ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಡೆಮಿಯೊ? ವಿರಾಮಧಾಮವೊ?

ಪ್ರಶಸ್ತಿ ವಾಪಸಾತಿ ಆಂದೋಲನ
Last Updated 16 ಅಕ್ಟೋಬರ್ 2015, 19:34 IST
ಅಕ್ಷರ ಗಾತ್ರ

ಸಾಹಿತ್ಯ ಮತ್ತು ಪ್ರತಿಷ್ಠಿತ ಶಕ್ತಿಗಳ ನಡುವಿನ ವ್ಯಾಜ್ಯ ಇವತ್ತು ನಿನ್ನೆಯದಲ್ಲ.  ಕಾವ್ಯ, ತಾತ್ವಿಕ ಚಿಂತನೆಗಳು ಅರಮನೆ ಗುರುಮನೆಗಳನ್ನು, ಅಧಿಕಾರ ಕೇಂದ್ರಗಳನ್ನು ಚಿಂತೆಗೂ ಚಿಂತನೆಗೂ ಈಡುಮಾಡುತ್ತಲೇ ಇರುವ ಸಾತತ್ಯ ಶಕ್ತಿಯನ್ನು ಪಡೆದಿರುತ್ತವೆ. ಆಧುನಿಕ ಪರಿಭಾಷೆಯಲ್ಲಿ ಅದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಕರೆಯುತ್ತಿದ್ದೇವೆ. ದೇಶದಲ್ಲಿ ಅದೆಷ್ಟನೆಯ ಸಲವೋ ಈಗ ಮತ್ತೊಮ್ಮೆ ಅಂಥ ತಿಕ್ಕಾಟ ಶುರುವಾಗಿದೆ. ಅನೇಕ ಲೇಖಕರು ತಾವು ಪಡೆದಿದ್ದ ಗೌರವಗಳನ್ನ ಆಯಾ ಶಕ್ತಿಕೇಂದ್ರಗಳಿಗೆ ಹಿಂತಿರುಗಿಸುತ್ತಿದ್ದಾರೆ.  ಬರಹಗಾರರಿಂದ ಪ್ರಾರಂಭವಾದ ಈ ಪ್ರತಿಭಟನೆ ಇನ್ನಿತರ ಕಲಾಪ್ರಕಾರಗಳ ಸಾಧಕರಿಂದಲೂ ನಡೆಯುತ್ತಿದೆ. ಪ್ರಸ್ತುತ ಬರಹಗಾರರ ಕೆಂಗಣ್ಣಿಗೆ ಗುರಿಯಾಗಿರುವ ಸಂಸ್ಥೆ ಸಾಹಿತ್ಯ ಅಕಾಡೆಮಿ.

ಸ್ವಲ್ಪ ಹಿಂತಿರುಗಿ ನೋಡುವುದಾದರೆ, ಈಗ ಪ್ರತಿಭಟನೆಯ ದನಿಯೆತ್ತಿರುವವರಲ್ಲಿ ಒಬ್ಬರಾದ ಸುಪ್ರಸಿದ್ಧ ಲೇಖಕಿ ನಯನತಾರಾ ಸೆಹಗಲ್ ಸುಮಾರು ಐವತ್ತು ವರ್ಷಗಳ ಹಿಂದೆಯೇ, 1977ರ ಅಕ್ಟೋಬರ್ 29ರ  ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ನಲ್ಲಿ ಬರೆದಿರುವುದನ್ನು ಗಮನಿಸಬಹುದು. ಅದರ ಸಾರಾಂಶಾನುವಾದ ಹೀಗಿದೆ;  ‘ಇಂಡಿಯಾದಲ್ಲಿ ‘ಇಂಟೆಲೆಕ್ಚುಯಲ್’ ಎಂಬ ಶಬ್ದ ಒಂದು ಸೋಗಲಾಡಿತನ. ತುರ್ತುಪರಿಸ್ಥಿತಿಯ ದಿನಗಳಲ್ಲಂತೂ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿಣಿ ಮಂಡಲಿಯ ಕಾರ್ಯಹೀನ ಜಡತೆಯಿಂದಾಗಿ ಆ ಶಬ್ದ ಸಂಪೂರ್ಣವಾಗಿ ವಿಡಂಬನೆಯೇ ಆಗಿಹೋಯಿತು.  ಭಾರತೀಯ ಬುದ್ಧಿಜೀವಿಯ ಹೇಡಿತನ ಮತ್ತು ಅಧಿಕಾರಕ್ಕೆ ಹತ್ತಿರವಿರಬೇಕೆಂಬ ತವಕದ ಅರಿವಿದ್ದ ನಾನು ಅಕಾಡೆಮಿಯ ಕಾರ್ಯದರ್ಶಿಗೆ ಆಗಸ್ಟ್ 27, 1975ರಲ್ಲಿ ಸೆನ್ಸಾರ್‌ಶಿಪ್‌ನ ಅಂಶವೊಂದನ್ನು ಮಾತ್ರ ಪ್ರಸ್ತಾಪ ಮಾಡಿ ಪತ್ರ ಬರೆದು ಕಾರ್ಯಕಾರಿಣಿ ಸಭೆ ಇದನ್ನು ಖಂಡಿಸಬೇಕೆಂದು ಸಲಹೆ ಮಾಡಿದ್ದೆ. 

ನಾನು ಈ ಮಹಾಶಯರಿಗೆ ಆಗ ನಾವು ದಿನನಿತ್ಯ ನೋಡುತ್ತಿದ್ದ ಮಾನವ ಹಕ್ಕುಗಳ ಮೇಲಿನ ಅತ್ಯಾಚಾರದ ವಿರುದ್ಧ ಎದ್ದುನಿಲ್ಲಿ, ವಿಚಾರಣೆಯಿಲ್ಲದೆ ಜೈಲಿನಲ್ಲಿದ್ದವರ ಪರವಾಗಿ ಮಾತಾಡಿ ಅಥವಾ ಕೆಲವೇ ಕ್ಷಣಗಳ ಕಾಲವಾದರೂ ತಮ್ಮ ಸುಭದ್ರ ದಂತಗೋಪುರಗಳಿಂದ ಹೊರಕ್ಕೆ ತಮ್ಮ ಮೂಗು ತೂರಿಸಿ ಜೈಲಿನಲ್ಲಿದ್ದ ಲೇಖಕರ ಪರವಾಗಿ ಒಂದು ಕ್ಷೀಣದನಿಯನ್ನಾದರೂ ಎತ್ತಿರಿ ಮುಂತಾದ್ದೇನನ್ನೂ ಕೇಳಿರಲಿಲ್ಲ. ಹಾಗೆ ನೋಡಿದರೆ ಇವೆಲ್ಲವುಗಳ ವಿರುದ್ಧ ಇತರ ದೇಶಗಳ ಅನೇಕ ಸಂಘ ಸಂಸ್ಥೆಗಳು ಬಲವಾದ ದನಿಯೆತ್ತಿದ್ದವು. ಕೇವಲ ಸೆನ್ಸಾರ್‌ಶಿಪ್ಪಿನ ವಿರುದ್ಧ ತಮ್ಮ ವಿರೋಧವನ್ನು ದಾಖಲಿಸಿರಿ ಎಂದಷ್ಟೇ ನಾನು ಇವರನ್ನು ಕೇಳಿದ್ದು.  ನನ್ನ ಪ್ರಸ್ತಾಪವನ್ನು  ಅಧಿಕಾರಿಗಳು ನಿರ್ಲಕ್ಷಿಸಿದರು. ಕಾರ್ಯದರ್ಶಿ ಉತ್ತರಿಸಿ ನನ್ನ ಪತ್ರವನ್ನು ಸೆಪ್ಟೆಂಬರ್ 8ರಂದು ಅಕಾಡೆಮಿಯ ಅಧ್ಯಕ್ಷರ ಗಮನಕ್ಕೆ ತರುವುದಾಗಿ ತಿಳಿಸಿದರು.  ಎಂಟು ತಿಂಗಳು ಕಳೆದರೂ ಅವರು ಹಾಗೆ ಮಾಡಲಿಲ್ಲ.  ತಾವು ತುಂಬಾ ಬಿಜಿಯಾಗಿದ್ದುದಾಗಿ ತಿಳಿಸಿದರು.

  ನಾನು ಮತ್ತೆ 1976ನೇ ಮೇ ತಿಂಗಳ 14ರಂದು ಅವರಿಗೆ ಬರೆದೆ.  ಅದರಲ್ಲಿನ ಪ್ರಮುಖ ಭಾಗ ಹೀಗಿದೆ; ‘ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಿಚಾರಗಳ ಮುಕ್ತ ವಿನಿಮಯ ಸ್ವತಂತ್ರ ಸಮಾಜವೊಂದರ ನಿರ್ಣಾಯಕ ಸಂಗತಿ.  ಲೇಖಕರು ಮತ್ತು ಅವರ ಕೃತಿಗಳ ಬಗ್ಗೆ ಕಾಳಜಿಯಿರುವ ಸಾಹಿತ್ಯ ಅಕಾಡೆಮಿಗೆ ಇದಕ್ಕಿಂತಲೂ ಮುಖ್ಯವಾದದ್ದು ಬೇರೇನೂ ಇಲ್ಲವೆಂದು ನಾನು ಭಾವಿಸಿದ್ದೆ.  ನೀವು ಅಧ್ಯಕ್ಷರ ಗಮನಕ್ಕೆ ತಾರದಿರುವುದನ್ನು ನೋಡಿದರೆ ಭಾರತದ ಸಾಹಿತ್ಯ ಅಕಾಡೆಮಿ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆಯಿಟ್ಟಿಲ್ಲವೆಂದು ನನಗೆ ಮನವರಿಕೆಯಾಗುತ್ತಿದೆ.  ವಾಸ್ತವದಲ್ಲಿ ಸರ್ವಾಧಿಕಾರದ ನಿಷ್ಠಾವಂತ ಸೇವಕನ ಹಾಗೆ ಅಕಾಡೆಮಿ ಕೇವಲ ಒಂದು ಪರಿಚಾರಕ ಸಂಸ್ಥೆಯಾಗಲು ಬಯಸುತ್ತಿದೆ. ಈ ಸಂಸ್ಥೆಯ ಸ್ಥಾಪಕರಾದ ಜವಾಹರಲಾಲ್ ನೆಹರೂ ಬದುಕಿದ್ದಿದ್ದರೆ ಇಂಥ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಅಗತ್ಯಬಿದ್ದಿದ್ದರೆ ಅಂಥ ಸ್ವಾತಂತ್ರ್ಯಕ್ಕಾಗಿ ಅವರು ಸೆರೆಮನೆಗೂ ಹೋಗುತ್ತಿದ್ದರೆಂಬುದನ್ನು ನಿಮಗೆ ತಿಳಿಸಬಯಸುತ್ತೇನೆ. ಸ್ವಮರ್ಯಾದೆಯನ್ನು ಕಳೆದುಕೊಂಡ ಇಂಥ ಸಂಸ್ಥೆಯ ಯಾವ ಕಮಿಟಿಗಳಲ್ಲೂ ನಾನು ಕೆಲಸ ಮಾಡಲು ಬಯಸುವುದಿಲ್ಲ. ನನ್ನ ರಾಜೀನಾಮೆಯನ್ನು ಅಂಗೀಕರಿಸಿರಿ.

ಇದಾದ ನಾಲ್ಕು ತಿಂಗಳ ನಂತರ ರಾಜೀನಾಮೆಯನ್ನು ಅಂಗೀಕರಿಸಲಾಯಿತು. ಈ ಸಂಸ್ಥೆಯ ಒಂದು ಪಿಸುಮಾತು ಕೂಡ ಹೊರಬೀಳದೆ ತುರ್ತುಪರಿಸ್ಥಿತಿ ಉರುಳಿಹೋಯಿತು. ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತಂತೆ ಅಕಾಡೆಮಿಯ ನಡವಳಿಕೆ ಅರ್ಥ ಮಾಡಿಕೊಳ್ಳಲು ಮತ್ತೊಂದು ಕ್ಲಾಸಿಕ್ ಉದಾಹರಣೆಯೆಂದರೆ ಸಲ್ಮಾನ್ ರಶ್ದಿ ಪ್ರಕರಣ. ರಶ್ದಿ, ‘ದಿ ಸಟಾನಿಕ್ ವರ್ಸಸ್’ ಬರೆದದ್ದಕ್ಕಾಗಿ ಅಯಾತೊಲ್ಲಾ ಖೊಮೇನಿ ಫತ್ವಾ ಹೊರಡಿಸಿದಾಗ ಭಾರತ ಸರ್ಕಾರ ಆ ಕೃತಿಯನ್ನು ನಿಷೇಧಿಸಿತು. ಅತ್ಯುತ್ತಮ ಮೌಲ್ಯಗಳನ್ನು ಕಾಪಾಡುವ ಸಂಸ್ಥೆಯಾದ ಅಕಾಡೆಮಿ ದೇಶದಾದ್ಯಂತ ಅವುಗಳನ್ನು ಹರಡುವ ಕೆಲಸದಲ್ಲಿ ಎಂಥ ಪಾತ್ರ ವಹಿಸುತ್ತದೆ ಎಂಬ ಚರ್ಚೆಯ ಜೊತೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ಲೇಖಕರನ್ನು ಕೊಲ್ಲುವ ಆದೇಶಗಳ ವಿರುದ್ಧ ಒಂದು ನಿರ್ಣಯ ಮಂಡಿಸಲು ಆಗ ನಡೆದ ಅಕಾಡೆಮಿಯ ಸರ್ವ ಸದಸ್ಯರ ಸಭೆಗೆ ಸಾಧ್ಯವಾಗಲೇ ಇಲ್ಲ. 

ಆ ಸಭೆ ನಡೆದ ಮರುದಿನವೇ ‘ಲೇಖಕ ಮತ್ತು ಸ್ವಾತಂತ್ರ್ಯ’ ಎಂಬ ವಿಷಯ ಕುರಿತಂತೆ ಅಕಾಡೆಮಿ ಒಂದು ವಿಚಾರ ಸಂಕಿರಣವನ್ನು ಆಯೋಜಿಸಿತ್ತು. ಸಂಕಿರಣದ ಕೊನೆಯ ಘಟ್ಟದಲ್ಲಿ ಅಕಾಡೆಮಿಯ ಆಗಿನ ಅಧ್ಯಕ್ಷರಾಗಿದ್ದ ಬಿರೇಂದ್ರ ಕುಮಾರ ಭಟ್ಟಾಚಾರ್ಯ ಆಗಿನ ಪ್ರಧಾನ ಮಂತ್ರಿಗೆ ತಾವು ಬರೆದ ಮನವಿ ಪತ್ರವನ್ನು ಓದಿ, ಸಂಕಿರಣದಲ್ಲಿ ನೆರೆದಿದ್ದ ಲೇಖಕರ ಘನತೆ ಕಾಪಾಡಿದ್ದರು. ಅಕಾಡೆಮಿಯ ಕಾರ್ಯಶೈಲಿಗೆ ಇದೊಂದು ಮಾದರಿ.  ಲೇಖಕನೊಬ್ಬನ ಹತ್ಯೆಯಾದರೆ ಖಂಡಿಸುವುದು ಬೇಡ, ಶ್ರದ್ಧಾಂಜಲಿ ಅರ್ಪಿಸೋಣ ಎನ್ನುವ ಧೋರಣೆ. ಅಕಾಡೆಮಿ ತನ್ನ ಮನೆಯ ಒಳಗೆ ಪ್ರಜಾಸತ್ತಾತ್ಮಕತೆಯನ್ನು ಕಾಪಾಡಿಕೊಳ್ಳಲು ವಿಫಲವಾಗಿರುವ ಎಷ್ಟೋ ಉದಾಹರಣೆಗಳಿವೆ. ಮೇಲ್ನೋಟಕ್ಕೆ ಎಲ್ಲ ಸರಿಯಿದೆಯೆಂಬ ಭಾವನೆಯನ್ನುಂಟುಮಾಡುತ್ತದೆ.  ಎಲ್ಲ ಭಾಷೆಗಳ ಪ್ರಾತಿನಿಧಿಕ ಸಂಸ್ಥೆಯೆಂಬಂತೆ ಅನಿಸುತ್ತದೆ.  ಅದು ಕೇವಲ ಬಹಿರಂಗ ಶುದ್ಧಿಯೆಂಬುದು ಅದರ ಸದಸ್ಯರುಗಳ ಆಯ್ಕೆ, ಅದು ನಡೆಸುವ ಚುನಾವಣೆಗಳು, ಅದರ ವಿಲಾಸಿ ಮತ್ತು ದರ್ಬಾರಿ ವಹಿವಾಟುಗಳನ್ನು ಒಳಹೊಕ್ಕು ನೋಡಿದವರಿಗೆ ತಿಳಿಯುತ್ತದೆ.

ನೂರಾರು ಭಾರತೀಯ ಭಾಷೆಗಳನ್ನು ಕಾಪಾಡಿ ಅಭಿವೃದ್ಧಿಗೊಳಿಸಲಾಗುತ್ತಿದೆಯೆಂದು ಬೀಗುವ ಅಕಾಡೆಮಿಗೆ ಕಲಬುರ್ಗಿ ಅವರ ಹತ್ಯೆ ಕೇವಲ ಒಂದು ಪ್ರಾದೇಶಿಕ ವ್ಯವಹಾರದಂತೆ ಕಾಣುತ್ತದೆ. ದೆಹಲಿಯಲ್ಲಿ ನಡೆದರೂ ಅದು ಕೇವಲ ಕರ್ನಾಟಕ ಸಂಘ ಆಯೋಜಿಸುತ್ತದೆಯೇ ವಿನಾ ರವೀಂದ್ರ ಭವನದ ಒಳಗೆ ನಡೆಯುವುದಿಲ್ಲ.  ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಮಾಡಿ ರಕ್ತದ ಕಲೆಗಳನ್ನು ತೊಳೆದುಕೊಳ್ಳುವ ಚಾಳಿಯನ್ನೇ ಈಗ ಪ್ರತಿಭಟಿಸುತ್ತಿರುವ ಲೇಖಕರು ಪ್ರಶ್ನಿಸುತ್ತಿರುವುದು.  ಅಕಾಡೆಮಿಯ ಈಗಿನ ಉಪಾಧ್ಯಕ್ಷರು ಈ ಲೇಖಕರು ಯಾರಿಗೋ ಹೊಡೆಯಲು ಹೋಗಿ ಮತ್ಯಾರಿಗೋ ಹೊಡೆಯುತ್ತಿದ್ದಾರೆ ಎಂದು ನುಡಿಯುವಾಗ, ಹಿಂಸೆಯ ರೂಪಕವನ್ನೇ ಆಯ್ಕೆ ಮಾಡಿಕೊಳ್ಳುವ ವಿಕಟ ತೋರುತ್ತಾರೆ.  ಈ ಲೇಖನ ಬರೆಯುತ್ತಿರುವ ಗಳಿಗೆಯಲ್ಲಿ ವರದಿಯಾಗಿರುವಂತೆ ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವ ಬಗ್ಗೆ ಕೇಂದ್ರ ಸರ್ಕಾರದ ಮಂತ್ರಿಗಳಿಬ್ಬರು ಮಾತಾಡಿರುವ ರೀತಿಯಲ್ಲೇ ಇವರೂ ಮಾತಾಡಿದ್ದಾರೆ.

ಲೇಖಕರು ಮತ್ತು ಅಕಾಡೆಮಿ ನಡುವಿನ ಸಂಬಂಧ ಕುರಿತಂತೆ ದೇಶದಲ್ಲಿ ಮೂರು ವರ್ಗದ ಲೇಖಕರಿದ್ದಾರೆನಿಸುತ್ತದೆ. ಇದರತ್ತ ಕಣ್ಣೆತ್ತಿಯೂ ನೋಡದಂತಹ ಒಂದು ವರ್ಗ. ಮತ್ತೊಂದು ಇದರ ಜೊತೆ ಬೇರೆಬೇರೆ ಕಾರಣಗಳಿಂದ ಸದಾ ಸಂಘರ್ಷನಿರತ ವರ್ಗ. ಮೂರನೆ ವರ್ಗ ಇದರ ಜೊತೆಗೆ ಸದಾ ಮಧುರ ಸಂಬಂಧವಿರಿಸಿಕೊಂಡು, ಇದಕ್ಕೆ ಅನುಕೂಲಕರವಾಗಿ ನಡೆದುಕೊಳ್ಳುತ್ತಾ, ಅವಕಾಶ ಸಿಕ್ಕಾಗ ಅದರ ಒಳಾಂಗಣಕ್ಕೆ ಹೇಗಾದರೂ ನುಸುಳಿಕೊಳ್ಳುವ, ಸಾಧ್ಯವಾದರೆ ಅಲ್ಲೇ  ಝಾಂಡಾ ಹೂಡಿಬಿಡುವಂತಹ ವರ್ಗ.  ಈ ವರ್ಗವೇ ಅಪಾಯಕಾರಿ. ಇದು ಅಕಾಡೆಮಿಯನ್ನು ತನಗೆ ಬೇಕೆನಿಸಿದಾಗಲೆಲ್ಲ ರಕ್ಷಿಸುತ್ತಲೂ ಭಕ್ಷಿಸುತ್ತಲೂ ಇರುತ್ತದೆ.  ಇಂಥ ವರ್ಗವನ್ನು ಅಕಾಡೆಮಿಯ ಪರಾವಲಂಬಿಗಳು ಎಂದು ಕರೆಯುವ ಮನಸ್ಸಾಗುತ್ತದೆ. ಅಪವಾದಗಳಿದ್ದಾಗ್ಯೂ  ಇದು ಎಲ್ಲ ಅಕಾಡೆಮಿಗಳ ವಿಚಾರದಲ್ಲೂ ಸತ್ಯ. ಅಕಾಡೆಮಿಯ ನಾನಾ ಸಮಿತಿಗಳಲ್ಲಿ, ದೇಶವಿದೇಶಗಳ ಪ್ರವಾಸಗಳಲ್ಲಿ, ನಾನಾ ರಾಜ್ಯಗಳಲ್ಲಿ ಪಂಚತಾರಾ ಹೋಟೆಲುಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ, ವಿಮಾನ ಪ್ರಯಾಣಗಳ ಆಸೆಗಳಲ್ಲಿ ಫಲಾನುಭವಿಗಳಾಗುವ ಅಂಥವರಿಗೆ ಅಕಾಡೆಮಿ ಒಂದು ವಿರಾಮಧಾಮ.

ಅಕಾಡೆಮಿ ಮತ್ತು ಸರ್ಕಾರದ ನಡುವಿನ ಸಂಬಂಧ ಎಂಥದು? ಅಕಾಡೆಮಿ ಹುಟ್ಟಿದಂದಿನಿಂದಲೂ ಸರ್ಕಾರ ಇದಕ್ಕೆ ಅಪಾರವೆನಿಸುವ ಸ್ವಾಯತ್ತತೆಯನ್ನು ಧಾರೆಯೆರೆದು ಕೊಟ್ಟಿದೆ.  ಬಜೆಟ್‌ನಲ್ಲಿ ಇದಕ್ಕಾಗಿ ಹಣಕಾಸು ನೀಡಿ ಅದರ ಲೆಕ್ಕಪತ್ರಗಳನ್ನು ಪರೀಕ್ಷಿಸುವುದನ್ನು ಬಿಟ್ಟರೆ ಮತ್ಯಾವ ನಿಯಂತ್ರಣವೂ ಇರುವುದಿಲ್ಲ. ಆದರೆ ಕಾಲಕಾಲಕ್ಕೆ ಬದಲಾಗುವ ವ್ಯಕ್ತಿಗಳು ಈ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುತ್ತಲೂ, ಸರ್ಕಾರ ಕೇಳದಿದ್ದರೂ ಒತ್ತೆಯಿಡುತ್ತಲೂ ಇರುತ್ತಾರೆ.  ಸಂಪೂರ್ಣ ಹಣಕಾಸು ಒದಗಿಸುವ ಸರ್ಕಾರದ ಜೊತೆಗೆ ಒಂದು ಬಗೆಯ ಮೃದು ಧೋರಣೆಯನ್ನೇ ಅನುಸರಿಸುತ್ತಿರುತ್ತಾರೆ. ಅಕಾಡೆಮಿಗೆ ಯಾವಾಗ್ಯಾವಾಗ ಸರ್ಕಾರದಿಂದ ವಿಪತ್ತು ಒದಗಿದೆಯೋ ಆಗೆಲ್ಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ಸುಪ್ರಸಿದ್ಧ ಮಾತೊಂದನ್ನು ಬಳಸಿಕೊಳ್ಳಲಾಗುತ್ತದೆ. ನೆಹರೂ ಬದುಕಿರುವವರೆಗೂ ಅಕಾಡೆಮಿಯ ಅಧ್ಯಕ್ಷರಾಗಿದ್ದವರು. 

ಅವರ ಮಾತು ಹೀಗಿದೆ: ‘ನಾನು ಅಕಾಡೆಮಿಯ ಅಧ್ಯಕ್ಷನಾಗಿ ಒಂದು ಮಾತನ್ನು ಅತ್ಯಂತ ದಿಟ್ಟತನದಿಂದ ಹೇಳಬಯಸುತ್ತೇನೆ. ಪ್ರಧಾನಮಂತ್ರಿ ನನ್ನ ಕೆಲಸದಲ್ಲಿ ತಲೆಹಾಕುವುದನ್ನು ನಾನು ಇಷ್ಟಪಡುವುದಿಲ್ಲ’. ಈ ಮಾತು ದಾಖಲೆಯಾದಂದಿನಿಂದಲೂ ತನ್ನ ಸ್ವಾಯತ್ತತೆಯನ್ನುಳಿಸಿಕೊಳ್ಳುವುದಕ್ಕೆ ಅಕಾಡೆಮಿಗೆ ಸಂಜೀವಿನಿಯಂತೆ ಕೆಲಸ ಮಾಡಿದೆ. ಆದರೂ ತೊಂಬತ್ತರ ದಶಕದಲ್ಲೊಮ್ಮೆ ಸರ್ಕಾರ ಅಕಾಡೆಮಿಯನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದಾಗ ಅದರ ವಿರುದ್ಧ ದೇಶದ ನೂರಾರು ಲೇಖಕರ ಸಹಿಗಳನ್ನು ಸಂಗ್ರಹಿಸಿ ಸ್ವಾಯತ್ತತೆಯನ್ನು ಉಳಿಸಿಕೊಂಡಿತು. ಆದರೆ ಈ ಅತಿ ಸ್ವಾಯತ್ತತೆ ಸೃಷ್ಟಿಸುವ ಮನುಷ್ಯ ಘನತೆಗೆ ಮಾರಕವಾಗುವಂತ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವು ಕಂಡರೂ ಕಾಣದಂತೆ ನಮ್ಮ ಕವಿ, ನಾಟಕಕಾರರು ತಮ್ಮ ಸೃಜನಶೀಲ ಯಾಗಗಳಲ್ಲಿ ಮಗ್ನರಾಗಿರುತ್ತಾರೆ.

ತಾನೇ ಸ್ಥಾಪಿಸಿ, ಅವು ನಡೆಯಲು ಹಣಕಾಸು ಒದಗಿಸುವ ಇಂಥ ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಗಳು ತಮ್ಮ ಮಾತುಗಳನ್ನು ಕೇಳುವುದಿಲ್ಲವೆಂಬ ಕಾರಣದಿಂದಲೇ ‘ವಲಯ ಸಾಂಸ್ಕೃತಿಕ ಕೇಂದ್ರ’ಗಳೆಂಬ (ಜೋನಲ್ ಕಲ್ಚರಲ್ ಸೆಂಟರ್) ಸಮಾನಾಂತರ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳಿಗೆ ಬಜೆಟ್‌ಗಳಲ್ಲಿ ಯಥೇಚ್ಚವಾಗಿ ಹಣಕಾಸನ್ನು ಸರ್ಕಾರ ನೀಡಲು ಪ್ರಾರಂಭಿಸಿತು. ಪ್ರತಿಷ್ಠಿತ ಶಕ್ತಿ ಜೋರಾಗಿಯೇ ತಲೆಯೆತ್ತಿತು. ಈ ಕೇಂದ್ರಗಳಿಗೆ ಮೀಸಲಿಟ್ಟ ಬಜೆಟ್ಟಿನ ಮುಂದೆ ಸ್ವಾಯತ್ತ ಅಕಾಡೆಮಿಗಳ ಬಜೆಟ್ಟು ಏನೇನೂ ಇಲ್ಲವೆನ್ನಬಹುದು.

ಮತ್ತೆ ಇತಿಹಾಸ ಚಕ್ರ ಉರುಳಿದೆ.  ತೊಂಬತ್ತರ ಅಂಚಿನಲ್ಲಿರುವ ನಯನ ತಾರಾರ ಅಭಿವ್ಯಕ್ತಿ ಸ್ವಾತಂತ್ರ್ಯದ ದನಿ ಕಿಂಚಿತ್ತೂ ಮುಕ್ಕಾಗಿಲ್ಲ. ಅವರ ಜೊತೆ ಭಾರತೀಯ ಭಾಷೆಗಳ ಹಲವು ಹತ್ತು ಹಿರಿಯ, ಕಿರಿಯ ತಲೆಮಾರಿನ ಲೇಖಕರು ದನಿಗೂಡಿಸುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಅಗ್ನಿದಿವ್ಯ ದಾಟುತ್ತಿರುವವರ ಬರ್ಬರ ಹತ್ಯೆಗಳು ಸಾಲುಗಟ್ಟುತ್ತಿವೆ. ಅಘೋಷಿತ ತುರ್ತುಪರಿಸ್ಥಿತಿಯಲ್ಲಿ ಭಾರತೀಯ ಲೇಖಕರು ದನಿಯೆತ್ತಿದ್ದಾರೆ. ಅಕಾಡೆಮಿಯ ದಿವ್ಯ ಜಡತೆಯನ್ನು ಪ್ರಶ್ನಿಸುತ್ತಿದ್ದಾರೆ.  ಜಡತೆಗೆ ಕಿರೀಟವಿಟ್ಟಂತೆ ಅದರ ಈಗಿನ ಅಧ್ಯಕ್ಷರು, ನಯನತಾರಾ ಅಕಾಡೆಮಿ ಪ್ರಶಸ್ತಿಯ ಮೂಲಕ ಸಮೃದ್ಧವಾಗಿ ಸವಲತ್ತುಗಳನ್ನು ಬಾಚಿಕೊಂಡಿದ್ದಾರೆಂಬ ಅರ್ಥ ಬರುವ ಮಾತುಗಳನ್ನಾಡಿರುವ ವರದಿಯಾಗಿದೆ.  ಇದು ಘನತೆಯ ಮಾತಲ್ಲ. ಹಾಗೆ ನೋಡಿದರೆ ಅಂಥ ನೂರಾರು ಲೇಖಕರ ಕೃತಿಗಳ ಅನುವಾದ ಪ್ರಕಟಣೆ ಮೂಲಕ ಕೋಟಿಗಟ್ಟಲೆ ಹಣ ಸಂಪಾದಿಸುತ್ತಿರುವುದು ಅಕಾಡೆಮಿಯೇ. ಅಷ್ಟು ದೊಡ್ಡ ಲೇಖಕಿಯೊಬ್ಬರ ಬಗೆಗೆ, ಸದಾ ಖಾದಿಯನ್ನೇ ತೊಡುವ ಅಧ್ಯಕ್ಷರಾದ ತಿವಾರಿ ಸಾಹೇಬರು ಈ ವೇಳೆಗೆ ಆತ್ಮನಿರೀಕ್ಷೆ ಮಾಡಿಕೊಂಡಿರುತ್ತಾರೆಂಬ ನಂಬಿಕೆ ನನ್ನದು. ಈ ನಂಬಿಕೆಗೆ ಕಾರಣ ಅವರೊಬ್ಬ, ಉನ್ನತ ಮೌಲ್ಯಗಳನ್ನು ಕಾಪಾಡಿಕೊಳ್ಳಲೆಂಬ ಘನ ಉದ್ದೇಶದಿಂದ ಸ್ಥಾಪಿತವಾಗಿರುವ ಸಂಸ್ಥೆಯ ಅಧ್ಯಕ್ಷರಾಗಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT