ಸೋಮವಾರ, ನವೆಂಬರ್ 30, 2020
24 °C
ಪಂದ್ಯದಲ್ಲಿ 11 ವಿಕೆಟ್‌ ಪಡೆದ ಅಫ್ಗಾನಿಸ್ತಾನ ನಾಯಕ

ಟೆಸ್ಟ್ ಕ್ರಿಕೆಟ್‌: ಅಫ್ಗಾನ್‌ಗೆ ಜಯ, ನಬಿಗೆ ಉಡುಗೊರೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಚಿತ್ತಗಾಂಗ್: ರಶೀದ್‌ ಖಾನ್‌ ಎರಡನೇ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿ ಅಫ್ಗಾನಿಸ್ತಾನ ತಂಡ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಸೋಮವಾರ ಬಾಂಗ್ಲಾದೇಶ ವಿರುದ್ಧ 224 ರನ್‌ಗಳ ಭಾರಿ ಜಯ ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದರು. 

ಕೊನೆಯ ದಿನ ಪ್ರತಿಕೂಲ ಹವಾಮಾನದ ನಡುವೆ ಅಲ್ಪಸ್ವಲ್ಪ ಅವಧಿಯಲ್ಲೇ ಅಫ್ಗಾನಿಸ್ತಾನ ಗೆಲುವನ್ನು ಸವಿಯುವಲ್ಲಿ ಯಶಸ್ವಿಯಾಯಿತು. ಆತಿಥೇಯ ಬಾಂಗ್ಲಾದೇಶ ತಂಡ ಎರಡನೇ ಇನಿಂಗ್ಸ್‌ನಲ್ಲಿ 173 ರನ್‌ಗಳಿಗೆ ಆಲೌಟ್‌ ಆಯಿತು.

ಅತಿ ಕಿರಿಯ ನಾಯಕ ಎನಿಸಿದ, 20 ವರ್ಷದ ರಶೀದ್‌ ಎರಡನೇ ಇನಿಂಗ್ಸ್‌ನಲ್ಲಿ 49 ರನ್ನಿಗೆ 6 ವಿಕೆಟ್‌ ಪಡೆದರು. ಒಟ್ಟಾರೆ ಪಂದ್ಯದಲ್ಲಿ 11 ವಿಕೆಟ್‌ಗಳ ಗೊಂಚಲಿನೊಡನೆ ಸಂಭ್ರಮಿಸಿದರು. ಅಫ್ಗಾನಿಸ್ತಾನ ತಂಡದ ಮೊದಲ ಇನಿಂಗ್ಸ್‌ನಲ್ಲಿ ಉಪಯುಕ್ತ 51 ರನ್‌ ಹೊಡೆದಿದ್ದ ಅವರಿಗೆ ಅರ್ಹವಾಗಿ ‘ಪಂದ್ಯದ ಆಟಗಾರ’ ಗೌರವ ಒಲಿಯಿತು. ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಮೊಹಮ್ಮದ್‌ ನಬಿ ಅವರಿಗೆ ಈ ಪುರಸ್ಕಾರವನ್ನು ಸಮರ್ಪಿಸುವುದಾಗಿ ರಷೀದ್‌ ಹೇಳಿದರು.

ಕೇವಲ ಮೂರನೇ ಟೆಸ್ಟ್‌ ಆಡುತ್ತಿರುವ ಈ ಗಲಭೆಪೀಡಿತ ರಾಷ್ಟ್ರ ಎರಡನೇ ಗೆಲುವನ್ನು ಪಡೆದಂತಾಯಿತು. ಎರಡು ವರ್ಷಗಳ ಹಿಂದೆಯಷ್ಟೇ ಈ ತಂಡ ‘ಟೆಸ್ಟ್‌ ಮಾನ್ಯತೆ’ ಪಡೆದಿತ್ತು.

‘ತಂಡದ ತರಬೇತು ಸಿಬ್ಬಂದಿಗೆ ಮತ್ತು ಆಟಗಾರರಿಗೆ ಈ ಗೆಲುವಿನ ಶ್ರೇಯ ಸಲ್ಲಬೇಕು. ಈ ಪಂದ್ಯಕ್ಕೆ ನಾವು ಉತ್ತಮ ರೀತಿ ಸಿದ್ಧತೆ ನಡೆಸಿದ್ದೆವು. ಖುಷಿಪಟ್ಟು ಬೌಲಿಂಗ್‌ ಮಾಡಿ, ಖುಷಿಪಟ್ಟು ಬ್ಯಾಟ್‌ ಮಾಡಿ ಎಂದಷ್ಟೇ ನಾನು ಆಟಗಾರರಿಗೆ ಹೇಳಿದ್ದೆ. ಸಾಂಘಿಕ ಯತ್ನದಿಂದ ಗೆಲುವು ಸಾಧ್ಯವಾಯಿತು’ ಎಂದು ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಅವರು ಹೇಳಿದರು.

ಬಾಂಗ್ಲಾದೇಶವನ್ನು  ನಾಲ್ಕನೇ ದಿನದಾಟದ ಕೊನೆಗೆ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 136 ರನ್ನಿಗೆ ನಿಯಂತ್ರಿಸಿದ್ದ ಪ್ರವಾಸಿ ತಂಡಕ್ಕೆ ಕೊನೆಯ ದಿನ ಪ್ರತಿಕೂಲ ಹವಾಮಾನ ಕಾಡುವ ಭಯವಿತ್ತು. ಭಾರಿ ಮಳೆಯ ನಂತರ ಅಂತಿಮ ಅವಧಿಯಲ್ಲಿ 18.3 ಓವರುಗಳ ಆಟದ ಅವಧಿ ಮಾತ್ರ ಅಫ್ಗಾನಿಸ್ತಾನಕ್ಕೆ ದೊರೆಯಿತು. ಉಳಿದ  ನಾಲ್ಕು ವಿಕೆಟ್‌ಗಳಲ್ಲಿ ರಶೀದ್‌ ಮೂರನ್ನು ಕೇವಲ 3.2 ಓವರುಗಳಲ್ಲಿ ಪಡೆದರು.

ಸುಮಾರು 19 ವರ್ಷಗಳ ಹಿಂದೆ ಟೆಸ್ಟ್ ಮಾನ್ಯತೆ ಪಡೆದಿದ್ದ ಬಾಂಗ್ಲಾಕ್ಕೆ ಇದು ನಿರಾಶಾಯಕ ಫಲಿತಾಂಶ ಎನಿಸಿತು. ‘ನಮ್ಮ ಬ್ಯಾಟ್ಸ್‌ಮನ್‌ಗಳು ಮನಸ್ಸಿಟ್ಟು ಆಡಲಿಲ್ಲ. ಅಫ್ಗಾನಿಸ್ತಾನ ಬೌಲರ್‌ಗಳು ಉತ್ತಮ ಬೌಲಿಂಗ್‌ ಪ್ರದರ್ಶಿಸಿದರು’ ಎಂದು ನಾಯಕ ಶಕಿಬ್‌ ಅಲ್‌ ಹಸನ್‌ ಪ್ರತಿಕ್ರಿಯಿಸಿದರು.

ತೈಜುಲ್‌ ಇಸ್ಲಾಂ ಅವರ ವಿಕೆಟ್‌ ಪಡೆದೊಡನೆ ರಶೀದ್‌ ನಾಯಕನಾಗಿ ಚೊಚ್ಚಲು ಪಂದ್ಯದಲ್ಲಿ 10 ವಿಕೆಟ್‌ ಪಡೆದ ಮತ್ತು ಅರ್ಧ ಶತಕ ಹೊಡೆದ ಮೊದಲ ಆಟಗಾರ ಎನಿಸಿದರು. ನಾಯಕನಾಗಿ ‘ಡಬಲ್‌ ಸಾಧನೆ’ ಮಾಡಿದ ಮೂರನೇ ಆಟಗಾರನೆಂಬ ಗೌರವಕ್ಕೆ ಪಾತ್ರರಾದರು. ಇಮ್ರಾನ್‌ ಖಾನ್‌ ಮತ್ತು ಆಲನ್‌ ಬಾರ್ಡರ್‌ ಮೊದಲ ಇಬ್ಬರು.

ಸ್ಕೋರುಗಳು: ಅಫ್ಗಾನಿಸ್ತಾನ: 342 ಮತ್ತು 260; ಬಾಂಗ್ಲಾದೇಶ: 205 ಮತ್ತು 61.4 ಓವರುಗಳಲ್ಲಿ 173 (ಶಕೀಬ್‌ ಉಲ್‌ ಹಸನ್‌ 44, ಶಾದ್ಮನ್‌ 41; ರಶೀದ್‌ 49ಕ್ಕೆ6, ಜಹೀರ್‌ ಖಾನ್‌ 59ಕ್ಕೆ3).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು