ಗುರುವಾರ , ಡಿಸೆಂಬರ್ 3, 2020
23 °C
ಮೊದಲ ಕ್ವಾಲಿಫೈಯರ್ ಪಂದ್ಯ ಗುರುವಾರ; ಸೋತ ತಂಡಕ್ಕೆ ಫೈನಲ್‌ ಪ್ರವೇಶಕ್ಕೆ ಮತ್ತೊಂದು ಅವಕಾಶ

ಐಪಿಎಲ್ ಮೊದಲ ಕ್ವಾಲಿಫೈಯರ್‌ನಲ್ಲಿ ಮುಂಬೈ-ಡೆಲ್ಲಿ ಹಣಾಹಣಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಚಾಂಪಿಯನ್ ಪಟ್ಟಕ್ಕೆ ತಕ್ಕಂತೆ ಆಡಿ ‍ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿ ವಿರಾಜಮಾನವಾಗಿರುವ ಮುಂಬೈ ಇಂಡಿಯನ್ಸ್ ಮತ್ತು ಮೊದಲ ಫೈನಲ್ ಪ್ರವೇಶದ ಕನಸು ಹೊತ್ತು ಕಣಕ್ಕೆ ಇಳಿಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಗುರುವಾರ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಣಸಲಿವೆ.

ನಾಲ್ಕು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿ 14 ಪಂದ್ಯಗಳ ಪೈಕಿ ಒಂಬತ್ತರಲ್ಲಿ ಜಯ ಗಳಿಸಿ ಪ್ಲೇ ಆಫ್‌ಗೆ ಅರ್ಹತೆ ಗಳಿಸಿದೆ. ಡೆಲ್ಲಿ ಎಂಟು ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದೆ. ಲೀಗ್ ಹಂತದಲ್ಲಿ ಮುಂಬೈ ಎದುರಿನ ಎರಡೂ ಪಂದ್ಯಗಳನ್ನು ಸೋತಿರುವ ಡೆಲ್ಲಿ ಸತತ ನಾಲ್ಕು ಸೋಲುಗಳ ನಂತರ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಮೋಘ ಆರು ವಿಕೆಟ್‌ಗಳ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿದೆ. ಆದರೆ ಕೊನೆಯ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್ ವಿರುದ್ಧ 10 ವಿಕೆಟ್‌ಗಳಿಂದ ಸೋತಿರುವುದು ಮುಂಬೈ ಇಂಡಿಯನ್ಸ್ ತಂಡದಲ್ಲಿ ಆತಂಕ ಸೃಷ್ಟಿಸಿದೆ.

ಮಂಡಿರಜ್ಜು ನೋವಿನಿಂದ ಬಳಲಿ ನಾಲ್ಕು ಪಂದ್ಯಗಳಲ್ಲಿ ಆಡದೇ ಇದ್ದ ನಾಯಕ ರೋಹಿತ್ ಶರ್ಮಾ ಕೊನೆಯ ಲೀಗ್ ಪಂದ್ಯದಲ್ಲಿ ಕಣಕ್ಕೆ ಇಳಿದಿರುವುದು ಮುಂಬೈ ಪಾಳಯದಲ್ಲಿ ಭರವಸೆ ಮೂಡಿಸಿದೆ. ಆದರೆ ಸನ್‌ರೈಸರ್ಸ್ ಎದುರಿನ ಆ ಪಂದ್ಯದಲ್ಲಿ ರೋಹಿತ್ ಕೇವಲ ನಾಲ್ಕು ರನ್‌ಗಳಿಗೆ ಔಟಾಗಿದ್ದರು. ಅವರು ಕ್ವಾಲಿಫೈಯರ್‌ನಲ್ಲೂ ಲಯ ಕಂಡುಕೊಳ್ಳದಿದ್ದರೆ ತಂಡಕ್ಕೆ ಸಂಕಷ್ಟ ಎದುರಾಗಲಿದೆ. ಅತ್ಯಮೋಘ ಬ್ಯಾಟಿಂಗ್ ಲೈನ್ ಅಪ್ ಹೊಂದಿದ್ದರೂ ಮುಂಬೈ ಇಂಡಿಯನ್ಸ್ ತಂಡ ಸನ್‌ರೈಸರ್ಸ್ ಎದುರಿನ ಪಂದ್ಯದಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಿರಲಿಲ್ಲ. ಬಲಿಷ್ಠ ಬೌಲಿಂಗ್ ವಿಭಾಗವೂ ಸನ್‌ರೈಸರ್ಸ್ ವಿರುದ್ಧ ಮಂಕಾಗಿತ್ತು. ಆದರೆ ಯಾವುದೇ ಕಠಿಣ ಪರಿಸ್ಥಿತಿಯಿಂದಲೂ ಚೇತರಿಸಿಕೊಳ್ಳುವ ಸಾಮರ್ಥ್ಯ ಈ ತಂಡಕ್ಕೆ ಇರುವುದರಿಂದ ಗುರುವಾರ ಹೊಸ ಹುರುಪಿನಲ್ಲಿ ಆಡುವ ಸಾಧ್ಯತೆ ಇದೆ.

ಮಧ್ಯಮ ಕ್ರಮಾಂಕದ ಸಮಸ್ಯೆ

ಡೆಲ್ಲಿ ಕ್ಯಾಪಿಟಲ್ಸ್‌ಗೆ ಬ್ಯಾಟಿಂಗ್ ವಿಭಾಗದ ಅಸ್ಥಿರತೆಯದೇ ಚಿಂತೆ. ವಿಶೇಷವಾಗಿ ಅದರ ಮಧ್ಯಮ ಕ್ರಮಾಂಕ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಒಂದಿಬ್ಬರು ಆಟಗಾರರ ಮೇಲೆ ಅವಲಂಬಿತವಾಗಿದೆ. ಕೆಲವು ಪಂದ್ಯಗಳಲ್ಲಿ ನೀರಸ ಆಟವಾಡಿದ್ದ ಅಜಿಂಕ್ಯ ರಹಾನೆ ಬೆಂಗಳೂರು ಎದುರಿನ ಹಣಾಹಣಿಯಲ್ಲಿ ಭರ್ಜರಿ ಅರ್ಧಶತಕ ಗಳಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. ಎರಡು ಶತಕ ಮತ್ತು ಮೂರು ಅರ್ಧಶತಕ ಗಳಿಸಿರುವ ಶಿಖರ್ ಧವನ್ ಸ್ಥಿರ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದಾರೆ. ಯುವ ಆಟಗಾರರಾದ ಪೃಥ್ವಿ ಶಾ ಮತ್ತು ರಿಷಭ್ ಪಂತ್ ನಿರೀಕ್ಷೆಗೆ ತಕ್ಕಂತೆ ಆಡುತ್ತಿಲ್ಲ. ಹೀಗಾಗಿ ನಾಯಕ ಶ್ರೇಯಸ್ ಅಯ್ಯರ್ ಜವಾಬ್ದಾರಿ ಹೆಚ್ಚಿದೆ.

ಮುಂಬೈ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇಶಾನ್ ಕಿಶನ್ ಮತ್ತು ಕ್ವಿಂಟನ್ ಡಿ ಕಾಕ್ ಅತ್ಯುತ್ತಮ ಆರಂಭಿಕ ಜೋಡಿ ಎಂನಿಸಿಕೊಂಡಿದೆ. ಸೂರ್ಯಕುಮಾರ್‌ ಯಾದವ್ ಕೂಡ ಉತ್ತಮ ಲಯದಲ್ಲಿದ್ದಾರೆ. ಸಿಕ್ಸರ್‌ಗಳನ್ನು ಸಿಡಿಸುವುದಕ್ಕೇ ಹೆಸರಾಗಿರುವ ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್ ಮತ್ತು ಕೃಣಾಲ್ ಪಾಂಡ್ಯ ಮಧ್ಯಮ ಕ್ರಮಾಂಕದ ಬಲ. ಪ್ರಮುಖ ಬೌಲರ್‌ಗಳಾದ ಜಸ್‌ಪ್ರೀತ್ ಬೂಮ್ರಾ ಮತ್ತು ಟ್ರೆಂಟ್ ಬೌಲ್ಟ್ ಅವರಿಗೆ ಸನ್‌ರೈಸರ್ಸ್ ಎದುರಿನ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ಗುರುವಾರ ಇನ್ನಷ್ಟು ಶಕ್ತಿಯೊಂದಿಗೆ ಅವರು ಆಡಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ರಾಹುಲ್ ಚಾಹರ್ ಮತ್ತು ಕೃಣಾಲ್ ಪಾಂಡ್ಯ ಹಿಂದಿನ ಪಂದ್ಯದಲ್ಲಿ ಸಾಕಷ್ಟು ದಂಡನೆಗೆ ಒಳಗಾಗಿದ್ದಾರೆ. ಆದ್ದರಿಂದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಲಯ ಕಂಡುಕೊಳ್ಳಬೇಕಾಗಿದೆ.

ಡೆಲ್ಲಿ ತಂಡದ ಮಧ್ಯಮ ವೇಗಿಗಳಾದ ಕಗಿಸೊ ರಬಾಡ ಮತ್ತು ಮಾರ್ಕಸ್ ಸ್ಟೋಯಿನಿಸ್ ಯಾವ ಬ್ಯಾಟ್ಸ್‌ಮನ್‌ಗಳನ್ನು ಕೂಡ ಕಾಡುವ ಸಾಮರ್ಥ್ಯ ಹೊಂದಿದ್ದಾರೆ. ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಸ್ಪಿನ್ ವಿಭಾಗವನ್ನು ಚೆನ್ನಾಗಿ ನಿಭಾಯಿಸುತ್ತ ಬಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು