ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಜನಸ್ಪಂದನ: ಸಮಸ್ಯೆಯೊಂದಿಗೆ ಬಂದರು; ನಿರಾಳರಾಗಿ ಹೋದರು

ಕೆಲಸ ಮಾಡಿ, ಇಲ್ಲವೇ ಜಾಗ ಖಾಲಿ ಮಾಡಿ: ಅಧಿಕಾರಿಗಳಿಗೆ ಶಾಸಕ ಮುನಿರತ್ನ ಎಚ್ಚರಿಕೆ
Last Updated 6 ಅಕ್ಟೋಬರ್ 2018, 16:48 IST
ಅಕ್ಷರ ಗಾತ್ರ

ಬೆಂಗಳೂರು: ಕುಡಿಯುವ ನೀರಿನ ಕೊರತೆ, ಕಸ ವಿಲೇವಾರಿ ಸಮಸ್ಯೆ, ಬೀದಿ ನಾಯಿಗಳ ಹಾವಳಿ, ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ ನಿಯಮ ಉಲ್ಲಂಘನೆ... ಇಂತಹಸಮಸ್ಯೆಗಳಿಂದ ಮುಕ್ತಿ ಸಿಗುವ ಭರವಸೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಜನರಲ್ಲಿ ಮೂಡಿದೆ.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್’ ಪತ್ರಿಕೆಗಳ ವತಿಯಿಂದ ಜೆ.ಪಿ.ಉದ್ಯಾನ ವಾರ್ಡ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮ, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜನರ ನಡುವಿನ ಮುಖಾಮುಖಿ ಸಂವಾದಕ್ಕೆ ಸೇತುವೆಯಾಯಿತು. ತಮ್ಮ ನೋವು–ನಲಿವುಗಳನ್ನು ಮುಕ್ತವಾಗಿ ಹಂಚಿಕೊಂಡ ನಿವಾಸಿಗಳು ಕಾಲಮಿತಿಯೊಳಗೆ ಪರಿಹಾರ ಹೊಂದುವ ಆಶ್ವಾಸನೆ ಪಡೆದರು.

ಜೆ.ಪಿ.ಉದ್ಯಾನ ವಾರ್ಡ್‌, ಎಚ್‌ಎಂಟಿ ಬಡಾವಣೆ, ಯಶವಂತಪುರ ವಾರ್ಡ್‌ಗಳ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡರು.

ಟಿ.ಸಿ.ಶಿವಲಿಂಗಪ್ಪ, ‘ಎಲ್‌ಸಿಆರ್‌ ಶಾಲೆಯ ಪರಿಸರದಲ್ಲಿ ಹಾಗೂ ಎಚ್‌ಎಂಟಿ ವಾರ್ಡ್‌ನ ಕೆಲವೆಡೆ ಎಂಟು ತಿಂಗಳ ಹಿಂದೆ ನೀರಿನ ಸಮಸ್ಯೆ ಬಗೆಹರಿಸಿದ್ದರು. ಈಗ ಮತ್ತೆ ಸಮಸ್ಯೆ ಕಾಣಿಸಿಕೊಂಡಿದೆ. ವಾರದಲ್ಲಿ ಎರಡು ದಿನ ಮಾತ್ರ ನೀರು ಬರುತ್ತಿದೆ’ ಎಂದು ತಿಳಿಸಿದರು. ಎಚ್‌.ಎಂ.ಟಿ ಬಡಾವಣೆ ವಾರ್ಡ್‌ನ ನಿವಾಸಿಯಾಗಿರುವ ಹಿರಿಯ ನಾಗರಿಕ ಸುಬ್ಬಣ್ಣ ಹಾಗೂ ಯಶವಂತಪುರ ವಾರ್ಡ್‌ನ ಪ್ರಕಾಶ್‌ ಅವರೂ ಇದೇ ಸಮಸ್ಯೆ ಹೇಳಿಕೊಂಡರು.

ಶಾಸಕ ಮುನಿರತ್ನ, ‘ಈ ಪರಿಸರದಲ್ಲಿ ನೀರಿನ ಸಮಸ್ಯೆ ಇರುವುದು ನಿಜ. ಇಲ್ಲಿ ಹೊಸ ಕೊಳವೆ ಅಳವಡಿಸಬೇಕಿದೆ. ಈ ಕಾಮಗಾರಿಯನ್ನು ಜಲಮಂಡಳಿ ಆದಷ್ಟು ಬೇಗ ಪೂರ್ಣಗೊಳಿಸಬೇಕು. ಮುಂದಿನ ಗುರುವಾರವೇ ಜಲಮಂಡಳಿಗೆ ಅನುದಾನವನ್ನು ಜಮೆ ಮಾಡಲಾಗುತ್ತದೆ. ಟೆಂಡರ್‌ ಕರೆದರೆ ಕೆಲಸ ವಿಳಂಬವಾಗುತ್ತದೆ. ಇಲಾಖೆಯಿಂದಲೇ ಕೆಲಸ ಮಾಡಿಸಲು ಟೆಂಡರ್‌ ಕರೆಯಬೇಕಾಗಿಲ್ಲ. ಇದಕ್ಕೆ ಕೆಟಿಟಿಪಿ ಕಾಯ್ದೆಯಲ್ಲೂ ಅವಕಾಶ ಇದೆ. ತಿಂಗಳೊಳಗೆ ಈ ಸಮಸ್ಯೆ ನೀಗಬೇಕು’ ಎಂದು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಲಸ ಮಾಡಿ, ಇಲ್ಲ ಜಾಗ ಖಾಲಿ ಮಾಡಿ:

‘ನನ್ನ ಕ್ಷೇತ್ರಕ್ಕೆ ಕೆಲಸ ಮಾಡಲು ಹುಮ್ಮಸ್ಸಿರುವ ಅಧಿಕಾರಿಗಳು ಮಾತ್ರ ಬೇಕು. ಕುರ್ಚಿ ಬಿಸಿ ಮಾಡುವವರು ಬೇಡ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಸಾಧ್ಯವಾಗದಿದ್ದರೆ, ಬೇರೆ ಕಡೆಗೆ ವರ್ಗ ಮಾಡಿಸಿಕೊಂಡು ಹೋಗಬಹುದು’ ಎಂದು ಜಲಮಂಡಳಿಯ ಕಾರ್ಯಪಾಲಕ ಎಂಜಿನಿಯರ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಗೋಕುಲ್ ಅಪಾರ್ಟ್‌ಮೆಂಟ್‌ ಬಳಿಯ ಸೇತುವೆ ಪಕ್ಕ ಮೂಟೆಗಟ್ಟಲೆ ಕಸ ರಾಶಿ ಬಿದ್ದಿರುತ್ತದೆ. ಪೌರಕಾರ್ಮಿಕರು ಸಂಬಳ ಬಂದಿಲ್ಲ ಎಂದು ಗೋಳಾಡುತ್ತಿದ್ದಾರೆ. ಈ ಸಮಸ್ಯೆಯಿಂದ ಮುಕ್ತಿ ಕೊಡಿಸಿ’ ಎಂದು ಜೆ.ಪಿ.ಉದ್ಯಾನ ವಾರ್ಡ್‌ನ ಎಂ.ಎನ್‌.ಶೆಟ್ಟಿ ಅಹವಾಲು ತೋಡಿಕೊಂಡರು.

’ಈ ವಾರ್ಡ್‌ನಲ್ಲಿ ಕಸ ವಿಲೇವಾರಿಗೆ ಸಂಬಂಧಿಸಿ ಸಮಸ್ಯೆಗಳ ಸರಮಾಲೆಯೇ ಇದೆ. ಆದರೆ, ಅದನ್ನು ಬಹಿರಂಗಪಡಿಸಲು ಸಾಧ್ಯವಾಗುತ್ತಿಲ್ಲ’ ಎಂದು ಮುನಿರತ್ನ ಅಸಹಾಯಕತೆ ವ್ಯಕ್ತಪಡಿಸಿದರು.

‘ದಾಖಲೆಯ ಪ್ರಕಾರ ಈ ವಾರ್ಡ್‌ನ ಕಸ ಸಾಗಿಸಲು 21 ಆಟೊ ಟಿಪ್ಪರ್‌ಗಳು ಇರಬೇಕಿತ್ತು. ಆದರೆ, ಕೇವಲ ಎರಡು ಆಟೊ ಟಿಪ್ಪರ್‌ ಹಾಗೂ ಒಂಬತ್ತು ಗೂಡ್ಸ್‌ ರಿಕ್ಷಾಗಳನ್ನು ಬಳಸಲಾಗುತ್ತಿತ್ತು. ಇಲ್ಲಿ ಕಸ ಸಾಗಣೆಗೆ ಈ ಹಿಂದೆ ಕೇವಲ ₹ 16 ಲಕ್ಷ ವೆಚ್ಚವಾಗುತ್ತಿದ್ದುದು, ಏಕಾಏಕಿ ₹ 35 ಲಕ್ಷಕ್ಕೆ ಹೆಚ್ಚಳವಾಯಿತು. ದ್ವಿಚಕ್ರ ವಾಹನ ಹಾಗೂ ಅಂಬಾಸಿಡರ್‌ ಕಾರಿನ ನೋಂದಣಿ ಸಂಖ್ಯೆ ನೀಡಿ ಅವ್ಯವಹಾರ ನಡೆಸಲಾಗುತ್ತಿತ್ತು. ಪಾಲಿಕೆ ಸಭೆಯಲ್ಲಿ ಈ ವಿಚಾರವನ್ನು ನಾನೇ ಬಯಲಿಗೆಳೆದಿದ್ದೆ. ಪಾಲಿಕೆ ಆಯುಕ್ತರು ಈ ಪ್ರಕರಣದ ಬಗ್ಗೆ ಎಸಿಬಿಗೆ ದೂರು ನೀಡಿದ್ದು ತನಿಖೆ ನಡೆಯುತ್ತಿದೆ’ ಎಂದು ಶಾಸಕ ವಿವರಿಸಿದರು.

‘ಈಗ 21 ಆಟೊ ಟಿಪ್ಪರ್‌ಗಳೂ ಕಾರ್ಯನಿರ್ವಹಿಸುತ್ತಿವೆ. ಕಸ ವಿಲೇವಾರಿ ಸಮಸ್ಯೆಯನ್ನು ತಿಂಗಳ ಒಳಗೆ ಸರಿಪಡಿಸುತ್ತೇನೆ’ ಎಂದು ಭರವಸೆ ನೀಡಿದರು.

ದೂರುಗಳು ಅಪಾರ: ಸ್ಥಳದಲ್ಲೇ ಪರಿಹಾರ

ಜಾನ್ಸನ್‌ ಕಿಶೋರ್‌ (ಜೆ.ಪಿ.ಉದ್ಯಾನ ವಾರ್ಡ್‌ ನಿವಾಸಿ): ಮತ್ತಿಕೆರೆಯ ಮುಖ್ಯರಸ್ತೆ, ಗೋಕುಲ ಬಡಾವಣೆ ರಸ್ತೆಗಳ ಪಾದಚಾರಿ ಮಾರ್ಗಗಳನ್ನು ಹಳೇ ಕಬ್ಬಿಣ ಮಾರುವ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ. ನಡೆಯುವುದಕ್ಕೂ ಸ್ಥಳವಿಲ್ಲದಂತಾಗಿದೆ.

ಶಾಸಕ ಮುನಿರತ್ನ:ಪಾಲಿಕೆ ಅಧಿಕಾರಿಗಳು ಇಂದಿನಿಂದಲೇ ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸುತ್ತಾರೆ. ಅಕ್ಟೋಬರ್‌ 10ರೊಳಗೆ ಪ್ರದೇಶದ ಎಲ್ಲ ಫುಟ್‌ಪಾತ್‌ಗಳಲ್ಲಿ ಸರಾಗವಾಗಿ ಓಡಾಡಬಹುದು. ಒತ್ತುವರಿ ತೆರವುಗೊಳಿಸದಿದ್ದರೆ, ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುತ್ತೇನೆ.

ಗಂಗಯ್ಯ (ಕೊಟ್ಟಿಗೆಪಾಳ್ಯ ವಾರ್ಡ್‌): ನಮ್ಮ ವಾರ್ಡ್‌ನ ಶ್ರೀನಿವಾಸನಗರದವರೆಗೂ ಬಸ್‌ಗಳು ಬರುತ್ತಿದ್ದವು. ಈಗ ಬರುತ್ತಿಲ್ಲ.

ಬಿಎಂಟಿಸಿ ಅಧಿಕಾರಿ: ಇಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇದ್ದುದರಿಂದ ಸಾರಿಗೆ ಸೇವೆ ನಿಲ್ಲಿಸಲಾಗಿದೆ. ಹೆಚ್ಚು ಜನರಿಂದ ಬೇಡಿಕೆ ಬಂದರೆ, ಎಲ್ಲಿಯವರೆಗೂ ಬಸ್‌ಗಳು ಸರಾಗವಾಗಿ ಬಂದು–ಹೋಗಲು ಸ್ಥಳ ಅವಕಾಶ ಇದೆಯೊ, ಅಲ್ಲಿಯವರೆಗೂ ಸಂಪರ್ಕ ಸೇವೆ ಒದಗಿಸುತ್ತವೆ.

ಬಿ.ಆರ್‌.ಭಾಸ್ಕರ್‌ ( ಜೆ.ಪಿ.ಉದ್ಯಾನ ವಾರ್ಡ್‌): ನಮ್ಮ ವಾರ್ಡ್‌ನ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿನ ಕಸವನ್ನು ಪಾಲಿಕೆ ಸಿಬ್ಬಂದಿ ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ. 80 ಅಡಿ ರಸ್ತೆಯಿಂದ ಹತ್ತಿರದ ಮೆಟ್ರೊ ನಿಲ್ದಾಣಕ್ಕೆ ಹೋಗಲು ಸಂಪರ್ಕ ರಸ್ತೆ ಇಲ್ಲ. ರಸ್ತೆ ಡಾಂಬರೀಕರಣ ಮಾಡಿದ ಬಳಿಕ, ಮ್ಯಾನ್‌ಹೋಲ್‌ಗಳಿರುವ ಕಡೆ ರಸ್ತೆಯಲ್ಲಿ ಮೂರು–ನಾಲ್ಕು ಇಂಚು ಗುಂಡಿ ಇದೆ. ಇನ್ನು ಕೆಲವಡೆ ಮ್ಯಾನ್‌ಹೋಲ್‌ ರಸ್ತೆಯಿಂದ ಮೂರ್ನಾಲ್ಕು ಇಂಚು ಎತ್ತರದಲ್ಲಿದೆ.

ಶಾಸಕ: ಮೆಟ್ರೊ ನಿಲ್ದಾಣಕ್ಕೆ ಸಂಪರ್ಕ ರಸ್ತೆ ನಿರ್ಮಿಸಲು ಯೋಜನೆ ಸಿದ್ಧವಾಗಿದೆ. ಅದಕ್ಕಾಗಿ ಪ್ರದೇಶದಲ್ಲಿನ ರೈಲ್ವೆ ಹಳಿಯ ಬಳಿ ಕೆಳಸೇತುವೆ ನಿರ್ಮಿಸಬೇಕಿದೆ. ಈ ಕಾಮಗಾರಿ ಪೂರ್ಣಗೊಳಿಸಲು ಒಂದೂವರೆ ವರ್ಷವಾದರೂ ಬೇಕು. ಈ ರಸ್ತೆಯಲ್ಲಿ ಎಷ್ಟು ಮ್ಯಾನ್‌ಹೋಲ್‌ಗಳಿವೆ. ಅವುಗಳಲ್ಲಿ ಎಷ್ಟು ಉಬ್ಬು–ತಗ್ಗುಗಳನ್ನು ಸೃಷ್ಟಿಸಿವೆ ಎಂಬ ವಿವರವಾದ ಪಟ್ಟಿಯನ್ನು ಅಧಿಕಾರಿಗಳು ವಾರದೊಳಗೆ ನನಗೆ ನೀಡಬೇಕು. ಅವುಗಳನ್ನು ಆದಷ್ಟು ಬೇಗ ಸರಿಪಡಿಸಬೇಕು.

ಎಂ.ಎನ್‌.ಶೆಟ್ಟಿ: ಶ್ಯಾಮ್‌ ಪ್ರಸಾದ್‌ ಮುಖರ್ಜಿ ಮೇಲ್ಸೇತುವೆಯ ಕೆಳಗಿನ ಜಾಗ ಮಾದಕ ವ್ಯಸನಿಗಳ ಅಡ್ಡೆಯಾಗಿದೆ. ಇದಕ್ಕೆ ಹೊಂದಿಕೊಂಡಿರುವ ರಸ್ತೆಗಳಲ್ಲಿ ಬೀದಿದೀಪಗಳೂ ಉರಿಯುತ್ತಿಲ್ಲ.

ಶಾಸಕ: ಪೊಲೀಸರು ಮೇಲ್ಸೇತುವೆ ಪ್ರದೇಶದಲ್ಲಿ ಇನ್ನುಮುಂದೆ ಹೆಚ್ಚು ನಿಗಾ ಇಡಲಿದ್ದಾರೆ. ಬೀದಿ ದೀಪಗಳನ್ನು ಅಧಿಕಾರಿಗಳು ವಾರದೊಳಗೆ ಸರಿಪಡಿಸಬೇಕು.

ಎಸ್‌.ಎನ್‌.ಭಟ್‌: ಜಾಲಹಳ್ಳಿ ವಾರ್ಡ್‌ನ ಮುತ್ಯಾಲನಗರದಿಂದ ಕೆ.ಆರ್‌.ಮಾರುಕಟ್ಟೆ, ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಬಸ್‌ ಸೌಲಭ್ಯ ಹೆಚ್ಚಿಸಬೇಕು. ಇತ್ತೀಚೆಗೆ ಕಾವೇರಿ ನೀರಿನ ಬಿಲ್‌ ಸರಾಸರಿಗಿಂತ ದುಪ್ಪಟ್ಟು ಬರುತ್ತಿದೆ. ಬೆಸ್ಕಾಂ ಉಪವಲಯಕಚೇರಿಗಳಲ್ಲಿ ಮತ್ತು ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಎಲ್‌ಇಡಿ ಟ್ಯೂಬ್‌ಗಳು ಸಿಗುತ್ತಿಲ್ಲ.

ಶಾಸಕ: ಮುತ್ಯಾಲನಗರದಲ್ಲಿನ ಪಾಯಿಂಟ್‌ನಲ್ಲಿನ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೆ, ಬಸ್‌ ಸೌಲಭ್ಯ ಪುನರಾರಂಭ ಮಾಡಿಸುತ್ತೇನೆ. ಜಲಮಂಡಳಿಯ ಅಧಿಕಾರಿಗಳು ನೀರಿನ ಬಿಲ್‌ ಮೊತ್ತ ದುಪ್ಪಟ್ಟಾಗಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಅಕ್ಟೋಬರ್‌ 10ರಿಂದ ಎಲ್‌ಇಡಿ ಟ್ಯೂಬ್‌ಲೈಟ್‌ಗಳು ಲಭ್ಯ ಆಗುವಂತೆ ಮಾಡುತ್ತೇನೆ.

ನಂಜುಂಡಯ್ಯ (ಲಕ್ಷ್ಮೀದೇವಿನಗರ ವಾರ್ಡ್‌) : ನಮ್ಮ ವಾರ್ಡ್‌ನ ವಿಧಾನಸೌಧ ಬಡಾವಣೆಯ ಉದ್ಯಾನಗಳಿಗೆ ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಅವುಗಳನ್ನು ತಡೆಯಲು ಸಿ.ಸಿ ಟಿ.ವಿ.ಕ್ಯಾಮೆರಾಗಳನ್ನು ಅಳವಡಿಸಿ. ಇಲ್ಲಿನ ರಸ್ತೆಗಳೂ ಹದಗೆಟ್ಟಿವೆ.

ಶಾಸಕ: ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವೇ ಉದ್ಯಾನಗಳನ್ನು ನಿರ್ವಹಿಸುವುದಾದರೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳಡಿಸುತ್ತೇವೆ. ಮಳೆಗಾಲ ಮುಗಿದ ಬಳಿಕ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತೇವೆ.

ಸಂತೋಷ್‌: ಜಾಲಹಳ್ಳಿ ವಾರ್ಡ್‌ನ ಬಿಇಎಲ್‌ನಿಂದ ಗಂಗಮ್ಮ ಸರ್ಕಲ್‌ ವರೆಗಿನ ಕಂಬಗಳಲ್ಲಿ ಬೀದಿ ದೀಪಗಳೇ ಇಲ್ಲ.

ಜೆ.ಎನ್.ಶ್ರೀನಿವಾಸ ಮೂರ್ತಿ, ಪಾಲಿಕೆ ಸದಸ್ಯ: ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಕಂಬಗಳನ್ನು ಸ್ಥಳಾಂತರ ಮಾಡುತ್ತಿರಬಹುದು. ಪರಿಶೀಲಿಸಿ, ದೀಪಗಳನ್ನು ಜೋಡಿಸಲು ಕ್ರಮ ವಹಿಸುತ್ತೇನೆ

ರಫಿಕ್‌: ಮುತ್ಯಾಲನಗರದ ಎಂಇಎಸ್‌ ವರ್ತುಲ ರಸ್ತೆಯಲ್ಲಿ ವಾಹನಗಳು ವೇಗವಾಗಿ ಬರುತ್ತವೆ. ಶಾಲಾ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರಿಗೆರಸ್ತೆ ದಾಟಲು ಆಗುತ್ತಿಲ್ಲ. ಇಲ್ಲೊಂದು ಅಂಡರ್‌ಪಾಸ್‌ ನಿರ್ಮಿಸಿಕೊಡಿ

ಶಾಸಕ: ಈ ಸಮಸ್ಯೆ ನಮ್ಮ ಗಮನದಲ್ಲಿ ಇದೆ. ಅಂಡರ್‌ಪಾಸ್‌ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದೆ. ಸ್ಥಳದಲ್ಲಿ ಹಾದುಹೋಗಿರುವ ಕೊಳವೆ ಮಾರ್ಗಗಳು, ಕೇಬಲ್‌ಗಳನ್ನು ಸ್ಥಳಾಂತರಿಸಲು ತಯಾರಿ ನಡೆದಿದೆ. ಸ್ಲ್ಯಾಬ್‌ಗಳನ್ನು ಜೋಡಿಸುವ ಮೂಲಕ ನಾಲ್ಕೈದು ತಿಂಗಳಿನಲ್ಲಿ ಅಂಡರ್‌ಪಾಸ್‌ ನಿರ್ಮಿಸುತ್ತೇವೆ.

ಪ್ರಕಾಶ್‌ (ಜೆ.ಪಿ.ಉದ್ಯಾನ ವಾರ್ಡ್‌): ಎಲ್‌ಸಿಆರ್‌ ಶಾಲೆಯ ಬಳಿ ಒಳಚರಂಡಿ ನೀರು ಹಾಗೂ ಕುಡಿಯುವ ನೀರು ಮಿಶ್ರವಾಗುತ್ತಿದೆ. ಇದನ್ನು ತಡೆಗಟ್ಟಿ

ಶಾಸಕ: ಜಲಮಂಡಳಿ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ತಕ್ಷಣವೇ ಸರಿಪಡಿಸಿ

ದೇವರಾಜ, ಮಾಲಗಾಳ: ನಮ್ಮ ಮನೆ ಪಕ್ಕದಲ್ಲಿ ಕಾಂಕ್ರೀಟ್‌ ರಸ್ತೆಯನ್ನು ಅರ್ಧಂಬರ್ಧ ನಿರ್ಮಿಸಿದ್ದಾರೆ. ಮೊನ್ನೆ ಸುರಿದ ಮಳೆಗೆ ಇಲ್ಲಿ ನೀರು ಬಸಿದು ರಸ್ತೆ ಪಕ್ಕದ ಕಾಂಕ್ರೀಟ್‌ ಒಳಚರಂಡಿ ಕುಸಿದಿದೆ. ಇದನ್ನು ಇನ್ನೂ ಸರಿಪಡಿಸಿಲ್ಲ.

ಜಂಟಿ ಆಯುಕ್ತ: ಸ್ಥಳ ಪರಿಶೀಲನೆ ನಡೆಸಿ, ಆದಷ್ಟು ಬೇಗ ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತೇನೆ

ಅಭಿಷೇಕ್‌, ಮತ್ತಿಕೆರೆ: ಎಚ್‌.ಎಂ.ಟಿ ಬಡಾವಣೆ ಬಳಿ ಹಳೆ ಬೋರ್‌ವೆಲ್‌ ಇದೆ. ಇಲ್ಲಿ ಶಾಲಾ ಮಕ್ಕಳು ಆಟವಾಡುತ್ತಿದ್ದಾರೆ. ಕೆಟ್ಟುಹೋಗಿರುವ ಈ ಬೋರ್‌ವೆಲ್‌ ತೆರವುಗೊಳಿಸಿ

ಶಾಸಕ: ಈ ಬೋರ್‌ವೆಲ್‌ ನಿರುಪಯುಕ್ತವಾಗಿದ್ದರೆ ಅದನ್ನು ತೆಗೆಸಲು ಇಂದೇ ಕ್ರಮಕೈಗೊಳ್ಳುತ್ತೇನೆ.
**

‘ಸಾಮಾನ್ಯ ಜನರಿಗೆ ಮಹತ್ವವೇ ಇಲ್ಲವೇ’

‘ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸುವುದಿಲ್ಲ. ಯಾವಾಗಲೂ ಮೊಬೈಲ್‌ಗಳಲ್ಲಿ ತಲ್ಲೀನರಾಗಿರುತ್ತಾರೆ. ಅವರಿಗೆ ಹಿರಿಯ ಅಧಿಕಾರಿಗಳ ಫೋನ್‌ ಕರೆಗಳು ಮಾತ್ರ ಮುಖ್ಯವೇ? ಜನರಿಗೆ ಈ ವ್ಯವಸ್ಥೆಯಲ್ಲಿ ಮಹತ್ವವೇ ಇಲ್ಲವೇ’

ಜ್ಞಾನಭಾರತಿ ವಾರ್ಡ್‌ನ ವೈದ್ಯೆ ಬಿಂದು ಶ್ರೀನಿವಾಸ್‌ ಅವರು ವ್ಯವಸ್ಥೆ ಮೇಲಿರುವ ತಮ್ಮ ಸಿಟ್ಟನ್ನು ತೋಡಿಕೊಂಡಿದ್ದು ಹೀಗೆ.

‘ನಮ್ಮ ಮನೆಯ ದಾಖಲೆ ಪತ್ರ ಸಿದ್ಧಪಡಿಸಲು ಹಾಗೂ ತೆರಿಗೆ ಕಟ್ಟಲು ಕಚೇರಿಗಳಿಗೆ ಎರಡು ವರ್ಷ ಅಲೆದಾಡಿದ್ದೇನೆ. ಆದರೂ ಕೆಲಸ ಆಗಲಿಲ್ಲ. ನಾಲ್ಕು ದಿನ ಕೆಲಸಕ್ಕೆ ರಜೆ ಹಾಕಿ ಕಚೇರಿಗಳಿಗೆ ಓಡಾಡಿದೆ. ರಾತ್ರಿ 10 ಗಂಟೆಯಾದರೂ ಸರಿಯೇ, ಕೆಲಸ ಮಾಡಿಕೊಡದಿದ್ದರೆ ಇಲ್ಲಿಂದ ತೆರಳುವುದಿಲ್ಲ ಎಂದು ಕಚೇರಿಯಲ್ಲಿ ಪ್ರತಿಭಟನೆಯನ್ನೂ ಮಾಡಿದೆ. ಆದರೂ ಕೆಲಸ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯೆ ಡಿ.ಜಿ.ತೇಜಸ್ವಿನಿ ಸೀತಾರಾಮಯ್ಯ,‘ಕಚೇರಿಗೆ ಬಂದು ಭೇಟಿಯಾಗಿ, ನಿಮಗೆ ನ್ಯಾಯಯುತವಾಗಿ ಆಗಬೇಕಾದ ಕೆಲಸ ಮಾಡಿಸುವೆ’ ಎಂದು ಭರವಸೆ ನೀಡಿದರು.
**

ಕ್ಷೇತ್ರದ ಅಭಿವೃದ್ಧಿಗೆ ಜನರ ಸಲಹೆಗಳು

ಕ್ಷೇತ್ರದಲ್ಲಿ ನಿರುದ್ಯೋಗಿ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಉದ್ಯೋಗ ಮೇಳ ಏರ್ಪಡಿಸಿ– ಗಿರೀಶ್‌

ರಸ್ತೆ ಬದಿಯ ಮರಗಳ ಕೊಂಬೆ ಕಡಿದರೆ, ಕಸವನ್ನು ವಾರಗಟ್ಟಲೆ ಅಲ್ಲೇ ಬಿಟ್ಟಿರುತ್ತಾರೆ. ಈ ಕಸವನ್ನು ಪುಡಿ ಮಾಡುವ ತಂತ್ರಜ್ಞಾನ ಲಭ್ಯ. ಅದನ್ನು ಆ ಮರದ ಬುಡಕ್ಕೆ ಹಾಕಿದರೆ ಒಳ್ಳೆಯ ಗೊಬ್ಬರವಾಗುತ್ತದೆ. –ರಮೇಶ್‌, ಸಿಟಿಜನ್ಸ್‌ ಆ್ಯಕ್ಷನ್‌ ಫೋರಂ ಸದಸ್ಯ

ಎಲ್ಲ ಮನೆಗಳಲ್ಲೂ ಮಳೆ ನೀರು ಸಂಗ್ರಹ ಮಾಡುವುದನ್ನು ಕಡ್ಡಾಯ ಮಾಡಿ, ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ. ಮೊದಲು ಸರ್ಕಾರಿ ಕಚೇರಿಗಳಲ್ಲಿ ಈ ಕೆಲಸ ಆಗಲಿ. ವಿಧಾನಸಭಾ ಕ್ಷೇತ್ರದಲ್ಲಿ 10 ಲಕ್ಷ ಸಸಿಗಳನ್ನು ಬೆಳೆಸಿ– ಶಶಿಕುಮಾರ್‌, ಯಶವಂತಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT