ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಆಸ್ಟ್ರೇಲಿಯಾ ಸರಣಿಯಲ್ಲಿ ಬೌಲರ್‌ಗಳ ಪಾರಮ್ಯ; ಜಹೀರ್ ಖಾನ್

Last Updated 21 ನವೆಂಬರ್ 2020, 3:23 IST
ಅಕ್ಷರ ಗಾತ್ರ

ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಕ್ರಿಕೆಟ್ ಸರಣಿಯಲ್ಲಿ ಬೌಲರ್‌ಗಳು ಪಾರಮ್ಯ ಮೆರೆಯಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಹೇಳಿದ್ದಾರೆ.

ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಏಕದಿನ, ಟಿ20 ಮತ್ತು ಟೆಸ್ಟ್‌ ಸರಣಿಗಳಲ್ಲಿ ಆಡಲಿದೆ. ಇದೇ 27ರಿಂದ ಏಕದಿನ ಸರಣಿ ಆರಂಭವಾಗಲಿದೆ.

’ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಚೆಂಡು ಉತ್ತಮವಾಗಿ ಬೌನ್ಸ್‌ ಆಗುತ್ತದೆ. ವೇಗದ ಬೌಲರ್‌ಗಳಿಗೆ ಬಹಳ ನೆರವು ಸಿಗುತ್ತದೆ. ಉಭಯ ತಂಡಗಳಲ್ಲಿಯೂ ಉತ್ತಮ ವೇಗಿಗಳಿದ್ಧಾರೆ. ಮೂರು ಸರಣಿಗಳಲ್ಲಿಯೂ ಬೌಲರ್‌ಗಳದ್ದೇ ಮೆರೆದಾಟ ನಡೆಯಲಿದೆ‘ ಎಂದು ಎಡಗೈ ಮಧ್ಯಮವೇಗಿ ಜಹೀರ್ ಹೇಳಿದ್ದಾರೆ.

’ಇವತ್ತು ವಿಶ್ವದ ಅಗ್ರಮಾನ್ಯ ಬೌಲರ್‌ಗಳೆಂದು ಕರೆಸಿಕೊಳ್ಳುತ್ತಿರುವವರು ಈ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಆದ್ದರಿಂದ ಅವರ ಸಾಮರ್ಥ್ಯದ ಮೇಲೆ ಫಲಿತಾಂಶಗಳು ನಿರ್ಧಾರವಾಗುವ ಸಾಧ್ಯತೆ ಹೆಚ್ಚು‘ ಎಂದರು.

2018–19ರಲ್ಲಿ ಭಾರತವು ಗೆದ್ದಾಗ ಆಸ್ಟ್ರೇಲಿಯಾ ತಂಡದಲ್ಲಿ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರು ಇರಲಿಲ್ಲ. ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಅವರಿಬ್ಬರೂ ಒಂದು ವರ್ಷ ಅಮಾನತಿಗೆ ಒಳಗಾಗಿದ್ದರು. ಆದರೆ ಈ ಸಲ ಇಬ್ಬರೂ ತಂಡಕ್ಕೆ ಮರಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಜಹೀರ್, ’ಸ್ಮಿತ್ ಮತ್ತು ವಾರ್ನರ್‌ ತಂಡಕ್ಕೆ ಮರಳಿರುವುದರಿಂದ ಆಸ್ಟ್ರೇಲಿಯಾದ ಬಲವನ್ನು ಹೆಚ್ಚಿಸಿದೆ. ಇದರಿಂದಾಗಿ ಭಾರತ ತಂಡಕ್ಕೆ ಕಠಿಣ ಸವಾಲು ಎದುರಾಗಲಿದೆ‘ ಎಂದು ಸೋನಿ ಪಿಕ್ಚರ್ಸ್ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ಅವರು ಹೇಳಿದ್ದಾರೆ.

ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್, ’ಹೋದ ಬಾರಿಯೂ ಆಸ್ಟ್ರೇಲಿಯಾ ತಂಡವು ಉತ್ತಮವಾಗಿಯೇ ಇತ್ತು. ಇದೀಗ ಸ್ಮಿತ್ ಮತ್ತು ವಾರ್ನರ್ ಮರಳಿರುವುದರಿಂದ ತಂಡದ ಬಲ ಇಮ್ಮಡಿಸಿದೆ. ಆದರೆ, ಭಾರತದ ಬೌಲಿಂಗ್ ಪಡೆಯು ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ. ಸತತ ಸರಣಿ ಜಯಗಳನ್ನು ಜಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ‘ ಎಂದಿದ್ದಾರೆ.

ಸೋನಿ ಸ್ಪೋರ್ಟ್ಸ್ ವಾಹಿನಿಯ ’ಎಕ್ಸ್‌ಟ್ರಾ ಇನಿಂಗ್ಸ್‘ ಕಾರ್ಯಕ್ರಮವನ್ನು ಮತ್ತೆ ಆರಂಭಿಸುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿತು.

ಈ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗರಾದ ಅಜಯ್ ಜಡೇಜ, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್, ಸಂಜಯ್ ಮಾಂಜ್ರೇಕರ್, ಮುರಳಿ ಕಾರ್ತಿಕ್, ವಿವೇಕ್ ರಾಜ್ದಾನ್, ಅಜಿತ್ ಅಗರಕರ್, ವಿಜಯ್ ದಹಿಯಾ, ಗ್ಲೆನ್ ಮೆಕ್‌ಗ್ರಾ, ಮೊಹಮ್ಮದ್ ಕೈಫ್, ನಿಕ್ ನೈಟ್, ವೀಕ್ಷಕ ವಿವರಣೆಕಾರ ಹರ್ಷಾ ಭೋಗ್ಲೆ, ಅರ್ಜುನ್ ಪಂಡಿತ್ ಮತ್ತು ಎರಿನ್ ಹಾಲೆಂಡ್ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT