ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾಂಬಿಕೆ ಐಕ್ಯಮಂಟಪ

Last Updated 18 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

‌ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು– ಎಂ.ಕೆ. ಹುಬ್ಬಳ್ಳಿಯ ನಡುವೆ ಕಾಣಿಸುವ ಈ ಸ್ಮಾರಕ ಪ್ರಯಾಣಿಕರ ಗಮನಸೆಳೆಯುತ್ತದೆ. ಅಷ್ಟೇ ಅಲ್ಲ, ‘ಇದೇನಿದು‘ ಎಂಬ ಪ್ರಶ್ನೆ ಹೊರಗಿನವರಿಗೆ ಮೂಡುತ್ತದೆ.

ಅದು ಜಗಜ್ಯೋತಿ ಬಸವೇಶ್ವರರ ಧರ್ಮಪತ್ನಿ ಶರಣೆ ಗಂಗಾಬಿಕೆ ಅವರ ಐಕ್ಯಮಂಟಪ. ಆ ದಾರಿಯಲ್ಲಿ ಸಾಗುವವರಿಗೆ, ಆ ಮಂಟಪದ ಮಾಹಿತಿ ಸಿಕ್ಕರೆ, ಅಲ್ಲಿಗೆ ಭೇಟಿ ಕೊಡದೇ ಇರುವುದಿಲ್ಲ.

ಮಲಪ್ರಭಾ ನದಿಯಲ್ಲಿರುವ ಗಂಗಾಬಿಕೆ ಐಕ್ಯವಾದ ಈ ಸ್ಥಳವನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ. ಐಕ್ಯಸ್ಥಳದ ಸುತ್ತಲೂ 40 ಅಡಿ ಎತ್ತರದ ಒಣ ಬಾವಿ ಮತ್ತು ಸೇತುವೆ ಕಟ್ಟಲಾಗಿದೆ. ಒಣಬಾವಿ ಒಳಗೆ ಹೋಗಿ ಬರಲು ಎರಡೂ ಬದಿಗಳಲ್ಲಿ ಮೆಟ್ಟಿಲುಗಳಿವೆ. ಮೇಲ್ಭಾಗದಲ್ಲಿ 60 ಅಡಿ ವ್ಯಾಸದ ಗೋಪುರವಿದೆ. ನದಿ ದಡದಿಂದ ಮಣ್ಣು ನೀರಿನಲ್ಲಿ ಕೊಚ್ಚಿ ಹೋಗದಂತೆ ತಡೆಗೋಡೆ ಹಾಕಿದ್ದಾರೆ. ಸಂಪರ್ಕ ಸೇತುವೆಗೆ ಗ್ರಾನೈಟ್‌ ಕಲ್ಲಿನ ಫ್ಲೋರಿಂಗ್ ಮತ್ತು ಚಾವಣಿಗೆ ಸ್ಟೇನ್‌ಲೆಸ್ ಸ್ಟೀಲ್ ಶೀಟ್‌ಗಳನ್ನು ಹಾಕಲಾಗಿದೆ.

ಗೋಪುರಕ್ಕೆ ಗಾಜಿನ ಪ್ರತಿಫಲಕ ಅಳವಡಿಸಿ ಸ್ಮಾರಕದೊಳಗೆ ಬೆಳಕು ಬೀಳುವಂತೆ ವಿನ್ಯಾಸ ಮಾಡಲಾಗಿದೆ. ಅಮೆರಿಕದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಗೋಪುರದ ಮಾದರಿಯಲ್ಲಿ ಈ ಗೋಪುರವಿದೆಯಂತೆ. ಚಾವಣಿಯು ಗರುಡದ ರೆಕ್ಕೆಯ ಮಾದರಿಯಲ್ಲಿದೆ. ಪ್ರವೇಶ ದ್ವಾರದಲ್ಲಿ ₹ 4 ಲಕ್ಷ ವೆಚ್ಚದಲ್ಲಿ ಗಂಗಾಂಬಿಕೆ ಕಂಚಿನ ಮೂರ್ತಿ ಸ್ಥಾಪಿಸಿದ್ದಾರೆ.

ಎಂ.ಕೆ. ಹುಬ್ಬಳ್ಳಿಯಿಂದ 1 ಕಿ.ಮೀ., ಜಿಲ್ಲಾ ಕೇಂದ್ರ ಬೆಳಗಾವಿಯಿಂದ ಪುಣೆ–ಬೆಂಗಳೂರು ರಸ್ತೆಯಲ್ಲಿ 30 ಕಿ.ಮೀ. ದೂರದಲ್ಲಿ ಈ ಸ್ಥಳವಿದೆ. ಮಳೆಗಾಲ ಅಥವಾ ಚಳಿಗಾಲದಲ್ಲಿ ಇಲ್ಲಿನ ಸೊಗಸು ಕಣ್ಣುಗಳಿಗೆ ಹಬ್ಬ. ಡಿಸೆಂಬರ್ ಕೊನೆಯಲ್ಲಿ ಇಲ್ಲಿಗೆ ಪ್ರವಾಸ ಹೊರಟರೆ, ಹೊಲ–ಗದ್ದೆಗಳ ಹಸಿರು ಪರಿಸರದ ನಡುವೆ, ಹಕ್ಕಿ–ಪಕ್ಷಿಗಳ ಚಿಲಿಪಿಲಿಯೂ ಬೋನಸ್‌. ಆ ಸುಂದರ ಪರಿಸರದ ಹಿನ್ನೆಲೆಯಲ್ಲಿ ಪ್ರಶಾಂತವಾಗಿ ಹರಿಯುವ ಮಲಪ್ರಭಾ ನದಿಯ ನಡುವಿರುವ ಈ ಸ್ಥಳದ ಸೌಂದರ್ಯ ಈ ಸಮಯದಲ್ಲಿ ಇಮ್ಮಡಿಯಾಗುತ್ತದೆ.

ವರ್ಷಪೂರ್ತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ರಜೆ ದಿನಗಳು ಮತ್ತು ಚಳಿಗಾಲದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು. ಇದು ಅಪಾರ ಸಂಖ್ಯೆಯ ಶರಣಾಭಿಮಾನಿಗಳ ಭಕ್ತಿಯ ಕ್ಷೇತ್ರವಾಗಿ ಹೊರಹೊಮ್ಮಿದೆ. ನಿತ್ಯ 500 ರಿಂದ 600 ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಶಾಲಾ ಮಕ್ಕಳಿಗೆ ಹೇಳಿ ಮಾಡಿಸಿದ ‘ಪಿಕ್‌ನಿಕ್‌ ಸ್ಪಾಟ್‌’ನಂತಾಗಿ ಹೋಗಿದೆ. ಏಕೆಂದರೆ, ಈ ಭಾಗದ ಬಹಳಷ್ಟು ಶಾಲೆಗಳವರು ಮಕ್ಕಳನ್ನು ಇಲ್ಲಿಗೆ ಕರೆತರುವುದು ಸಾಮಾನ್ಯವಾಗಿದೆ.

ಸರ್ಕಾರವು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದ ಮೂಲಕ ₹ 5.20 ಕೋಟಿ ವೆಚ್ಚದಲ್ಲಿ ಈ ಸುಂದರ ಸ್ಮಾರಕ ಅಭಿವೃದ್ಧಿಪಡಿಸಿದೆ.ಹಿಂದೆ ಜೆಡಿಎಸ್-ಬಿಜೆಪಿ ಸಮಿಶ್ರ ಸರ್ಕಾರವಿದ್ದಾಗ ಶರಣೆ ಗಂಗಾಂಬಿಕಾ ಟ್ರಸ್ಟ್‌ನವರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಅಂದಿನ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಮಾರಕ ನಿರ್ಮಾಣದ ಭರವಸೆ ನೀಡಿದ್ದರು. 2009ರ ಏಪ್ರಿಲ್‌ನಲ್ಲಿ ಆರಂಭವಾದ ನಿರ್ಮಾಣ ಕಾರ್ಯ 2011ರ ಜೂನ್‌ನಲ್ಲಿ ಪೂರ್ಣಗೊಂಡಿತ್ತು. 2012ರ ಜ. 15ರಂದು ಯಡಿಯೂರಪ್ಪ ಲೋಕಾರ್ಪಣೆ ಮಾಡಿದ್ದರು.

ಕೂಡಲಸಂಗಮದ ಬಸವಣ್ಣನವರ ಐಕ್ಯ ಮಂಟಪಕ್ಕಿಂತ ವಿನೂತನ ಮಾದರಿಯಲ್ಲಿ ಈ ಐಕ್ಯಮಂಟಪವನ್ನೂ ಅಭಿವೃದ್ಧಿಪಡಿಸಲಾಗಿದೆ. ನದಿಯ ಒಡಲಿನೊಳಗಿನಿಂದ ಕಟ್ಟಡವನ್ನು ಎತ್ತರಿಸಲಾಗಿದೆ. ಸ್ಮಾರಕದ ಒಟ್ಟಾರೆ ಎತ್ತರ 105 ಅಡಿಗಳಷ್ಟು.

ಮಕರ ಸಂಕ್ರಮಣದಲ್ಲಿ ಜಾತ್ರೆ

ಮಕರ ಸಂಕ್ರಮಣ ಹಬ್ಬದ ಸಂದರ್ಭದಲ್ಲಿ ಇಲ್ಲಿ ಎರಡು ದಿನಗಳ ಕಾಲ ಇಲ್ಲಿ ಜಾತ್ರೆ ನಡೆಯುತ್ತದೆ. ವಿವಿಧೆಡೆಯಿಂದ ಬರುವ ಸಾವಿರಾರು ಭಕ್ತರು ಮಲಪ್ರಭಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಗಂಗಾಂಬಿಕೆ ಐಕ್ಯಮಂಟಪಕ್ಕೆ ನಮಿಸಿ ಪುನೀತ ಭಾವ ತಳೆಯುತ್ತಾರೆ.

ಮಂಟಪದ ಬಳಿ ಆಕರ್ಷಕ ಉದ್ಯಾನ ಅಭಿವೃದ್ಧಿಪಡಿಸಲಾಗಿದೆ. ಆದರೆ, ಬೀಗ ಹಾಕಲಾಗಿದೆ. ಮಹಿಳೆಯರು ಸೇರಿದಂತೆ ನಿತ್ಯ ನೂರಾರು ಮಂದಿ ಪ್ರವಾಸಿಗರು ಐಕ್ಯಮಂಟಪ ನೋಡಲು ಬರುತ್ತಾರೆ. ಪ್ರವೇಶಕ್ಕೆ ಶುಲ್ಕ ವಿಧಿಸಲಾಗುತ್ತದೆ. ಆದರೆ, ಇಲ್ಲಿ ಸಾರ್ವಜನಿಕ ಶೌಚಾಲಯದ ಕೊರತೆ ಇದೆ.

ಸ್ಥಳದ ಐತಿಹ್ಯ

12ನೇ ಶತಮಾನದಲ್ಲಿ ಹರಳಯ್ಯನ ಮಗನಿಗೆ ಮೇಲ್ವರ್ಗದ ಮಧುವರಸನ ಮಗಳನ್ನು ಬಸವಣ್ಣ ಮದುವೆ ಮಾಡಿಸಿದ್ದರಿಂದ ಉಂಟಾದ ಕ್ರಾಂತಿಯಿಂದಾಗಿ ಶರಣ ಸಂಸ್ಕೃತಿ ಮತ್ತು ವಚನ ಸಾಹಿತ್ಯ ರಕ್ಷಣೆಗಾಗಿ ಶರಣರು ಹಲವು ಸ್ಥಳಗಳಿಗೆ ತೆರಳುತ್ತಾರೆ. ಬಸವಣ್ಣನವರ ನೇತೃತ್ವದ ತಂಡ ಕೂಡಲಸಂಗಮಕ್ಕೆ, ಇನ್ನೊಂದು ತಂಡ ಶ್ರೀಶೈಲಕ್ಕೆ ಹಾಗೂ ಚನ್ನಬಸವಣ್ಣ, ಮಡಿವಾಳ ಮಾಚಿದೇವ, ಗಂಗಾಂಬಿಕೆ, ಕಕ್ಕಯ್ಯ ಸೇರಿದಂತೆ ಇನ್ನೂ ಅನೇಕ ಶರಣರು ಉಳವಿ ಕಡೆಗೆ ಹೋಗುತ್ತಿದ್ದರು. ಈ ತಂಡದಲ್ಲಿದ್ದ ಮಹಿಳೆಯರು ಬಿಜ್ಜಳನ ಸೈನಿಕರೊಂದಿಗೆ ಹೋರಾಡಿ ತೋರಗಲ್ ನಾಡು ಪ್ರವೇಶಿಸಿದರು. ನಂತರ ಬೈಲಹೊಂಗಲ ತಾಲ್ಲೂಕಿನ ಕಾದರವಳ್ಳಿಯಲ್ಲಿ ಯುದ್ಧ ನಡೆಯಿತು. ಆ ವೇಳೆ ಶರಣೆ ಗಂಗಾಂಬಿಕೆ ವೀರಮರಣ ಹೊಂದಿದರು. ಅವರನ್ನು ಮಲ್ಲಪ್ರಭಾ ನದಿ ದಡದಲ್ಲಿ ಸಮಾಧಿ ಮಾಡಲಾಯಿತು’ ಎಂದು ಹೇಳಲಾಗುತ್ತದೆ. ಹೀಗಾಗಿ, ಅಲ್ಲಿ ಐಕ್ಯಮಂಟಪ ನಿರ್ಮಿಸಲಾಗಿದೆ.

(ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT