ಸೋಮವಾರ, ಜನವರಿ 24, 2022
21 °C
ಎರಡನೇ ಸ್ಥಾನಕ್ಕೇರಿದ ಆರ್. ಅಶ್ವಿನ್

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್: ಮಯಂಕ್ ಅಗರವಾಲ್‌ಗೆ ಭರ್ಜರಿ ಬಡ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಭಾರತ ಕ್ರಿಕೆಟ್ ತಂಡದ  ಆರಂಭಿಕ ಬ್ಯಾಟರ್ ಬೆಂಗಳೂರಿನ ಮಯಂಕ್ ಅಗರವಾಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಜಿಗಿತದ ಸಾಧನೆ ಮಾಡಿದ್ದಾರೆ.

ಬುಧವಾರ ಪ್ರಕಟವಾದ ಐಸಿಸಿಯ ಬ್ಯಾಟರ್‌ಗಳ ಪಟ್ಟಿಯಲ್ಲಿ ಒಟ್ಟು 30 ಸ್ಥಾನಗಳ ಬಡ್ತಿ ಗಳಿಸಿರುವ ಮಯಂಕ್ 11ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಬೌಲರ್‌ಗಳಲ್ಲಿ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಎರಡನೇ ಸ್ಥಾನಕ್ಕೇರಿದ್ದಾರೆ.

ಮುಂಬೈನಲ್ಲಿ ಈಚೆಗೆ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮಯಂಕ್ 150 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 62 ರನ್ ಗಳಿಸಿದ್ದರು.  2019ರಲ್ಲಿ ಮಯಂಕ್ ಅವರು ಅಗ್ರ ಹತ್ತು ಬ್ಯಾಟರ್‌ಗಳಲ್ಲಿ ಸ್ಥಾನ ಗಳಿಸಿದ್ದರು.

ಭಾರತದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ರೋಹಿತ್ ಮುಂಬೈ ಟೆಸ್ಟ್‌ನಲ್ಲಿ ಆಡಿರಲಿಲ್ಲ.

ಇದೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಹತ್ತು ವಿಕೆಟ್ ಗಳಿಸಿದ ಸಾಧನೆ ಮಾಡಿದ ಕಿವೀಸ್ ತಂಡದ ಎಜಾಜ್ ಪಟೇಲ್ 23 ಸ್ಥಾನಗಳ ಬಡ್ತಿ ಗಳಿಸಿ 38ನೇ ಸ್ಥಾನದಲ್ಲಿದ್ದಾರೆ.  ಜಿಮ್ ಲೇಕರ್ ಮತ್ತು ಅನಿಲ್ ಕುಂಬ್ಳೆ ನಂತರ ಹತ್ತು ವಿಕೆಟ್  ಸಾಧನೆ ಮಾಡಿದ ಬೌಲರ್ ಎಂಬ ಹೆಗ್ಗಳಿಕೆ ಅವರದ್ದಾಗಿದೆ.

ಅಶ್ವಿನ್ ಬೌಲರ್‌ಗಳ ಪಟ್ಟಿಯಲ್ಲಿ 43 ರೇಟಿಂಗ್ ಪಾಯಿಂಟ್ಸ್‌ ಗಳಿಸಿದ್ಧಾರೆ. ಒಟ್ಟು 883 ಅಂಕಗಳು ಅವರ ಖಾತೆಯಲ್ಲಿವೆ. ಪ್ರಥಮ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅವರಿಗಿಂತ 67 ಅಂಕಗಳಿಂದ ಹಿಂದಿದ್ದಾರೆ. 

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿಯೂ ಅಶ್ವಿನ್ ಎರಡನೇ ಸ್ಥಾನ ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ಆಟಗಾರ ಜೇಸನ್ ಹೋಲ್ಡರ್ ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು