ಗುರುವಾರ , ಆಗಸ್ಟ್ 11, 2022
27 °C
ಆ್ಯಷಸ್‌ ಟೆಸ್ಟ್‌ ಸರಣಿ: ಇಂಗ್ಲೆಂಡ್‌ಗೆ ಮುನ್ನಡೆ: ಪ್ಯಾಟ್‌ ಕಮಿನ್ಸ್‌ಗೆ ಮೂರು ವಿಕೆಟ್

ಬೆನ್‌ ಸ್ಟೋಕ್ಸ್ ಅರ್ಧಶತಕದ ಆಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬರ್ಮಿಂಗ್‌ಹ್ಯಾಮ್ : ಇಂಗ್ಲೆಂಡ್ ತಂಡವು ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆ್ಯಷಸ್ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆ ಸಾಧಿಸಿದೆ.

ಆಲ್‌ರೌಂಡರ್ ಬೆನ್‌ ಸ್ಟೋಕ್ಸ್‌ (50; 96 ಎಸೆತ, 8 ಬೌಂಡರಿ) ಮತ್ತು ಕೆಳ ಕ್ರಮಾಂಕದಲ್ಲಿ ಮಿಂಚಿದ ಕ್ರಿಸ್ ವೋಕ್ಸ್‌ (ಔಟಾಗದೆ 37; 95ಎ, 1ಬೌಂ, 1ಸಿ) ಅವರ ಆಟದ ಬಲದಿಂದ ಆತಿಥೇಯರು, ಆಸ್ಟ್ರೇಲಿಯಾ ಎದುರು 90 ರನ್‌ಗಳ ಮುನ್ನಡೆ ಗಳಿಸಿದ್ದಾರೆ. ಮೂರನೇ ದಿನದಾಟದ ಚಹಾ ವಿರಾಮದ ವೇಳೆಗೆ ಜೋ ರೂಟ್‌ ಪಡೆ 135.5 ಓವರ್‌ಗಳಲ್ಲಿ 374 ರನ್‌ ಗಳಿಸಿ ಆಲೌಟ್ ಆಯಿತು.

ಎರಡನೇ ಇನಿಂಗ್ಸ್‌ ಆರಂಭಿಸಿರುವ ಟಿಮ್‌ ಪೇನ್‌ ಬಳಗ ದಿನದಾಟದ ಅಂತ್ಯಕ್ಕೆ 31 ಓವರ್‌ಗಳಲ್ಲಿ 3 ವಿಕೆಟ್‌ಗೆ 124ರನ್‌ ಪೇರಿಸಿದೆ.

ಟಾಸ್ ಗೆದ್ದಿದ್ದ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್‌ನಲ್ಲಿ ಸ್ಟೀವನ್ ಸ್ಮಿತ್ ಅವರ ಅಮೋಘ ಶತಕದ ಬಲದಿಂದ 284 ರನ್ ಗಳಿಸಿತ್ತು. ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡದ ರೋರಿ ಬರ್ನ್ಸ್ ಅವರ ತಾಳ್ಮೆಯ ಶತಕದಿಂದಾಗಿ ಆತಿಥೇಯ ತಂಡವು ಮುನ್ನಡೆಯತ್ತ ಹೆಜ್ಜೆ ಇಟ್ಟಿತ್ತು. ಕ್ರೀಸ್‌ನಲ್ಲಿದ್ದ ರೋರಿ ಮತ್ತು ಸ್ಟೋಕ್ಸ್‌ ಶನಿವಾರ ಬೆಳಿಗ್ಗೆ ಆಟ ಮುಂದುವರಿಸಿದರು. ಎಚ್ಚರಿಕೆಯಿಂದ ಆಡಿದರು. ಇನಿಂಗ್ಸ್‌ ಮುನ್ನಡೆಗೆ ಕೇವಲ ಎರಡು ರನ್‌ಗಳ ಅಗತ್ಯವಿದ್ದಾಗ ಸ್ಟೋಕ್ಸ್‌ ಅವರನ್ನು ಪ್ಯಾಟ್ ಕಮಿನ್ಸ್‌ ಔಟ್ ಮಾಡಿದರು. ಇದರೊಂದಿಗೆ 88ರನ್‌ಗಳ ಐದನೇ ವಿಕೆಟ್‌ ಜೊತೆಯಾಟಕ್ಕೆ ತೆರೆಬಿತ್ತು. 

105ನೇ ಓವರ್‌ನಲ್ಲಿ ರೋರಿ, ಪೆವಿಲಿಯನ್‌ ಸೇರಿದಾಗ ತಂಡವು ಹತ್ತು ರನ್‌ಗಳ ಮುನ್ನಡೆಯಲ್ಲಿತ್ತು. ಈ ಹಂತದಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ನೇಥನ್ ಲಯನ್ ಮತ್ತು ವೇಗಿ ಕಮಿನ್ಸ್‌ ಅವರು ಹಿಡಿತ ಸಾಧಿಸುವ ಪ್ರಯತ್ನ ಮಾಡಿದರು. ಆತಿಥೇಯರ ರನ್‌ ಗಳಿಕೆಯ ವೇಗಕ್ಕೆ ತಕ್ಕಮಟ್ಟಿಗೆ ಕಡಿವಾಣ ಹಾಕಿದರು.

ಈ ನಡುವೆಯೂ ಮಿಂಚಿದ ಕ್ರಿಸ್ ವೋಕ್ಸ್ ಮತ್ತು ಸ್ಟುವರ್ಟ್ ಬ್ರಾಡ್ (29; 67ಎ, 2ಬೌಂ) ಅವರು ತಂಡದ ಖಾತೆಗೆ ಸಾಧ್ಯವಾದಷ್ಟು ರನ್‌ಗಳ ಕಾಣಿಕೆ ನೀಡಿದರು.

ಎರಡನೇ ಇನಿಂಗ್ಸ್‌ ಶುರುಮಾಡಿದ ಆಸ್ಟ್ರೇಲಿಯಾ ತಂಡ ಡೇವಿಡ್‌ ವಾರ್ನರ್‌ (8) ಮತ್ತು ಕ್ಯಾಮರಾನ್‌ ಬ್ಯಾಂಕ್ರಾಫ್ಟ್‌ (7) ಅವರ ವಿಕಟ್‌ ಬೇಗನೆ ಕಳೆದುಕೊಂಡಿತು. ಈ ಹಂತದಲ್ಲಿ ಒಂದಾದ ಉಸ್ಮಾನ್‌ ಖ್ವಾಜಾ (40; 48ಎ, 6ಬೌಂ) ಮತ್ತು ಸ್ಟೀವನ್‌ ಸ್ಮಿತ್‌ (ಬ್ಯಾಟಿಂಗ್‌ 46; 61ಎ, 3ಬೌಂ) ತಂಡವನ್ನು ಅಪಾಯದಿಂದ ಪಾರು ಮಾಡಿದರು.

ಸಂಕ್ಷಿಪ್ತ ಸ್ಕೋರು
ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್
; 80.4 ಓವರ್‌ಗಳಲ್ಲಿ 284
ಇಂಗ್ಲೆಂಡ್: ಪ್ರಥಮ ಇನಿಂಗ್ಸ್‌; 135.5 ಓವರ್‌ಗಳಲ್ಲಿ 374 (ರೋರಿ ಬರ್ನ್ಸ್ 133, ಬೆನ್ ಸ್ಟೋಕ್ಸ್‌ 50, ಕ್ರಿಸ್ ವೋಕ್ಸ್‌ ಔಟಾಗದೆ 37, ಸ್ಟುವರ್ಟ್ ಬ್ರಾಡ್ 29; ಪ್ಯಾಟ್ ಕಮಿನ್ಸ್ 84ಕ್ಕೆ3, ಜೇಮ್ಸ್‌ ಪ್ಯಾಟಿನ್ಸನ್ 82ಕ್ಕೆ2, ಪೀಟರ್ ಸಿಡ್ಲ್ 52ಕ್ಕೆ2, ನೇಥನ್ ಲಯನ್ 112ಕ್ಕೆ3).

ಆಸ್ಟ್ರೇಲಿಯಾ: ಎರಡನೇ ಇನಿಂಗ್ಸ್‌: 31 ಓವರ್‌ಗಳಲ್ಲಿ 3 ವಿಕೆಟ್‌ಗೆ 124 (ಉಸ್ಮಾನ್‌ ಖ್ವಾಜಾ 40, ಸ್ಟೀವನ್‌ ಸ್ಮಿತ್‌ ಬ್ಯಾಟಿಂಗ್‌ 46, ಟ್ರಾವಿಸ್‌ ಹೆಡ್‌ ಬ್ಯಾಟಿಂಗ್‌ 21; ಸ್ಟುವರ್ಟ್‌ ಬ್ರಾಡ್‌ 26ಕ್ಕೆ1, ಮೋಯಿನ್‌ ಅಲಿ 47ಕ್ಕೆ1, ಬೆನ್‌ ಸ್ಟೋಕ್ಸ್‌ 18ಕ್ಕೆ1).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು