ಇದು ವೇಗ, ಆವೇಗದ ಯುಗ. ಕಾಲದ ಪರಿಣಾಮ ಅಥವಾ ನಮ್ಮೊಳಗಿನ ಧಾವಂತದ ಪರಿಣಾಮವಾಗಿ ಇಂದು ನಮ್ಮ ಕುಟುಂಬದಲ್ಲಿ, ಸಮಾಜದಲ್ಲಿ ನಾವು ಕೆಲಸ ಮಾಡುವ ಪರಿಸರದಲ್ಲಿ, ಎಲ್ಲೆಡೆಯಲ್ಲಿ ನಿತ್ಯ ಕಾಣುವ ಒಂದು ಪ್ರಹಸನವೆಂದರೆ ಜಗಳ.

ಬೆಳಗಾಗೆದ್ದು ಕಾಫಿ ತಡವಾಯಿತೆಂದು ಮನೆಯಲ್ಲಿ ಜಗಳ, ರಸ್ತೆಯಲ್ಲಿ ವಾಹನ ಅಡ್ಡ ಬಂದಿತೆಂದು ಅಥವಾ ತಗುಲಿತೆಂದು ಅಲ್ಲಿ ಜಗಳ, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ, ಶಿಕ್ಷಕ-ವಿದ್ಯಾರ್ಥಿಗಳ ನಡುವೆ, ಆಡಳಿತ ಮಂಡಳಿ ಮತ್ತು ಶಿಕ್ಷಕರ ನಡುವೆ ಜಗಳ. ಇನ್ನು ಸಮಾಜದಲ್ಲಿ ಜಾತಿ, ಮತ, ಪಂಥ, ಧರ್ಮಗಳ ಜಗಳ. ಜಾಗತಿಕ ಮಟ್ಟದಲ್ಲಿ ಸರಹದ್ದುಗಳಲ್ಲಿ ಬಡಿದಾಟ, ಪರದೇಶದ ಮೇಲೆ ಆಕ್ರಮಣ, ಮಿಲಿಟರಿ ಬಲ ನಿರೂಪಿಸಲು ಯುದ್ಧ. ಹೀಗೆ ಎಲ್ಲೆಡೆಯಲ್ಲಿ ಜಗಳಗಳ ವಿಶ್ವರೂಪ ದರ್ಶನವಾಗುತ್ತಿದೆ. ಈ ನಿಟ್ಟಿನಲ್ಲಿ ಜಗಳ ಏಕಾಗುತ್ತದೆ ಮತ್ತು ಅದನ್ನು ನಿಯಂತ್ರಿಸುವ ಅಥವಾ ನಿಲ್ಲಿಸುವ ಬಗೆ ಏನು ಎಂಬುದನ್ನು ನಾವು ಗಮನಿಸಬೇಕಾಗಿದೆ. ಏಕೆಂದರೆ ನಮ್ಮ ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ, ವಿಜ್ಞಾನ ಎಲ್ಲ ಪ್ರಗತಿಯನ್ನು ಸಾಧಿಸಿದರೂ ಮನುಷ್ಯನ ಅಂತರಂಗದ ಶಾಂತಿ ಅನುಭೂತಿಗಳನ್ನು ಕಂಡುಕೊಳ್ಳಲು ವಿಫಲವಾಗಿದೆ. ಅವರು ತಮ್ಮ ‘ಶತಮಾನದ ಸಂಧ್ಯೆ’ ಕವನದಲ್ಲಿ ಮೂಡಿಸಿರುವ ಸಾಲುಗಳು ಹೀಗಿವೆ: ‘ನೊಣ ಮೀಸೆಯ ಹುಳು ಹೆಜ್ಜೆಯ ಎಣಿಸುವ ಬಿಜ್ಜೆಯ ಬಲ್ಲ, ತನ್ನಾತ್ಮವ ತಾನರಸುವ ಸಾಧನೆಯೊಂದನ್ನು ಒಲ್ಲ, ಅನ್ವೇಷಣೆ ಅನ್ವೇಷಣೆ ಸುಖಿಸಲು ಪುರುಸೊತ್ತಿಲ್ಲ.’

ಜಗಳಗಳಿಗೆ ಮುಖ್ಯವಾಗಿ ಆರು ಕಾರಣಗಳನ್ನು ಪಟ್ಟಿ ಮಾಡಬಹುದು: ಪ್ರೀತಿ ಅಥವಾ ಪ್ರೇಮ, ಕುಟುಂಬ, ಅಧಿಕಾರ, ಸ್ವಾತಂತ್ರ್ಯ, ತ್ಯಾಗ ಮತ್ತು ಅಹಂಕಾರ - ಇವುಗಳ ಕಾರಣದಿಂದ ಕಲಹಗಳು ಆರಂಭವಾಗುತ್ತವೆ. ಆದರೆ ಇವೆಲ್ಲದರ ಮೂಲದಲ್ಲಿ ಸ್ವಾರ್ಥದ ಲೇಪ ಇದ್ದಾಗ ಅದು ಜಗಳಕ್ಕೆ ಕಾರಣವಾದರೆ ಅಲ್ಲಿ ನಿಃಸ್ವಾರ್ಥದ ಲೇಪ ಇದ್ದರೆ ಅದು ಶಾಂತಿಗೆ ಕಾರಣವಾಗುತ್ತದೆ. ಪ್ರೇಮವೆಂಬುದು ಮತ್ತೊಬ್ಬ ವ್ಯಕ್ತಿಯ ಮೇಲೆ ತಮ್ಮ ಅಧಿಕಾರ ಸ್ಥಾಪನೆ ಎಂದುಕೊಂಡಾಗ ಅದು ತಮಗೆ ಒಲಿಯದಿದ್ದಾಗ ಆ ವ್ಯಕ್ತಿಯ ಮೇಲೆ, ಆ ಕುಟುಂಬದ ಮೇಲೆ ಆ ಪರಿಸರದ ವಿರುದ್ಧ ಜಗಳ ಕಾಯುತ್ತಾರೆ. ಕುಟುಂಬದಲ್ಲಿ ಇರುವ ಸಂಪನ್ಮೂಲಗಳ ಬಳಕೆಯ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾದಾಗ ಅಲ್ಲಿ ಕಲಹ ಉಂಟಾಗುತ್ತದೆ. ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ ಅವನು ಅದಕ್ಕಾಗಿ ಜಗಳ ಕಾಯುತ್ತಾನೆ. ತ್ಯಾಗದ ವಿಚಾರದಲ್ಲೂ ಜಗಳ ಉಂಟಾಗುತ್ತದೆ; ಅದಕ್ಕೂ ರಾಗ–ದ್ವೇಷಗಳೇ ಕಾರಣ. ಪೀಠಾಧಿಪತಿಗಳ ಕಲಹ ಇದಕ್ಕೊಂದು ಉದಾಹರಣೆ. ಅಹಂಕಾರದ ವಿವಿಧ ಮುಖಗಳು ಜಗಳದ ಕನ್ನಡಿಯಲ್ಲಿ ಕಾಣಿಸಿಕೊಳ್ಳುತ್ತವೆ. ‘ಕಗ್ಗ’ದ ಒಂದು ಪದ್ಯ ಇದನ್ನು ಸೊಗಸಾಗಿ ಕಾಣಿಸುತ್ತದೆ: ‘ದೇವ ದಾನವರ ರಣರಂಗ ಮಾನವ ಹೃದಯ, ಭಾವ ರಾಗ ಹಠಂಗಳವರ ಸೇನೆಗಳು, ಭೂವಿಭವ ಜಯಗಳ ಬ್ರಾಂತಿಯಲಿ ಮರೆಯುವರು ಜೀವಾಮೃತವನವರು.’ ಬಾಳಿನ ರಣರಂಗದಲ್ಲಿ ಭಾವ ರಾಗ ಹಠಗಳ ಸೇನೆಗಳನ್ನು ಸಜ್ಜುಗೊಳಿಸುವುದರ ಮೂಲಕ ನಮ್ಮ ಮೂಲಸ್ವರೂಪವಾದ ಆನಂದವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಕಗ್ಗದ ಕವಿ ಪ್ರತಿಪಾದಿಸುತ್ತಿದ್ದಾರೆ.

ತಾಳ್ಮೆ ಎಂಬುದು ಸದಾ ನಮ್ಮನ್ನು ಕಾಪಾಡುವ ತಾಯಿತ. ಅದಿಲ್ಲದಿದ್ದರೆ ಬದುಕು ಸಂಘರ್ಷದ ಹಾದಿಯಾಗಿಬಿಡುತ್ತದೆ. ಜಗಳವೆಂಬ ಪ್ರಸಂಗದಲ್ಲಿ ನಮ್ಮ ಕೀಳರಿಮೆ, ಆತ್ಮವಿಶ್ವಾಸದ ಕೊರತೆ, ನಮ್ಮ ದೌರ್ಬಲ್ಯ – ಇವೆಲ್ಲವೂ ವ್ಯಕ್ತವಾಗಿಬಿಡುತ್ತದೆ. ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ತಾಳ್ಮೆಯನ್ನು ರೂಢಿಸಿಕೊಂಡು ಜಗಳಗಳಿಂದ ಮುಕ್ತರಾದಾಗ ಜೀವನವು ಸಂತಸಮಯವಾಗುತ್ತದೆ. ‘ಕಳವಳವ ನೀಗಿಬಿಡು, ತಳಮಳವ ದೂರವಿಡು, ಕಳೆ, ತಳ್ಳು ಗಲಭೆ ಗಾಬರಿಯ ಮನದಿಂದ ಅಲೆದಾಡುತಿರೆ ದೀಪ ಕಣ್ಗೆ ಗುರಿ ತಪ್ಪುವುದು, ತಿಳಿತಿಳಿವು ಶಾಂತಿಯಲಿ’ ಎನ್ನುತ್ತಾನೆ, ಮಂಕುತಿಮ್ಮ. ತಿಳಿವಿನಲ್ಲಿ ಶಾಂತಿಯ ಅಡಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಖಲೀಲ್ ಗಿಬ್ರಾನ್ ನಮ್ಮ ಹೋರಾಟದ ಒಟ್ಟು ಗುರಿಯನ್ನು ಒಂದೇ ವಾಕ್ಯದಲ್ಲಿ ಹಿಡಿದಿಡುತ್ತಾನೆ. ‘ಮನುಷ್ಯ ಬದುಕನ್ನು ಹೊರಗೆ ಅರಸಲು ಹೆಣಗುತ್ತಾನೆ. ಆದರೆ ತಾನು ಹುಡುಕುತ್ತಿರುವ ಬದುಕು ತನ್ನೊಳಗೇ ಇದೆ ಎಂಬುದನ್ನು ಮರೆತಿರುತ್ತಾನೆ’ ಎಂದು ಅವನು ಹೇಳಿದ್ದಾನೆ. ಅಂದರೆ ನಮ್ಮ ಬದುಕಿನ ಸಾರ್ಥಕ್ಯಕ್ಕೆ ಹೊರಗಿನ ಅಡೆತಡೆಗಳು ಕಾರಣವೆಂದು ಅವುಗಳ ಮೇಲೆ ಯುದ್ಧ ಸಾರುವ ಬದಲು ನಮ್ಮೊಳಗೆ ಇರುವ ದೌರ್ಬಲ್ಯಗಳನ್ನು ನೀಗಿಕೊಂಡು ಆಂತರಿಕವಾಗಿ ಶಕ್ತಿವಂತರಾದಾಗ ಬಾಹ್ಯ ಜಗಳಗಳು ನಿಲ್ಲುತ್ತವೆ. ಹೀಗೆ ತನ್ನ ಜೀವನದ ಸಾರ್ಥಕ್ಯವನ್ನು ವ್ಯಕ್ತಿಯು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಗಿಬ್ರಾನ್ ಸೂಚಿಸುತ್ತಿದ್ದಾನೆ.

ಜಾಗತಿಕ ಮಟ್ಟದಲ್ಲಿ ಅಶಾಂತಿಯು ಹರಡಿ ಜಗಳಗಳು ತಲೆದೋರುತ್ತಿರುವ ಸಂದರ್ಭದಲ್ಲಿ ಬಹಳ ಹಿಂದೆ ಅಂದರೆ 1897ರಲ್ಲಿ ವಿಲಿಯಂ ಜೇಮ್ಸ್ ಬಾಸ್ಟನ್ನಿನಲ್ಲಿ ಅಮೆರಿಕದ ಅಂತರ್ಯುದ್ಧದ ಸ್ಮಾರಕದ ಉದ್ಘಾಟನಾ ಸಮಯದಲ್ಲಿ ಹೇಳಿದ ಮಾತುಗಳು ಮನಮುಟ್ಟುವಂತಿವೆ: ‘ದೇಶದ ಅಪಾಯಕಾರಿ ಶತ್ರುಗಳು ಹೊರಗಿನವರಲ್ಲ. ಅವರು ನಮ್ಮ ಗಡಿಗಳೊಳಗೆ ಇರುತ್ತಾರೆ. ಮೊದಲಿಗೆ ನಾಗರಿಕತೆಯು ಇಂತಹ ಆಂತರಿಕ ಶತ್ರುಗಳಿಂದ ತನ್ನನ್ನು ಕಾಪಾಡಿಕೊಳ್ಳಬೇಕು. ಎಲ್ಲ ದೇಶಗಳಿಗಿಂತ ಅತ್ಯಂತ ಉತ್ತಮ ದೇಶವೆಂದರೆ ಅಲ್ಲಿಯ ಜನರು ಯಾವುದೇ ತೋರಾಣಿಕೆ ಇಲ್ಲದ ನಾಗರಿಕ ಪ್ರಜ್ಞೆಯನ್ನು ಮೆರೆಯುತ್ತಿರುತ್ತಾರೆ; ತಮ್ಮ ಮಾತು, ಕೃತಿ ಮತ್ತು ಪ್ರಜ್ಞಾವಂತ ವಿಧಾನದ ಮತಚಲಾವಣೆಯ ಮೂಲಕ ಅದನ್ನು ತೋರ್ಪಡಿಸುತ್ತಾರೆ. ಈ ಮೂಲಕ ತಾವು ನಿಜವಾದ ಮನುಷ್ಯರು ನಿಜ ಅರ್ಥದ ಪ್ರಜೆಗಳು ಎಂಬುದನ್ನು ಬಿಂಬಿಸುತ್ತಾರೆ; ಮದಭರಿತ ಪ್ರತ್ಯೇಕತಾವಾದಿಗಳನ್ನು ಆರಿಸದೆ ಅವರು ಉತ್ತಮರನ್ನೇ ನಾಯಕರನ್ನಾಗಿ ಆರಿಸುತ್ತಾರೆ.’

ಇಂದು ಜಗತ್ತಿನಲ್ಲಿ ಎಲ್ಲೆಡೆಯಲ್ಲಿ ವ್ಯಕ್ತವಾಗುತ್ತಿರುವ ಜಗಳಗಳು ಮರೆಯಾಗಬೇಕಾದರೆ ಪ್ರೀತಿಯ ಅನುಸಂಧಾನದ ಅಂಟು ಮಾನವರೆಲ್ಲರನ್ನು ಬಂಧಿಸಬೇಕು. ಉನ್ನತ ಜೀವನದತ್ತ, ಶಾಂತಿ–ಸಮಾಧಾನಗಳ ಬಾಳನ್ನು ಬೆಳೆಸಿಕೊಳ್ಳುವತ್ತ ಎಲ್ಲರೂ ಗಮನವನ್ನು ಹರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.