದು ಖುಷಿ. ಇಲ್ಲಿನ ಮೇಲಿಂದ ಹೊಸ ಲೋಕವನ್ನೇ ನೋಡಿದೆವು. ಹಿಮಾಲಯ ಬೆಟ್ಟದ ಸುಂದರ ಚಿತ್ರಣ ಇಲ್ಲಿ ಕಣ್ಣಿಗೆ ಕಟ್ಟಿದಂತಾಯಿತು.

ಹೋಗುವುದು ಹೇಗೆ?

ಬೆಂಗಳೂರಿನಿಂದ ರೈಲು (ನ್ಯೂ ಜಲಪೈಗುರಿ) ಅಥವಾ ವಿಮಾನದ (ಭಾಗ್ದೋದರ) ಮೂಲಕ ಸಿಲಿಗುರಿ ತಲುಪಿದರೆ ಅಲ್ಲಿಂದ ಸುಮಾರು 3 ಗಂಟೆ ಪ್ರಯಾಣ (90 ಕಿ ಮೀ) ಪ್ರವಾಸಿ ವಾಹನಗಳು ರೈಲು ಮತ್ತು ವಿಮಾನ ನಿಲ್ದಾಣದಲ್ಲಿಯೇ ಸಿಗುತ್ತದೆ. ನೋಂದಾಯಿತ ಪ್ರವಾಸಿ ಟ್ರಾವಲ್ಸ್ ಮೂಲಕವೂ ಹೋಗಬಹುದು.

ಇನ್ನೇನು ನೋಡಬಹುದು

ಸುಮಾರು 20 ಕಿ. ಮೀ. ದೂರದಲ್ಲಿ ಬುದ್ದನ ಬೃಹತ್ ಪ್ರತಿಮೆ ಇರುವ ರಾವಲಂಗ, 60 ಕಿ ಮೀ ದೂರದಲ್ಲಿನ ಪೆಲ್ಲಿಂಗನ ಭಾರತದ ಏಕ ಮಾತ್ರ ಗಾಜಿನ ಸೇತುವೆ, ಕಾಂಚನಗಂಗ ಜಲಪಾತ ಹಾಗೂ ಹಿಮಾಲಯದ ಶ್ರೇಣಿಯ ಸುಂದರ ಚಿತ್ರಣ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT