ಶುಕ್ರವಾರ, ಜೂನ್ 5, 2020
27 °C

ಸಪ್ತ ಶೃಂಗಿದೇವಿ ಬೆಟ್ಟಕ್ಕೆ ಚಾರಣ ಹೋಗಿ

ಮಾಲಾ ಮ ಅಕ್ಕಿಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

ಏಳು ಬೆಟ್ಟಗಳನ್ನು ‘V’ ಮತ್ತು ’U’ ಆಕಾರದ ರಸ್ತೆಗಳಲ್ಲಿ ತಿರುಗುತ್ತಾ ಮೇಲೆ ಏರಿದರೆ ಬೆಟ್ಟದ ತುದಿಯಲ್ಲಿ ದೇಗುಲವೊಂದು ಕಾಣುತ್ತದೆ. ಅದೇ ಸಪ್ತಶಂಗಿದೇವಿ ಅಥವಾ ಸಪ್ತಶೃಂಗಿ ನಿವಾಸಿನಿ. ಇದು ಮಹಾರಾಷ್ಟ್ರದ ನಾಸಿಕ್ ಸಮೀಪದ ನಂದುರಿ ಗ್ರಾಮದಲ್ಲಿರುವ ಧಾರ್ಮಿಕ ಕ್ಷೇತ್ರ. ನಾಸಿಕ್‌ನಿಂದ 60 ಕಿಲೋಮೀಟರ್ ದೂರದಲ್ಲಿದೆ.

ನಾಸಿಕ್‌ನಿಂದ ನಂದುರಿ ಹಳ್ಳಿಗೆ ಹೋಗುವಾಗ ಸಿಗುವ ಬೆಟ್ಟಗಳ ಸಾಲುಗಳನ್ನು ನೋಡುವುದೇ ಒಂದು ಸೊಬಗು. ಈ ಬೆಟ್ಟಗಳು ಸಹ್ಯಾದ್ರಿ ಪರ್ವತಗಳ ಸರಣಿಯ ಭಾಗಗಳಾಗಿವೆ. ಎತ್ತರದ ಬೆಟ್ಟಗಳವರೆಗೆ ನಾವು ಸಾಗುತ್ತಿದ್ದರೆ, ಎಷ್ಟೊಂದು ಎತ್ತರಕ್ಕೆ ಬರುತ್ತಿದ್ದೇವೆ ಎಂದು ಆಶ್ಚರ್ಯವಾಗುತ್ತದೆ.

ಬೆಟ್ಟವನ್ನು ಹತ್ತುವವರೆಗೂ ಘಾಟ್ ಇದೆ. ತಿರುವ ರಸ್ತೆಗಳಲ್ಲಿ 15 ಕಿ.ಮೀ ಸಾಗಿ ಎತ್ತರಕ್ಕೆ ಹೋದಂತೆ ತಂಪು ವಾತಾವರಣದ ಅನುಭವ. ತುದಿಯಲ್ಲಿರುವುದೇ ನಂದುರಿ ಹಳ್ಳಿ. ಬೆಟ್ಟದ ತುತ್ತ ತುದಿಯಲ್ಲಿ ಸಪ್ತಶೃಂಗಿ ನಿವಾಸಿನಿ ವಿರಾಜಮಾನಳಾಗಿದ್ದಾಳೆ.

ಏಳು ಬೆಟ್ಟಗಳ ತುದಿಯಲ್ಲಿ ನೆಲೆಸಿರುವುದರಿಂದ ಸಪ್ತಶೃಂಗಿ ನಿವಾಸಿನಿ ಎಂದು ಕರೆಯುತ್ತಾರೆ. ಇದು ಮಹಾರಾಷ್ಟ್ರದ ಒಂದು ಶಕ್ತಿ ಪೀಠ. ಭಾರತದ 51 ಶಕ್ತಿ ಪೀಠಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ಭಕ್ತರ ಪ್ರಕಾರ ಸಪ್ತಶೃಂಗಿ ಉದ್ಭವ ಮೂರ್ತಿ. ಅದು ಸುಮಾರು 8 ಅಡಿ ಉದ್ದವಿದ್ದು, ಕೇಸರಿ ಬಣ್ಣದ್ದಾಗಿದೆ. ವಿಗ್ರಹಕ್ಕೆ 18 ಕೈಗಳಿವೆ. ಎಲ್ಲ ಕೈಗಳಲ್ಲೂ ಆಯುಧಗಳಿವೆ. ದಿನನಿತ್ಯ ಕಿರೀಟ, ಬಂಗಾರದ ನತ್ತು, ನೆಕ್ಲೆಸ್‌ನಿಂದ ಅಲಂಕರಿಸಿ ಪೂಜಿಸುತ್ತಾರೆ.

ಕರ್ನಾಟಕ, ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಿಂದಲೂ ಜನ ನಿತ್ಯ ದರ್ಶನಕ್ಕೆ ಇಲ್ಲಿ ಬರುತ್ತಾರೆ.  ಬೆಟ್ಟಗಳಲ್ಲಿ ನೆಲೆಸಿರುವುದರಿಂದ 500 ಮೆಟ್ಟಿಲುಗಳನ್ನು ಹತ್ತಿ ದರ್ಶನ ಪಡೆಯಬೇಕು. ಆದರೆ ಈಗ ಮಹಾರಾಷ್ಟ್ರ ಸರ್ಕಾರ ಮೆಟ್ಟಿಲುಗಳನ್ನು ಹತ್ತಲು ಆಗದವರಿಗೆ ಪ್ಯೂನಿಕುಲರ ಟ್ರಾಲಿ(Funicular Trolley) ಎಂಬ ವಿಶಿಷ್ಟ ಸೌಲಭ್ಯವನ್ನು ಒದಗಿಸಿದೆ. ಇದು ನೋಡಲು ಟ್ರೇನ್ ತರಹವಿದೆ. ಇದರಲ್ಲಿ ಕುಳಿತರೆ ಎರಡು ನಿಮಿಷಗಳಲ್ಲಿ ದೇವರ ಗರ್ಭಗುಡಿಗೆ ತಲುಪಬಹುದು.  ಇದಕ್ಕೆ ಪ್ರವೇಶ ಶುಲ್ಕವಿದ್ದು, ಕೈಗೆಟಕುವ ದರದಲ್ಲಿದೆ. ವೃದ್ಧರು, ರೋಗಿಗಳು ಹಾಗೂ ಅಶಕ್ತರಿಗೆ ಇದು ಉಪಯೋಗವಾಗಿದೆ.

ಪ್ಯೂನಿಕುಲರ ಟ್ರಾಲಿ(FunicularTrolley) ಎಲ್ಲರಿಗೂ ಮುಕ್ತವಾಗಿದೆ. ಇದರಲ್ಲಿ ದೇವಸ್ಥಾನಕ್ಕೆ ಹೋಗಿ ಬರುವ ಟಿಕೆಟ್ ಬೆಲೆ ₹ 80. ಮಕ್ಕಳನ್ನು ಈ ಟ್ರಾಲಿಯಲ್ಲಿ ಕರೆದೊಯ್ದರೆ, ಫನ್‌ಲ್ಯಾಂಡ್‌ಗೆ ಹೋದ ಆನಂದ ನೀಡುತ್ತದೆ. ಡಿಸ್ನಿಲ್ಯಾಂಡ್ ಮತ್ತು ಫನ್ ಲ್ಯಾಂಡ್‌ಗಳಲ್ಲಿ ವಿವಿಧ ಆಟಗಳನ್ನು ಆಡುವಂತೆ ಭಾಸವಾಗುತ್ತದೆ.

ಪೌರಾಣಿಕ ಹಿನ್ನೆಲೆ

ರಾಕ್ಷಸ ಮಹಿಷಾಸುರನ ಕಾಟ ಅರಣ್ಯದಲ್ಲಿ ಅತಿಯಾಗಿ ಎಲ್ಲರೂ ರೋಸಿ ಹೋಗಿದ್ದರಂತೆ. ಯಾರಿಂದಲೂ ಆತನನ್ನು ನಿಯಂತ್ರಣಕ್ಕೆ ತರಲು ಆಗದಿದ್ದಾಗ, ದೇವ ದೇವತೆಗಳು ದುರ್ಗೆಯ ಮನವೊಲಿಸಿ ಆತನ ಸಂಹಾರ ಮಾಡಲು ಒತ್ತಾಯಿಸಿದ್ದರಂತೆ. ಹೀಗಾಗಿ ಹದಿನೆಂಟು ಕೈಗಳನ್ನು ಹೊಂದಿದ ಸಪ್ತಶೃಂಗಿ ರೂಪವನ್ನು ತಾಳಿ ತಾಯಿ ದುರ್ಗಾದೇವಿ ಮಹಿಷಾಸುರನನ್ನು ಸಂಹರಿಸಿದಳಂತೆ. ಹೀಗಾಗಿಯೇ ಸಪ್ತಶೃಂಗಿ ದೇವಿಯೂ ಕೂಡ ಶಕ್ತಿಪೀಠಗಳಲ್ಲಿ ಒಬ್ಬಳಾಗಿದ್ದಾಳೆ.

ಹೋಗುವುದು ಹೇಗೆ?

ಮಹಾರಾಷ್ಟ್ರ ರಾಜ್ಯದ ಕಳವನ ತಾಲ್ಲೂಕಿನ ನಾಂದುರಿ ಎಂಬ ಹಳ್ಳಿಯಲ್ಲಿದೆ. ಇದು ನಾಸಿಕ್‌ನಿಂದ 60 ಕಿಮೀ ದೂರವಿದೆ. ರಾಜ್ಯದ ಎಲ್ಲ ಭಾಗಗಳಿಂದಲೂ ರೈಲು ಮತ್ತು ವಿಮಾನದ ಮೂಲಕ ನಾಸಿಕ್ ತಲುಪಬಹುದು. ನಾಸಿಕ್‌ನಿಂದ ನಂದೂರಿ ಹಳ್ಳಿಗೆ ಸಾಕಷ್ಟು ಬಸ್ ಮತ್ತು ಟ್ಯಾಕ್ಸಿಗಳು ಲಭ್ಯವವಿವೆ. ನಂದೂರಿ ಹಳ್ಳಿಯಲ್ಲಿ ವಾಸ್ತವ್ಯಕ್ಕೆ ಹೋಟೆಲ್‌, ಲಾಡ್ಜ್‌ಗಳಿವೆ. ನಾಸಿಕ್‌ನಲ್ಲಿ ಉಳಿಯುವುದಕ್ಕೆ ಉತ್ತಮ ಹೋಟೆಲ್‌ ಮತ್ತು ವಸತಿಗೃಹಗಳಿವೆ. 

ಇನ್ನೇನು ನೋಡಬಹುದು

ತ್ರಯಂಬಕೇಶ್ವರ ಜ್ಯೋತಿರ್ಲಿಂಗ, ಭೀಮಾಶಂಕರ ಜ್ಯೋತಿರ್ಲಿಂಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.