ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷತೆ ಇರುವುದು ಕೋವಿಯಲ್ಲಲ್ಲ; ಎದೆಯ ಗೂಡಲ್ಲಿ

Last Updated 9 ಜನವರಿ 2015, 19:30 IST
ಅಕ್ಷರ ಗಾತ್ರ

ಷೇರು ಮಾರುಕಟ್ಟೆಯಲ್ಲಿ ಕಂಪೆನಿ­ಗಳು ಹೇಗೆ ಏರುಪೇರನ್ನು ಕಾಣು­ತ್ತವೆ ಎನ್ನುವ ಮಾದರಿ­ಯಲ್ಲೇ ನ್ಯಾಷನಲ್‌ ಕ್ರೈಂ ರೆಕಾರ್ಡ್‌್ಸ ಬ್ಯೂರೊ ಎನ್ನುವ ಸರ್ಕಾರಿ ಸಂಸ್ಥೆ ಭಾರ­ತೀಯ ನಗರಗಳ ಅಪರಾಧದ ಅಂಕಿಅಂಶ­ಗಳನ್ನು ಪ್ರಕಟಿಸುತ್ತದೆ. ಕೊಲೆ, ಅತ್ಯಾಚಾರ, ಅಪಹರಣ, ದರೋಡೆ, ಲೂಟಿ, ಮಕ್ಕಳ ಮೇಲಿನ ದೌರ್ಜನ್ಯ ಮುಂತಾದ ಅಪರಾಧ ಕೃತ್ಯಗಳಲ್ಲಿ ಯಾವ ಯಾವ ನಗರಗಳು ಯಾವ ಸ್ಥಾನದಲ್ಲಿವೆ?  ಮೊದಲ ಸ್ಥಾನದಲ್ಲಿರುವ ನಗರ ಯಾವುದು? ಯಾವ ನಗರದಲ್ಲಿ ಅಪರಾಧ ಅತಿ ಹೆಚ್ಚು ವೇಗವನ್ನು ಪಡೆದು­ಕೊಳ್ಳುತ್ತಿದೆ ಮುಂತಾದ ವಿಚಾರಗಳನ್ನು ಬಹಿರಂಗಪಡಿಸುತ್ತದೆ.

ದೇಶದ ರಾಜಧಾನಿ ‘ರೇಪ್‌ ಕ್ಯಾಪಿಟಲ್‌’ ಎನ್ನುವ ಬಿರುದನ್ನು ಪಡೆದರೆ, ದೇಶದ ಹೆಮ್ಮೆಯ ಐ.ಟಿ ನಗರ ‘ಮಕ್ಕಳ ನರಕ’ ಎನ್ನುವ ಪಟ್ಟವನ್ನು ತನ್ನದಾಗಿಸಿಕೊಳ್ಳುತ್ತಿದೆ.

ನಮ್ಮ ಮಹಾನಗರಗಳು ಬದುಕಲು ಅಯೋಗ್ಯವಾಗಿ ಬಹಳ ಕಾಲ­ವಾಗಿದೆ. ಗಾಳಿ, ನೀರು, ರಸ್ತೆಗಳು ಯಾವುವೂ ಬಳಕೆಗೆ ಯೋಗ್ಯವಾಗಿಲ್ಲ. ಎಲ್ಲವೂ ಅಪಾಯದ ಮಟ್ಟವನ್ನು ಎಂದೋ ದಾಟಿವೆ. ಬವಣೆಗೆ ಇಷ್ಟು ಸಾಲದು ಎನ್ನು­ವಂತೆ ಕಿತ್ತು ತಿನ್ನುವ ಅಪರಾಧಗಳು, ಪ್ರಮುಖ ನಗರಗಳಲ್ಲಿ ಆಗಾಗ್ಗೆ ಸದ್ದು ಮಾಡುವ ಭಯೋತ್ಪಾದನಾ ಚಟುವಟಿಕೆಗಳು ಬೇರೆ.

ಯುರೋಪ್‌ ಮತ್ತು ಅಮೆರಿಕ ಖಂಡದ ದೇಶಗಳು ಭಾರತದ  ಪ್ರವಾಸದಲ್ಲಿರುವ ತನ್ನ ನಾಗರಿಕರಿಗೆ ಎಚ್ಚರಿಕೆಯ ಸಂದೇಶಗಳನ್ನು ರವಾನಿಸುತ್ತವೆ-: ದೆಹಲಿಯಲ್ಲಿ ಕತ್ತಲಾದ ಮೇಲೆ ರಸ್ತೆಗಳಲ್ಲಿ ಓಡಾಡಬೇಡಿ; ರಾತ್ರಿಯ ಹೊತ್ತು ಟ್ಯಾಕ್ಸಿ ಹತ್ತಬೇಡಿ; ಅಪರಿಚಿತರನ್ನು ಸಂಪರ್ಕಿಸುವಾಗ ಎಚ್ಚರ ವಹಿಸಿ; ಒಬ್ಬೊಬ್ಬರೇ ಇರುವ ಸಂದರ್ಭ ಬಂದಾಗ ಜೋಪಾನ!

ಅವರ ನಗರಗಳೇನೂ ಶೇಕಡ ನೂರರಷ್ಟು ಸುರಕ್ಷಿತವಲ್ಲ. ನ್ಯೂಯಾರ್ಕ್‌, ಲಾಸ್‌ ಏಂಜಲೀಸ್‌, ಲಂಡನ್‌ಗಳಲ್ಲಿ ರಾತ್ರಿ ದಿಕ್ಕುಗೆಟ್ಟರೆ ಆ ದೇವರೇ ನಿಮ್ಮನ್ನು ಕಾಪಾಡಬೇಕು. ಆದರೂ, ವಿಶ್ವದ ಅತಿ ಭೀಕರ ನಗರಗಳು ಬಡ ದೇಶಗಳ ಪಾಲಿನವೇ. ದೆಹಲಿಯಲ್ಲಿ ರಾತ್ರಿ ವೇಳೆ ಮಹಿಳೆಯರು ನಿರ್ಭಯವಾಗಿ ಓಡಾಡುವಂತಿಲ್ಲ; ರಿಯೊ ಡಿ ಜನೈರೊನಲ್ಲಿ ತಪ್ಪಿಸಿಕೊಂಡರೆ ರಸ್ತೆರಸ್ತೆಗಳಲ್ಲೂ ಚಟುವಟಿಕೆಯಿಂದ ಕೂಡಿರುವ ಅಪರಾಧಿ ಗ್ಯಾಂಗ್‌ಗಳ ತೆಕ್ಕೆಗೆ ನೇರವಾಗಿ ಬೀಳುವ ಸಾಧ್ಯತೆ ಬಹಳ; ಆಫ್ರಿಕಾದ ನಗರಗಳಲ್ಲಿ ನಿಮ್ಮಲ್ಲಿರುವ ಒಂದು ಸಿಗರೇಟಿಗಾಗಿ ಅಪರಿಚಿತನೊಬ್ಬ ನಿಮ್ಮ ಪ್ರಾಣವನ್ನೇ ತೆಗೆಯಬಹುದು; ಇನ್ಯಾವುದೋ ನಗರದಲ್ಲಿ ಕೆಲಸದ ಒತ್ತಡ ನೀಗಿಕೊಳ್ಳಲೆಂದು ಕಾಫಿ ಕುಡಿಯಲು ಸಮೀಪದ ರೆಸ್ಟೋರೆಂಟ್‌ಗೆ ಹೋದರೆ, ಇದ್ದಕ್ಕಿದ್ದಂತೆ ದಾಳಿ ನಡೆಸುವ ಉಗ್ರರ ಅಟ್ಟಹಾಸದಿಂದ ತಾಸುಗಟ್ಟಲೆ ಅವರ ಒತ್ತೆಯಾಳುಗಳಾಗಿ ಬಿಡಬಹುದು; ಮಕ್ಕಳೊಂದಿಗೆ  ಷಾಪಿಂಗ್‌ ಹೊರಟಾಗ ರಸ್ತೆ ಬದಿ ಅಡಗಿಸಿಟ್ಟ ಬಾಂಬ್‌ನಿಂದಾಗಿ ಬೀದಿಯಲ್ಲೇ ಹೆಣವಾಗಬಹುದು (ಇತ್ತೀಚೆಗೆ ಬೆಂಗಳೂರಿನಲ್ಲಿ ಆದಂತೆ) ಯಾಕೆ ಹೀಗೆ?

ಎಷ್ಟು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಊರ ತುಂಬಾ ಇಡೋಣ? ಹೊಸ ವರ್ಷದ ಸಂಭ್ರಮವನ್ನು ನಿರ್ವಿಘ್ನಗೊಳಿಸಲು ಬೆಂಗಳೂರಿನ ಎಂ.ಜಿ ರಸ್ತೆಯೊಂದರಲ್ಲೇ 87 ಸಿ.ಸಿ ಕ್ಯಾಮೆರಾಗಳನ್ನು ಪೊಲೀಸರು ಅಳವಡಿಸಿದ್ದರಂತೆ, ಜೊತೆಯಲ್ಲಿ ಹಾರಾಡುತ್ತಾ ಫೋಟೊ ತೆಗೆಯುವ ಡ್ರೋಣ್‌ ಕ್ಯಾಮೆರಾಗಳು. ಆದರೆ ಬೆಂಗಳೂರಿನಲ್ಲಿ ಸಾವಿರಾರು ರಸ್ತೆಗಳಿವೆಯಲ್ಲ? ಅವುಗಳಿಗೆ ಏನು ಮಾಡೋಣ? ಹಾಗೇನಾದರೂ ಎಲ್ಲ ರಸ್ತೆಗಳಿಗೂ ಕ್ಯಾಮೆರಾಗಳನ್ನು ಅಳವಡಿ­ಸುತ್ತಾ ಹೋದರೆ  ಅವುಗಳನ್ನು ನೋಡುತ್ತಾ ಕೂರುವುದಕ್ಕೇ ಬೆಂಗ­ಳೂ­ರಿನ ಕಾಲು ಭಾಗ ಜನಸಂಖ್ಯೆಯೇ ಬೇಕಾಗುತ್ತದಲ್ಲ. ಭಯೋತ್ಪಾದನೆ ತಡೆಗೆ ಎಷ್ಟೇ ಸಿ.ಸಿ.ಟಿ.ವಿ.ಗಳನ್ನು ಅಳವಡಿಸಿದರೂ, ಸಂಚು ಹೂಡಿ ನಮ್ಮ ಎಳೆಯ ಕಂದಮ್ಮಗಳನ್ನು ದೌರ್ಜನ್ಯಕ್ಕೆ ಒಳಪಡಿಸುವ ರಾಕ್ಷಸರು ನಮ್ಮ ಶಾಲೆಗಳಲ್ಲೇ ಇದ್ದಾರಲ್ಲ, ಅಂತಹವರನ್ನು ಹೇಗೆ ನಿಯಂತ್ರಿಸೋಣ?

ಕೋವಿಯ ಬಾನೆಟ್‌ನಿಂದ ಅಥವಾ ಹೈ ಡೆಫಿನಿಷನ್‌ ಕ್ಯಾಮೆರಾದಿಂದ ಸುರಕ್ಷತೆ ಹುಟ್ಟುವುದಿಲ್ಲ. ಅದು ಹುಟ್ಟುವುದು ಸಮಾಜ ವ್ಯಕ್ತಿಯನ್ನು ನಂಬಿದಾಗ ಮತ್ತು ವ್ಯಕ್ತಿ ಸಮಾಜವನ್ನು ನಂಬಿದಾಗ, ಇಬ್ಬರ ಎದೆಯಲ್ಲೂ. ಯಾವ ಸಮಾಜ ಜೀವಕ್ಕೆ ಬೆಲೆ ಕೊಡು­ತ್ತದೋ, ಸಮಾನತೆಯನ್ನು ಗೌರವಿಸುತ್ತದೋ ಅಂತಹ ಸಮಾಜ­ದಲ್ಲಿ ಸುರಕ್ಷತೆ ಎನ್ನುವುದು ತನಗೆ ತಾನೇ ಹುಟ್ಟಿಕೊಳ್ಳು­ತ್ತದೆ, ಮಳೆಯ ನಂತರ ಬಯಲಿನಲ್ಲಿ ಚಿಗುರುವ ಹುಲ್ಲಿನ ಹಾಗೆ.

ಸುರಕ್ಷತೆ ಎನ್ನುವುದು ನಮ್ಮ ಮನೋಭಾವದಲ್ಲಿದೆ, ಮೌಲ್ಯಗಳ ಆಚರಣೆಯಲ್ಲಿದೆ, ಸಮಾಜ ಮತ್ತು ನಮ್ಮ ದೃಷ್ಟಿ­ಕೋನ­­ಗಳಲ್ಲಿದೆ. ಮೌಲ್ಯಾಧಾರಿತ ಶಿಕ್ಷಣ ಮತ್ತು ಮೌಲ್ಯವರ್ಧಿತ ಸಮಾಜ ಮಾತ್ರ ನಮ್ಮಲ್ಲಿ ಸುರಕ್ಷತೆಯ ಭಾವ ಉಂಟು ಮಾಡಲು ಸಾಧ್ಯ. ಭ್ರಷ್ಟಾ­ಚಾರದ ವಿರುದ್ಧ ಈಚಿನ ದಿನಗಳಲ್ಲಿ ನಡೆದ ಚಳವಳಿಯ ಮಾದರಿಯಲ್ಲೇ ಮೌಲ್ಯಗಳನ್ನು ಬಿತ್ತುವ ಜನಾಂ­ದೋಲನ­ಗಳನ್ನು ರೂಪಿಸ­ಬೇಕಾಗಿದೆ. ಜಾತಿ, ಧರ್ಮ, ಲಿಂಗಗಳಾ­ಚೆಗೆ ನಿಂತು ನೋಡ­ಬಲ್ಲ ಮನುಷ್ಯ ದೃಷ್ಟಿಯನ್ನು ನಮ್ಮ ಮಕ್ಕಳಲ್ಲಿ ಮೂಡಿಸಬೇಕಾಗಿದೆ.

ಇಡೀ ಮನುಕುಲದ ವಿರುದ್ಧವೇ ತಿರುಗಿಬಿದ್ದು ಭಯೋತ್ಪಾದನೆ, ಸರಣಿ ಕೊಲೆ, ಸರಣಿ ಅತ್ಯಾಚಾರದಂತಹ ಹೀನ ಕೃತ್ಯಗಳನ್ನು ಎಸಗುವವರ ಕಲ್ಲು ಮನಸ್ಸು ನಮಗಿನ್ನೂ ಬಹಳ ನಿಗೂಢವೇ. ಅಂತಹ ಕೃತ್ಯಗಳನ್ನು ಎಸಗುವವರ ಮಾನಸಿಕ ಅಧ್ಯಯನ ನಡೆಸಿ ಆ ಬಗೆಯ ಮನೋಭಾವವನ್ನು ಚಿಗುರಿನಲ್ಲೇ ಗುರುತಿಸುವ ಮತ್ತು ಕೌನ್ಸೆಲಿಂಗ್‌ ಚಿಕಿತ್ಸೆ ಮುಖಾಂತರ ನಿಯಂತ್ರಿಸುವ ಸಂಶೋಧನೆಗಳು ಅಮೆರಿಕ ಮುಂತಾದ ಮುಂದುವರಿದ ರಾಷ್ಟ್ರಗಳಲ್ಲಿ ಮಹತ್ವ­ಪೂರ್ಣ­­ವಾಗಿ ನಡೆಯುತ್ತಿವೆ. ಅಂತಹ ಸಂಶೋಧನೆಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮಾತ್ರವಲ್ಲದೆ, ಭಾರತವೂ ಸೇರಿದಂತೆ ಇತರ ಪ್ರದೇಶಗಳಲ್ಲೂ ಪರಿಣಾಮಕಾರಿಯಾಗಿ ನಡೆಯಬೇಕಾಗಿದೆ.
ಇಲ್ಲದಿದ್ದರೆ ಅಲ್ಲಿಯತನಕ ನ್ಯೂಯಾರ್ಕ್‌ ಇರಲಿ, ಪೆಶಾವರ ಇರಲಿ ಅಥವಾ ನಮ್ಮ ಬೆಂಗಳೂರೇ ಆಗಿರಲಿ ಅಲ್ಲಿನ ರಸ್ತೆಗಳ ಯಾವ ಮೂಲೆ­ಯಲ್ಲಾದರೂ ಅಳವಡಿಸಬಹುದಾದ ಸಿ.ಸಿ.ಟಿ.ವಿ ಕ್ಯಾಮೆರಾ­­­ಗಳು ನಮ್ಮಂತಹ ಸಾಮಾನ್ಯ ನಾಗರಿಕರ ಮೇಲಿನ ದೌರ್ಜನ್ಯ­ಗಳ ಫುಟೇಜ್‌ ಹೊತ್ತ ನಿರ್ಜೀವ ವಸ್ತುಗಳಾಗಿರುತ್ತವೆ ಅಷ್ಟೆ.
(ಲೇಖಕರು ಕಾದಂಬರಿಕಾರರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT