ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ–20 ಕ್ರಿಕೆಟ್‌ ಸರಣಿ: ಆಸ್ಟ್ರೇಲಿಯಕ್ಕೆ ಜಯ ತಂದಿತ್ತ ಸ್ಮಿತ್‌

Last Updated 5 ನವೆಂಬರ್ 2019, 20:16 IST
ಅಕ್ಷರ ಗಾತ್ರ

ಕೆನ್‌ಬೆರಾ: ಸ್ಥಿರ ಪ್ರದರ್ಶನ ನೀಡುತ್ತಿರುವ ಸ್ಟೀವ್‌ ಸ್ಮಿತ್ ಅವರ ಕಳಂಕರಹಿತ ಅಜೇಯ 80 ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ ತಂಡ ಟ್ವೆಂಟಿ–20 ಸರಣಿಯ ಎರಡನೇ ಪಂದ್ಯದಲ್ಲಿ ಮಂಗಳವಾರ ಪಾಕಿಸ್ತಾನ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು.

ಸರಣಿಯಲ್ಲಿ ಆತಿಥೇಯರು 1–0 ಮುನ್ನಡೆ ಪಡೆದರು. ಮೊದಲ ಪಂದ್ಯ ಮಳೆಯಿಂದ ಸ್ಥಗಿತಗೊಂಡಿತ್ತು. ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಪರ್ತ್‌ನಲ್ಲಿ ಶುಕ್ರವಾರ (ನ. 8) ನಡೆಯಲಿದೆ.

ಆಸ್ಟ್ರೇಲಿಯಾ ಟ್ವೆಂಟಿ–20 ಸರಣಿಯಲ್ಲಿ ಸತತ ಏಳು ಪಂದ್ಯಗಳಲ್ಲಿ ಸೋಲರಿಯದ ಸಾಧನೆಗೆ ಪಾತ್ರವಾಗಿದೆ.

ಪಾಕಿಸ್ತಾನ 20 ಓವರುಗಳಲ್ಲಿ 6 ವಿಕೆಟ್‌ಗೆ 150 ರನ್‌ ಗಳಿಸಿತು. ಟಿ–20 ಬ್ಯಾಟಿಂಗ್‌ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನಾಯಕ ಬಾಬರ್‌ ಆಜಂ ರನೌಟ್ ಆಗುವ ಮೊದಲು 38 ಎಸೆತಗಳಲ್ಲಿ 50 ರನ್‌ ಹೊಡೆದರು. ಇದು ಅವರ ಸತತ ಎರಡನೇ ಅರ್ಧ ಶತಕ. ಬಿರುಸಿನ ಆಟವಾಡಿದ ಇಫ್ತಿಕರ್‌ ಅಹ್ಮದ್‌ ಅಜೇಯ 62 ರನ್‌ (34 ಎಸೆತ) ಚಚ್ಚಿ ಮೊದಲ ಅರ್ಧ ಶತಕ ಬಾರಿಸಿದರು.

ಪ್ರವಾಸಿ ತಂಡದ ಬೌಲಿಂಗ್ ದಾಳಿ ಯನ್ನು ಸ್ಮಿತ್‌ ದಂಡಿಸಿ 51 ಎಸೆತಗಳಲ್ಲಿ ಒಂದು ಸಿಕ್ಸರ್‌, 11 ಬೌಂಡರಿಗಳಿದ್ದ 80 ರನ್‌ ಹೊಡೆದರು. ಆಸ್ಟ್ರೇಲಿಯಾ 9 ಎಸೆತಗಳು ಉಳಿದಿರುವಂತೆ 3 ವಿಕೆಟ್‌ಗೆ 151 ರನ್‌ ಗಳಿಸಿತು.

‘ಎಲ್ಲ ಶ್ರೇಯಸ್ಸು ಸ್ಮಿತ್‌ಗೆ ಸಲ್ಲಬೇಕು. ಅವರು ಸೊಗಸಾದ ಇನಿಂಗ್ಸ್‌ ಆಡಿ ಪಂದ್ಯವನ್ನು ನಮ್ಮಿಂದ ಕಸಿದುಕೊಂಡರು. ನಮಗೆ ನಿರಾಶೆಯಾಗಿದೆ. ಪವರ್‌ಪ್ಲೇ ಅವಧಿಯಲ್ಲಿ ನಾವು ಸರಿಯಾಗಿ ಆಡಲಿಲ್ಲ’ ಎಂದು ಆಜಂ ಹೇಳಿದರು.

ಈ ಹಿಂದಿನ ನಾಲ್ಕು ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿದ್ದ ಡೇವಿಡ್‌ ವಾರ್ನರ್‌ (20), ವೇಗಿ ಇಮದ್‌ ವಾಸಿಮ್‌ ಮೊದಲ ಓವರ್‌ನಲ್ಲಿ 16 ರನ್‌ ಚಚ್ಚಿದರು. ಆದರೆ ಮೊಹಮ್ಮದ್‌ ಆಮೀರ್‌ ಅವರ ಮುಂದಿನ ಓವರ್‌ನಲ್ಲಿ ಡ್ರೈವ್ ಮಾಡಲು ಹೋಗಿ ಬೌಲ್ಡ್‌ ಆದರು. ಆ್ಯರನ್‌ ಫಿಂಚ್‌ (17) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ನಂತರ ಸ್ಮಿತ್‌ಗೆ ಬೆನ್‌ ಮೆಕ್‌ಡರ್ಮಾಟ್‌ (21) ಬೆಂಬಲ ನೀಡಿದರು.

ಸ್ಕೋರುಗಳು
ಪಾಕಿಸ್ತಾನ:
20 ಓವರುಗಳಲ್ಲಿ 6 ವಿಕೆಟ್‌ಗೆ 150 (ಬಾಬರ್ ಆಜಂ 50, ಇಫ್ತಿಕಾರ್‌ ಅಹ್ಮದ್‌ ಔಟಾಗದೇ 62; ಆಷ್ಟನ್‌ ಆಗರ್‌ 23ಕ್ಕೆ2)
ಆಸ್ಟ್ರೇಲಿಯಾ: 18.3 ಓವರುಗಳಲ್ಲಿ 3 ವಿಕೆಟ್‌ಗೆ 151 (ಸ್ಟೀವ್‌ ಸ್ಮಿತ್‌ ಔಟಾಗದೇ 80).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT