ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಷಸ್ ಟೆಸ್ಟ್‌ ಸರಣಿ: ಮತ್ತೆ ಪಾರಮ್ಯ ಮೆರೆದ ಆಸ್ಟ್ರೇಲಿಯಾ

ಕೊನೆಯ ಪಂದ್ಯದಲ್ಲೂ ಇಂಗ್ಲೆಂಡ್‌ಗೆ ಬ್ಯಾಟಿಂಗ್ ವೈಫಲ್ಯ
Last Updated 16 ಜನವರಿ 2022, 15:53 IST
ಅಕ್ಷರ ಗಾತ್ರ

ಹೋಬರ್ಟ್‌, ಆಸ್ಟ್ರೇಲಿಯಾ: ಮೂರೇ ದಿನಗಳಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ ಆ್ಯಷಸ್‌ ಟೆಸ್ಟ್‌ ಸರಣಿಯನ್ನು 4–0ಯಿಂದ ತನ್ನದಾಗಿಸಿಕೊಂಡಿತು. ಭಾನುವಾರ ಮುಕ್ತಾಯಗೊಂಡ ಐದನೇ ಮತ್ತು ಕೊನೆಯ ಪಂದ್ಯದಲ್ಲಿ ಆತಿಥೇಯರು 146 ರನ್‌ಗಳ ಗೆಲುವು ದಾಖಲಿಸಿದರು.

271 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಆರಂಭಿಕ ಬ್ಯಾಟರ್‌ಗಳಾದ ರೋರಿ ಬರ್ನ್ಸ್‌ ಮತ್ತು ಜ್ಯಾಕ್ ಕ್ರಾವ್ಲಿ ಅವರನ್ನು ಹೊರತುಪಡಿಸಿದರೆ ಉಳಿದ ಯಾರಿಗೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಆಗಲಿಲ್ಲ. ಹೀಗಾಗಿ ತಂಡ 124 ರನ್‌ಗಳಿಗೆ ಪತನ ಕಂಡಿತು.ಬರ್ನ್ಸ್‌ ಮತ್ತು ಕ್ರಾವ್ಲಿ ಮೊದಲ ವಿಕೆಟ್‌ಗೆ 68 ರನ್ ಸೇರಿಸಿ ನಿರೀಕ್ಷೆ ಮೂಡಿಸಿದ್ದರು. ಡೇವಿಡ್ ಮಲಾನ್, ಜೋ ರೂಟ್ ಮತ್ತು ಮಾರ್ಕ್ ವುಡ್ ಅವರನ್ನು ಬಿಟ್ಟರೆ ಉಳಿದ ಯಾರಿಗೂ ಎರಡಂಕಿ ಮೊತ್ತವನ್ನೂ ಗಳಿಸಲಿಲ್ಲ.

ಆ್ಯಷಸ್ ಸರಣಿಯಲ್ಲಿ ಮೊದಲ ಬಾರಿ ಆಡಿದ ಸ್ಕಾಟ್ ಬೊಲ್ಯಾಂಡ್ ಮತ್ತು ಕ್ಯಾಮರಾನ್ ಗ್ರೀನ್ ಒಟ್ಟು ಆರು ವಿಕೆಟ್ ಗಳಿಸಿ ಇಂಗ್ಲೆಂಡ್ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾದರು. ಸತತ ಎರಡನೇ ದಿನವೂ 17 ವಿಕೆಟ್‌ ಉರುಳಿದ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಕೂಡ ಮೂರು ವಿಕೆಟ್ ಗಳಿಸಿ ಮಿಂಚಿದರು.

ಹಗಲು ರಾತ್ರಿ ಟೆಸ್ಟ್‌ನ ಎರಡನೇ ದಿನ ಮೂರು ವಿಕೆಟ್‌ಗಳಿಗೆ 37 ರನ್ ಗಳಿಸಿದ್ದ ಆಸ್ಟ್ರೇಲಿಯಾ ಭಾನುವಾರ ಭೋಜನ ವಿರಾಮದ ಸ್ವಲ್ಪ ಹೊತ್ತಿನಲ್ಲಿ 155 ರನ್‌ಗಳಿಗೆ ಆಲೌಟಾಯಿತು. ಶಾರ್ಟ್‌ ಬಾಲ್‌ ಎಸೆತಗಳ ಮೂಲಕ ಕಾಡಿದ ಮಾರ್ಕ್ ವುಡ್ ಆರು ವಿಕೆಟ್ ಉರುಳಿಸಿದರು. ಅಲೆಕ್ಸ್ ಕ್ಯಾರಿ ಏಕಾಂಗಿ ಹೋರಾಟ ನಡೆಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ: 303; ಇಂಗ್ಲೆಂಡ್‌: 188; ಎರಡನೇ ಇನಿಂಗ್ಸ್‌: ಆಸ್ಟ್ರೇಲಿಯಾ: 56.3 ಓವರ್‌ಗಳಲ್ಲಿ 155 (ಸ್ಟೀವನ್‌ ಸ್ಮಿತ್ 27, ಕ್ಯಾಮರಾನ್ ಗ್ರೀನ್ 23, ಅಲೆಕ್ಸ್ ಕ್ಯಾರಿ 49, ಪ್ಯಾಟ್ ಕಮಿನ್ಸ್ 13; ಸ್ಟುವರ್ಟ್‌ ಬ್ರಾಡ್51ಕ್ಕೆ3, ಕ್ರಿಸ್‌ ವೋಕ್ಸ್‌40ಕ್ಕೆ1, ಮಾರ್ಕ್‌ ವುಡ್‌37ಕ್ಕೆ6); ಇಂಗ್ಲೆಂಡ್‌: 38.5 ಓವರ್‌ಗಳಲ್ಲಿ 124 (ರೋರಿ ಬರ್ನ್ಸ್‌ 26, ಜ್ಯಾಕ್ ಕ್ರಾವ್ಲಿ 36, ಡೇವಿಡ್ ಮಲಾನ್ 10, ಜೋ ರೂಟ್ 11, ಮಾರ್ಕ್‌ ವುಡ್‌ 11; ಮಿಚೆಲ್ ಸ್ಟಾರ್ಕ್‌ 30ಕ್ಕೆ1, ಪ್ಯಾಟ್ ಕಮಿನ್ಸ್ 42ಕ್ಕೆ3, ಸ್ಕಾಟ್ ಬೊಲ್ಯಾಂಡ್ 18ಕ್ಕೆ3, ಕ್ಯಾಮರಾನ್ ಗ್ರೀನ್ 21ಕ್ಕೆ3). ಫಲಿತಾಂಶ: ಆಸ್ಟ್ರೇಲಿಯಾಗೆ 146 ರನ್‌ಗಳ ಜಯ; 5 ಪಂದ್ಯಗಳ ಸರಣಿಯಲ್ಲಿ 4–0ಯಿಂದ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT