ಮಂಗಳವಾರ, ಜೂನ್ 15, 2021
27 °C

ಎರಡನೇ ಟೆಸ್ಟ್: ಇಂಗ್ಲೆಂಡ್‌ಗೆ ಆರಂಭಿಕ ಆಘಾತ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಸೌತಾಂಪ್ಟನ್: ಆತಿಥೇಯ ಇಂಗ್ಲೆಂಡ್ ತಂಡ ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆರಂಭಿಕ ಆಘಾತ ಅನುಭಿಸಿತು. ಪಾಕಿಸ್ತಾನವನ್ನು 236 ರನ್‌ಗಳಿಗೆ ಆಲೌಟ್ ಮಾಡಿದ ತಂಡ ಖಾತೆ ತೆರೆಯುವ ಮೊದಲೇ ವಿಕೆಟ್ ಕಳೆದುಕೊಂಡಿತು. ರೋರಿ ಬರ್ನ್ಸ್ ಅವರ ವಿಕೆಟ್‌ ಶಾಹೀನ್ ಶಾ ಅಫ್ರಿದಿ ಕಬಳಿಸಿದರು. ಡಾಮ್ ಸಿಬ್ಲಿ ಮತ್ತು ಜಾಕ್ ಕ್ರೌಲಿ ಏಳು ರನ್ ಸೇರಿಸುವಷ್ಟರಲ್ಲಿ ಮಳೆ ಸುರಿದ ಕಾರಣ ದಿನದಾಟವನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಯಿತು.

ಏಜೀಸ್ ಬೌಲ್‌ನಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಮೊದಲ ದಿನದಿಂದಲೇ ಮಳೆ ಮತ್ತು ಮಂದಬೆಳಕು ಕಾಡುತ್ತಿದೆ. ಮೂರನೇ ದಿನವಾದ ಶನಿವಾರ ಒಂಬತ್ತು ವಿಕೆಟ್ ಕಳೆದುಕೊಂಡು 223 ರನ್ ಗಳಿಸಿದ್ದ ಪಾಕಿಸ್ತಾನ ಆ ಮೊತ್ತಕ್ಕೆ 13 ರನ್ ಸೇರಿಸಿ ಇನಿಂಗ್ಸ್ ಮುಗಿಸಿತು. ಅಮೋಘ ಅರ್ಧಶತಕ ಗಳಿಸಿದ್ದ ಮೊಹಮ್ಮದ್ ರಿಜ್ವಾನ್ ಅವರನ್ನು ವೇಗಿ ಸ್ಟುವರ್ಟ್ ಬ್ರಾಡ್ ವಾಪಸ್ ಕಳುಹಿಸಿದರು.

ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್‌ಗೆ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಶಹೀನ್ ಶಾ ಅಫ್ರಿದಿ ಪೆಟ್ಟು ನೀಡಿದರು. ಐದನೇ ಓವರ್‌ನ ಮುಕ್ತಾಯದ ವೇಳೆ ಮಳೆ ಸುರಿದ ಕಾರಣ ಸ್ಥಳೀಯ ಸಮಯ ಮಧ್ಯಾಹ್ನ 12 ಗಂಟೆಗೆ ಆಟ ಸ್ಥಗಿತಗೊಳಿಸಲಾಯಿತು. ಮಧ್ಯಾಹ್ನ 3.51ಕ್ಕೆ ದಿನದಾಟವನ್ನು ಮುಕ್ತಾಯಗೊಳಿಸಿರುವುದಾಗಿ ಘೋಷಿಸಲಾಯಿತು. ಹೀಗಾಗಿ ದಿನದಲ್ಲಿ ಕೇವಲ 10.2 ಓವರ್‌ಗಳ ಆಟವಷ್ಟೇ ನಡೆಯಿತು. 

ಮೊದಲ ಎರಡು ದಿನ ಮಂದಬೆಳಕು ಮತ್ತು ಮಳೆ ಆಗಾಗ ಪಂದ್ಯಕ್ಕೆ ಅಡ್ಡಿಪಡಿಸಿತ್ತು. ಮೂರನೇ ದಿನ ಒಂದು ಎಸೆತವನ್ನೂ ಹಾಕಲು ಆಗಲಿಲ್ಲ. ಎರಡನೇ ದಿನ ಪಾಕಿಸ್ತಾವನ್ನು ಕುಸಿತದಿಂದ ಪಾರು ಮಾಡಿ 60 ರನ್‌ಗಳೊಂದಿಗೆ ಔಟಾಗದೇ ಉಳಿದಿದ್ದ ರಿಜ್ವಾನ್ ಭಾನುವಾರ ಆ ಮೊತ್ತಕ್ಕೆ 12 ಸೇರಿಸಿದರು. ಇದು ಅವರ ಎಂಟನೇ ಟೆಸ್ಟ್ ಆಗಿದ್ದು ಎರಡನೇ ಅರ್ಧಶತಕ. ನವೆಂಬರ್‌ನಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 95 ರನ್ ಗಳಿಸಿದ್ದರು.

ಭಾನುವಾರ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ವಿಕೆಟ್ ಕೀಪರ್ ರಿಜ್ವಾನ್ ವೇಗಿಗಳಾದ ಜೇಮ್ಸ್ ಆ್ಯಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಅವರನ್ನು ದಂಡಿಸಿದರು. ಆದರೆ ಕೊನೆಗೆ ಬ್ರಾಡ್ ಎಸೆತದಲ್ಲಿ ಜಾಕ್ ಕ್ರಾಲಿಗೆ ಕ್ಯಾಚ್ ನೀಡಿ ಮರಳಿದರು. ಸತತ ಏಳು ಟೆ‌ಸ್ಟ್ ಪಂದ್ಯಗಳಲ್ಲಿ ಮೂರು ವಿಕೆಟ್‌ಗಳನ್ನು ಗಳಿಸಿದ ಇಂಗ್ಲೆಂಡ್‌ನ ಎರಡನೇ ಬೌಲರ್ ಎಂಬ ಖ್ಯಾತಿ ಬ್ರಾಡ್ ಅವರದಾಯಿತು. 11 ವರ್ಷಗಳ ಹಿಂದೆ ಆಫ್‌ ಸ್ಪಿನ್ನರ್ ಗ್ರೇಮ್ ಸ್ವಾನ್‌ ಈ ಸಾಧನೆ ಮಾಡಿದ್ದರು. ಇಲ್ಲಿ ಗಳಿಸಿದ ನಾಲ್ಕು ವಿಕೆಟ್‌ಗಳೊಂದಿಗೆ ಬ್ರಾಡ್ ಈ ವರ್ಷ ನಾಲ್ಕು ಟೆಸ್ಟ್‌ಗಳಲ್ಲಿ ಒಟ್ಟು 26 ವಿಕೆಟ್‌ಗಳನ್ನು ಕಲೆ ಹಾಕಿದರು. 

ಈ ಪಂದ್ಯದಲ್ಲಿ ಫಲಿತಾಂಶ ಬರಲು ಸಾಧ್ಯವಿಲ್ಲ ಎಂಬುದು ನಿಚ್ಚಳವಾಗಿದೆ. ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ಶುಕ್ರವಾರ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ರೋಚಕ ಜಯ ಗಳಿಸಿರುವುದರಿಂದ ಕೊನೆಯ ಪಂದ್ಯ ಕುತೂಹಲಕ್ಕೆ ಕಾರಣವಾಗಿದೆ. ಆ ಪಂದ್ಯದಲ್ಲಿ ಗೆದ್ದರೆ ಅಥವಾ ಡ್ರಾ ಮಾಡಿಕೊಳ್ಳಲು ಸಾಧ್ಯವಾದರೆ ಒಂದು ದಶಕದ ನಂತರ ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿ ಗೆದ್ದ ಸಾಧನೆ ಇಂಗ್ಲೆಂಡ್ ತಂಡದ್ದಾಗಲಿದೆ.

ಸಂಕ್ಷಿಪ‍್ತ ಸ್ಕೋರ್: ಮೊದಲ ಇನಿಂಗ್ಸ್‌: ಪಾಕಿಸ್ತಾನ: 91.2 ಓವರ್‌ಗಳಲ್ಲಿ 236 (ಮೊಹಮ್ಮದ್ ರಿಜ್ವಾನ್ 72; ಜೇಮ್ಸ್ ಆ್ಯಂಡರ್ಸನ್ 60ಕ್ಕೆ3, ಸ್ಟುವರ್ಟ್ ಬ್ರಾಡ್ 56ಕ್ಕೆ4, ಸ್ಯಾಮ್ ಕರನ್ 44ಕ್ಕೆ1, ಕ್ರಿಸ್ ವೋಕ್ಸ್ 55ಕ್ಕೆ1); ಇಂಗ್ಲೆಂಡ್‌: 5 ಓವರ್‌ಗಳಲ್ಲಿ 7ಕ್ಕೆ1 (ಡಾಮ್ ಸಿಬ್ಲಿ ಬ್ಯಾಟಿಂಗ್ 2, ಜ್ಯಾಕ್ ಕ್ರಾಲಿ ಬ್ಯಾಟಿಂಗ್ 5; ಶಹೀನ್ ಶಾ ಅಫ್ರಿದಿ 5ಕ್ಕೆ1). ನಾಲ್ಕನೇ ದಿನದಾಟದ ಮುಕ್ತಾಯಕ್ಕೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು