ಮಂಗಳವಾರ, ಅಕ್ಟೋಬರ್ 4, 2022
26 °C
ಎಂಟು ದಿನದಲ್ಲಿ ಎರಡು ಬಾರಿ ಭಾರತ–ಪಾಕಿಸ್ತಾನ ಮುಖಾಮುಖಿ

ಏಷ್ಯಾ ಕಪ್ ಟಿ20 ಕ್ರಿಕೆಟ್: ಜಯದ ಓಟ ಮುಂದುವರಿಸುವತ್ತ ರೋಹಿತ್ ಪಡೆ ಚಿತ್ತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಹೋದ ಭಾನುವಾರವಷ್ಟೇ ಮುಖಾಮುಖಿಯಾಗಿದ್ದ ಏಷ್ಯಾ ಖಂಡದ ಬದ್ಧ ಪ್ರತಿಸ್ಪರ್ಧಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೆ ಹಣಾಹಣಿ ನಡೆಸಲು ಸಿದ್ಧವಾಗಿವೆ. 

ಭಾನುವಾರ ನಡೆಯಲಿರುವ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದಲ್ಲಿ ರೋಹಿತ್ ಶರ್ಮಾ ಹಾಗೂ ಬಾಬರ್  ಆಜಂ ಬಳಗಗಳು ತೊಡೆ ತಟ್ಟಲಿವೆ.

ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆದಿರುವ ಭಾರತ ಹಾಗೂ ಎರಡನೇ ಸ್ಥಾನದಲ್ಲಿರುವ ಪಾಕ್ ಸೆಣಸಲಿವೆ. ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಆಲ್‌ರೌಂಡ್ ಆಟದ ಬಲದಿಂದ ಭಾರತವು ಕೊನೆಯ ಓವರ್‌ನಲ್ಲಿ ಪಾಕ್ ವಿರುದ್ಧ ರೋಚಕ ಜಯ ಗಳಿಸಿತ್ತು. ಆ ಪಂದ್ಯದಲ್ಲಿ ಮಿಂಚಿದ್ದ ರವೀಂದ್ರ ಜಡೇಜ ಗಾಯಗೊಂಡಿದ್ದು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಅವರ ಬದಲಿಗೆ ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದಾರೆ. 

ಆದರೆ ಕಳೆದೆರಡೂ ಪಂದ್ಯಗಳಲ್ಲಿ ಆರಂಭಿಕ ಬ್ಯಾಟರ್‌ಗಳು ಆತ್ಮವಿಶ್ವಾಸದಿಂದ ಆಡಿಲ್ಲ. ನಾಯಕ ರೋಹಿತ್ ಶರ್ಮಾ ಹೆಚ್ಚು ರನ್ ಗಳಿಸಿಲ್ಲ. ಕೆ.ಎಲ್. ರಾಹುಲ್ ಪಾಕ್ ಎದುರು ವೈಫಲ್ಯ ಅನುಭವಿಸಿದ್ದರು. ಹಾಂಗ್‌ಕಾಂಗ್ ವಿರುದ್ಧದ ಪಂದ್ಯದಲ್ಲಿ ವೇಗವಾಗಿ ಆಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಆ ಪಂದ್ಯದಲ್ಲಿ ಮಿಂಚಿದ್ದರು.  ಆದರೆ ಈಗ ಪಾಕ್ ತಂಡದ ಬೌಲಿಂಗ್ ದಾಳಿಯ ಎದುರು ಗಟ್ಟಿಯಾಗಿ ನಿಲ್ಲಬೇಕಾದ ಸವಾಲು ಈ ಅಗ್ರಕ್ರಮಾಂಕದ ನಾಲ್ವರೂ ಬ್ಯಾಟರ್‌ಗಳಿಗೆ ಇದೆ. 

ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್, ದಿನೇಶ್ ಕಾರ್ತಿಕ್ ಮತ್ತು ಅಕ್ಷರ್ ಇರುವುದರಿಂದ ಕೊನೆಯ ಹಂತದ ಓವರ್‌ಗಳಲ್ಲಿ ರನ್‌ಗಳು ವೇಗವಾಗಿ ಹರಿದು ಬರುವ ನಿರೀಕ್ಷೆ ಇದೆ. 

ಬೌಲಿಂಗ್ ವಿಭಾಗವು ಭುವನೇಶ್ವರ್ ಅನುಭವ ಹಾಗೂ ಹಾರ್ದಿಕ್ ಸಾಮರ್ಥ್ಯದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಪಾಕ್ ತಂಡದ ಆರಂಭಿಕ ಮೊಹಮ್ಮದ್ ರಿಜ್ವಾನ್, ಫಕರ್ ಜಮಾನ್, ಖುಷ್ದಿಲ್ ಹಾಗೂ ಬಾಬರ್ ಆಜಂ ಅವರನ್ನು ಕಟ್ಟಿಹಾಕುವ ಪ್ರಮುಖ ಸವಾಲು ಭಾರತದ ಮುಂದಿದೆ. 

19 ವರ್ಷದ ವೇಗಿ ನಸೀಮ್ ಶಾ ಹೋದ ಪಂದ್ಯದಲ್ಲಿ ಭಾರತ ಆರಂಭಿಕ  ಆಘಾತ ನೀಡಿದ್ದರು. ನಂತರ ಗಾಯಗೊಂಡಿದ್ದ ಅವರು ಚೇತರಿಸಿಕೊಂಡಿದ್ದು ಹಾಂಗ್‌ಕಾಂಗ್ ಎದುರಿನ ಪಂದ್ಯದಲ್ಲಿಯೂ ಎರಡು ವಿಕೆಟ್ ಗಳಿಸಿದ್ದರು. ಶಾದಾಬ್ ಖಾನ್, ಮೊಹಮ್ಮದ್ ನವಾಜ್ ಕೂಡ ಉತ್ತಮ ಲಯದಲ್ಲಿದ್ದಾರೆ. ಅವರನ್ನು ಎದುರಿಸಿ ನಿಲ್ಲುವ ಸವಾಲು ರೋಹಿತ್ ಬಳಗದ ಮುಂದಿದೆ. 

ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್,  ಆರ್ಷದೀಪ್ ಸಿಂಗ್, ರವಿ ಬಿಷ್ಣೋಯಿ, ಆವೇಶ್ ಖಾನ್, ದೀಪಕ್ ಹೂಡಾ, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್. 

ಪಾಕಿಸ್ತಾನ: ಬಾಬರ್ ಆಜಂ (ನಾಯಕ), ಮೊಹಮ್ಮದ್ ರಿಜ್ವಾನ್, ಫಕರ್ ಜಮಾನ್, ಇಫ್ತಿಕಾರ್ ಅಹಮದ್, ಖುಷ್ದಿಲ್ ಶಾಹ, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹ್ಯಾರಿಸ್ ರವೂಫ್, ನಸೀಂ ಶಾ, ಶಾನವಾಜ್ ದಹನಿ,  ಉಸ್ಮಾನ್ ಖಾದೀರ್, ಹಸನ್ ಅಲಿ, ಮೊಹಮ್ಮದ್ ಹಸನೈನ್, ಹೈದರ್ ಅಲಿ. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಆ್ಯಪ್

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು