ಗುರುವಾರ , ಫೆಬ್ರವರಿ 25, 2021
18 °C
ಸ್ಟುವರ್ಟ್‌ ಬ್ರಾಡ್‌ಗೆ ಐದು ವಿಕೆಟ್‌: ಪೀಟರ್‌ ಸಿಡ್ಲ್‌ ಉತ್ತಮ ಬ್ಯಾಟಿಂಗ್‌

ಆ್ಯಷಸ್‌ ಟೆಸ್ಟ್‌: ಸ್ಟೀವನ್‌ ಸ್ಮಿತ್‌ ಮನಮೋಹಕ ಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ್ಮಿಂಗ್‌ಹ್ಯಾಮ್ (ಎಎಫ್‌ಪಿ/ರಾಯಿಟರ್ಸ್): ಪ್ರಮುಖ ಬ್ಯಾಟ್ಸ್‌ಮನ್‌ಗಳು ಲಘುಬಗೆಯಲ್ಲಿ ವಿಕೆಟ್‌ ನೀಡಿ ಪೆವಿಲಿಯನ್‌ ಸೇರಿಕೊಂಡರೂ ಕಿಂಚಿತ್ತೂ ಎದೆಗುಂದದೆ ಹೋರಾಡಿದ ಸ್ಟೀವನ್‌ ಸ್ಮಿತ್‌, ಆಸ್ಟ್ರೇಲಿಯಾ ತಂಡಕ್ಕೆ ಆಪತ್ಭಾಂಧವರಾದರು.

ಸ್ಮಿತ್‌ (144; 219ಎ, 16ಬೌಂ, 2ಸಿ) ಅವರ ಛಲದ ಬ್ಯಾಟಿಂಗ್‌ನಿಂದ ಟಿಮ್‌ ಪೇನ್‌ ಬಳಗವು, ಇಂಗ್ಲೆಂಡ್‌ ಎದುರಿನ ಆ್ಯಷಸ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಉತ್ತಮ ಮೊತ್ತ ಕಲೆಹಾಕಿತು. ಎಜ್‌ಬಾಸ್ಟನ್‌ ಅಂಗಳದಲ್ಲಿ ಗುರುವಾರ ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ, ಪ್ರಥಮ ಇನಿಂಗ್ಸ್‌ನಲ್ಲಿ 80.4 ಓವರ್‌ಗಳಲ್ಲಿ 284ರನ್‌ ಪೇರಿ ಸಿತು. ಮೊದಲ ಇನಿಂಗ್ಸ್‌ ಶುರು ಮಾಡಿ ರುವ ಆತಿಥೇಯರು ದಿನದಾಟದ ಅಂತ್ಯಕ್ಕೆ ಎರಡು ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 10 ರನ್‌ ಗಳಿಸಿದ್ದಾರೆ.

ಆಂಗ್ಲರ ನಾಡಿನ ವೇಗದ ಬೌಲರ್‌ ಸ್ಟುವರ್ಟ್ ಬ್ರಾಡ್, ಪ್ರವಾಸಿ ಪಡೆಗೆ ಆರಂಭದಲ್ಲಿಯೇ ಪೆಟ್ಟು ಕೊಟ್ಟರು. ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಡೇವಿಡ್ ವಾರ್ನರ್ (2) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಬ್ರಾಡ್ ಹಿರಿಹಿರಿ ಹಿಗ್ಗಿದರು. ಆದರೆ, ಟಿವಿ ರಿಪ್ಲೆಯಲ್ಲಿ ಚೆಂಡು ಲೆಗ್‌ಸ್ಟಂಪ್‌ನಿಂದ ಹೊರಗೆ ಸಾಗಿದ್ದು ಸ್ಪಷ್ಟವಾಗತ್ತು. ಆದರೆ, ವಾರ್ನರ್ ಅಂಪೈರ್ ತೀರ್ಪು ಮರುಪರಿಶೀಲನೆ ಮನವಿ ಮಾಡಿಕೊಳ್ಳದೇ ನಿರ್ಗಮಿಸಿದ್ದರಿಂದ ಇಂಗ್ಲೆಂಡ್‌ಗೆ ಲಾಭವಾಯಿತು.

ಎಂಟನೇ ಓವರ್‌ನಲ್ಲಿ ಬ್ರಾಡ್ ಎಸೆತವನ್ನು ಕಟ್ ಮಾಡುವ ಯತ್ನದಲ್ಲಿ ಕ್ಯಾಮರಾನ್ ಬ್ಯಾಂಕ್ರಾಫ್ಟ್‌ (8) ಅವರು ಜೋ ರೂಟ್‌ಗೆ ಕ್ಯಾಚಿತ್ತರು. ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧ ಶಿಕ್ಷೆ ಪೂರೈಸಿದ ನಂತರ ಬ್ಯಾಂಕ್ರಾಫ್ಟ್‌ ಆಡುತ್ತಿರುವ ಮೊದಲ ಆ್ಯಷಸ್ ಸರಣಿ ಇದು. ಜೇಮ್ಸ್‌ ಆ್ಯಂಡರ್ಸನ್‌ ಇನ್ನೊಂದು ಬದಿಯಿಂದ ಉತ್ತಮ ದಾಳಿ ಸಂಘಟಿಸಿದ್ದರು. ಅವರು ತಾವು ಹಾಕಿದ ನಾಲ್ಕು ಓವರ್‌ಗಳಲ್ಲಿ ಮೂರನ್ನು ಮೇಡನ್ ಮಾಡಿದ್ದರು. ಆದರೆ, ಸ್ನಾಯುಸೆಳೆತದ ಕಾರಣ ಜೇಮ್ಸ್, ಮೈದಾನ ತೊರೆಯಬೇಕಾಯಿತು.

ಇದರ ಲಾಭ ಪಡೆಯುವ ಆಸ್ಟ್ರೇಲಿಯಾದ ಯೋಚನೆಗೆ ಕ್ರಿಸ್ ವೋಕ್ಸ್‌ ಅಡ್ಡಗಾಲು ಹಾಕಿದರು. ಬ್ರಾಡ್ ಜೊತೆಗೆ ಚುರುಕಾದ ದಾಳಿ ನಡೆಸಿದ ಅವರು  ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಉಸ್ಮಾನ್ ಖ್ವಾಜಾ, ಟ್ರಾವಿಸ್ ಹೆಡ್ ಮತ್ತು ಮ್ಯಾಥ್ಯೂ ವೇಡ್ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಇದರಿಂದಾಗಿ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು.

ಸ್ಮಿತ್‌ ಮಿಂಚು: ಈ ಹಂತದಲ್ಲಿ ದಿಟ್ಟ ಬ್ಯಾಟಿಂಗ್ ಮಾಡಿದವರು ಸ್ಮಿತ್. 

ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಸ್ಮಿತ್ ಆರಂಭದಲ್ಲಿ ಶಾಂತ ಚಿತ್ತದಿಂದಲೇ ಎದುರಾಳಿಗಳ ದಾಳಿಯನ್ನು ಎದುರಿಸಿದರು. ಆಟಕ್ಕೆ ಕುದುರಿಕೊಂಡ ಬಳಿಕ ವೇಗವಾಗಿ ರನ್‌ ಗಳಿಸಲು ಪ್ರಯತ್ನಿಸಿದರು. ಅವರಿಗೆ ಟ್ರಾವಿಸ್ ಹೆಡ್ (35 ರನ್) ಬಿಟ್ಟರೆ ಉಳಿದವರಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಆದರೂ ಸ್ಮಿತ್ ಅಂಜಲಿಲ್ಲ.

ತಮ್ಮ ಇನ್ನೊಂದು ಸ್ಪೆಲ್ ಆರಂಭಿಸಿದ ಬ್ರಾಡ್ ಅವರ ಎಸೆತಗಳಲ್ಲಿ ಟಿಮ್ ಪೇನ್ ಮತ್ತು ಜೇಮ್ಸ್‌ ಪ್ಯಾಟಿನ್ಸನ್ ಔಟಾದರು. ಪ್ಯಾಟ್‌ ಕಮಿನ್ಸ್‌ ಅವರ ವಿಕೆಟ್‌ ಅನ್ನು ಬೆನ್ ಸ್ಟೋಕ್ಸ್‌ ಗಳಿಸಿದರು.

ಪೀಟರ್ ಸಿಡ್ಲ್‌ (44; 85ಎ, 4ಬೌಂ) ಮತ್ತು ನೇಥನ್‌ ಲಯನ್‌ (ಔಟಾಗದೆ 12) ಅವರ ಜೊತೆಗೂಡಿದ ಸ್ಮಿತ್‌ ಪ್ರವಾಸಿ ಪಡೆಯ ಇನಿಂಗ್ಸ್‌ಗೆ ಜೀವ ತುಂಬಿದರು. ಒಂಬತ್ತನೇ ವಿಕೆಟ್‌ಗೆ ಸಿಡ್ಲ್‌ ಜೊತೆ 88ರನ್‌ ಸೇರಿಸಿದ ಅವರು ಹತ್ತನೇ ವಿಕೆಟ್‌ಗೆ ಲಯನ್‌ ಜೊತೆ 74ರನ್‌ ಕಲೆಹಾಕಿ ಅಭಿಮಾನಿಗಳ ಮನಗೆದ್ದರು.

ಬೆನ್‌ ಸ್ಟೋಕ್ಸ್‌ ಹಾಕಿದ 73ನೇ ಓವರ್‌ನ ನಾಲ್ಕನೇ ಎಸೆತವನ್ನು ಕವರ್ಸ್‌ನತ್ತ ಬಾರಿಸಿ ಬೌಂಡರಿ ಗಳಿಸಿದ ಸ್ಮಿತ್‌ ಮೂರಂಕಿಯ ಗಡಿ ದಾಟಿದರು. ಟೆಸ್ಟ್‌ನಲ್ಲಿ 24ನೇ ಶತಕ ಗಳಿಸಿ ಸಂಭ್ರಮಿಸಿದರು. ನಂತರವೂ ಇಂಗ್ಲೆಂಡ್‌ ಬೌಲರ್‌ಗಳನ್ನು ಕಾಡಿದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌: 80.4 ಓವರ್‌ಗಳಲ್ಲಿ 284 (ಉಸ್ಮಾನ್‌ ಖ್ವಾಜಾ 13, ಸ್ಟೀವನ್‌ ಸ್ಮಿತ್‌ 144, ಟ್ರಾವಿಸ್‌ ಹೆಡ್‌ 35, ಪೀಟರ್‌ ಸಿಡ್ಲ್‌ 44, ನೇಥನ್‌ ಲಯನ್‌ ಔಟಾಗದೆ 12; ಸ್ಟುವರ್ಟ್‌ ಬ್ರಾಡ್‌ 86ಕ್ಕೆ5, ಕ್ರಿಸ್‌ ವೋಕ್ಸ್‌ 58ಕ್ಕೆ3, ಬೆನ್‌ ಸ್ಟೋಕ್ಸ್‌ 77ಕ್ಕೆ1, ಮೋಯಿನ್‌ ಅಲಿ 42ಕ್ಕೆ1). ಇಂಗ್ಲೆಂಡ್‌: ಪ್ರಥಮ ಇನಿಂಗ್ಸ್‌: 2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 10.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು