ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಇಂದಿನಿಂದ: ಭಾರತ–ಪಾಕ್ ಮೂರು ಪಂದ್ಯಗಳಲ್ಲಿ ಹಣಾಹಣಿ?

Published 30 ಆಗಸ್ಟ್ 2023, 0:30 IST
Last Updated 30 ಆಗಸ್ಟ್ 2023, 0:30 IST
ಅಕ್ಷರ ಗಾತ್ರ

ಕೊಲಂಬೊ: ಬುಧವಾರದಿಂದ ಶುರುವಾಗಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಕ್ರಿಕೆಟ್‌ ಪ್ರಿಯರಿಗೆ ಭರ್ಜರಿ ರಸದೌತಣ ಲಭಿಸುವ ನಿರೀಕ್ಷೆ ಮೂಡಿದೆ.

ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಆಡಲಿವೆ. ಎರಡು ಗುಂಪುಗಳಲ್ಲಿ ಈ ತಂಡಗಳನ್ನು ವಿಂಗಡಿಸಲಾಗಿದೆ. ಭಾರತ ಹಾಗೂ ಪಾಕ್ ತಂಡಗಳು ಎ ಗುಂಪಿನಲ್ಲಿವೆ. ಇದೇ ಗುಂಪಿನಲ್ಲಿ ನೇಪಾಳ ಕೂಡ ಇದೆ. ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಅಫ್ಗಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳಿವೆ.  ಪ್ರತಿ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ  ಮೊದಲೆರಡು ಸ್ಥಾನ ಗಳಿಸುವ ತಂಡಗಳು ಸೂಪರ್‌ ಫೋರ್‌ ಸುತ್ತಿನಲ್ಲಿ ಮುಖಾಮುಖಿಯಾಗಲಿವೆ.

ಎ ಗುಂಪಿನ ಬಲಾಢ್ಯ ತಂಡಗಳಾದ ಭಾರತ ಮತ್ತು ಪಾಕ್ ಸೆ.2ರಂದು ಮುಖಾಮುಖಿಯಾಗಲಿವೆ. ಈ ಎರಡೂ ತಂಡಗಳ ಮುಂದೆ ನೇಪಾಳ ಜಯಿಸುವ ಸಾಧ್ಯತೆ ಕಡಿಮೆ. ಆದ್ದರಿಂದ ಇವೇ ಎರಡು ತಂಡಗಳು ಸೂಪರ್ ನಾಲ್ಕರ ಹಂತದಲ್ಲಿ ಹಣಾಹಣಿ ನಡೆಸುವುದು ಖಚಿತ. ನಂತರ ಫೈನಲ್ ಕೂಡ ಪ್ರವೇಶಿಸುವ ಸಾಧ್ಯತೆಯೂ ಇದೆ.

ಬುಧವಾರ ನಡೆಯುವ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನೇಪಾಳ ತಂಡವನ್ನು ಎದುರಿಸಲಿದೆ.

ವಿಶ್ವಕಪ್ ಟೂರ್ನಿಗೆ ಪೂರ್ವಾಭ್ಯಾಸ

ಅಕ್ಟೋಬರ್ –ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಗೂ ಏಷ್ಯಾ ಕಪ್  ಪೂರ್ವಾಭ್ಯಾಸದ ವೇದಿಕೆಯಾಗಿದೆ. ಈ ಟೂರ್ನಿಯಲ್ಲಿ ಆಡುತ್ತಿರುವ ಆರು ತಂಡಗಳ ಪೈಕಿ ನೇಪಾಳ ಮಾತ್ರ ವಿಶ್ವಕಪ್‌ಗೆ ಅರ್ಹತೆ ಗಳಿಸಿಲ್ಲ. ಉಳಿದ ಐದು ತಂಡಗಳಿಗೆ ಮಹತ್ವದ್ದಾಗಿದೆ.

ಭಾರತ ತಂಡವು ಏಷ್ಯಾಕಪ್‌ ನಂತರ ವಿಶ್ವಕಪ್‌ನಲ್ಲಿ ಆಡುವ ತಂಡವನ್ನು ಖಚಿತಗೊಳಿಸುವ ಸಾಧ್ಯತೆ ಇದೆ. ಗಾಯಕ್ಕೆ ಚಿಕಿತ್ಸೆ ಪಡೆದು ಸುದೀರ್ಘ ಸಮಯದ ನಂತರ ತಂಡಕ್ಕೆ ಮರಳಿರುವ ಕೆಲವು ಆಟಗಾರರಿಗೆ ಇದು ಪರೀಕ್ಷೆಯ ಟೂರ್ನಿಯಾಗಿದೆ.  ಅವರ ಮೇಲೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ದೃಷ್ಟಿ ನೆಟ್ಟಿದ್ದಾರೆ.

ಶ್ರೇಯಸ್ ಅಯ್ಯರ್  ಈ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಕಣಕ್ಕಿಳಿಯುವ ಸಾಧ್ಯತೆಯೂ ಇದೆ. ವೇಗಿಗಳಾದ ಜಸ್‌ಪ್ರೀತ್ ಬೂಮ್ರಾ ಮತ್ತು ಪ್ರಸಿದ್ಧ ಕೃಷ್ಣ ಅವರ ಮೇಲೆ ಅಪಾರನಿರೀಕ್ಷೆ ಮೂಡಿದೆ. ಇಬ್ಬರೂ ದೀರ್ಘ ಸಮಯ ವಿಶ್ರಾಂತಿಯ ನಂತರ  ಇತ್ತೀಚೆಗೆ ಐರ್ಲೆಂಡ್‌ನಲ್ಲಿ ಟಿ20 ಸರಣಿಯಲ್ಲಿ ಆಡಿ ಬಂದಿದ್ದಾರೆ.

ಹೋದ ವರ್ಷ ಟಿ20 ಏಷ್ಯಾ ಕಪ್ ಟೂರ್ನಿ ನಡೆದಾಗ ಶ್ರೀಲಂಕಾ ಚಾಂಪಿಯನ್ ಪಾಕಿಸ್ತಾನ ರನ್ನರ್ಸ್ ಅಪ್ ಆಗಿದ್ದವು. ಭಾರತ ತಂಡವು ಫೈನಲ್ ತಲುಪಿರಲಿಲ್ಲ. 2018ರಲ್ಲಿ ಏಕದಿನ ಏಷ್ಯಾ ಕಪ್‌ನಲ್ಲಿ ಭಾರತ ಚಾಂಪಿಯನ್ ಆಗಿತ್ತು.

ವರ್ಷದಿಂದ ವರ್ಷಕ್ಕೆ ಉತ್ತಮ ಸಾಧನೆ ಮಾಡುತ್ತಿರುವ ಅಫ್ಗಾನಿಸ್ತಾನ ಮತ್ತು ಬಾಂಗ್ಲಾ ತಂಡಗಳು ತಮ್ಮ ಎದುರಾಳಿಗಳಿಗೆ ಕಠಿಣ ಪೈಪೋಟಿಯೊಡ್ಡುವ ಛಲದಲ್ಲಿವೆ.

ಪಂದ್ಯ  ಆರಂಭ: ಮಧ್ಯಾಹ್ನ 3

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ ಹಾಟ್‌ಸ್ಟಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT