ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಷಸ್ ಸರಣಿಯ ಎರಡನೇ ಟೆಸ್ಟ್: ಆಸ್ಟ್ರೇಲಿಯಾ ಆಧಿಪತ್ಯಕ್ಕೆ ಇಂಗ್ಲೆಂಡ್ ಪತನ

ಜೇ ರಿಚರ್ಡ್ಸನ್‌ಗೆ 5 ವಿಕೆಟ್‌; ಕ್ರಿಸ್ ವೋಕ್ಸ್, ಜೋಸ್‌ ಬಟ್ಲರ್‌ ದಿಟ್ಟ ಹೋರಾಟ
Last Updated 20 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಅಡಿಲೇಡ್: ಇಂಗ್ಲೆಂಡ್‌ ಬ್ಯಾಟಿಂಗ್ ಪಡೆಯ ಮೇಲೆ ಮತ್ತೊಮ್ಮೆ ಆಧಿಪತ್ಯ ಸ್ಥಾಪಿಸಿದ ಆಸ್ಟ್ರೇಲಿಯಾದ ಬೌಲರ್‌ಗಳು ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲೂ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.

ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಆತಿಥೇಯರು275 ರನ್‌ಗಳ ಜಯ ಸಾಧಿಸಿದರು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿದರು. ‘ಪಿಂಕ್ ಬಾಲ್‌’ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಆಧಿಪತ್ಯ ಮುಂದುವರಿದಿದ್ದು ಈ ವರೆಗೆ ಆಡಿದ ಎಲ್ಲ 9 ಪಂದ್ಯಗಳನ್ನೂ ಗೆದ್ದಂತಾಯಿತು.

468 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ 192 ರನ್‌ಗಳಿಗೆ ಪತನ ಕಂಡಿತು. 207 ಎಸೆತಗಳಲ್ಲಿ 26 ರನ್ ಗಳಿಸಿದ ವಿಕೆಟ್ ಕೀಪರ್ ಜೋಸ್ ಬಟ್ಲರ್ ಮತ್ತು 97 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 44 ರನ್ ಕಲೆ ಹಾಕಿದ 8ನೇ ಕ್ರಮಾಂಕದ ಬ್ಯಾಟರ್ ಕ್ರಿಸ್ ವೋಕ್ಸ್ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನಡೆಸಿದ ಶ್ರಮ ವ್ಯರ್ಥವಾಯಿತು.

ದಾಖಲೆ ಮೊತ್ತ ಗುರಿ ಬೆನ್ನತ್ತಿದ ಇಂಗ್ಲೆಂಡ್ ನಾಲ್ಕನೇ ದಿನವಾದ ಭಾನುವಾರ 82 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಹೀಗಾಗಿ ಆತಂಕದಲ್ಲೇ ಕೊನೆಯ ದಿನ ಕಣಕ್ಕೆ ಇಳಿದಿತ್ತು. ಆದರೆ ಬೆನ್ ಸ್ಟೋಕ್ಸ್‌, ಜೋಸ್ ಬಟ್ಲರ್ ಮತ್ತು ಕ್ರಿಸ್ ವೋಕ್ಸ್‌ ಅವರ ಹೋರಾಟದಿಂದಾಗಿ ಕೊನೆಯ ಅವಧಿಯ ವರೆಗೆ ಪಂದ್ಯವನ್ನು ಕೊಂಡೊಯ್ಯಲು ಸಾಧ್ಯವಾಯಿತು. ನಾಯಕ ಪ್ಯಾಟ್ ಕಮಿನ್ಸನ್ ಬದಲಿಗೆ ಈ ಪಂದ್ಯದಲ್ಲಿ ಆಡಿದ ಜೇ ರಿಚರ್ಡ್ಸನ್ 5 ವಿಕೆಟ್ ಉರುಳಿಸಿ ಮಿಂಚಿದರು.

ಅನೇಕ ಪಂದ್ಯಗಳಲ್ಲಿ ತಂಡವನ್ನು ಕಾಪಾಸಿದ್ದ ಜಗತ್ತಿನ ಒಂದನೇ ಕ್ರಮಾಂಕದ ಟೆಸ್ಟ್ ಬ್ಯಾಟ್ಸ್‌ಮನ್ ಜೋ ರೂಟ್ ಕ್ರೀಸ್‌ನಲ್ಲಿ ಇರುವವರೆಗೂ ಇಂಗ್ಲೆಂಡ್ ಪಾಳಯದಲ್ಲಿ ಭರವಸೆ ಇತ್ತು. ಆದರೆ ಅವರನ್ನು ನಾಲ್ಕನೇ ದಿನದ ಕೊನೆಯ ಓವರ್‌ನಲ್ಲಿ ಔಟ್ ಮಾಡುವುದರೊಂದಿಗೆ ಆಸ್ಟ್ರೇಲಿಯಾ ಸುಲಭ ಜಯಕ್ಕೆ ಸಿದ್ಧವಾಗಿತ್ತು. ಆಸ್ಟ್ರೇಲಿಯಾದ ಪ್ರಬಲ ದಾಳಿ ಎದುರಿಸಲಾಗದೆ ಒಲಿ ಪೋಪ್ ಬೇಗನೇ ಮರಳಿದರು.

ಜೋಸ್ ಬಟ್ಲರ್ ಮತ್ತು ಕ್ರಿಸ್ ವೋಕ್ಸ್‌ 61 ರನ್‌ಗಳ ಜೊತೆಯಾಟದ ಮೂಲಕ ಆಸ್ಟ್ರೇಲಿಯಾದ ಬೌಲರ್‌ಗಳನ್ನು ಕಾಡಿದರು. ವೋಕ್ಸ್‌ ಅವರ ಸ್ಟಂಪ್ಸ್‌ ಎಗರಿಸಿ ರಿಚರ್ಡ್ಸನ್ ಈ ಜೊತೆಯಾಟ ಮುರಿದರು. ನೇಥನ್ ಲಯನ್ ಎಸೆತದಲ್ಲಿ ಒಲಿ ರಾಬಿನ್ಸನ್ ಅವರನ್ನು ಔಟ್ ಮಾಡಿದ ಸ್ಮಿತ್ ಪಂದ್ಯದಲ್ಲಿ ಆರನೇ ಕ್ಯಾಚ್ ಪಡೆದ ಸಾಧನೆ ಮಾಡಿದರು. ಸ್ಟಂಪ್‌ಗೆ ಕಾಲು ತಾಗಿಸಿ ಬಟ್ಲರ್ ಔಟಾಗುವುದರೊಂದಿಗೆ ಆಸ್ಟ್ರೇಲಿಯಾದ ಸುಲಭ ಜಯಕ್ಕೆ ನಾಂದಿಯಾಯಿತು.

3ನೇ ಟೆಸ್ಟ್‌ಗೆ ಕಮಿನ್ಸ್‌, ಹ್ಯಾಜಲ್‌ವುಡ್
ಮೆಲ್ಬರ್ನ್‌ (ಪಿಟಿಐ): ವೇಗದ ಬೌಲರ್‌ಗಳಾದ ಪ್ಯಾಟ್ ಕಮಿನ್ಸ್ ಮತ್ತು ಜೋಶ್ ಹ್ಯಾಜಲ್‌ವುಡ್ ಇದೇ 26ರಂದು ಆರಂಭವಾಗಲಿರುವ ಮೂರನೇ (ಬಾಕ್ಸಿಂಗ್ ಡೇ) ಪಂದ್ಯಕ್ಕೆ ಲಭ್ಯರಾಗಲಿದ್ದಾರೆ. ಮೊದಲ ಪಂದ್ಯಕ್ಕಾಗಿ ಆಯ್ಕೆ ಮಾಡಿದ 15 ಮಂದಿಯ ತಂಡವನ್ನು ಸರಣಿಯ ಉಳಿದ ಪಂದ್ಯಗಳಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಸೋಮವಾರ ಪ್ರಕಟಗೊಳಿಸಿದೆ.

ಕೋವಿಡ್ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದರು ಎಂಬ ಕಾರಣಕ್ಕೆ ಕಮಿನ್ಸ್ ಅವರನ್ನು ಎರಡನೇ ಪಂದ್ಯದಿಂದ ಕೈಬಿಡಲಾಗಿತ್ತು. ಪಕ್ಕೆಲುಬಿನಲ್ಲಿ ನೋವು ಕಾಣಿಸಿಕೊಂಡ ಕಾರಣ ಹ್ಯಾಜಲ್‌ವುಡ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇವರಿಬ್ಬರ ಬದಲಿಗೆ ಕ್ರಮವಾಗಿ ಮೈಕೆಲ್ ನೆಸರ್ ಮತ್ತು ಜೇ ರಿಚರ್ಡ್ಸನ್ ಅವರನ್ನು ಸೇರಿಸಿಕೊಳ್ಳಲಾಗಿತ್ತು.

ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಅಲೆಕ್ಸ್ ಕ್ಯಾರಿ, ಕ್ಯಾಮರಾನ್ ಗ್ರೀನ್‌, ಮಾರ್ಕಸ್‌ ಹ್ಯಾರಿಸ್‌, ಜೋಶ್ ಹ್ಯಾಜಲ್‌ವುಡ್‌, ಟ್ರಾವಿಸ್ ಹೆಡ್‌, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್‌, ನೇಥನ್ ಲಯನ್‌, ಮೈಕೆಲ್‌ ನೆಸೆರ್‌, ಜೇ ರಿಚರ್ಡ್ಸನ್‌, ಸ್ಟೀವ್‌ ಸ್ಮಿತ್‌, ಮಿಚೆಲ್ ಸ್ಟಾರ್ಕ್‌, ಮಿಚೆಲ್ ಸ್ವೆಪ್ಸನ್‌, ಡೇವಿಡ್ ವಾರ್ನರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT