ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಣಾಲ್‌ ಪಾಂಡ್ಯರಿಂದ ಅನುಚಿತ ವರ್ತನೆ’: ಬರೋಡಾ ತಂಡದ ಶಿಬಿರದಿಂದ ಹೊರನಡೆದ ಹೂಡಾ

ಘಟನೆಯ ಕುರಿತು ತಂಡದ ವ್ಯವಸ್ಥಾಪಕರಿಂದ ವರದಿ ಕೇಳಿದ ಬಿಸಿಎ
Last Updated 10 ಜನವರಿ 2021, 11:45 IST
ಅಕ್ಷರ ಗಾತ್ರ

ಮುಂಬೈ: ನಾಯಕ ಕೃಣಾಲ್ ಪಾಂಡ್ಯ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಬರೋಡಾ ಕ್ರಿಕೆಟ್‌ ತಂಡದ ಆಟಗಾರ ದೀಪಕ್ ಹೂಡಾ, ಸೈಯದ್ ಮುಷ್ತಾಕ್ ಅಲಿ ಟೂರ್ನಿಗಾಗಿ ತಂಡವು ನಡೆಸುತ್ತಿರುವ ಶಿಬಿರದಿಂದ ಹೊರನಡೆದಿದ್ದಾರೆ. ಈ ಘಟನೆಯ ಕುರಿತು ವರದಿ ಸಲ್ಲಿಸುವಂತೆ ಬರೋಡಾ ಕ್ರಿಕೆಟ್ ಸಂಸ್ಥೆಯು (ಬಿಸಿಎ) ತಂಡದ ವ್ಯವಸ್ಥಾಪಕರಿಗೆ ಸೂಚಿಸಿದೆ.

ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಟೂರ್ನಿಯ ಪಂದ್ಯಗಳು ದೇಶದಾದ್ಯಂತ ಭಾನುವಾರ ಆರಂಭವಾಗಿವೆ.

‘ಘಟನೆಯ ಕುರಿತು ನಾವುತಂಡದ ವ್ಯವಸ್ಥಾಪಕರಿಂದ ವರದಿಯನ್ನು ನಿರೀಕ್ಷಿಸುತ್ತಿದ್ದೇವೆ. ಸದ್ಯ ಆಟಗಾರರು ಜೀವಸುರಕ್ಷಾ ವಾತಾವರಣದಲ್ಲಿದ್ದು, ಹೂಡಾ ಅವರ ಸ್ಥಾನಕ್ಕೆ ಯಾರನ್ನೂ ಆಯ್ಕೆ ಮಾಡಿಲ್ಲ’ ಎಂದು ಬಿಸಿಎ ಕಾರ್ಯದರ್ಶಿ ಅಜಿತ್ ಲೆಲೆ ತಿಳಿಸಿದ್ದಾರೆ.

46 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಹೂಡಾ ಅವರು, ಕೃಣಾಲ್ ಅವರ ವರ್ತನೆಯಿಂದ ನೊಂದುಕೊಂಡಿದ್ದು, ಬಿಸಿಎಗೆ ಪತ್ರ ಬರೆದಿದ್ದರು.

‘ನಾನು ಈಗ ಹತಾಶನಾಗಿದ್ದು, ಖಿನ್ನತೆ ಮತ್ತು ಒತ್ತಡದಲ್ಲಿದ್ದೇನೆ. ನಮ್ಮ ತಂಡದ ನಾಯಕ ಕೃಣಾಲ್ ಪಾಂಡ್ಯ ಕೆಲವು ದಿನಗಳಿಂದ ನನ್ನನ್ನು, ಸಹ ಆಟಗಾರರ ಎದುರೇ ನಿಂದಿಸಿದ್ದಾರೆ. ವಡೋದರಾ ಕ್ರೀಡಾಂಗಣಕ್ಕೆ ಅಭ್ಯಾಸಕ್ಕೆ ಬಂದಿರುವ ಇತರ ರಾಜ್ಯಗಳ ಆಟಗಾರರ ಎದುರೂ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ’ ಎಂದು ಬಿಸಿಎಗೆ ಬರೆದಿರುವ ಪತ್ರದಲ್ಲಿ ಹೂಡಾ ದೂರಿದ್ದಾರೆ.

ತಮ್ಮ ವಿರುದ್ಧದ ಆರೋಪದ ಕುರಿತು ಪಾಂಡ್ಯ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಎಲೀಟ್‌ ಸಿ ಗುಂಪಿನಲ್ಲಿರುವ ಬರೋಡಾ ತಂಡ ವಡೋದರಾದಲ್ಲಿ ತನ್ನ ಪಂದ್ಯಗಳನ್ನು ಆಡುತ್ತಿದೆ. ಗುಜರಾತ್, ಮಹಾರಾಷ್ಟ್ರ, ಛತ್ತೀಸ್‌ಗಡ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ ಕೂಡ ಇದೇ ಗುಂಪಿನಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT