ಸೋಮವಾರ, ಅಕ್ಟೋಬರ್ 18, 2021
25 °C
‘ಸರ್ದಾರ್ ಆಫ್ ಸ್ಪಿನ್‌’ ಕೃತಿ ಬಿಡುಗಡೆ

75 ವಸಂತ ಪೂರೈಸಿದ ಸ್ಪಿನ್ ದಿಗ್ಗಜ ಬಿಷನ್ ಸಿಂಗ್ ಬೇಡಿ

ಪಿಟಿಐ Updated:

ಅಕ್ಷರ ಗಾತ್ರ : | |

ಬಿಷನ್ ಸಿಂಗ್ ಬೇಡಿ

ನವದೆಹಲಿ: ಬಿಷನ್ ಸಿಂಗ್ ಬೇಡಿ ಭಾರತ ತಂಡದ ನಾಯಕರಾಗಿದ್ದಾಗ ತಮ್ಮ ಸಹ ಆಟಗಾರರ ಹಕ್ಕುಗಳಿಗಾಗಿ ಸದಾ ಹೋರಾಡಿದವರು. ನಿವೃತ್ತಿಯ ನಂತರವೂ ಕ್ರಿಕೆಟಿಗರ ಗೌರವಯುತ ಜೀವನವನ್ನು ಪ್ರತಿಪಾದಿಸಿ, ದೆಹಲಿ ಕ್ರಿಕೆಟ್ ಆಡಳಿತವನ್ನೇ ಎದುರು ಹಾಕಿಕೊಂಡಿದ್ದರು ಎಂದು ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಹೇಳಿದ್ದಾರೆ.

ಶನಿವಾರ 75ನೇ ವಸಂತಕ್ಕೆ ಕಾಲಿರಿಸಿದ ಬೇಡಿಯವರ ಕುರಿತ ‘ದ ಸರ್ದಾರ್ ಆಫ್ ಸ್ಪಿನ್; ಎ ಸೆಲಿಬ್ರೇಷನ್ ಆಫ್‌ ದ ಆರ್ಟ್ ಆಫ್ ಬಿಷನ್‌ಸಿಂಗ್ ಬೇಡಿ’ ವಿಶೇಷ ಪುಸ್ತಕ  ಬಿಡುಗಡೆಯ ಸಂದರ್ಭದಲ್ಲಿ ಕಪಿಲ್ ಹೇಳಿದ ಮಾತುಗಳಿವು.

ಶುಕ್ರವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಬೇಡಿಯವರ ಕುಟುಂಬದ ಸದಸ್ಯರು ಮತ್ತು ಕ್ರಿಕೆಟ್ ರಂಗದ ಹಲವು ದಿಗ್ಗಜರು ಪಾಲ್ಗೊಂಡಿದ್ದರು.

‘ಕ್ರಿಕೆಟಿಗರು ಪ್ರವಾಸಕ್ಕೆ ಹೊರಟಾಗ ಅವರಿಗೆ ಸಿಗಬೇಕಾದ ವಸತಿ ಸೌಲಭ್ಯ, ಭತ್ಯೆ, ಸಂಭಾವನೆಗಳು ಮತ್ತು ಸೌಲಭ್ಯಗಳನ್ನು ಗೌರವಯುತವಾಗಿ ಒದಗಿಸುವಂತೆ ಡಿಡಿಸಿಎಯನ್ನು ಒತ್ತಾಯಿಸುತ್ತಿದ್ದರು. ಆಟಗಾರರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕೆಂದು ನಿಷ್ಠುರವಾಗಿ ವಾಗ್ವಾದವನ್ನೂ ಮಾಡುತ್ತಿದ್ದರು. ಮಂಡಳಿಯ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಳ್ಳುವ ಮಟ್ಟಕ್ಕೆ ಹೋಗುತ್ತಿದ್ದರು. ಒಬ್ಬ ನಾಯಕನಿಗೆ ಇರುವ ಹಕ್ಕುಗಳ ಕುರಿತು ಸಮಗ್ರವಾಗಿ ಅರಿತು ನಡೆಯುತ್ತಿದ್ದರು. ಆದ್ದರಿಂದಲೇ ಅವರು ಸದಾ ಗೌರವಾನ್ವಿತರಾಗಿದ್ದಾರೆ’ ಎಂದು ಕಪಿಲ್ ಹೇಳಿದರು.

ಇದನ್ನೂ ಓದಿ– ಪಾಕ್ ಆಟಗಾರರಿಗೆ ಅಡುಗೆ ಮಾಡಿ ಉಣಬಡಿಸಿದ್ದ ಬಿಷನ್ ಸಿಂಗ್ ಬೇಡಿ

ಬೇಡಿಯವರ ಸಹ ಆಟಗಾರ, ಕನ್ನಡಿಗ ಬಿ.ಎಸ್. ಚಂದ್ರಶೇಖರ್, ‘ಬಿಷನ್‌ ಸಿಂಗ್ ಒಬ್ಬ ವ್ಯಕ್ತಿ. ಆದರೆ ಅವರದ್ದು ಹಲವು ರೂಪಗಳು. ಅಮೋಘ ಬೌಲರ್, ಸಹೋದ್ಯೋಗಿ, ನಾಯಕ, ದಬ್ಬಾಳಿಕೆಯ ವಿರುದ್ಧ ಹೋರಾಟಗಾರ, ಆಯ್ಕೆಗಾರ, ಕೋಚ್, ಆಡಳಿತಗಾರ,ವೀಕ್ಷಕ ವಿವರಣೆಗಾರ ಮತ್ತು ಅಂಕಣಕಾರ ಹೀಗೆ ಹಲವು ರೂಪಗಳು ಅವರದ್ದು.  ಆ ಎಲ್ಲ ರೂಪಗಳೂ ನನ್ನ ಸ್ನೇಹಿತರು ಎಂಬುದೇ ಹೆಮ್ಮೆ’ ಎಂದು ಈ ಪುಸ್ತಕದಲ್ಲಿ  ಬರೆದಿದ್ದಾರೆ.

ಭಾರತ ತಂಡದ ಮಾಜಿ ನಾಯಕ ಬೇಡಿ ಕುರಿತ ಈ ಪುಸ್ತಕಕ್ಕೆ ದಿಗ್ಗಜ ಕಪಿಲ್ ದೇವ್ ಮುನ್ನುಡಿ ಬರೆದಿದ್ದಾರೆ. ಸುನೀಲ್ ಗಾವಸ್ಕರ್, ಎ.ಎ.ಎಸ್. ಪ್ರಸನ್ನ, ಫಾರೂಕ್ ಎಂಜಿನಿಯರ್, ಸಚಿನ್ ತೆಂಡೂಲ್ಕರ್, ವೆಂಕಟ ಸುಂದರಂ, ರಾಮಚಂದ್ರ ಗುಹಾ, ಗ್ರೇಗ್ ಚಾಪೆಲ್ ಮತ್ತು ನೇಹಾ ಬೇಡಿ (ಬಿಷನ್ ಸಿಂಗ್ ಅವರ ಮಗಳು) ಸೇರಿದಂತೆ ಬಹಳಷ್ಟು ದಿಗ್ಗಜರು ಸಂದೇಶಗಳನ್ನು ಬರೆದಿದ್ದಾರೆ.  ಅಂತರರಾಷ್ಟ್ರೀಯ ಕ್ರಿಕೆಟ್ ಅಂಕಿ ಸಂಖ್ಯೆ ಸಂಗ್ರಹಕಾರ, ಬೆಂಗಳೂರಿನ ಎಚ್‌. ಆರ್. ಗೋಪಾಲಕೃಷ್ಣ ಈ ಕೃತಿಗೆ ಮಾಹಿತಿಗಳನ್ನು ಒದಗಿಸಿದ್ದಾರೆ.

ಈ ಪುಸ್ತಕವನ್ನು ರೊಲಿ ಬುಕ್ಸ್‌ ಪ್ರಕಟಿಸಿದೆ. ಸಚಿನ್ ಬಜಾಜ್ ಸಂಪಾದಿಸಿದ್ದಾರೆ. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು