ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಫೈನಲ್: ಭಾರತಕ್ಕೆ ಒಲಿಯುವುದೇ ಪ್ರಶಸ್ತಿ?

ಚೊಚ್ಚಲ ಟ್ರೋಫಿಯ ಕನಸಲ್ಲಿ ಬಾಂಗ್ಲಾದೇಶ: ಶಿಖರ್‌ ಮೇಲೆ ಭಾರತದ ಭರವಸೆ
Last Updated 27 ಸೆಪ್ಟೆಂಬರ್ 2018, 19:44 IST
ಅಕ್ಷರ ಗಾತ್ರ

ದುಬೈ: ಭಾರತ ತಂಡದ ಸಮರ್ಥ ನಾಯಕ ಯಾರು? ವಿರಾಟ್ ಕೊಹ್ಲಿಯೇ ಅಥವಾ ರೋಹಿತ್ ಶರ್ಮಾನೋ? ಎಂಬ ಚರ್ಚೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ತಾರಕಕ್ಕೇರಿದೆ.

‘ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ರನ್‌ಗಳ ಹೊಳೆ ಹರಿಸುತ್ತಿರುವ ರೋಹಿತ್ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ತಂಡದ ಎದುರು ತಂಡವನ್ನು ಜಯದತ್ತ ಮುನ್ನಡೆಸಿದ್ದಾರೆ. ಅವರ ನಾಯಕತ್ವಕ್ಕೆ ಪ್ರಶಸ್ತಿ ಒಲಿಯುವುದು ಖಾತ್ರಿ’ ಎಂದು ಹಲವು ಅಭಿಮಾನಿಗಳು ಟ್ವೀಟ್‌ ಮಾಡಿದ್ದಾರೆ. ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ರೋಹಿತ್ ಬಳಗವೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಬಾಂಗ್ಲಾ ಎದುರು ಈ ಬಾರಿಯೂ ಜಯಿಸುವುದು ಖಚಿತ ಎಂಬ ಸಂದೇಶಗಳ ಮಹಾಪೂರ ಹರಿಯುತ್ತಿದೆ.

ಅದಕ್ಕೆ ತಕ್ಕಂತೆ ರೋಹಿತ್ ಕೂಡ ಕಠಿಣ ತಾಲೀಮು ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಫಿಟ್‌ನೆಸ್‌ ಬಗ್ಗೆ ಹೆಚ್ಚು ಗಮನ ನೀಡುತ್ತಿರುವ ಮುಂಬೈಕರ್ ಗುರುವಾರ ಗಂಟೆಗಟ್ಟಲೇ ಜಿಮ್‌ನಲ್ಲಿ ವ್ಯಾಯಾಮ ಮಾಡಿದ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಅದಕ್ಕೆ ಬಹಳಷ್ಟು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ವಿರಾಟ್ ಫಿಟ್‌ನೆಸ್‌ನೊಂದಿಗೆ ರೋಹಿತ್ ಅವರನ್ನು ಹೋಲಿಕೆ ಮಾಡಿದ್ದಾರೆ.

ಟೂರ್ನಿಯ ಅರಂಭಕ್ಕೂ ಮುನ್ನ ಇಂಗ್ಲೆಂಡ್‌ ಟೆಸ್ಟ್ ಸರಣಿಯಲ್ಲಿ ಭಾರತ ಸೋಲು ಅನುಭವಿಸಿತ್ತು. ಅದರ ನಂತರ ವಿರಾಟ್ ವಿಶ್ರಾಂತಿ ಪಡೆದಿದ್ದರು. ಈ ಟೂರ್ನಿಯಲ್ಲಿ ರೋಹಿತ್‌ಗೆ ನಾಯಕತ್ವ ವಹಿಸಲಾಗಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅದೃಷ್ನದ ನಾಯಕ ಎಂದೇ ಪ್ರಸಿದ್ಧರಾದವರು ರೋಹಿತ್. ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕಗಳ ಟ್ರಿಪಲ್ ಸಾಧಕರೂ ಹೌದು. ಅದರಿಂದಾಗಿ ಅವರ ಮೇಲೆ ಅಪಾರ ನಿರೀಕ್ಷೆ ಇತ್ತು. ಅದನ್ನು ಅವರು ಇದುವರೆಗೆ ಹುಸಿ ಮಾಡಿಲ್ಲ. ತಂಡವು ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿದೆ.

ಸೂಪರ್ ಫೋರ್ ವಿಭಾಗದಲ್ಲಿ ಅಫ್ಗನ್ ವಿರುದ್ಧದ ಪಂದ್ಯದಲ್ಲಿ ಅವರು ವಿಶ್ರಾಂತಿ ಪಡೆದಿದ್ದರು. ಮಹೇಂದ್ರ ಸಿಂಗ್ ದೋನಿ ‘ಹಂಗಾಮಿ’ ನಾಯಕರಾಗಿದ್ದರು. ಆ ಪಂದ್ಯವು ರೋಚಕ ಟೈ ಆಗಿತ್ತು. ರೋಹಿತ್ ಈ ಟೂರ್ನಿಯಲ್ಲಿ ಎರಡು ಅರ್ಧಶತಕ, ಒಂದು ಶತಕ ಹೊಡೆದಿದ್ದಾರೆ. ಅವರ ಖಾತೆಯಲ್ಲಿ ಒಟ್ಟು 269 ರನ್‌ಗಳಿವೆ. ಅವರೊಂದಿಗೆ ಇನಿಂಗ್ಸ್‌ ಆರಂಭಿಸುತ್ತಿರುವ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಎರಡು ಶತಕ ಬಾರಿಸಿದ್ದಾರೆ. ಒಟ್ಟು 327 ರನ್‌ ಗಳಿಸಿದ್ದಾರೆ. ಕೇದಾರ್ ಜಾಧವ್, ಮಹೇಂದ್ರಸಿಂಗ್ ಧೋನಿ, ದಿನೇಶ್ ಕಾರ್ತಿಕ್ ಅವರು ಮಧ್ಯಮ ಕ್ರಮಾಂಕದಲ್ಲಿ ಹೆಚ್ಚು ರನ್‌ ಗಳಿಸಿದರೆ ದೊಡ್ಡ ಮೊತ್ತ ಗಳಿಸುವುದು ಸವಾಲೇನಲ್ಲ. ಕೆಳಕ್ರಮಾಂಕದಲ್ಲಿ ರವೀಂದ್ರ ಜಡೇಜ ಉತ್ತಮ ಲಯದಲ್ಲಿದ್ದಾರೆ. ಆಫ್ಗನ್ ವಿರುದ್ಧ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದ್ದ ತಂಡವು ಬಾಂಗ್ಲಾ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

ವಿಶ್ವಾಸದ ಗಣಿ ಬಾಂಗ್ಲಾ: ಸೂಪರ್ ಫೋರ್ ಹಂತದಲ್ಲಿ ಎರಡು ಪಂದ್ಯಗಳನ್ನು ಗೆದ್ದಿರುವ ಬಾಂಗ್ಲಾದೇಶ ತಂಡವು ಭರ್ತಿ ಆತ್ಮವಿಶ್ವಾಸದಲ್ಲಿದೆ. ಹೋದ ವರ್ಷ ರನ್ನರ್ಸ್ ಅಪ್ ಆಗಿದ್ದ ಬಾಂಗ್ಲಾ ಈ ಬಾರಿ ಪ್ರಶಸ್ತಿ ಗೆಲುವಿನ ಕನಸು ಕಾಣುತ್ತಿದೆ.

ಮಷ್ರಫೆ ಮೊರ್ತಜಾ ನಾಯಕತ್ವದ ತಂಡವು ಬುಧವಾರ ರಾತ್ರಿ ಪಾಕಿಸ್ತಾನ ವಿರುದ್ಧ ದಿಟ್ಟ ಹೋರಾಟ ಮಾಡಿ ಗೆದ್ದಿತು. ಎಡಗೈ ಮಧ್ಯಮವೇಗಿ ಮುಸ್ತಫಿಜರ್ ರೆಹಮಾನ್ ನಾಲ್ಕು ವಿಕೆಟ್ ಪಡೆದು ಪಾಕ್ ತಂಡದ ಬ್ಯಾಟಿಂಗ್ ಬಲಕ್ಕೆ ಪೆಟ್ಟು ನೀಡಿದ್ದರು. ಅವರು ಭಾರತದ ಬ್ಯಾಟ್ಸ್‌ಮನ್‌ಗಳಿಗೂ ಸವಾಲೊಡ್ಡುವ ಸಮರ್ಥರು. ಬ್ಯಾಟಿಂಗ್‌ನಲ್ಲಿ ಮುಷ್ಫಿಕುರ್ ರೆಹಮಾನ್, ಮೊಹಮ್ಮದ್ ಮಿಥುನ್ ಮತ್ತು ಸೌಮ್ಯ ಸರ್ಕಾರ್ ಉತ್ತಮವಾಗಿ ಆಡುತ್ತಿದ್ದಾರೆ. ಭಾರತದ ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬೂಮ್ರಾ, ಸ್ಪಿನ್ನರ್‌ ಜಡೇಜ, ಕುಲದೀಪ್ ಯಾದವ್ ಅವರ ದಾಳಿಯನ್ನು ಬಾಂಗ್ಲಾ ಪಡೆ ಮೆಟ್ಟಿ ನಿಲ್ಲುವುದೇ ಎಂಬ ಕುತೂಹಲ ಈಗ ಮೂಡಿದೆ.

ತಂಡಗಳು ಇಂತಿವೆ
ಭಾರತ:
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ಮಹೇಂದ್ರಸಿಂಗ್ ಧೋನಿ (ವಿಕೆಟ್‌ಕೀಪರ್). ಕೇದಾರ್ ಜಾಧವ್, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬೂಮ್ರಾ, ಮನೀಷ್ ಪಾಂಡೆ, ಸಿದ್ಧಾರ್ಥ್ ಕೌಲ್, ಕೆ.ಎಲ್. ರಾಹುಲ್, ದೀಪಕ್ ಚಹಾರ್.

ಬಾಂಗ್ಲಾದೇಶ: ಮಷ್ರಫೆ ಮೊರ್ತಜಾ (ನಾಯಕ), ಶಕೀಬ್ ಅಲ್ ಹಸನ್, ತಮೀಮ್ ಇಕ್ಬಾಲ್, ಮೊಹಮ್ಮದ್ ಮಿಥುನ್, ಲಿಟನ್ ದಾಸ್, ಮುಷ್ಪೀಕುರ್ ರಹೀಂ, ಅರಿಫುಲ್ ಹಕ್, ಮೊಹಮ್ಮದುಲ್ಲಾ, ಮೊಸಾದೆಕ್ ಹೊಸೇನ್ ಸೈಕತ್, ನಜ್ಮುಲ್ ಹೊಸೇನ್ ಶಾಂತೊ, ಮೆಹದಿ ಹಸನ್ ಮಿರಾಜ್, ನಜ್ಮುಲ್ ಇಸ್ಲಾಮ್ ಅಪು, ರುಬೆಲ್ ಹೊಸೇನ್, ಮುಸ್ತಫೀಜರ್ ರೆಹಮಾನ್, ಅಬು ಹೈದರ್ ರೋನಿ

ಪಂದ್ಯ ಆರಂಭ: ಸಂಜೆ 5, ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT