ಶನಿವಾರ, ಜುಲೈ 24, 2021
26 °C

ಆಕಾಶ್ ಚೋಪ್ರಾಗೆ ಇಂಗ್ಲೆಂಡ್‌ನಲ್ಲಿ ಜನಾಂಗೀಯ ನಿಂದನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರಾ ಅವರು ಕೂಡ ಜನಾಂಗೀಯ ನಿಂದನೆಗೊಳಗಾಗಿದ್ದರಂತೆ.

ಹೌದು; ಈ ವಿಷಯವನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ. 2007ರಲ್ಲಿ ಇಂಗ್ಲೆಂಡ್‌ನಲ್ಲಿ ಮೆರಿಲ್‌ಬೋನ್ ಕ್ರಿಕೆಟ್‌ ಕ್ಲಬ್‌ ಆಯೋಜಿಸಿದ್ದ ಟೂರ್ನಿಯಲ್ಲಿ ಆಡಲು ಹೋಗಿದ್ದ ಚೋಪ್ರಾ ಅವರನ್ನು ‘ಪಾಕಿ’ ಎಂದು ಕೆಲವರು ಕರೆದಿದ್ದರಂತೆ. ಇಂಗ್ಲಿಷ್‌ ಭಾಷೆ ಮಾತನಾಡುವ ದೇಶಗಳಲ್ಲಿ ದಕ್ಷಿಣ ಏಷ್ಯಾದ ಜನರನ್ನು ಕರೆಯುವ ಅಡ್ಡನಾಮ ಇದಾಗಿದೆ.

‘ನಾವು ಕ್ರಿಕೆಟಿಗರು ವೃತ್ತಿ ಜೀವನದ ಒಂದಿಲ್ಲೊಂದು ಹಂತದಲ್ಲಿ ಜನಾಂಗೀಯ ದ್ವೇಷಕ್ಕೆ ಗುರಿಯಾಗಿದ್ದೇವೆ. ಇಂಗ್ಲೆಂಡ್‌ನಲ್ಲಿ ನಾನು ಆಡಲು ಹೋದಾಗಲೂ ಇಂತಹ ಅನುಭವ ಆಗಿದೆ. ನಮ್ಮ ಎದುರಾಳಿ ತಂಡದಲ್ಲಿ ಇಬ್ಬರು ದಕ್ಷಿಣ ಆಫ್ರಿಕಾದ ಆಟಗಾರರು ಇದ್ದರು. ಅವರು ನನ್ನ ಬಗ್ಗೆ ವಾಚಾಮಗೋಚರವಾಗಿ ಬೈಗುಳಗಳನ್ನು ಸುರಿಸಿದ್ದರು’ ಎಂದು ತಮ್ಮ ಯೂಟ್ಯೂಬ್‌ ವಾಹಿನಿಯಲ್ಲಿ ನೆನಪಿಸಿಕೊಂಡಿದ್ದಾರೆ.

‘ಬ್ಯಾಟಿಂಗ್ ಮಾಡುವಾಗಲಷ್ಟೇ ಅಲ್ಲ. ನಾನ್‌ ಸ್ಟ್ರೈಕರ್‌ ಭಾಗದಲ್ಲಿದ್ದಾಗಲೂ ಅವರು ನಿರಂತರವಾಗಿ ಪಾಕಿ ಎಂದು ಕರೆಯುತ್ತಿದ್ದರು. ಈಗ ಪಾಕಿ ಎಂದರೆ ಪಾಕಿಸ್ತಾನದವರು ಎಂದು ಈಗ ಅವರಿಗೆ ಅರಿವಾಗಿದೆ. ಆದರೆ ಆ ಸಂದರ್ಭದಲ್ಲಿ ಕಂದು ಬಣ್ಣದ ತ್ವಚೆ ಇರುವವರಿಗೆ ಮತ್ತು ಏಷ್ಯಾ ಉಪಖಂಡದಿಂದ ಹೋದವರಿಗೆಇದೇ ರೀತಿ ಹಂಗಿಸುತ್ತಿದ್ದರು. ಅದೊಂದು ಜನಾಂಗೀಯ ನಿಂದನೆಯಾಗಿತ್ತು’ ಎಂದು ಆಕಾಶ್ ಹೇಳಿದ್ದಾರೆ.

‘ತಂಡವು ನನ್ನ ಬೆಂಬಲಕ್ಕೆ ನಿಂತಿತು. ಆದರೂ ಎದುರಿಗೆ ಇದ್ದವರು ಪಾಕಿ ಎಂದು ಕರೆಯುತ್ತಿದ್ದದ್ದು ಪರಿಣಾಮ ಬೀರುತ್ತಿತ್ತು. ಅವರ ಉದ್ದೇಶವೂ ಅದಕಾಗಿತ್ತು’ ಎಂದು 42 ವರ್ಷದ ಆಕಾಶ್ ಹೇಳಿದ್ದಾರೆ. ಅವರು ಭಾರತ ತಂಡದಲ್ಲಿ 10 ಟೆಸ್ಟ್‌ಗಳನ್ನು ಆಡಿದ್ದರು.

‘ಶ್ವೇತವರ್ಣಿಯರು ಈ ಭಾಗಕ್ಕೆ ಬಂದಾಗ ಅವರಿಗೂ ಇಂತಹ ನಿಂದನೆಯ ಬಿಸಿ ತಟ್ಟುವುದು ಸಾಮಾನ್ಯ. ಈ ಹಿಂದೆ ಆ್ಯಂಡ್ರ್ಯೂ ಸೈಮಂಡ್ಸ್‌ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಿದ್ದಾಗ ಮಂಕಿ ಎಂದು ಜನರು ಕೂಗಿದ್ದರು. ಈ ರೀತಿ ಮಾಡಿದರೆ ಪ್ರವೇಶವನ್ನು ನಿಷೇಧಿಸಲಾಗುವುದೆಂದು ಜನರಿಗೆ ಎಚ್ಚರಿಕೆ ಕೊಡಲಾಗಿತ್ತು’  ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು