ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿ ಯುವಿ ಸಾಧನೆ ನೆನಪಿಸಿದ ಲಿಯೊ

Last Updated 7 ಜನವರಿ 2020, 5:51 IST
ಅಕ್ಷರ ಗಾತ್ರ

ಕ್ರೈಸ್ಟ್‌ ಚರ್ಚ್: ನ್ಯೂಜಿಲೆಂಡ್‌ನ ಸೂಪರ್‌ ಸ್ಮ್ಯಾಷ್‌ ಟಿ20 ಲೀಗ್‌ನಲ್ಲಿ ಓವರ್‌ನ ಎಲ್ಲ ಎಸೆತಗಳನ್ನೂ ಸಿಕ್ಸರ್‌ಗೆ ಅಟ್ಟಿದ ಲಿಯೊ ಕಾರ್ಟರ್‌ ಸಿಕ್ಸರ್‌ ಸಿಂಗ್‌ ಯುವರಾಜ್‌ ಸಿಂಗ್‌ ನೆನಪು ತರಿಸಿದರು.

ಕ್ಯಾಂಟರ್‌ಬರಿ ಕಿಂಗ್ಸ್‌–ನಾರ್ತರ್ನ್‌ ನೈಟ್ಸ್‌ ಪಂದ್ಯದಲ್ಲಿ ಈ ಸಾಧನೆ ಮೂಡಿಬಂದಿತು.ನೈಟ್ಸ್‌ ತಂಡದ ಸ್ಪಿನ್ನರ್‌ ಆ್ಯಂಟೊನ್‌ ಡೇವ್‌ಸಿಚ್‌ ಎಸೆದ16ನೇ ಓವರ್‌ನಲ್ಲಿ ಕಿಂಗ್ಸ್‌ ತಂಡದ ಲಿಯೊ 6 ಸಿಕ್ಸರ್‌ ಬಾರಿಸಿದರು. ಆ ಮೂಲಕ ಟ್ವೆಂಟಿ–20 ಮಾದರಿಯಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಬ್ಯಾಟ್ಸ್‌ಮನ್‌ ಅವರಾದರು. ಜೊತೆಗೆ ಒಟ್ಟಾರೆ ಏಳನೇ ಬ್ಯಾಟ್ಸ್‌ಮನ್‌ ಎಂಬ ಶ್ರೇಯವೂ ಅವರದ್ದಾಯಿತು.

ಲಿಯೊ ಕಾರ್ಟರ್‌

ಇಲ್ಲಿನ ಹೇಗ್ಲೆ ಓವಲ್‌ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ನೈಟ್ಸ್‌ ನಿಗದಿತ 20 ಓವರ್‌ಗಳಲ್ಲಿ 220 ರನ್‌ ಕಲೆ ಹಾಕಿತ್ತು. ಈ ಮೊತ್ತ ಬೆನ್ನತ್ತಿದ ಕಿಂಗ್ಸ್‌ 10.2 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 104 ರನ್‌ ಗಳಿಸಿದ್ದಾಗ ಕ್ರೀಸ್‌ಗೆ ಬಂದ ಲಿಯೊ ರನ್‌ ಗತಿ ಹೆಚ್ಚಿಸಿದರು. ಕೇವಲ 29 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ 3 ಬೌಂಡರಿ ಬಾರಿಸಿ 70 ರನ್‌ ದೋಚಿದರು.

ಅವರ ಬಿರುಸಿನ ಬ್ಯಾಟಿಂಗ್‌ ಬಲದಿಂದ ಇನ್ನೂ ಏಳು ಎಸೆತಗಳು ಬಾಕಿ ಇರುವಂತೆಯೇ ಕಿಂಗ್ಸ್‌ 222 ರನ್ ಗಳಿಸಿ 7 ವಿಕೆಟ್‌ ಅಂತರದ ಜಯ ಸಾಧಿಸಿತು.

2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಯುವರಾಜ್‌ ಆರು ಬಾಲ್‌ಗಳಲ್ಲಿ ಆರು ಸಿಕ್ಸರ್‌ ಸಿಡಿಸಿದ್ದರು. ಯುವರಾಜ್‌ ಸಿಂಗ್‌ ಹೊರತಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮತ್ತೊಬ್ಬ ಆಟಗಾರ ದಕ್ಷಿಣ ಆಫ್ರಿಕಾದ ಹರ್ಷಲ್‌ ಗಿಬ್ಸ್‌. ಅವರು ಏಕದಿನ ಕ್ರಿಕೆಟ್‌ನಲ್ಲಿ ಆರು ಸಿಕ್ಸರ್‌ ಸಿಡಿಸಿದ್ದರು.

ಇಂಗ್ಲೆಂಡ್‌ನ ವಿಟಾಲಿಟಿ ಬ್ಲಾಸ್ಟ್‌ ಲೀಗ್‌ನಲ್ಲಿ ರಾಸ್‌ ವೈಟ್ಲಿ (ಇಂಗ್ಲೆಂಡ್‌; 2017) ಹಾಗೂ ಅಫ್ಗಾನಿಸ್ತಾನ ಪ್ರಿಮಿಯರ್‌ ಲೀಗ್‌ನಲ್ಲಿ ಹಜರತ್‌ಉಲ್ಲಾ ಜಜಾಯ್‌ (ಅಫ್ಗಾನಿಸ್ತಾನ; 2018) ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿದ್ದರು.

ಭಾರತದ ರವಿಶಾಸ್ತ್ರಿ ಹಾಗೂ ವೆಸ್ಟ್‌ ಇಂಡೀಸ್‌ನ ಗ್ಯಾರಿ ಸೋಬರ್ಸ್‌ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆರು ಸಿಕ್ಸರ್‌ ಸಿಡಿಸಿದ್ದರು.

ಬಿಗ್ ಬಾಷ್: ಸತತ ಐದು ಸಿಕ್ಸರ್‌ ಸಿಡಿಸಿದ ಟಾಮ್
ಆಸ್ಟ್ರೇಲಿಯಾದ ಬಿಗ್‌ ಬಾಷ್‌ ಲೀಗ್‌ನಲ್ಲಿ ಬ್ರಿಸ್ಬೇನ್‌ ಹೀಟ್ಸ್‌ ತಂಡದ ಟಾಮ್‌ ಬಾಂಟೊನ್‌, ಸಿಡ್ನಿ ಥಂಡರ್ಸ್‌ ತಂಡದ ಅರ್ಜುನ್‌ ನಾಯರ್‌ ಎಸೆದ ನಾಲ್ಕನೇ ಓವರ್‌ನಲ್ಲಿ ಸತತ ಐದು ಸಿಕ್ಸರ್‌ ಸಿಡಿಸಿ ಗಮನ ಸೆಳೆದರು.

ಸಿಡ್ನಿಯಲ್ಲಿ ಇಂದು ನಡೆದ ಪಂದ್ಯಕ್ಕೆಮಳೆ ಅಡ್ಡಿಪಡಿಸಿತ್ತು. ಹೀಗಾಗಿ ಪಂದ್ಯವನ್ನು8 ಓವರ್‌ಗಳಿಗೆ ನಿಗದಿಪಡಿಸಲಾಯಿತು.

ಮೊದಲು ಬ್ಯಾಟಿಂಗ್‌ ಮಾಡಿದಹೀಟ್ಸ್‌ ಪರ ಟಾಮ್‌ ಹಾಗು ಕ್ರಿಸ್ ಲಿನ್ (55) ಭರ್ಜರಿ ಬ್ಯಾಟಿಂಗ್‌ ನಡೆಸಿದರು. ಮೊದಲ ವಿಕೆಟ್‌ಗೆ ಈ ಜೋಡಿ ಕೇವಲ 5 ಓವರ್‌ಗಳಲ್ಲಿ 90 ರನ್‌ ಕಲೆಹಾಕಿತು.

19 ಎಸೆತಗಳನ್ನು ಎದುರಿಸಿದ ಟಾಮ್‌ 7 ಸಿಕ್ಸರ್‌ ಮತ್ತು ಎರಡು ಬೌಂಡರಿ ಸಹಿತ 56 ರನ್‌ ಚಚ್ಚಿದರು. ಹೀಗಾಗಿ ಹೀಟ್ಸ್‌ ತಂಡ ಎಂಟು ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 119 ರನ್‌ ಗಳಿಸಿತು.

ಈ ಮೊತ್ತ ಬೆನ್ನತ್ತಿದ ಥಂಡರ್ಸ್‌, 5 ಓವರ್‌ಗಳಲ್ಲಿ 60 ರನ್‌ ಗಳಿಸಿತ್ತು. ಈ ವೇಳೆ ಮಳೆ ಸುರಿದ ಕಾರಣ, ಡಕ್ವರ್ಥ್‌ ಲೂಯಿಸ್‌ ನಿಯಮದನ್ವಯ ಹೀಟ್ಸ್‌ಗೆ 16 ರನ್‌ ಗೆಲುವು ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT