ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC: ಟಿ20 ವಿಶ್ವಕಪ್‌ನ ಪ್ರಮುಖ 10 ಅಂಶಗಳು

Last Updated 15 ನವೆಂಬರ್ 2021, 13:29 IST
ಅಕ್ಷರ ಗಾತ್ರ

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪ್ರಸ್ತುತ ವಿಶ್ವಕಪ್‌ನ ಪ್ರಮುಖ 10 ಅಂಶಗಳನ್ನು ಇಲ್ಲಿ ಕೊಡಲಾಗಿದೆ.

1. ಸತತ 4 ಎಸೆತಗಳಲ್ಲಿ ನಾಲ್ಕು ವಿಕೆಟ್
ಐರ್ಲೆಂಡ್‌ನ ಕರ್ಟಿಸ್ ಕ್ಯಾಂಫರ್ ಅವರು ನೆದರ್ಲೆಂಡ್ಸ್ ಎದುರಿನ ಪಂದ್ಯದಲ್ಲಿ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಉರುಳಿಸಿ ತಂಡಕ್ಕೆ ಏಳು ವಿಕೆಟ್‌ಗಳ ಜಯ ತಂದುಕೊಟ್ಟಿದ್ದರು.

2. ವಿಶ್ವಕಪ್‌ನಲ್ಲಿ ಭಾರತವನ್ನು ಮಣಿಸಿದ ಪಾಕಿಸ್ತಾನ
ಆರಂಭಿಕ ಜೋಡಿ ಮೊಹಮ್ಮದ್ ರಿಜ್ವಾನ್‌ ಮತ್ತು ಬಾಬರ್ ಆಜಂ ಅವರ ಅಮೋಘ ಅರ್ಧಶತಕಗಳ ಬಲದಿಂದ ಭಾರತದ ವಿರುದ್ಧ ಪಾಕಿಸ್ತಾನ 10 ವಿಕೆಟ್‌ಗಳ ಜಯ ಸಾಧಿಸಿತ್ತು. ಇದು, ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಮೊದಲ ಜಯವಾಗಿತ್ತು.

3. ವರ್ಣಭೇದ ನೀತಿಗೆ ಪ್ರತಿಭಟಿಸಲು ಡಿ ಕಾಕ್ ನಿರಾಕರಣೆ
ವೆಸ್ಟ್ ಇಂಡೀಸ್ ಎದುರಿನ ಪಂದ್ಯದ ಆರಂಭದಲ್ಲಿ ವರ್ಣಭೇದ ನೀತಿಗೆ ಪ್ರತಿಭಟನೆ ವ್ಯಕ್ತಪಡಿಸಲು ನಿರಾಕರಿಸಿದ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟ್ ಡಿ ಕಾಕ್ ಎರಡು ದಿನಗಳ ನಂತರ ಕ್ಷಮೆ ಕೋರಿದ್ದರು.

4. ಮೊಹಮ್ಮದ್ ಶಮಿ ವಿರುದ್ಧ ನಿಂದನೆ
ಪಾಕಿಸ್ತಾನ ಎದುರಿನ ಭಾರತದ ಸೋಲಿಗೆ ಮೊಹಮ್ಮದ್ ಶಮಿ ಕಾರಣ ಎಂದು ದೂರಿದ ನೆಟ್ಟಿಗರ ಮೇಲೆ ನಾಯಕ ವಿರಾಟ್ ಕೊಹ್ಲಿ ಸಿಟ್ಟಿಗೆದ್ದು ಧರ್ಮದ ಆಧಾರದಲ್ಲಿ ವ್ಯಕ್ತಿಯನ್ನು ನಿಂದಿಸುವುದು ಮನುಷ್ಯನ ಅತ್ಯಂತ ಕೆಟ್ಟ ವರ್ತನೆ ಎಂದು ಹೇಳಿದ್ದರು.

5. ಜೋಸ್ ಬಟ್ಲರ್ ಶತಕ
ಸೂಪರ್ 12ರ ಮೊದಲ ನಾಲ್ಕು ಪಂದ್ಯಗಳಲ್ಲಿ ಇಂಗ್ಲೆಂಡ್‌ ಸತತ ಜಯ ಸಾಧಿಸಿತ್ತು. ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಜೋಸ್ ಬಟ್ಲರ್ ಶತಕ ಸಿಡಿಸಿ ಮಿಂಚಿದ್ದರು.

6. ಹಸರಂಗ 16 ವಿಕೆಟ್
ಒಟ್ಟಾರೆ ಕಳಪೆ ಆಟವಾಡಿದ್ದರೂ ಶ್ರಿಲಂಕಾ ತಂಡದ ಯುವ ಆಟಗಾರರು ಟೂರ್ನಿಯಲ್ಲಿ ಮಿಂಚಿದ್ದರು. ವಾಣಿಂದು ಹಸರಂಗ 16 ವಿಕೆಟ್‌ಗಳನ್ನು ಉರುಳಿಸಿ ಗಮನ ಸೆಳೆದಿದ್ದಾರೆ.

7. ಡ್ವೇನ್ ಬ್ರಾವೊ ವಿದಾಯ
ವೆಸ್ಟ್ ಇಂಡೀಸ್‌ನ ಡ್ವೇನ್ ಬ್ರಾವೊ ಅವರಿಗೆ ಇದು ವೃತ್ತಿಜೀವನದ ಕೊನೆಯ ಟೂರ್ನಿಯಾಗಿತ್ತು. ಕ್ರಿಸ್ ಗೇಲ್‌ ಕೂಡ ಇನ್ನು ಮುಂದೆ ವಿಶ್ವಕಪ್‌ ಟೂರ್ನಿಯಲ್ಲಿ ಆಡುವುದು ಸಂದೇಹ.

8. ಸೆಮಿಫೈನಲ್‌ಗೂ ಮುನ್ನ ಐಸಿಯುಗೆ ದಾಖಲಾಗಿದ್ದ ರಿಜ್ವಾನ್
ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡು ಎರಡು ದಿನ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದರೂ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಸೆಮಿಫೈನಲ್‌ ಪಂದ್ಯದಲ್ಲಿ 67 ರನ್ ಗಳಿಸಿ ಕ್ರಿಕೆಟ್ ಜಗತ್ತಿನ ಮೆಚ್ಚುಗೆಗೆ ಪಾತ್ರರಾಗಿದ್ದರು.

9. ಬ್ಯಾಟಿಗೆ ಗುದ್ದಿ ಗಾಯ ಮಾಡಿಕೊಂಡಿದ್ದ ಕಾನ್ವೆ
ಇಂಗ್ಲೆಂಡ್ ಎದುರಿನ ಫೈನಲ್‌ನಲ್ಲಿ ಔಟಾದ ನಂತರ ಬ್ಯಾಟಿಗೆ ಕೈ ಗುದ್ದಿ ಗಾಯ ಮಾಡಿಕೊಂಡಿದ್ದ ನ್ಯೂಜಿಲೆಂಡ್‌ನ ಡೇವಾನ್ ಕಾನ್ವೆ ಫೈನಲ್ ಪಂದ್ಯದಲ್ಲಿ ತಂಡಕ್ಕೆ ಆಯ್ಕೆಯಾಗಿರಲಿಲ್ಲ.

10. ಮಿಚೆಲ್ ಮಾರ್ಷ್ ಆಸೀಸ್ ಗೆಲುವಿನ ರೂವಾರಿ
ಫೈನಲ್ ಪಂದ್ಯದಲ್ಲಿ ಅಜೇಯ 77 ರನ್ ಗಳಿಸಿದ ಮಿಚೆಲ್ ಮಾರ್ಷ್ ’ಇದು ದೊಡ್ಡ ಸಾಧನೆ‘ ಎಂದು ಹೇಳಿಕೊಂಡಿದ್ದಾರೆ.

ಟೂರ್ನಿಯಲ್ಲಿ ಗರಿಷ್ಠ ಮೊತ್ತ (ತಂಡ; ರನ್‌; ಎದುರಾಳಿ)
*ಭಾರತ; 2ಕ್ಕೆ210; ಅಫ್ಗಾನಿಸ್ತಾನ
*ಅಫ್ಗಾನಿಸ್ತಾನ; 4ಕ್ಕೆ190; ಸ್ಕಾಟ್ಲೆಂಡ್
*ಪಾಕಿಸ್ತಾನ; 2ಕ್ಕೆ189; ನಮೀಬಿಯಾ

ವೈಯಕ್ತಿಕ ಗರಿಷ್ಠ ಮೊತ್ತ: ಬಾಬರ್ ಆಜಂ (ಪಾಕಿಸ್ತಾನ) 303
ಪಂದ್ಯದಲ್ಲಿ ಹೆಚ್ಚು ರನ್‌: ಜೋಸ್ ಬಟ್ಲರ್ (ಇಂಗ್ಲೆಂಡ್‌) 101*
ಗರಿಷ್ಠ ವಿಕೆಟ್: ವಾಣಿಂದು ಹಸರಂಗ (ಶ್ರೀಲಂಕಾ) 16
ಶ್ರೇಷ್ಠ ಬೌಲಿಂಗ್: ಆ್ಯಡಂ ಜಂಪಾ (ಆಸ್ಟ್ರೇಲಿಯಾ) 19ಕ್ಕೆ5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT