ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಲಪ್ರಭೆ’ ತವರಲ್ಲಿ ವನದೇವಿ ತೇರು!

Last Updated 27 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಕಣ್ಮನ ತಣಿಸುವ ಸುಂದರ ಜಲಪಾತ, ಮೋಹಕ ಕಣಿವೆ, ಪುರಾತನ ದೇಗುಲ, ದಟ್ಟ ಕಾನನ, ಪುಟ್ಟ ಝರಿ... ಈ ಎಲ್ಲವುಗಳನ್ನು ಆಭರಣಗಳಂತೆ ಧರಿಸಿ ಕಂಗೊಳಿಸುವ ಮೋಹಕ ಬೆಡಗಿಯೇ ‘ಕಣಕುಂಬಿ’. ನಿಸರ್ಗದ ಮಡಿಲಿನಲ್ಲಿರುವ ಈ ರಮ್ಯ ತಾಣ, ಉತ್ತರ ಕರ್ನಾಟಕದ ಜೀವದಾಯಿನಿ ಎನಿಸಿರುವ ‘ಮಲಪ್ರಭಾ ನದಿ’ಯ ಉಗಮ ಸ್ಥಾನವೂ ಹೌದು.

ಮಲಪ್ರಭೆಯ ತವರೂರಾದ ‘ಕಣಕುಂಬಿ’ ಕಣಕಣದಲ್ಲೂ ಪ್ರಕೃತಿಯ ಐಸಿರಿಯನ್ನು ತುಂಬಿಕೊಂಡಿರುವ ರಮ್ಯ ತಾಣ. ಮೋಹಕ ಜಲಪಾತ, ರುದ್ರರಮಣೀಯ ಕಣಿವೆ, ಪುರಾತನ ದೇಗುಲ, ಮುಗಿಲು ಚುಂಬಿಸುವ ಸಸ್ಯಕಾಶಿ, ಕಣ್ಣು ಕೋರೈಸುವ ವ್ಯೂ ಪಾಯಿಂಟ್‌... ಹೀಗೆ ಸಮಸ್ತ ಸೌಂದರ್ಯದ ಭಂಡಾರವನ್ನೇ ಹೊತ್ತುಕೊಂಡು ‘ವನದೇವಿಯ ತೇರು’ ಈ ಊರಿನಲ್ಲಿ ಸಾಗುತ್ತಿರುವಂತೆ ಪ್ರವಾಸಿಗರಿಗೆ ಭಾಸವಾಗುತ್ತದೆ.

ಹೌದು, ಮೊಗೆದಷ್ಟೂ ನಿಸರ್ಗ ಸಿರಿಯನ್ನು ತುಂಬಿಕೊಡುವ ಅಕ್ಷಯಪಾತ್ರೆ ಈ ಕಣಕುಂಬಿ ಗ್ರಾಮ. ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನಲ್ಲಿರುವ ಈ ಊರು ಸಹ್ಯಾದ್ರಿ ಶ್ರೇಣಿಯ ಮಡಿಲಿನಲ್ಲಿ ಇದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ತ್ರಿವಳಿ ರಾಜ್ಯಗಳ ಗಡಿರೇಖೆಗೆ ಸಾಕ್ಷಿಯಾಗಿದೆ. ಬೆಳಗಾವಿಯಿಂದ ಚೋರ್ಲಾ ಘಾಟ್‌ ಮುಖಾಂತರ ಗೋವಾಕ್ಕೆ ಸಾಗುವ ಪ್ರವಾಸಿಗರು ಈ ಹಳ್ಳಿಯ ಗಾಳಿಯನ್ನು ಸೇವಿಸಿಯೇ ಮುಂದೆ ಹೋಗುತ್ತಾರೆ. ಜಿಲ್ಲಾ ಕೇಂದ್ರದಿಂದ 43 ಕಿ.ಮೀ. ದೂರದಲ್ಲಿರುವ ಈ ಊರಿನ ಜನರು ಕನ್ನಡ, ಮರಾಠಿ, ಕೊಂಕಣಿ ಭಾಷೆ ಮಾತನಾಡುತ್ತಾರೆ.

ಕಣಕುಂಬಿ ಗ್ರಾಮದಲ್ಲಿರುವ ರಾಮೇಶ್ವರ ಮಂದಿರ ಮತ್ತು ಮಲಪ್ರಭಾ ನದಿಯ ಉಗಮ ಸ್ಥಾನ

ಕಣಕುಂಬಿ ಗ್ರಾಮದಲ್ಲಿರುವ ರಾಮೇಶ್ವರ ಮಂದಿರ ಮತ್ತು ಮಲಪ್ರಭಾ ನದಿಯ ಉಗಮ ಸ್ಥಾನ

ಶಿವಲಿಂಗದ ಅಭಿಷೇಕಕ್ಕೆ ಅವತರಿಸಿದಳು!

ಕುಳಕಮುನಿ ತಪಸ್ಸಿನಿಂದ ಪವಿತ್ರವಾದ ವನಕ್ಷೇತ್ರಕ್ಕೆ ಕುಲಕುಂಬಿ ಎಂಬ ಹೆಸರು ಬಂದಿತು. ನಂತರ ಅದು ‘ಕಣಕುಂಬಿ’ ಆಗಿದೆ ಎಂಬ ಪ್ರತೀತಿ ಇದೆ. ಒಮ್ಮೆ ಕುಳಕಮುನಿ ಅರಣ್ಯದಲ್ಲಿ ಘೋರ ತಪಸ್ಸು ಮಾಡುತ್ತಿದ್ದಾಗ, ಶಿವ ಪ್ರತ್ಯಕ್ಷನಾಗಿ ‘ಶಿವಲಿಂಗ’ವನ್ನು ನೀಡುತ್ತಾನೆ. ಆ ಶಿವಲಿಂಗವನ್ನು ಪ್ರತಿಷ್ಠಾಪಿಸಿರುವ ಸ್ಥಳವೇ ಈಗ ಇರುವ ‘ರಾಮೇಶ್ವರ ಮಂದಿರ’. ಈ ಶಿವಲಿಂಗದ ಅಭಿಷೇಕಕ್ಕಾಗಿ ಉದ್ಭವವಾದವಳೇ ಮಲಪ್ರಭೆ ಅರ್ಥಾತ್ ಮಲಪ್ರಭಾ ನದಿ ಎಂಬುದನ್ನು ಇಲ್ಲಿನ ಸ್ಥಳ ಪುರಾಣ ತಿಳಿಸುತ್ತದೆ.

ಕಣಕುಂಬಿಯ ರಾಮೇಶ್ವರ ಮಂದಿರದ ಪಕ್ಕದಲ್ಲೇ ಮಲಪ್ರಭಾ ನದಿಯ ಉಗಮ ಸ್ಥಾನವಿದೆ. ಶುಭ್ರ ನೀಲಿಯಿಂದ ಕೂಡಿರುವ ಈ ನೀರು ಭಕ್ತರ ಪಾಲಿಗೆ ಪವಿತ್ರ ತೀರ್ಥ. ಕಣಕುಂಬಿಯಲ್ಲಿ ಜನ್ಮತಳೆದ ಮಲಪ್ರಭೆಯು, ಖಾನಾಪುರ– ಸವದತ್ತಿ– ನರಗುಂದ ಮಾರ್ಗವಾಗಿ 304 ಕಿ.ಮೀ. ಹರಿದು ಕೂಡಲಸಂಗಮದಲ್ಲಿ ಕೃಷ್ಣಾ ನದಿಯೊಂದಿಗೆ ವಿಲೀನಗೊಳ್ಳುತ್ತದೆ. ಈ ನದಿಗೆ ಸವದತ್ತಿ ಸಮೀಪ ‘ನವಿಲುತೀರ್ಥ’ ಅಣೆಕಟ್ಟು ಕಟ್ಟಲಾಗಿದೆ. ಇದನ್ನು ‘ರೇಣುಕಾ ಸಾಗರ’ ಎಂತಲೂ ಕರೆಯುತ್ತಾರೆ. ಈ ನದಿಯು 11,549 ಚ.ಕಿ.ಮೀ. ಜಲಾನಯನ ಪ್ರದೇಶವನ್ನು ಹೊಂದಿದೆ.

12 ವರ್ಷಗಳಿಗೊಮ್ಮೆ ದೊಡ್ಡ ಜಾತ್ರೆ!

ರಾಮೇಶ್ವರ ಮಂದಿರದ ತುಸು ದೂರದಲ್ಲೇ ಮಾವುಲಿ ದೇವಿಯ ಪುರಾತನ ದೇವಸ್ಥಾನವಿದೆ. ಇದು ಪ್ರಸಿದ್ಧ ಯಾತ್ರಾಸ್ಥಳವೂ ಹೌದು. ಈ ದೇಗುಲದ ಮುಂಭಾಗದಲ್ಲಿ ತೀರ್ಥಕುಂಡವಿದೆ. ಪ್ರತಿ 12 ವರ್ಷಗಳಿಗೊಮ್ಮೆ ಗುರು ಮಕರ ರಾಶಿಗೆ ಬರುತ್ತಾನೆ. ಆಗ ತೀರ್ಥಕುಂಡದಲ್ಲಿ 2 ಅಡಿ ನೀರು ಏರಿಕೆಯಾಗಿ ಹಾಲಿನ ಬಣ್ಣವನ್ನು ಹೊಂದುತ್ತದೆ. ಆ ಸಂದರ್ಭದಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಆಗ ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳಿಂದ ಭಕ್ತಸಾಗರವೇ ಹರಿದು ಬರುತ್ತದೆ ಎಂದು ದೇಗುಲದ ಕಾರ್ಯದರ್ಶಿ ಲಕ್ಷ್ಮಣ ಗೌಡ ಸ್ಥಳ ಪುರಾಣವನ್ನು ಬಿಚ್ಚಿಟ್ಟರು.

ಜಲಪಾತಗಳ ವೈಭವ

ಕಣಕುಂಬಿ ಗ್ರಾಮದ ಸುತ್ತಮುತ್ತ ಐದಾರು ಮೋಹಕ ಜಲಪಾತಗಳಿವೆ. 3 ಕಿ.ಮೀ. ದೂರದಲ್ಲಿ ‘ಚಿಗುಲೆ’ ಜಲಪಾತ, 5 ಕಿ.ಮೀ. ದೂರದಲ್ಲಿ ‘ಸುರ್ಲಾ (ಸುರಲ್‌)’ ಜಲಪಾತ, 12 ಕಿ.ಮೀ. ದೂರದಲ್ಲಿ ಚಿಕಲೆ ಮತ್ತು ಪಾರವಾಡ ಜಲಪಾತಗಳಿವೆ. ಈ ಎಲ್ಲ ಜಲರಾಣಿಯರು ತಮ್ಮದೇ ಆದ ಒನಪು ವೈಯ್ಯಾರದಿಂದ ಪ್ರವಾಸಿಗರನ್ನು ಬರಸೆಳೆದುಕೊಳ್ಳುತ್ತಾರೆ. ಚಿಗುಲೆ ಗ್ರಾಮದ ಪಕ್ಕದಲ್ಲಿರುವ ‌‘ಚಿಗುಲೆ ಜಲಪಾತ‌’ ಗಾತ್ರದಲ್ಲಿ ಪುಟ್ಟದಾಗಿದ್ದರೂ, ನೋಟದಲ್ಲಿ ಸೌಂದರ್ಯದ ಖನಿ ಎನಿಸಿದೆ. ಇನ್ನು ಚಿಕಲೆ ಮತ್ತು ಪಾರವಾಡ ಜಲಪಾತಗಳನ್ನು ನೋಡಲು ಮೂರ್ನಾಲ್ಕು ಕಿ.ಮೀ. ಕಾಡುಹಾದಿಯ ನಡಿಗೆ ಅನಿವಾರ್ಯ. ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆ ಗಳನ್ನು ದಾಟುವುದು ಅಪಾಯಕಾರಿ ಕೂಡ. ದಟ್ಟ ಕಾಡಿನ ನಡುವೆ ಆಳದ ಕಣಿವೆಗೆ ಧುಮ್ಮಿಕ್ಕುವ ಈ ಜಲಪಾತಗಳ ನೆತ್ತಿಯ ಮೇಲೆ ಪ್ರವಾಸಿಗರು ನಿಂತು ಸಂಭ್ರಮಿಸುತ್ತಾರೆ.

ಕಣ್ಮನ ಸೂರೆಗೊಳ್ಳುವ ಸುರ್ಲಾ ಜಲಪಾತ
ಕಣ್ಮನ ಸೂರೆಗೊಳ್ಳುವ ಸುರ್ಲಾ ಜಲಪಾತ

ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಜಲಪಾತವೆಂದರೆ ‘ಸುರ್ಲಾ ಜಲಪಾತ. ಬೆಳಗಾವಿ–ಜಾಂಬೋಟಿ–ಪಣಜಿ ರಾಷ್ಟ್ರೀಯ ಹೆದ್ದಾರಿಯಿಂದ 3 ಕಿ.ಮೀ. ದೂರದಲ್ಲಿರುವ ಈ ಜಲಪಾತಕ್ಕೆ ಉತ್ತಮ ರಸ್ತೆಯಿದೆ. ಗೋವಾ ರಾಜ್ಯಕ್ಕೆ ಸೇರುವ ಸುರ್ಲಾ ಗ್ರಾಮದ ಮುಖಾಂತರ 1 ಕಿ.ಮೀ. ಸಾಗಿದರೆ ಜಲಪಾತದ ವೀಕ್ಷಣಾ ಸ್ಥಳ ಸಿಗುತ್ತದೆ. ಒಬ್ಬರಿಗೆ ₹ 20 ಪ್ರವೇಶ ಶುಲ್ಕ ಹಾಗೂ ವಾಹನಗಳಿಗೆ ಪ್ರತ್ಯೇಕ ಶುಲ್ಕವನ್ನು ಅರಣ್ಯ ಇಲಾಖೆಯವರು ಸಂಗ್ರಹಿಸುತ್ತಾರೆ. ವೀಕ್ಷಣಾ ಸ್ಥಳದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ ಪಶ್ಚಿಮ ಘಟ್ಟದ ಹಸಿರು ಕಾನನದ ಮಧ್ಯೆ ಹಾಲಿನ ನೊರೆಯಂತೆ ಈ ಜಲಪಾತ ಕಾಣಿಸುತ್ತದೆ. ಈ ಜಲಪಾತದ ಬಳಿ ಹೋಗಲು ರಸ್ತೆ ಮಾರ್ಗವಿಲ್ಲ. ಆಳ ಕಣಿವೆಯಲ್ಲಿ ಚಾರಣ ಮಾಡಿಕೊಂಡು ಹೋಗಿ ಜಲಪಾತ ನೋಡಬೇಕೆಂದರೆ ಕಡ್ಡಾಯವಾಗಿ ಅರಣ್ಯ ಇಲಾಖೆ ಅನುಮತಿ ಪಡೆಯಬೇಕು.

ಹಸಿರ ಸಿರಿಗೆ ಮೆರುಗು ನೀಡಿದ ಚಿಗುಲೆ ಜಲಪಾತ
ಹಸಿರ ಸಿರಿಗೆ ಮೆರುಗು ನೀಡಿದ ಚಿಗುಲೆ ಜಲಪಾತ

ಮೋಹಕ ಕಣಿವೆ

ಚಿಗುಲೆ ಜಲಪಾತವನ್ನು ನೋಡಿದವರು, ಅದೇ ದಾರಿಯಲ್ಲಿ 2 ಕಿ.ಮೀ. ಸಾಗಿದರೆ ಚಿಗುಲೆ ಗ್ರಾಮ ಸಿಗುತ್ತದೆ. ಕಣಕುಂಬಿಯಲ್ಲಿರುವಂತೆ ಈ ಊರಿನಲ್ಲೂ ಮಾವುಲಿ ದೇವಿಯ ಭವ್ಯ ದೇಗುಲವಿದೆ. ಅದಕ್ಕೆ ಕಳಶವಿಟ್ಟಂತೆ ಅದರ ಹಿಂಭಾಗ ನಯನ ಮನೋಹರವಾದ ಕಣಿವೆ ಮತ್ತು ಬೆಟ್ಟದ ಸಾಲುಗಳಿವೆ. ದೇಗುಲದ ಹಿಂಭಾಗವೇ ಪುಟ್ಟ ಝರಿಯೊಂದು ಜುಳು ಜುಳು ಎಂದು ನಿನಾದ ಮಾಡುತ್ತಾ ಕಣಿವೆಯನ್ನು ಆಲಂಗಿಸುತ್ತದೆ. ಕಣಿವೆಯ ಮತ್ತೊಂದು ತುದಿಯಲ್ಲಿ (ಸುಮಾರು 2 ಕಿ.ಮೀ ಆಚೆಗಿನ ದಡದಲ್ಲಿ) ದಟ್ಟ ಹಸಿರಿನ ನಡುವೆ ನಿರುಮ್ಮಳವಾಗಿ ಧುಮ್ಮಿಕ್ಕುವ ಜಲಪಾತವೊಂದು ಕಾಣಿಸುತ್ತದೆ. ಬರಿಗಣ್ಣಿಗಿಂತಲೂ ಕ್ಯಾಮೆರಾ ಕಣ್ಣಿನಲ್ಲಿ ಮಾತ್ರ ಅದರ ಸೊಗಸನ್ನು ಸವಿಯಬಹುದು.

ಈ ಕಣಿವೆಯ ಆಸುಪಾಸಿನಲ್ಲಿರುವ ‘ಬೆಟ್ಟದ ಸಾಲು’ ಕ್ಷಣಕ್ಕೊಮ್ಮೆ ಊಸರವಳ್ಳಿಯಂತೆ ಬಣ್ಣ ಬದಲಿಸಿ, ನಮ್ಮನ್ನು ಚಕಿತರನ್ನಾಗಿ ಮಾಡುತ್ತದೆ. ಒಮ್ಮೆ ಸೂರ್ಯನ ಪ್ರಖರ ಬಿಸಿಲಿಗೆ ಬೂದು ಬಣ್ಣ ಪಡೆದರೆ, ತಕ್ಷಣವೇ ಆಗಸದ ಬಣ್ಣವನ್ನು ನುಂಗಿದಂತೆ ನೀಲಿ ಬೆಟ್ಟವಾಗಿ ಕಂಗೊಳಿಸುತ್ತದೆ. ಸೂರ್ಯ ಮೋಡದ ಮರೆಯಲ್ಲಿ ಮರೆಯಾದರೆ, ಹಚ್ಚ ಹಸಿರು ಗಿರಿಯಾಗಿ ಮಿನುಗುತ್ತದೆ. ಸೂರ್ಯಸ್ತದ ಸಮಯದಲ್ಲಿ ಕೆಂಪು, ಹಳದಿ ಬಣ್ಣ ಮಿಶ್ರಿತ ಗುಡ್ಡವಾಗಿ ಕನ್ನಡದ ಬಾವುಟದಂತೆ ರಾರಾಜಿಸುತ್ತದೆ. ಕಣ್ಣಿಗೆ ಹಬ್ಬವನ್ನುಂಟು ಮಾಡುವ ಈ ದೃಶ್ಯ ವರ್ಣಿಸಲಸದಳ.

ಹೋಗುವುದು ಹೇಗೆ?

ಬೆಂಗಳೂರು ಕಡೆಯಿಂದ ಬರುವ ಪ್ರವಾಸಿಗರು ಬೆಳಗಾವಿ ನಗರಕ್ಕೆ ರೈಲು, ಬಸ್‌ ಮತ್ತು ವಿಮಾನದ ಮೂಲಕ ಬರಬಹುದು. ಅಲ್ಲಿಂದ ಪಣಜಿಗೆ ಹೋಗುವ ಗೋವಾ ಮತ್ತು ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳ ಮೂಲಕ 43 ಕಿ.ಮೀ. ದೂರದಲ್ಲಿರುವ ಕಣಕುಂಬಿ ಗ್ರಾಮ ತಲುಪಬಹುದು. ಬಾಡಿಗೆ ವಾಹನಗಳ ಸೌಲಭ್ಯವೂ ಇದೆ.ಬೆಂಗಳೂರು–ಮೈಸೂರು ಕಡೆಯಿಂದ ಖಾಸಗಿ ವಾಹನ ಅಥವಾ ಬಾಡಿಗೆ ವಾಹನಗಳಲ್ಲಿ ಬರುವವರು ಧಾರವಾಡ– ಚನ್ನಮ್ಮನ ಕಿತ್ತೂರು– ಬೀಡಿ– ಖಾನಾಪುರ– ಜಾಂಬೋಟಿ ಮಾರ್ಗವಾಗಿ ಕಣಕುಂಬಿ ತಲುಪಬಹುದು.

ಊಟ ಮತ್ತು ವಸತಿ ಸೌಲಭ್ಯ

ಕಣಕುಂಬಿ ಗ್ರಾಮದಲ್ಲಿ ಹೋಟೆಲ್‌ ಮತ್ತು ವಸತಿ ಗೃಹಗಳಿಲ್ಲ. ಹಾಗಾಗಿ 20 ಕಿ.ಮೀ. ದೂರದಲ್ಲಿರುವ ಜಾಂಬೋಟಿಗೆ ಹೋದರೆ ಅಲ್ಲಿ ಉತ್ತಮ ಡಾಬಾ, ಹೋಟೆಲ್‌, ವಸತಿಗೃಹಗಳಿವೆ. ವಾಸ್ತವ್ಯ ಹೂಡುವ ಬಹುತೇಕ ಪ್ರವಾಸಿಗರು 43 ಕಿ.ಮೀ. ದೂರದಲ್ಲಿರುವ ಬೆಳಗಾವಿ ಅಥವಾ 55 ಕಿ.ಮೀ ದೂರದ ಖಾನಾಪುರಕ್ಕೆ ಹೋಗುತ್ತಾರೆ. ಕಣಕುಂಬಿಯಿಂದ ಪಣಜಿಗೆ (ಗೋವಾ) 72 ಕಿ.ಮೀ. ಅಂತರವಿದೆ.

ಚಿತ್ರಗಳು: ಶಶಾಂಕ್‌ ವರ್ಮ ಜಿ.ಆರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT