ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲಿಗೆ ಹೊರಳದ ನಾಡಿನಲಿ ಮೂರು ದಿನ

Last Updated 2 ಮೇ 2020, 19:30 IST
ಅಕ್ಷರ ಗಾತ್ರ

ಈಶಾನ್ಯ ಭಾರತದ ಶಿಲ್ಲಾಂಗ್‌ ಸುತ್ತಲಿನ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳುವ ಕನಸಿನೊಂದಿಗೆ ಹೊರಟು ನಿಂತಿದ್ದೆ. 32 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದ ಊರಿಂದ 16ರಿಂದ 17 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದ ತಂಪಿನ ಊರಿಗೆ ಬಂದಾಗ ದೇಹ ಮುದುರಿತ್ತು. ಗುವಾಹಟಿಯ ಗೌಜಿನಲ್ಲೂ ಸ್ಥಳೀಯ ಸೀರೆ ತೊಟ್ಟ ಸೊಗಸುಗಾರ್ತಿಯರು ವ್ಯವಹಾರಕ್ಕಿಳಿದಿದ್ದರು. ಅವರನ್ನೆಲ್ಲಾ ನೋಡುತ್ತಾ ಎರಡು ರಾಜ್ಯಗಳಿಗೆ ಗಡಿಯಂತಿದ್ದ ಬ್ರಹ್ಮಪುತ್ರ ನದಿಯನ್ನು ಬಳಸಿ ಶಿಲ್ಲಾಂಗ್‍ಗೆ ಬಂದಾಗ ರಾತ್ರಿ 7 ಗಂಟೆ.

ಗೆಳತಿ ಜೋಯ್ಸ್ ಅವರ ಮನೆಯಲ್ಲಿ ಒಣಗಿದ ಬೆಳ್ಳುಳ್ಳಿ ಮಿಶ್ರಿತ ಹಸಿ ಮೂಲಂಗಿಯ ಪಲ್ಯ, ಬೀನ್ಸ್‌ನ ಚಣ್ಣಿ, ಬೇಯಿಸಿದ ಸಾಸಿವೆ ಎಲೆ, ಐಸ್‍ಕ್ರೀಮ್ ಮೊಸರು, ಅನ್ನ ಹೀಗೆ ಖಾಸಿ ಜನರ ಅಡುಗೆಯ ಖಾಸಗಿಯೂಟ. ಮರೆಯಲಾಗದ ಸವಿಯೂಟವದು. ಚಳಿಗೆ ಮೈ ಮನಸು ಮುದುರಿತ್ತು. ಬೆಳಗಿನ ವಿಹಾರದ ಕನಸು ಹೊತ್ತು ಮಲಗಿದೆವು.

ಮುಂಜಾನೆ ಮುಸುಕಿದ ಮೋಡಗಳಿಗೆ ಮುತ್ತಿಡುತ್ತಾ ಹೆದ್ದಾರಿಯಲಿ ಸಾಗಿತ್ತು ನಮ್ಮ ಕಾರು. ಹೆದ್ದಾರಿ ಬದಿಯಲ್ಲಿಯೇ ನಿಲ್ಲಿಸಿ ಪರೋಟ, ವಡೆ ತಿಂದು, ಚಹಾ ಹೀರಿ ಹೊರಟರೂ ಕರಗದ ಮಂಜು. ಗೆಳೆಯನಂತಹ ಚಾಲಕ. ಚೆರ‍್ರಿ ಹೂವರಳಿ ನಿಂತ ಹಾದಿಯಲಿ ಹೂ ನುಜ್ಜುಗುಜ್ಜಾಗದಿರಲೆಂದು ‘ಹಗುರ ಹೋಗು ಮಾರಾಯ’ ಎಂದೆ. ಹುಳುಕಾದ ಹಲ್ಲು ತೋರಿಸುತ್ತ ದೇಶಾವರಿ ನಗೆ ನಕ್ಕ. ಬಹುಶಃ ಆತನಿಗೆ ನನ್ನ ಭಾಷೆ ತಿಳಿಯಲಿಲ್ಲವೋ ಏನೋ. ನಾವು ಹೋಗುವ ಸ್ಥಳದ ಬಗ್ಗೆ ಲೈವ್ ಕಾಮೆಂಟರಿ ಕೊಡುತ್ತಾ ಸುಣ್ಣದಕಲ್ಲಿನ ಗುಹೆಗಳತ್ತ ಕಾರು ಹೊರಳಿಸಿದ.

ಶಿಲ್ಲಾಂಗ್‌ ಜನರ ಬದುಕು ಪ್ರವಾಸೋದ್ಯಮ ಮತ್ತು ಸುಣ್ಣದಕಲ್ಲಿನ ಮೇಲೆ ಅವಲಂಬಿತವಾಗಿದೆ. ಶಿಲ್ಲಾಂಗ್‌ನಿಂದ ಚಿರಾಪುಂಜಿ ಕಡೆಗೆ ಹೋಗುವಾಗ ನೂರಾರು ಗುಹೆಗಳು ಕಾಣಸಿಗುತ್ತವೆ. ಕಣಿವೆಯಲ್ಲಿ ವಾಸಿಸುವವರು ಕಿತ್ತಳೆ, ಶುಂಠಿ, ಕಾಳುಮೆಣಸು ಬೆಳೆಯುತ್ತಾರೆ. ಅರಣ್ಯದಲ್ಲಿ ಕಿರು ಉತ್ಪನ್ನ ಸಂಗ್ರಹಿಸುತ್ತಾರೆ. ಇಲ್ಲಿನ ಕಿತ್ತಳೆ ಬಲು ಹುಳಿ. ಇವರ ಇನ್ನೊಂದು ಆದಾಯದ ಮೂಲ ಭತ್ತ ಮತ್ತು ಬಿದಿರು.

ಅಂಟು ಬಳಸದೆಯೇ ಭತ್ತದ ಬುಟ್ಟಿಗಳನ್ನು ಹೆಣೆಯುವ ನೈಪುಣ್ಯ ಅವರಿಗೆ ಸಿದ್ಧಿಸಿದೆ. ಸೊಹ್ರಾದಿಂದ ಹೊರಟು ಊಟ ಮಾಡಿ ನಡು ಮಧ್ಯಾಹ್ನಕ್ಕೆ ಗುಹೆಯ ಎದುರಿಗಿದ್ದೆವು. ‘ಮೆ ನಹಿ ಆಂವೂಗಿ’ (ನಾ ಬರೋದಿಲ್ಲ) ಎಂಬ ಕೂಗು ಗುಹೆ ಎದುರಿಂದ ಕೇಳಿ ಬರುತ್ತಿತ್ತು. ಎದೆ ನಡುಗಿಸುವ ಗುಹೆಯ ದ್ವಾರದ ಎದುರು ಹಲವು ಹೆಂಗಸರು ಒಳ ಹೋಗಲು ಹೆದರಿ ಹಿಂದೇಟು ಹಾಕುತ್ತಿದ್ದರು. ಬರೋಬ್ಬರಿ 6.5 ಕಿಲೋಮೀಟರ್ ಉದ್ದದ ಬಾಯ್ದೆರೆದ ಭಯಾನಕ ಗುಹೆ ಅದು. ಕೆಲವೆಡೆ ತೆವಳುತ್ತಾ ಸಾಗಬೇಕು. ಸಣ್ಣ ಝರಿಯೊಂದು ಗುಹೆಯೊಳಗೆ ಹರಿಯುತ್ತಿತ್ತು. ಗೋಡೆಯ ಪೂರ್ಣ ಸುಣ್ಣದಕಲ್ಲಿನ ಚಿತ್ತಾರ! ಕೆಲವೆಡೆ ಗುಹೆಯು ಮೇಲಕ್ಕೆ ಬಾಯಿಯನ್ನು ತೆರೆದಿತ್ತು. ಗುಹೆಯೊಳಗಿನ ನೆಲ ಸವೆದು ಜಾರುವ ಟೈಲ್ಸ್‌ನಂತಿತ್ತು.

ಗುಹೆಯೊಳಗೆ ಏನುಂಟು ಏನಿಲ್ಲ; ತಣ್ಣಗೆ ಹರಿವ ಜಲರಾಶಿ. ವಿಚಿತ್ರ ವಿನ್ಯಾಸ ಧಾರಣೆಯಿಂದ ತೊಟ್ಟಿಕ್ಕುವ ನೀರು. ಗಂವ್... ಎನ್ನುವ ಕತ್ತಲು. ನೆತ್ತಿ ಸುಡುವ ಬಿಸಿಲಿದ್ದರೂ ಒಳಗೆ ಹವಾನಿಯಂತ್ರಣದಷ್ಟು ತಂಪು. ಯಾರದೋ ಜೀರ್ಣನಾಳದೊಳಗೆ ಜಾರಿಹೋದಂತಹ ಅನುಭವ. ಹೆಬ್ಬಾವಿನ ಹೊಟ್ಟೆ ಸೇರಿದ ಭಾವ. ಯಾರದೋ ಕರುಳಿನೊಳಗೆ ಹೂತು ಹೋದಂತೆ. ಆಹಾರದ ಕಣದಂತೆ ಚಲಿಸುವ ಜನಸಂದಣಿ... ಒಳಾಂಗಣದಲಿ ಅಲ್ಲಲ್ಲಿ ಬೆಳಕಿನ ವ್ಯವಸ್ಥೆ ಇದೆ.

‘ಪ್ರಕೃತಿ ನಿರ್ಮಿತ ಲಿಯತ್ ಪ್ರಹಾ ಎಂಬ ಗುಹೆ 30 ಕಿ.ಮೀ. ಉದ್ದವಿದೆ’ ಎಂದ ನಮ್ಮ ಡ್ರೈವರ್. ಇವುಗಳಲ್ಲಿ ಕೆಲವೊಂದು ಕಡೆ ತೆವಳಿ ಸಾಗಬೇಕಾದ ಅನಿವಾರ್ಯತೆಯಿದೆ.ಇಲ್ಲಿನ ಗುಹೆಗಳು ಅಚ್ಚರಿಗಳ ಮೂಟೆ. ಮೇಘಾಲಯದಲ್ಲಿ 1,580ಕ್ಕೂ ಹೆಚ್ಚು ಗುಹೆಗಳಿವೆ. ಪ್ರತಿಯೊಂದು ಭಿನ್ನ. ಯೂತ್ ಹಾಸ್ಟೆಲ್‍ನವರು ಪ್ರತಿವರ್ಷ ಇಲ್ಲಿ ಮೂರ್ನಾಲ್ಕು ಗುಹೆಗಳನ್ನು ತೋರಿಸುವ ಕಾರ್ಯಕ್ರಮ ಏರ್ಪಡಿಸುತ್ತಾರೆ.

ಶಿಲ್ಲಾಂಗ್‍ನ ಸನಿಹವೇ ಇರುವ ಈ ಗುಹೆಗಳನ್ನು ನೋಡದೆ ಹೋದರೆ ಮೇಘಾಲಯದ ಪ್ರವಾಸ ಅಪೂರ್ಣ. ನಾಲಗೆ ಹೊರಳದ ನಾಡಲ್ಲಿ ತಿರುಗಿ ಬರುವ ಮಜವೇ ಬೇರೆ. ಮುಂದಿನ ಸಲ ಜೀವಂತ ಸೇತುವೆಗಳೊಂದಿಗೆ ಒಂದು ದಿನ ಕಳೆಯುವ ಆಲೋಚನೆಯೊಂದಿಗೆ ಪ್ರವಾಸಕ್ಕೆ ಪ್ಯಾಕಪ್‌ ಹೇಳಿದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT