ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್: ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್ ದಾಖಲೆ ಹಿಂದಿಕ್ಕಿದ ಜೋ ರೂಟ್

Last Updated 18 ಡಿಸೆಂಬರ್ 2021, 14:15 IST
ಅಕ್ಷರ ಗಾತ್ರ

ಅಡಿಲೇಡ್: ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಸುನಿಲ್ ಗವಾಸ್ಕರ್ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಆ್ಯಷಸ್‌ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೂರನೇ ದಿನದಾಟದಲ್ಲಿ 62 ರನ್ ಗಳಿಸಿದ ರೂಟ್, ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ವಿಭಾಗದಲ್ಲಿ ಸಚಿನ್, ಗವಾಸ್ಕರ್ ದಾಖಲೆ ಮುರಿದರು. ರೂಟ್ ಅವರು ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ 1606 ರನ್ ಗಳಿಸಿದ್ದಾರೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 2010ರಲ್ಲಿ 1562 ರನ್ ಗಳಿಸಿದ್ದರೆ, ಸುನಿಲ್ ಗವಾಸ್ಕರ್ ಅವರು 1979ರಲ್ಲಿ 1555 ರನ್ ಗಳಿಸಿದ್ದರು. ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲರ್ಕ್ 2012ರಲ್ಲಿ 1595 ರನ್ ಗಳಿಸಿದ್ದರು.

ಈ ಸಾಧನೆಯ ಮೂಲಕ ರೂಟ್ ಅವರು ಕ್ಯಾಲೆಂಡರ್‌ ವರ್ಷವೊಂದರಲ್ಲಿ 1600ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ನಾಯಕನಾಗಿ ಹೊರಹೊಮ್ಮಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇವ್ ಸ್ಮಿತ್ 2008ರಲ್ಲಿ 1656 ರನ್ ಗಳಿಸಿದ್ದರು.

ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ವಿಭಾಗದಲ್ಲಿ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ಅವರ ದಾಖಲೆಯನ್ನು ರೂಟ್ ಹಿಂದಿಕ್ಕಿದ್ದರು. 2002ರಲ್ಲಿ 61.70 ಸರಾಸರಿಯಲ್ಲಿ ವಾನ್ ಅವರು 1481 ರನ್ ಗಳಿಸಿದ್ದರು.

ಅಡಿಲೇಡ್ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುವ ಅವಕಾಶ ದೊರೆತರೆ ನಾಯಕನಾಗಿ ಸ್ಮಿತ್ ಅವರ ದಾಖಲೆಯನ್ನೂ ರೂಟ್ ಹಿಂದಿಕ್ಕುವ ಸಾಧ್ಯತೆ ಇದೆ.

ಟೆಸ್ಟ್ ಕ್ರಿಕೆಟ್‌ನ ಋತುವೊಂದರಲ್ಲಿ ಗರಿಷ್ಠ ರನ್ ಕಲೆ ಹಾಕಿದ ವಿಶ್ವ ದಾಖಲೆ ಪಾಕಿಸ್ತಾನದ ಮೊಹಮ್ಮದ್ ಯೂಸುಫ್‌ ಅವರ ಹೆಸರಿನಲ್ಲಿದೆ. ಅವರು 2006ರಲ್ಲಿ 11 ಪಂದ್ಯಗಳಿಂದ 1,788 ರನ್ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT