ಬುಧವಾರ, ಡಿಸೆಂಬರ್ 8, 2021
18 °C
ಪಂಜಾಬ್ ಕಿಂಗ್ಸ್–ಕೋಲ್ಕತ್ತ ನೈಟ್ ರೈಡರ್ಸ್ ಹಣಾಹಣಿ ಇಂದು; ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ ಮೇಲೆ ಭರವಸೆ

IPL 2021- KKR vs PBKS| ರಾಹುಲ್ ಬಳಗದ ಮುಂದೆ ಕಠಿಣ ಹಾದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುಬೈ (ಪಿಟಿಐ): ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಶುಕ್ರವಾರ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. 

11 ಪಂದ್ಯಗಳಿಂದ ಎಂಟು ಅಂಕ ಗಳಿಸಿರುವ ರಾಹುಲ್ ಬಳಗಕ್ಕೆ ಪ್ಲೇ ಆಫ್ ಪ್ರವೇಶದ ಹಾದಿಯು ಕಠಿಣವಾಗಿದೆ. ಇನ್ನುಳಿದಿರುವ ಮೂರು ಪಂದ್ಯಗಳಲ್ಲಿಯೂ ಉತ್ತಮ ರನ್‌ ಸರಾಸರಿಯಿಂದ ಗೆದ್ದರೆ ಅವಕಾಶ ದೊರೆಯುವ ಸಾಧ್ಯತೆ ಇದೆ.  ಆದರೆ, 10 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ಏಯಾನ್ ಮಾರ್ಗನ್ ಬಳಗದ ಸವಾಲನ್ನು ಮೆಟ್ಟಿನಿಲ್ಲುವುದು ಸುಲಭವಲ್ಲ.

ಟೂರ್ನಿಯಲ್ಲಿ ತಡವಾಗಿಯಾದರೂ ಪುಟಿದೆದ್ದಿರುವ ಕೋಲ್ಕತ್ತ ತಂಡದ ನವಪ್ರತಿಭೆ ವೆಂಕಟೇಶ್ ಅಯ್ಯರ್, ಆಲ್‌ರೌಂಡರ್ ಸುನೀಲ್ ನಾರಾಯಣ್, ಕನ್ನಡಿಗ ಬೌಲರ್ ಪ್ರಸಿದ್ಧ ಕೃಷ್ಣ ಮತ್ತು ಲಾಕಿ ಫರ್ಗ್ಯುಸನ್ ಅವರ ಸವಾಲನ್ನು ಸಮರ್ಥವಾಗಿ ಎದುರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ‘ನಿಗೂಢ ಸ್ಪಿನ್ನರ್‌’ ವರುಣ್ ಚಕ್ರವರ್ತಿಯ ದಾಳಿಯನ್ನೂ  ಎದುರಿಸಿ ನಿಲ್ಲಬೇಕು.

ಪಂಜಾಬ್ ಬಳಗದಲ್ಲಿ ಪ್ರತಿಭಾವಂತರ ದೊಡ್ಡ ದಂಡು ಇದೆ. ಆದರೆ ತಂಡವಾಗಿ ಆಡುವಲ್ಲಿ ಸೋಲುತ್ತಿದೆ. ಸ್ಪಿನ್ನರ್ ರವಿ ಬಿಷ್ಣೋಯಿ ಬಿಟ್ಟರೆ ಉಳಿದ ಬೌಲರ್‌ಗಳಿಂದ ಸ್ಥಿರ ಪ್ರದರ್ಶನ ಮೂಡಿ ಬರುತ್ತಿಲ್ಲ. ಅನುಭವಿ ಮೊಹಮ್ಮದ್ ಶಮಿ, ಏಡನ್ ಮರ್ಕರಮ್ ಮತ್ತು ಹರಪ್ರೀತ್ ಬ್ರಾರ್ ವಿಕೆಟ್ ಕಿತ್ತುವಲ್ಲಿ ಯಶಸ್ವಿಯಾಗುತ್ತಿಲ್ಲ. ಮಯಂಕ್ ಅಗರವಾಲ್ ಈ ಪಂದ್ಯದಲ್ಲಿಯೂ ಕಣಕ್ಕಿಳಿಯುವುದು ಸಂಶಯ. ಆದ್ದರಿಂದ ಇನಿಂಗ್ಸ್ ಆರಂಭದ ಹೊಣೆ ನಾಯಕ ರಾಹುಲ್ ಮೇಲೆಯೇ ಇದೆ.  ಮನದೀಪ್ ಸಿಂಗ್ ಮತ್ತು ಕ್ರಿಸ್ ಗೇಲ್ ಲಯಕ್ಕೆ ಮರಳಿದರೆ ತಂಡದ ಬ್ಯಾಟಿಂಗ್ ಬಲಗೊಳ್ಳಬಹುದು.

‘ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ಒತ್ತಡದ ಸಂದರ್ಭದಲ್ಲಿ ನಾವು ಸರಿಯಾಗಿ ಆಡಲಿಲ್ಲ. ಅದು ಸೋಲಿಗೆ ಕಾರಣವಾಯಿತು’ ಎಂದು ರಾಹುಲ್ ಹೇಳಿದ್ದಾರೆ.

ಟೂರ್ನಿಯಲ್ಲಿ 422 ರನ್‌ ಗಳಿಸಿರುವ ರಾಹುಲ್  ಮತ್ತು   10 ಪಂದ್ಯಗಳಿಂದ 193 ರನ್ ಗಳಿಸಿರುವ ಗೇಲ್ ಅವರಿಂದ ದೊಡ್ಡ ಇನಿಂಗ್ಸ್‌ನ ನಿರೀಕ್ಷೆ ಇದೆ. ಕೋಲ್ಕತ್ತದ ಬೌಲಿಂಗ್ ದಾಳಿಯನ್ನು ಎದುರಿಸಿ ನಿಂತರೆ ಮಾತ್ರ ದೊಡ್ಡ ಮೊತ್ತ ಪೇರಿಸಲು ಸಾಧ್ಯ.

ಪ್ಲೇ ಆಫ್‌ ಪೈಪೋಟಿಯಲ್ಲಿ ಉಳಿಯಬೇಕಾದರೆ ಪಂಜಾಬ್ ತಂಡಕ್ಕೆ ಇದು ‘ಮಾಡು ಇಲ್ಲವೇ ಮಡಿ’ ಪಂದ್ಯವಾಗಲಿದೆ.  

ತಂಡಗಳು: ಪಂಜಾಬ್ ಕಿಂಗ್ಸ್: ಕೆ.ಎಲ್. ರಾಹುಲ್ (ನಾಯಕ), ಮಯಂಕ್ ಅಗರವಾಲ್, ಕ್ರಿಸ್ ಗೇಲ್, ಮೊಹಮ್ಮದ್ ಶಮಿ, ಶಾರೂಖ್ ಖಾನ್, ಏಡನ್ ಮರ್ಕರಮ್, ಮನದೀಪ್ ಸಿಂಗ್, ಜಲಜ್ ಸಕ್ಸೆನಾ, ಆರ್ಷದೀಪ್ ಸಿಂಗ್, ನಿಕೊಲಸ್ ಪೂರನ್, ಮೊಯಿಸೆಸ್ ಹೆನ್ರಿಕ್ಸ್, ಇಶಾನ್ ಪೊರೆಲ್.

ಕೋಲ್ಕತ್ತ ನೈಟ್ ರೈಡರ್ಸ್: ಏಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್, ವೆಂಕಟೇಶ್ ಅಯ್ಯರ್, ಕರುಣ್ ನಾಯರ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಶುಭಮನ್ ಗಿಲ್, ಲಕಿ ಫರ್ಗ್ಯುಸನ್, ಪ್ರಸಿದ್ಧ ಕೃಷ್ಣ, ಸಂದೀಪ್ ವರಿಯರ್,  ವರುಣ್ ಚಕ್ರವರ್ತಿ, ಸುನೀಲ್ ನಾರಾಯಣ್, ಶೇಲ್ಡನ್ ಜಾಕ್ಸನ್, ಟಿಮ್ ಸೌಥಿ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

 

ಬಲಾಬಲ

ಪಂದ್ಯಗಳು: 28

ಪಂಜಾಬ್ ಜಯ: 9

ಕೋಲ್ಕತ್ತ ಜಯ: 19

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು